More

    ಜಾಹೀರಾತುಗಳ ಮೇಲೆ ನಿಗಾ ವಹಿಸಿ

    ಬೆಳಗಾವಿ: ಲೋಕಸಭಾ ಉಪಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ರಾಜಕೀಯ ಪಕ್ಷಗಳ ಸುದ್ದಿ ಮತ್ತು ಜಾಹೀರಾತುಗಳ ಮೇಲೆ ತೀವ್ರ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಹರೀಶಕುಮಾರ ಸೂಚಿಸಿದರು.

    ನಗರದ ವಾರ್ತಾಭವನದಲ್ಲಿ ಆರಂಭಿಸಿರುವ ಮಾಧ್ಯಮ ಕಣ್ಗಾವಲು ಕೇಂದ್ರ (ಮೀಡಿಯಾ ಮಾನಿಟರಿಂಗ್ ಸೆಲ್)ಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮಾಧ್ಯಮ ಸಂಸ್ಥೆಗಳೂ ಸಹ ಪೂರ್ವಾನುಮತಿ ಪಡೆಯದ ಜಾಹೀರಾತು ಪ್ರಸಾರ ಮಾಡಬಾರದು. ಮಾಡಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

    ಉಪ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳು ಟಿವಿ, ಕೇಬಲ್ ಟಿವಿ, ಸಾಮಾಜಿಕ ಜಾಲತಾಣ, ಸಿನಿಮಾ ಮಂದಿರ, ಎಲ್‌ಇ.ಡಿ. ವಾಹನದ ಮೂಲಕ ಪ್ರಚಾರ ಕೈಗೊಳ್ಳಬಹುದು. ಆದರೆ, ಜಾಹೀರಾತು ವಿಷಯವಸ್ತುವಿಗೆ ಸಂಬಂಧಿಸಿದಂತೆ ಕಡ್ಡಾಯವಾಗಿ ಎಂಸಿಎಂಸಿಯಿಂದ ಪೂರ್ವಾನುಮತಿ ಪಡೆಯಬೇಕು. ಅನುಮತಿ ಪಡೆಯದೆ ಪ್ರಚಾರ ಕೈಗೊಂಡರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಹರೀಶಕುಮಾರ ಎಚ್ಚರಿಕೆ ನೀಡಿದರು.

    ಕರೊನಾ ನಿಯಮ ಪಾಲಿಸಿ: ನೆರೆಯ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣ ಹೆಚ್ಚುತ್ತಲೇ ಇದ್ದು, ನಮ್ಮ ರಾಜ್ಯದಲ್ಲಿಯೂ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ.

    ಈ ಹಿನ್ನೆಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಕರೊನಾ ನಿಯಂತ್ರಣದ ನಿಯಮಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾರ್ವಜನಿಕ ಪ್ರದೇಶ, ಸಭೆ-ಸಮಾರಂಭಗಳಲ್ಲಿ 500ಕ್ಕಿಂತ ಹೆಚ್ಚು ಜನರು ಸೇರಬಾರದು ಎಂದು ಸರ್ಕಾರ ಸೂಚಿಸಿದೆ. ಅಲ್ಲದೆ, ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಕರೊನಾ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಡಾ. ಕೆ.ಹರೀಶಕುಮಾರ ತಿಳಿಸಿದರು.

    ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿ ನಿಸಾರ್ ಅಹ್ಮದ್, ಝಡ್.ಜಿ. ಸಯ್ಯದ್, ವಿನಾಯಕ ವಣ್ಣೂರ, ಕೆ.ಆರ್. ಕುಲಕರ್ಣಿ, ಎಂ.ಎಂ. ಪಾಟೀಲ, ಜಿ.ವೈ. ಕಾವಳೆ, ಕೆ.ಎಸ್. ಕಾಗಲೆ, ಜಿ.ಡಿ. ಹಳೆಮನಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts