More

    ಕಥೆ, ಪಾತ್ರ, ನಟನೆ, ಯಶಸ್ಸಿನ ಬಗ್ಗೆ…: ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​ನಲ್ಲಿ ಸುದೀಪ್​

    ಕಥೆ, ಪಾತ್ರ, ನಟನೆ, ಯಶಸ್ಸಿನ ಬಗ್ಗೆ...: ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​ನಲ್ಲಿ ಸುದೀಪ್​ನಟ-ನಿರ್ದೇಶಕ ಸುದೀಪ್ ಮಾತುಗಳೇ ಹಾಗೆ. ಅದು ಸಿನಿಮಾಗೆ ಮಾತ್ರ ಸೀಮಿತವಾಗಿರುವುದಿಲ್ಲ. ಸಿನಿಮಾದಿಂದ ಪ್ರಾರಂಭವಾಗಿ ಮಾತಿನ ಝುರಿ ಎಲ್ಲೆಲ್ಲೋ ಸಾಗುತ್ತದೆ. ಅಲ್ಲಿ ತತ್ತ್ವಜ್ಞಾನವಿರುತ್ತದೆ, ಜೀವನದ ಬಗ್ಗೆ ಒಳನೋಟಗಳಿರುತ್ತವೆ, ಮೆಲುಕು ಹಾಕುವಂತಿರುತ್ತದೆ… ‘ಕೋಟಿಗೊಬ್ಬ-3’ ಚಿತ್ರ ಬಿಡಗಡೆ ಹಿನ್ನೆಲೆಯಲ್ಲಿ ಅವರಾಡಿದ ಒಂದಷ್ಟು ಮಾತುಗಳು ಇಲ್ಲಿವೆ.

    ಯಾವ ಹೋಟೆಲ್​ಗೆ ಹೋದರೂ ಇಡ್ಲಿ ಇಡ್ಲಿಯೇ …: ಯಾವ ಪಾತ್ರ ಸಹ ವಿಭಿನ್ನವಾಗಿರುವುದಿಲ್ಲ. ಅದನ್ನು ವಿಭಿನ್ನವಾಗಿ ಮಾಡುವ ಪ್ರಯತ್ನ ಮಾಡಬಹುದು ಅಷ್ಟೇ. ಒಂದು ಪಾತ್ರವನ್ನು ಹತ್ತು ಕಲಾವಿದರಿಗೆ ಕೊಟ್ಟರೆ, ಹತ್ತು ತರಹ ಮಾಡುತ್ತಾರೆ. ಒಬ್ಬ ನಟನಾಗಿ ನಾವು ಎಲ್ಲಿ ಸ್ಕೋರ್ ಮಾಡಬಹುದು, ಹೇಗೆ ಚೆನ್ನಾಗಿ ಮಾಡಬೇಕು ಎಂಬುದರ ಬಗ್ಗೆ ಯೋಚಿಸಬೇಕು. ಕಲಾವಿದ ಎಂದು ಸಾಬೀತುಪಡಿಸುವುದಕ್ಕೆ ಪ್ರಶಸ್ತಿ ವಿಜೇತ ಚಿತ್ರವೇ ಬೇಕು ಅಂತಿಲ್ಲ. ಒಂದು ಪಾತ್ರವನ್ನು ಮಾಡುವುದಕ್ಕೆ ಪ್ರತಿಯೊಬ್ಬರಿಗೂ ಅವರದ್ದೇ ಆದ ರೀತಿಗಳಿರುತ್ತವೆ. ಯಾವ ಹೋಟೆಲ್​ಗೆ ಹೋದರೂ ಇಡ್ಲಿ, ಇಡ್ಲಿಯೇ. ಅದನ್ನು ಸರ್ವ್ ಮಾಡುವ ರೀತಿ ಬದಲಾಗುತ್ತದೆ ಮತ್ತು ಅದಕ್ಕಾಗಿ ನಾವು ದುಡ್ಡು ಕೊಡುತ್ತೇವಲ್ಲ, ಹಾಗೆಯೇ ಇದು.

    ಎಲ್ಲರೂ ಕೈಜೋಡಿಸಿದರೆ ಮಾತ್ರ ಸಾಧ್ಯ …: ನಾನು ಒಂದು ಪಾತ್ರವನ್ನು ಎಂಜಾಯ್ ಮಾಡುವುದಕ್ಕೆ ಇಷ್ಟಪಡುತ್ತೇನೇ ಹೊರತು, ಪ್ರಯೋಗ ಮಾಡುವುದಿಲ್ಲ. ಪ್ರಯೋಗ ಎಂದರೆ, ಯಾರೂ ಮಾಡದಿರುವುದನ್ನು ಮಾಡುವುದು. ಉದಾಹರಣೆಗೆ, ಮೊದಲೇ ಕ್ಲೈಮ್ಯಾಕ್ಸ್ ಹೇಳಿ, ಆ ನಂತರ ಕಥೆ ಹೇಳುವುದು. ನಾನು ನನ್ನದೇ ರೀತಿಯಲ್ಲಿ ಮನರಂಜಿಸುವುದಕ್ಕೆ ಪ್ರಯತ್ನಿಸುತ್ತೇನೆ. ಅದ್ಭುತವಾಗಿ ಡೈಲಾಗ್ ಬರೆಸಿಕೊಂಡು ಹೇಳುವುದು ವಿಶೇಷವಲ್ಲ. ಮೂಗನಾಗಿ ಅಭಿನಯಿಸಬೇಕು ಎಂದರೆ, ಮಾತನಾಡದೆ ಅಭಿವ್ಯಕ್ತಗೊಳಿಸಬೇಕು. ಹಾಗಂತ ಅದು ಒಬ್ಬನಿಂದ ಮಾತ್ರ ಸಾಧ್ಯವಿಲ್ಲ. ಅದಕ್ಕೆ ಒಬ್ಬರಿಗೊಬ್ಬರು ಕೈಜೋಡಿಸಬೇಕು. ಕಲಾವಿದನಿಗೆ ಒಳ್ಳೆಯ ನಿರ್ದೇಶಕ ಬೇಕು. ಒಬ್ಬ ನಿರ್ದೇಶಕನಿಗೆ ಛಾಯಾಗ್ರಾಹಕ ಬೇಕು. ಯಾವ ಒಳ್ಳೆಯ ನಟ ಸಹ ಅವನೊಬ್ಬನಿಂದಲೇ ರೂಪುಗೊಳ್ಳುವುದಿಲ್ಲ. ಈ ಸಾಲಿನಲ್ಲಿ ಕೊನೆಗೆ ಬರುವುದು ನಟರು. ಅವರೆಲ್ಲ ಕೈಜೋಡಿಸಿದರೆ ಮಾತ್ರ ನಾವು ಏನಾದರೂ ಮಾಡುವುದಕ್ಕೆ ಸಾಧ್ಯ.

    ವಿಜನ್ ಇದ್ದವರ ಜತೆ ಕೈಜೋಡಿಸಬೇಕು …: ‘ರಣ್’ ಚಿತ್ರವನ್ನು ಒಪು್ಪವುದಕ್ಕೆ ಕಾರಣ ಅಮಿತಾಭ್ ಬಚ್ಚನ್. ಅವರ ಜತೆಗೆ ನಟಿಸುವುದಕ್ಕೆ ಎಷ್ಟು ಜನರಿಗೆ ಅವಕಾಶ ಸಿಗುತ್ತದೆ ಹೇಳಿ? ಅಂಥದ್ದೊಂದು ಅವಕಾಶ ನನಗೆ ಸಿಕ್ಕಿದೆ. ಮೊದಲು ಒಪ್ಪಬೇಕು. ಆ ನಂತರ ಕಥೆ, ಪಾತ್ರವೆಲ್ಲ. ನನ್ನ ಟೈಮ್ ಚೆನ್ನಾಗಿತ್ತು. ಅವರ ಜತೆಗೆ ಹೇಗೆ ನಟಿಸಬೇಕು ಎನ್ನುವುದಕ್ಕಿಂತ ಅವರ ಜತೆಗೆ ಹೇಗೆ ಹಿಂದಿಯಲ್ಲಿ ಮಾತನಾಡಬೇಕು ಎಂಬುದು ಚಾಲೆಂಜ್ ಆಗಿತ್ತು. ‘ರಣ್’ ಮಾಡಿದ್ದಕ್ಕೆ ‘ಈಗ’ ಸಿಕ್ಕಿದ್ದು. ಕಥೆ ಕೇಳಿದ ತಕ್ಷಣ ಒಪ್ಪಿದೆ. ಅಲ್ಲಿಗೆ ಹೋಗಿ ನೆಗೆಟಿವ್ ಪಾತ್ರ ಮಾಡುವುದು ಬೇಕಿತ್ತಾ? ಎಂಬ ಪ್ರಶ್ನೆಗಳು ಕೇಳಿಬಂದವು. ‘ಬ್ಯಾಟ್​ವ್ಯಾನ್’ ಸಿನಿಮಾದಲ್ಲಿ ಜೋಕರ್ ಎಂಬ ವಿಲನ್ ಮಿಂಚುತ್ತಾನೆ. ಅದೇ ತರಹ ‘ಈಗ’ ಚಿತ್ರದಲ್ಲೂ ನೆಗೆಟಿವ್ ಪಾತ್ರಕ್ಕೆ ಹೆಚ್ಚು ಪ್ರಾಶಸ್ಱ. ಅಲ್ಲಿ ನನ್ನ ಪಾತ್ರ ಬಹಳ ಮುಖ್ಯ. ಅದೊಂದು ಪ್ಯಾನ್ ಇಂಡಿಯಾ ಸಿನಿಮಾ ಅಂತ ಒಪ್ಪಲಿಲ್ಲ. ಆಗ ರಾಜಮೌಳಿ ‘ವಿಕ್ರಮಾರ್ಕಡು’, ‘ಮಗಧೀರ’ ಚಿತ್ರಗಳನ್ನು ಕೊಟ್ಟಿದ್ದರೇ ಹೊರತು, ‘ಬಾಹುಬಲಿ’ ಮಾಡಿರಲಿಲ್ಲ. ಅಂಥವರು ಕರೆದಾಗ ಖುಷಿಯಾಯಿತು. ಅವರಿಗೆ ಏನು ಮಾಡಬೇಕು ಅಂತ ಚೆನ್ನಾಗಿ ಗೊತ್ತಿತ್ತು. ಎಲ್ಲವನ್ನೂ ನಾವೇ ಮಾಡಬೇಕು ಅಂತಿಲ್ಲ. ಕೆಲವೊಮ್ಮೆ ವಿಜನ್ ಇದ್ದವರ ಜತೆಗೆ ನಾವು ಕೈಜೋಡಿಸಿದರೂ ಸಾಕು.

    ಹಸಿವಿದ್ದವರ ಜತೆಗೆ ನಿಲ್ಲುವುದು ಮುಖ್ಯ …: ‘ಕೋಟಿಗೊಬ್ಬ-3’ ಚಿತ್ರದ ನಿರ್ದೇಶಕ ಶಿವಕಾರ್ತಿಕ್ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಹೊಸಬನ ಜತೆಗೆ ಕೆಲಸ ಮಾಡಿದ್ದು ಎಷ್ಟು ಸೂಕ್ತ ಎಂದು ಹಲವರು ಪ್ರಶ್ನಿಸಿದ್ದರು. ಕೆಲ ವರ್ಷಗಳ ಹಿಂದೆ ನಾನೂ ಚಿತ್ರರಂಗಕ್ಕೆ ಹೊಸಬನಾಗಿದ್ದೆ. ನಾನೊಬ್ಬ ಹೊಸಬ ಎಂದು ಸುನೀಲ್ ಕುಮಾರ್ ದೇಸಾಯಿ ಯೋಚಿಸಿದ್ದರೆ, ‘ಸ್ಪರ್ಶ’ ಆಗುತ್ತಿರಲಿಲ್ಲ. ಅದೇ ರೀತಿ ಬೇರೆಯವರು ಯೋಚಿಸಿದ್ದರೆ, ನಾನು ಇಲ್ಲಿಯವರೆಗೂ ಬೆಳೆದು ಬರುತ್ತಿರಲಿಲ್ಲ. ಅವರು ಮಾಡದ ಯೋಚನೆ ನಾನ್ಯಾಕೆ ಮಾಡಲಿ. ನನ್ನ ತಾಯಿ ಸುದೀಪ್ ಎಂದು ಹೆರಲಿಲ್ಲ. ಒಂದು ಮಗುವನ್ನು ಹೆತ್ತರು. ಆ ನಂತರ ತಂದೆ-ತಾಯಿ ಸುದೀಪ್ ಅಂತ ಹೆಸರಿಟ್ಟರು. ದೇಸಾಯಿ, ಉಪೇಂದ್ರ, ರಾಜಮೌಳಿ, ರಾಮ್ೋಪಾಲ್ ವರ್ವ ಎಲ್ಲರೂ ಒಂದು ದಿನ ಹೊಸಬರೇ. ನಮ್ಮ ಮೇಲೆ ನಮಗೆ ನಂಬಿಕೆ ಇದ್ದರೆ, ಮಗು ಹೆರುವುದಕ್ಕೆ ಹೆದರಬಾರದು. ಮಗು ಯೋಗ್ಯತೆ ಮೇಲೆ ಬೆಳೆಯುವುದಕ್ಕೆ ಬಿಡಬೇಕು. ನೀನು ಸುದೀಪ್ ಆಗಬೇಕು, ಶಿವಣ್ಣ ಆಗಬೇಕು ಎಂದು ಹೇಳಬಾರದು. ಹೊಸಬರನ್ನು ನಂಬುವುದು, ಅವರ ಬೆನ್ನು ತಟ್ಟುವುದು ತಪ್ಪಲ್ಲ. ಹಾಗಂತ ಇದು ತ್ಯಾಗ ಎನ್ನುತ್ತಿಲ್ಲ. ಹಸಿವಿದ್ದವರ ಜತೆಗೆ ನಿಲ್ಲುವುದು ಖುಷಿಯ ವಿಚಾರ.

    ಬಜೆಟ್ ಮುಖ್ಯವಲ್ಲ, ಕಥೆ ಮುಖ್ಯ …: ಪ್ರತಿ ಬಾರಿಯೂ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುವುದಕ್ಕೆ ಆಗುವುದಿಲ್ಲ. ಅಪರೂಪಕ್ಕೆ ಒಮ್ಮೆಯಾದರೆ ಪರವಾಗಿಲ್ಲ. ‘ವಿಕ್ರಾಂತ್ ರೋಣ’ ನಂತರ ಅದೇ ತರಹ ಇನ್ನೊಂದು ದೊಡ್ಡ ಚಿತ್ರದಲ್ಲಿ ಮಾಡುತ್ತೀನಿ ಅಂತಲ್ಲ. ಒಂದು ಸಾಧಾರಣ ಚಿತ್ರದಲ್ಲಿ ಬೇಕಾದರೂ ನಟಿಸಬಹುದು. ಇಲ್ಲಿ ಬಜೆಟ್ ಎಷ್ಟು ಅಥವಾ ಎಷ್ಟು ಜನರಿಗೆ ತಲುಪಿಸಬೇಕು ಎನ್ನುವುದಕ್ಕಿಂತ, ಕಥೆ ಏನು ಎನ್ನುವುದು ಬಹಳ ಮುಖ್ಯ. ಯಾರಾದರೂ ಬಂದು ‘ವಿಕ್ರಾಂತ್ ರೋಣ’ ನಂತರ ಒಂದು ಜೇಮ್್ಸ ಬಾಂಡ್ ಚಿತ್ರ ಮಾಡೋಣ ಎಂದರೆ, ಮೊದಲು ಬರುವ ಪ್ರಶ್ನೆ ಕಥೆ ಏನು ಎಂದು. ಒಬ್ಬ ನಟನಾದ ಮೇಲೆ ಬರೀ ಪ್ಯಾನ್ ಇಂಡಿಯಾ ಸಿನಿಮಾಗಳನ್ನೇ ಮಾಡುವುದಕ್ಕೆ ಸಾಧ್ಯವಿಲ್ಲ. ಎಲ್ಲ ತರಹದ ಸಿನಿಮಾಗಳನ್ನೂ ಮಾಡಬೇಕು. ಸಾಧಾರಣ ಊಟ ಮಾಡಿದರೆ ಮಾತ್ರ, ಏನೋ ವಿಶೇಷ ತಿನ್ನಬೇಕೆಂದೆನಿಸುತ್ತದೆ. ಅದೇ ಹಗಲು-ರಾತ್ರಿ ಬರೀ ವಿಶೇಷ ಊಟವೇ ಸಿಕ್ಕಿಬಿಟ್ಟರೆ, ಬಹಳ ಬೇಗ ಬೋರ್ ಆಗಿಬಿಡುತ್ತದೆ. ಸಿಂಪಲ್ ಆಗಿ ಒಂದು ಇಡ್ಲಿ ಕೊಟ್ಟರೆ ಸಾಕು ಎನಿಸಿಬಿಡುತ್ತದೆ. ಸಿನಿಮಾ ಕೂಡಾ ಹಾಗೆಯೇ.

    ಕಥೆ, ಪಾತ್ರ, ನಟನೆ, ಯಶಸ್ಸಿನ ಬಗ್ಗೆ...: ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​ನಲ್ಲಿ ಸುದೀಪ್​

    ಹೀರೋಯಿಸಂ ಆಗಲೀ, ಬಜೆಟ್ ಆಗಲೀ ಓವರ್ ಆದರೆ ಸಾಕಾಗುತ್ತದೆ. ಅದೇ ಕಾರಣಕ್ಕೆ ಲಿಯೋನಾಡೋ ಡಿ ಕ್ಯಾಪ್ರಿಯೋ, ‘ಟೈಟಾನಿಕ್’ನಂತಹ ದೊಡ್ಡ ಸಿನಿಮಾ ಮಾಡಿ, ‘ಕ್ಯಾಚ್ ಮೀ ಇಫ್ ಯೂ ಕ್ಯಾನ್’ನಂತಹ ಸಣ್ಣ ಸಿನಿಮಾ ಮಾಡುತ್ತಾರೆ. ಹಾಗಾಗಿ, ಇಲ್ಲಿ ಬಜೆಟ್ ಮುಖ್ಯವಲ್ಲ, ಕಥೆ ಮುಖ್ಯ. ಸುಮ್ಮನೆ ದೂರುತ್ತಾ ಕೂರುವುದು ಸರಿಯಲ್ಲ …: ಒಟಿಟಿ ತರಹದ ಹೊಸ ವೇದಿಕೆಗಳನ್ನು, ತಂತ್ರಜ್ಞಾನವನ್ನು ನಾವು ಒಪ್ಪಿಕೊಳ್ಳುತ್ತಾ ಹೋಗಬೇಕು. ಅದರೊಂದಿಗೆ ಹೆಜ್ಜೆ ಹಾಕಬೇಕು. ಅದು ಬಿಟ್ಟು ಸುಮ್ಮನೆ ದೂರುತ್ತಾ ಕೂತರೆ ಬದಲಾವಣೆ ಸಾಧ್ಯವಿಲ್ಲ. ಸಿನಿಮಾದ ಮುಖ್ಯ ಉದ್ದೇಶ ಕಥೆ ಹೇಳುವುದು. ಅದನ್ನು ಹೇಗೆ ಮನಮುಟ್ಟುವಂತೆ ಹೇಳಬೇಕು ಎನ್ನುವುದು ಅವರವರಿಗೆ ಬಿಟ್ಟಿದ್ದು. ಮೊಬೈಲ್​ನಲ್ಲಿ ಕ್ಲಾರಿಟಿ ಇರುವುದಿಲ್ಲ, ಸೌಂಡ್ ಚೆನ್ನಾಗಿರುವುದಿಲ್ಲ. ಆದರೂ ಮೊಬೈಲ್​ನಲ್ಲಿ ಜನ ಒಟಿಟಿಯ ಮೂಲಕವೋ ಅಥವಾ ಬೇರೆ ಯಾವುದೋ ವೇದಿಕೆಯ ಮೂಲಕವಾದರೂ ಚಿತ್ರ ನೋಡುತ್ತಾರೆಂದರೆ, ಎರಡೆರಡು ಬಾರಿ ನೋಡುವಂತಿರಬೇಕು. ಆ ಮಟ್ಟದ ಗುಣಮಟ್ಟ ಮತ್ತು ಹೊಸತನವನ್ನು ಕೊಡುವುದಕ್ಕೆ ಪ್ರಯತ್ನಿಸಬೇಕು.

    ರಿಮೇಕ್​ಗೆ ಇದು ಒಳ್ಳೆಯ ಸಮಯವಲ್ಲ: ಕೆಲವು ಸಿನಿಮಾಗಳನ್ನು ನೋಡಿ ಸುಮ್ಮನೆ ಎಂಜಾಯ್ ಮಾಡಬೇಕು ಅಷ್ಟೇ. ರಿಮೇಕ್ ಮಾಡುವ ಸಮಯದಲ್ಲಿ ನಾನೂ ಸಾಕಷ್ಟು ರಿಮೇಕ್ ಮಾಡಿದ್ದೇನೆ. ಅದು ತಪ್ಪು ಎನ್ನುವುದಿಲ್ಲ. ಆದರೆ, ಇಷ್ಟವಾದ ಸಿನಿಮಾಗಳನ್ನೆಲ್ಲ ರಿಮೇಕ್ ಮಾಡಬೇಕು ಅಂತೇನಿಲ್ಲ. ಏಕೆಂದರೆ, ಇವತ್ತು ಸಿನಿಮಾ ಸಾಕಷ್ಟು ಬದಲಾಗಿದೆ. ಒಟಿಟಿ ಮುಂತಾದ ಹೊಸ ವೇದಿಕೆಗಳು ಬಂದ ಮೇಲೆ ಒಂದು ಚಿತ್ರದ ಲೈಫ್​ಸ್ಪಾನ್ ಕಡಿಮೆಯಾಗಿದೆ. ಮುಂಚೆ ಒಂದು ಭಾಷೆಯ ಚಿತ್ರ ಎಲ್ಲರಿಗೂ ಹೀಗೆ ಬೆರಳ ತುದಿಯಲ್ಲಿ ಸಿಗುತ್ತಿರಲಿಲ್ಲ. ಈಗ ಸಿಗುತ್ತಿದೆ ಮತ್ತು ಚೆನ್ನಾಗಿದ್ದರೆ, ಎಲ್ಲ ಭಾಷೆಯ ಚಿತ್ರಗಳನ್ನು ಎಲ್ಲ ಕಡೆ ನೋಡಿರುತ್ತಾರೆ. ಹಾಗಿರುವಾಗ, ಮೂಲ ಚಿತ್ರವನ್ನು ನೋಡಿರುವವರು ರಿಮೇಕ್ ನೋಡುವ ಆಸಕ್ತಿ ತೋರಿಸದಿರಬಹುದು. ಒಂದು ಚಿತ್ರದ ಪೋಸ್ಟರ್​ಗಳು ಬೇರೆಬೇರೆ ಭಾಷೆಗಳಲ್ಲಿ, ಬೇರೆಬೇರೆ ತರಹ ಬಂದರೆ ಓಕೆ. ಒಂದೇ ತರಹ ಬಂದರೆ, ಯಾವುದನ್ನು ನೋಡಬೇಕು ಎಂದು ಜನ ನಿರ್ಧರಿಸುತ್ತಾರೆ.

    ಮೇಲಾಗಿ ಒಳ್ಳೆಯ ಪ್ರಯತ್ನಗಳಾಗುತ್ತಿರುವಾಗ ರಿಮೇಕ್ ಅವಶ್ಯಕತೆ ಇರುವುದಿಲ್ಲ. ‘ವಿಕ್ರಾಂತ್ ರೋಣ’ದಂತಹ ಚಿತ್ರವನ್ನು ಕನ್ನಡದಲ್ಲಿ ಮಾಡಬಹುದು ಎಂದು ನಾನು ಕೆಲವು ವರ್ಷಗಳ ಹಿಂದೆ ನಿರೀಕ್ಷಿಸಿರಲಿಲ್ಲ. ಈಗ ಅದು ನಮ್ಮಲ್ಲೇ ಸಾಧ್ಯವಾಗುತ್ತಿರುವಾಗ, ರಿಮೇಕ್ ಮಾಡುವುದಕ್ಕೆ ಇದು ಒಳ್ಳೆಯ ಸಮಯವಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts