More

    ಮುಂಬೈಯಿಂದ ಮರಳಿ ಮಣ್ಣಿಗೆ: ಕೈತುಂಬ ಸಂಬಳವಿದ್ರು ಕೃಷಿಯಲ್ಲಿ ಬದುಕಿನ ಅರ್ಥ ಕಂಡುಕೊಂಡ ಪದವೀಧರ

    – ವೇಣುವಿನೋದ್ ಕೆ.ಎಸ್.ಮಂಗಳೂರು
    ಮುಂಬೈನಲ್ಲಿ ಜಾಹಿರಾತು ಜಗತ್ತಿನಲ್ಲಿ ಉದ್ಯೋಗ…ಕೈ ತುಂಬ ಸಂಬಳ…ವರ್ಣಮಯ ದುನಿಯಾ… ಇದರ ನಡುವೆಯೂ ನನಗೆ ಊರಿನಲ್ಲಿ ಖಾಲಿ ಜಮೀನಿದೆ, ಅದನ್ನು ಬಿಟ್ಟು ಇಲ್ಲಿದ್ದೇನಲ್ಲಾ ಎಂಬ ಜ್ಞಾನೋದಯ.. ಇದು ಆದಿತ್ಯ ಭಗವಾನ್‌ದಾಸ್(43) ಅವರ ಈವರೆಗಿನ ಬದುಕು, ಅದರಲ್ಲಿ ಆದ ತಿರುವಿನ ಪುಟ್ಟ ಪರಿಚಯ.

    ಆದಿತ್ಯ ಮೂಲತಃ ಬಂಟ್ವಾಳ ತಾಲೂಕು ಸಜಿಪ ಮುನ್ನೂರಿನವರು. ಆದರೆ ಅವರು ಹುಟ್ಟಿ ಬೆಳೆದದ್ದೆಲ್ಲ್ಲ ಮುಂಬೈನಲ್ಲೇ. ಅವರ ತಂದೆಯವರು ಚಿಕ್ಕವರಿದ್ದಾಗ 1975ರಲ್ಲಿ ಮುಂಬೈಗೆ ಸ್ಥಳಾಂತರಗೊಂಡಿದ್ದರು. ಆದರೆ ಊರಿಗೆ ವರ್ಷಕ್ಕೊಮ್ಮೆ ಕುಟುಂಬ ಸಹಿತ ಬರುತ್ತಿದ್ದರು. ಹಾಗಾಗಿ ಚಿಕ್ಕಂದಿನಿಂದಲೂ ಆದಿತ್ಯ ಅವರಿಗೆ ಊರಿನ ಸಂಪರ್ಕ ಇತ್ತು. ದೊಡ್ಡವರಾದ ಮೇಲೆ ಊರಿಗೆ ಬರುವ ಬಗ್ಗೆ ಅಷ್ಟೇನೂ ಹಿತ ಅವರಿಗೆ ಇರಲಿಲ್ಲ. 16 ವರ್ಷ ಹಿಂದೆ ಆದಿತ್ಯ ಅವರ ತಂದೆ ತೀರಿಕೊಂಡರು. ಆ ಬಳಿಕ ಊರಿನ ಸಂಪರ್ಕ ಅಷ್ಟಾಗಿ ಇರಲಿಲ್ಲ. ಆದರೆ ಊರಿನಲ್ಲಿರುವ ಬಂಧುಗಳೆಲ್ಲರಿಂದ ಮಾಹಿತಿ ಇರುತ್ತಿತ್ತು ಅಷ್ಟೇ.

    ಬಾಸ್‌ನಿಂದ ಜ್ಞಾನೋದಯ!: ಮುಂಬೈಯ ಖ್ಯಾತ ಕಲಾ ಸಂಸ್ಥೆ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ವಿಷುವಲ್ ಆರ್ಟ್ಸ್ ಕಲಿತು ಅಲ್ಲಿಂದ ಜಾಹೀರಾತು ಕ್ಷೇತ್ರಕ್ಕೆ ಕಾಲಿರಿಸಿದ ಆದಿತ್ಯ ಜಾಹೀರಾತು ವಿನ್ಯಾಸ, ಜಾಹೀರಾತು ಮೂವಿಗಳು ಇತ್ಯಾದಿಯಲ್ಲಿ ವ್ಯಸ್ತರಾದರು. ಕೈತುಂಬ ವೇತನವಿತ್ತು, ಐಷಾರಾಮಿ ಕಾರಿತ್ತು. ಜಾಹೀರಾತು ಕ್ಷೇತ್ರದಲ್ಲೇ ಇದ್ದ, ಮೆಚ್ಚಿದ ಹುಡುಗಿಯನ್ನೇ ವಿವಾಹವಾದರು.

    ಇದೆಲ್ಲದರ ಮಧ್ಯೆ ಸುಮಾರು ಆರೆಂಟು ವರ್ಷ ಹಿಂದೆ ಒಮ್ಮೆ ತಮ್ಮ ಬಾಸ್ ನಿಮ್ಮ ಇಷ್ಟೆಲ್ಲ ಹಣವನ್ನು ಏನು ಮಾಡುತ್ತೀರಿ ಎಂಬ ಪ್ರಶ್ನೆ ಹಾಕಿದರು. ಹಣ ಒಟ್ಟು ಮಾಡಿ ಕೃಷಿ ಜಮೀನು ಖರೀದಿಸಬೇಕಿದೆ ಎಂದಿದ್ದು ಆದಿತ್ಯ ಅವರ ಮನಸ್ಸಿಗೆ ನಾಟಿತು.

    ಇವರು ಕೃಷಿ ಜಾಗ ಕೊಳ್ಳಲು ಹಣ ಒಟ್ಟು ಮಾಡುತ್ತಿದ್ದಾರೆ, ಆದರೆ ನಾನು ಯಾಕೆ ಊರಲ್ಲಿ ಹಡಿಲು ಬಿಟ್ಟ ಜಮೀನು ಮರೆಯುತ್ತಿದ್ದೇನೆ ಎಂಬ ಅರಿವು ಆಗ ಉಂಟಾಯಿತು. ಅಲ್ಲಿಂದ ಕೃಷಿಯತ್ತ ಮನಸ್ಸು ಆಕರ್ಷಿತವಾಯಿತು. ಹಾಗೆ ಅಲ್ಲಿನ ಸಮೀಪದ ಹಳ್ಳಿಯೊಂದಕ್ಕೆ ತೆರಳಿ ಅಲ್ಲಿ ಆದಿವಾಸಿಗಳ ಕೃಷಿಯನ್ನು ಗಮನಿಸತೊಡಗಿದರು. ಅಲ್ಲಿ ಜೋಳ, ರಾಗಿ, ಅಕ್ಕಿ ಇತ್ಯಾದಿ ಬೆಳೆಯುವುದನ್ನು ಅಭ್ಯಾಸ ಮಾಡಿದರು.

    ಬದುಕಿನ ತಿರುವು: ಮನೆಯಲ್ಲಿ ತಾಯಿ, ಪತ್ನಿ, ಸಮೀಪ ಬಂಧುಗಳೆಲ್ಲರೂ ನನ್ನ ಬದುಕಿನ ತಿರುವಿಗೆ ಪೂರ್ಣ ಸಹಕಾರ ಕೊಟ್ಟರು. ಇಲ್ಲವಾದರೆ ಇದು ಸಾಧ್ಯವಿರಲಿಲ್ಲ. 6 ವರ್ಷಗಳಿಂದ ನಾನು ಬಂಟ್ವಾಳದ ಸಜಿಪಮುನ್ನೂರಿನ ಮಂಜಲಪಾದೆ ಎಂಬಲ್ಲಿ ನೇತ್ರಾವತಿ ನದಿಯ ಬದಿಯಲ್ಲಿರುವ ಫಲವತ್ತಾದ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದೇನೆ ಎನ್ನುತ್ತಾರೆ ಆದಿತ್ಯ. ಮೊದಲು ಹಡೀಲು ಬಿದ್ದ ಗದ್ದೆ ಹಸನು ಮಾಡಿ ಅಲ್ಪಸ್ವಲ್ಪ ಬೆಳೆ ತೆಗೆದರು, ಒಂದೆರಡು ಚೀಲವಷ್ಟೇ ಸಿಕ್ಕಿತ್ತು. ಮರುವರ್ಷ ಮತ್ತಷ್ಟು ಆಸಕ್ತಿಯಿಂದ ಕೆಲಸ ಮುಂದುವರಿಸಿದರು. ಈಗ ಸುಮಾರು ಒಂದೂವರೆ ಎಕರೆ ಗದ್ದೆಯಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಕೆಲಸಕ್ಕೆ ಜನ ಇದ್ದರೂ ಸ್ವತಃ ಆಸಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಗದ್ದೆಯ ಕೆಸರಿನಲ್ಲಿ ನಿಂತಾಗ ಆಗುವ ಅನುಭವವೇ ಬೇರೆ ಎನ್ನುತ್ತಾರೆ. ಜಾಗದಲ್ಲಿದ್ದ ಹಳೇ ಮನೆಯನ್ನು ನವೀಕರಣಗೊಳಿಸಲಾಗುತ್ತಿದೆ. ಹೊಸದಾಗಿ ಇನ್ನೊಂದು ಮನೆಯನ್ನೂ ಅಲ್ಲೇ ನಿರ್ಮಿಸುತ್ತಿದ್ದಾರೆ. ಅವರ ಆಸುಪಾಸಿನಲ್ಲೇ ಸಮೀಪ ಬಂಧುಗಳಿದ್ದು ಅವರಿಂದಲೂ ಆದಿತ್ಯಗೆ ಉತ್ತಮ ನೆರವು ಸಿಕ್ಕಿದೆ.

    ಸೈಕ್ಲಿಂಗ್ ಸಹವಾಸ: ಹಿಂದೆ ಐಷಾರಾಮಿ ಕಾರು ಹೊಂದಿದ್ದ ಆದಿತ್ಯ 104 ಕೆ.ಜಿ.ತೂಕ ಹೊಂದಿದ್ದರು. ಬಳಿಕ ತೂಕ ಇಳಿಕೆಗೆ ಕಾರು ಕಡಿಮೆ ಮಾಡಿ ಸೈಕಲ್ ಕೊಂಡರು. ಸೈಕಲ್ ಆಸಕ್ತಿ ಹೆಚ್ಚಿ ಅಂಗಡಿಯನ್ನೂ ಹೊಂದಿದ್ದಾರೆ. ಸ್ವತಃ ಸೈಕಲ್ ಸವಾರಿ ಮಾಡುವ ಸೈಕಲ್ ಅಂಗಡಿ ಮಾಲೀಕ ಎಂದು ಗುರುತಿಸಿಕೊಂಡರು. ಪ್ರಸ್ತುತ ಅವರಲ್ಲಿ ಸೈಕಲ್ ಮಾತ್ರ ವಾಹನ. ಕಾರು, ಬೈಕ್ ಇಲ್ಲ. ಸದ್ಯ ಮಂಗಳೂರಿನ ಪದವಿನಂಗಡಿಯಲ್ಲಿ ಅವರು ಫ್ಲಾೃಟ್‌ನಲ್ಲಿ ವಾಸಿಸುತ್ತಿದ್ದಾರೆ. ಬೆಳಗ್ಗೆ 5ಕ್ಕೆ ಸೈಕಲಲ್ಲಿ ಹೊರಟು 7ಕ್ಕೆ ಸಜಿಪ ಸೇರಿಕೊಳ್ಳುತ್ತಾರೆ. ತಮ್ಮ ಭೂಮಿಯಲ್ಲಿ ಕೆಲಸ ಮುಗಿಸಿ ಸಂಜೆ ಹೊರಟು ಮತ್ತೆ ಮಂಗಳೂರಿಗೆ. ಸೈಕಲ್ ಸರಳ ವಾಹನ, ಅದರಲ್ಲೇ ನಾನು ಹಿಮಾಲಯದ ಖರ್ದುಂಗ್ಲಾದಂತಹ ಕಠಿಣ ಪ್ರವಾಸಗಳನ್ನೂ ಮುಗಿಸಿದ್ದೇನೆ ಎನ್ನುತ್ತಾರೆ ಆದಿತ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts