More

    ದೆಹಲಿಯಲ್ಲಿ ಲೆಫ್ಟಿನೆಂಟ್​ ಗವರ್ನರ್​ಗೇ ಪರಮಾಧಿಕಾರ; ಮತ್ತೊಂದು ಸುತ್ತಿನ ಆಡಳಿತಾತ್ಮಕ ಸಮರ ಸಾಧ್ಯತೆ

    ನವದೆಹಲಿ: ರಾಷ್ಟ್ರ ರಾಜಧಾನಿ, ಕೇಂದ್ರಾಡಳಿತ ಪ್ರದೇಶ ದೆಹಲಿಯಲ್ಲಿ ಚುನಾಯಿತ ಸರ್ಕಾರಕ್ಕಿಂತ ಹೆಚ್ಚು ಅಧಿಕಾರವನ್ನು ಲೆಫ್ಟಿನೆಂಟ್​ ಗವರ್ನರ್​ಗೆ ನೀಡುವ ತಿದ್ದುಪಡಿ ಕಾಯ್ದೆ ಜಾರಿ ಮಾಡುವ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ದೆಹಲಿಗೆ ಮುಖ್ಯಮಂತ್ರಿಯಾಗಿ ಆಮ್​ ಆದ್ಮಿ ಸರ್ಕಾರದ ಅರವಿಂದ ಕೇಜ್ರಿವಾಲ್​ ಇದ್ದರೂ, ಇನ್ನು ಮುಂದೆ ಹೆಚ್ಚಿನ ಅಧಿಕಾರಗಳು ಲೆ. ಗವರ್ನರ್​ ಅನಿಲ್​ ಬೈಜಾಲ್​ ಕೈಯಲ್ಲಿರಲಿದೆ. ಸರ್ಕಾರ ಯಾವುದೇ ತೀರ್ಮಾನ, ನೀತಿಗಳನ್ನು ಪ್ರಕಟಿಸುವುದಿದ್ದರೂ ಲೆಫ್ಟಿನೆಂಟ್ ಗವರ್ನರ್​ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಲಿದೆ.‌

    ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ, ಜಮೀನು, ಪೊಲೀಸ್​ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲಾ ಅಧಿಕಾರಗಳು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದ್ದವು ಮತ್ತು ಶಿಕ್ಷಣ, ಆರೋಗ್ಯ, ಕೃಷಿ, ಅರಣ್ಯ, ಸಾರಿಗೆ ವ್ಯವಸ್ಥೆಗಳು ದೆಹಲಿ ಸರ್ಕಾರದ ವ್ಯಾಪ್ತಿಯಲ್ಲಿದ್ದವು. ಹೊಸ ಕಾನೂನಿಂದಾಗಿ (ರಾಷ್ಟ್ರ ರಾಜಧಾನಿ ಪ್ರದೇಶ ಸರ್ಕಾರ ತಿದ್ದುಪಡಿ ಕಾಯ್ದೆ – 2021) ದಿಲ್ಲಿ ಸರ್ಕಾರ ತನ್ನ ವ್ಯಾಪ್ತಿಗೆ ಬರುವ ವಿಷಯಗಳ ಬಗ್ಗೆಯೂ ಲೆ. ಗವರ್ನರ್​ ಅವರೊಂದಿಗೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳುವುದು ಅನಿವಾರ್ಯವಾಗಿದೆ. ಆಮ್​ ಆದ್ಮಿ ಸರ್ಕಾರ ಈಗಾಗಲೇ ಈ ಕಾನೂನಿಗೆ ವಿರೋಧ ವ್ಯಕ್ತಪಡಿಸಿದ್ದು, ಸುಪ್ರೀಂಕೋರ್ಟ್​ ಮೆಟ್ಟಿಲೇರುವುದಾಗಿ ತಿಳಿಸಿದೆ. 2018ರ ಸುಪ್ರೀಂಕೋರ್ಟ್​ ತೀರ್ಪಿನ ಅನುಸಾರವೇ ಈ ತಿದ್ದುಪಡಿ ಕಾಯ್ದೆ ಅನುಮೋದಿಸಿ, ಕಾನೂನಾಗಿ ಪರಿವರ್ತಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ಕರೊನಾ ಸಂಕಷ್ಟಕರ ಸನ್ನಿವೇಶದಲ್ಲಿ ಈ ಬೆಳವಣಿಗೆ ಕೇಂದ್ರ ಮತ್ತು ದಿಲ್ಲಿ ಸರ್ಕಾರದ ನಡುವಿನ ಮತ್ತೊಂದು ಸುತ್ತಿನ ಆಡಳಿತಾತ್ಮಕ ಸಮರಕ್ಕೆ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ. ಹೊಸ ಕಾನೂನಿನ ಪ್ರಕಾರ “ದೆಹಲಿ ಸರ್ಕಾರ ಎಂದರೆ ಲೆಫ್ಟಿನೆಂಟ್​ ಗವರ್ನರ್​’ ಎಂದು ದಾಖಲಿಸಿರುವುದರಿಂದ, ದೆಹಲಿಯಲ್ಲಿ ಚುನಾಯಿತ ಸರ್ಕಾರಕ್ಕೆ ಮಾನ್ಯತೆ ಇಲ್ಲವೇ ಎಂಬ ಪ್ರಶ್ನೆ ಅನೇಕರನ್ನು ಕಾಡಿದೆ.

    ಕರೊನಾ ಮಹಾಮಾರಿ ನಿಭಾಯಿಸುವಲ್ಲಿ ದೆಹಲಿ ಸರ್ಕಾರ ವಿಫಲವಾಗಿರುವುದು, ಆಮ್ಲಜನಕ ಕೊರತೆ, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ, ಅಗತ್ಯ ಔಷಧಿಗಳ ಅಭಾವದ ನಡುವೆ ಕೇಂದ್ರ ಸರ್ಕಾರ ಈ ಕಾನೂನು ಜಾರಿ ಮಾಡಿದೆ. ಕರೊನಾ ನಿರ್ವಹಣೆಯನ್ನು ಸಂಪೂರ್ಣ ತನ್ನ ಹತೋಟಿಗೆ ತೆಗೆದುಕೊಂಡು, ಪರಿಸ್ಥಿತಿಯನ್ನು ತಕ್ಕಮಟ್ಟಿಗೆ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಕೇಂದ್ರ ಈ ಸಂದರ್ಭದಲ್ಲಿ ಅಧಿಸೂಚನೆ ಹೊರಡಿಸಿರಬಹುದು ಎಂದೂ ಹೇಳಲಾಗುತ್ತಿದೆ. ಮಾರ್ಚ್​ ತಿಂಗಳ ಸಂಸತ್​ ಅಧಿವೇಶನದ ವೇಳೆ ಲೋಕಸಭೆ, ರಾಜ್ಯಸಭೆಯಲ್ಲಿ ಮಸೂದೆ ಅಂಗೀಕೃತಗೊಂಡಿದ್ದನ್ನು ಸಿಎಂ ಕೇಜ್ರಿವಾಲ್​ “ಇದು ಭಾರತೀಯ ಪ್ರಜಾಪ್ರಭುತ್ವಕ್ಕೆ ದು@ಖದ ದಿನ’ ಎಂದು ಬೇಸರ ವ್ಯಕ್ತಪಡಿಸಿದ್ದರು. ಈ ಮಸೂದೆಯು ಶಾಸಕಾಂಗ ಮತ್ತು ಕಾರ್ಯಾಂಗದ ನಡುವಿನ ಸಾಮರಸ್ಯದ ಸಂಬಂಧವನ್ನು ಉತ್ತೇಜಿಸುತ್ತದೆ. ಅಲ್ಲದೆ ಚುನಾಯಿತ ಸರ್ಕಾರ ಮತ್ತು ಲೆ. ಗವರ್ನರ್​ ಜವಾಬ್ದಾರಿಗಳೇನು ಎಂಬುದನ್ನು ಸಂವಿಧಾನದ ಪರಿವ್ಯಾಪ್ತಿಗೆ ಅನುಗುಣವಾಗಿ ವಿವರಿಸಿದೆ ಎಂದು ಕೇಂದ್ರ ಸರ್ಕಾರ ಸಂಸತ್​ನಲ್ಲಿ ಹೇಳಿತ್ತು.

    ವಿಧಾನಸಭೆ ಮಸೂದೆಯೊಂದನ್ನು ಅನುಮೋದಿಸಿದ ಬಳಿಕ ಅದನ್ನು ಲೆ. ಗವರ್ನರ್​ ಮುಂದಿಡಲಾಗುತ್ತದೆ. ಮಸೂದೆಯನ್ನು ಸಮ್ಮತಿಸಬೇಕೋ ಬೇಡವೋ ಎಂಬುದನ್ನು ಲೆ. ಗವರ್ನರ್​ ನಿರ್ಧರಿಸುವುದಲ್ಲದೆ, ಅದನ್ನು ರಾಷ್ಟ್ರಪತಿ ಅನುಮೋದನೆಗೆ ಕಳಿಸಬೇಕೋ ಬೇಡವೋ ಎಂಬುದನ್ನು ಸಹ ಅವರೇ ತೀರ್ಮಾನಿಸುತ್ತಾರೆ ಎಂದು ಹೊಸ ಕಾನೂನಿನಲ್ಲಿ ತಿಳಿಸಲಾಗಿದೆ. ದೆಹಲಿ ಪೂರ್ಣ ಪ್ರಮಾಣದ ರಾಜ್ಯವೇನಲ್ಲ ಮತ್ತು ಸರ್ಕಾರಕ್ಕೆ ಪೂರ್ಣ ಪ್ರಮಾಣದ ಅಧಿಕಾರಗಳಿಲ್ಲ. ಬೇರೆ ರಾಜ್ಯಗಳ ರಾಜ್ಯಪಾಲರಿಗಿರುವ ಕಾರ್ಯಾಂಗದ ಅಧಿಕಾರ ಹಾಗೂ ದೆಹಲಿ ಲೆ. ಗವರ್ನರ್​ ಗಿರುವ ಕಾರ್ಯಾಂಗದ ಅಧಿಕಾರಗಳಲ್ಲಿ ವ್ಯತ್ಯಾಸಗಳಿವೆ ಎಂದು ಕೇಂದ್ರ ಹೇಳಿದೆ.

    ಕೇಂದ್ರದ ಅಧಿಕಾರವ್ಯಾಪ್ತಿ: ಕಾನೂನು ಸುವ್ಯವಸ್ಥೆ, ಜಮೀನು, ಪೊಲೀಸ್​ ವ್ಯವಸ್ಥೆ

    ರಾಜ್ಯ ಸರ್ಕಾರದ ಅಧಿಕಾರವ್ಯಾಪ್ತಿ: ಶಿಕ್ಷಣ, ಆರೋಗ್ಯ, ಕೃಷಿ, ಅರಣ್ಯ, ಸಾರಿಗೆ ವ್ಯವಸ್ಥೆ
    (ಇನ್ನು ಮುಂದೆ ಯಾವುದೇ ಆಡಳಿತಾತ್ಮಕ ನಿರ್ಣಯಕ್ಕೆ ಲೆಫ್ಟಿನೆಂಟ್​ ಗವರ್ನರ್​ ಒಪ್ಪಿಗೆ ಪಡೆಯಬೇಕಾಗುತ್ತದೆ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts