More

    ದಸರಾ ನಂತರ 1ರಿಂದ 5ನೇ ತರಗತಿ ಆರಂಭ

    ಉಡುಪಿ: ರಾಜ್ಯದಲ್ಲಿ ದಸರಾ ಮುಗಿದ ಕೂಡಲೇ 1ರಿಂದ 5ನೇ ತರಗತಿ ಶಾಲೆ ಮತ್ತು ಬಿಸಿಯೂಟ ಆರಂಭಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

    ಉಡುಪಿ ಸರ್ಕಾರಿ ಒಳಕಾಡು ಶಾಲೆಗೆ ಶನಿವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ ಕಡಿಮೆ ಇದ್ದು, ಶೀಘ್ರದಲ್ಲಿ ಮುಖ್ಯಮಂತ್ರಿಗಳು ಈ ಬಗ್ಗೆ ಟಾಸ್ಕ್‌ಫೋರ್ಸ್ ಸಭೆ ನಡೆಸಲಿದ್ದಾರೆ. ದಸರಾ ಮುಗಿದ ಕೂಡಲೇ ಕೋವಿಡ್ ಮಾರ್ಗಸೂಚಿ ಅನುಸರಿಸಿ ಎಲ್ಲ ಶಾಲೆಗಳನ್ನು ಆರಂಭಿಸಲಾಗುವುದು. ಬಿಸಿಯೂಟಕ್ಕೂ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದರು.

    ಅ.11ರಿಂದ 20ರ ತನಕ ದಸರಾ ರಜೆ ಇದ್ದು, ನಂತರ ಶಾಲೆಗಳು ಆರಂಭವಾಗುತ್ತವೆ. ಪರೀಕ್ಷೆಗೋಸ್ಕರ ಪಠ್ಯ ಕಡಿತ ಮಾಡಬಾರದು. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಪಠ್ಯ ಕಡಿತ ಮಾಡದೆ ಇರುವ ಅವಕಾಶ ಬಳಸಿಕೊಂಡು ಬೋಧಿಸಲಾಗುತ್ತದೆ ಎಂದು ತಿಳಿಸಿದರು.

    ಶಾಲೆ ಅತಿಕ್ರಮಣ ತೆರವು:  ಸರ್ಕಾರಿ ಶಾಲೆ ಆಸ್ತಿ, ಭೂಮಿ ರಕ್ಷಣೆ ಸರ್ಕಾರದ ಕರ್ತವ್ಯ. ಅದನ್ನು ಸರಿಮಾಡುವ ಪ್ರಕ್ರಿಯೆ ಆರಂಭವಾಗಿದೆ. ಶಾಲೆ ಜಾಗ ಒತ್ತುವರಿ ಮಾಡಿಕೊಂಡು ಹಕ್ಕುಪತ್ರ ಪಡೆದ ಭೂ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಸರ್ಕಾರಿ ಶಾಲೆ ಜಾಗ ಸರ್ವೇ ಮಾಡಿ, ಗಡಿ ಗುರುತಿಸಿ, ಕಾಂಪೌಂಡ್ ನಿರ್ಮಿಸುವ ಮೂಲಕ ಭೂ ಒತ್ತುವರಿ ತೆರವು ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

    ಕುಂದಾಪುರ ಬೋರ್ಡ್ ಹೈಸ್ಕೂಲ್‌ಗೆ ಭೇಟಿ ನೀಡಿದ ಅವರು, ಗ್ರಾಪಂ ಸದಸ್ಯರೊಬ್ಬರು 32 ಶಾಲಾ ಜಾಗದ ಸಮಸ್ಯೆ ಪರಿಹರಿಸಿ ಶಾಲೆ ಹೆಸರಲ್ಲಿ ಭೂಮಿ ದಾಖಲು ಮಾಡುವ ಕೆಲಸ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಪಂ ಸದಸ್ಯರೊಬ್ಬರು ಶಾಲಾ ಭೂಮಿಯನ್ನು ಗುರುತಿಸಿ ಶಾಲೆ ಹೆಸರಲ್ಲಿ ದಾಖಲು ಮಾಡುವ ಕೆಲಸ ಮಾಡಿದ್ದಾರೆ. ಕೆಲವು ಕಡೆ ಸ್ಥಳೀಯ ಜನಪ್ರತಿನಿಧಿಗಳು ಆಸಕ್ತಿಯಿಂದ ಸರ್ಕಾರಿ ಶಾಲೆ ಜಾಗ ಗುರುತಿಸಿ, ಶಾಲೆಗೆ ನೀಡುವ ಕೆಲಸ ಮಾಡುತ್ತಿದ್ದು, ಡಿಸಿ, ಸಿಇಒಗೆ ವಿಶೇಷ ಆಸಕ್ತಿ ವಹಿಸಿ ಶಾಲಾ ಭೂಮಿ ದಾಖಲೆ ಮಾಡಲು ಸೂಚಿಸಿದ್ದೇನೆ ಎಂದರು.

    ನಿಯಮ ಪಾಲನೆ ಕಡ್ಡಾಯ: ಹಿಂದೆ ಖಾಸಗಿ ಶಾಲೆಗಳಿಗೆ ಕೊಟ್ಟ ಪರವಾನಗಿ ಬಗ್ಗೆ ವಿಮರ್ಶೆ ಬೇಡ. ಒಂದೊಮ್ಮೆ ಕೊಡದಿದ್ದರೆ ಆ, ಇ ಕಲಿಸಲು ಕಷ್ಟವಾಗುತ್ತಿತ್ತು. ಕಾಲಕ್ಕೆ ತಕ್ಕಂತೆ ಅದರ ಅವಶ್ಯಕತೆಯಂತೆ ಮಾಡಲಾಗಿದ್ದು, ಹೊಸದಾಗಿ ಆರಂಭವಾಗುವ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ನಿಯಮ ಪಾಲಿಸಬೇಕಾಗುತ್ತದೆ. ಕಟ್ಟಡದಿಂದ ಹಿಡಿದು ಆಟದ ಮೈದಾನದ ತನಕ ಎಲ್ಲವೂ ನಿಯಮದಂತೆ ಇರಬೇಕು. ನಿಯಮ ಇಲ್ಲದೆ ಶಿಕ್ಷಣ ಸಂಸ್ಥೆ ಪ್ರಾರಂಭಿಸುವುದಕ್ಕೆ ಅವಕಾಶ ಇಲ್ಲ ಎಂದು ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts