More

    ಪ್ರತಿಭೆ, ಪಾಸಿಟಿವ್ ಯೋಚನೆಯ ಸಂಗಮದಿಂದ ಯಶಸ್ಸು

    ಪ್ರತಿಭೆ, ಪಾಸಿಟಿವ್ ಯೋಚನೆಯ ಸಂಗಮದಿಂದ ಯಶಸ್ಸುದೈಹಿಕ ಆರೋಗ್ಯದ ಜತೆ ಮಾನಸಿಕ ಆರೋಗ್ಯ ಸಹ ಬಹಳ ಮುಖ್ಯ. ದೇಹಕ್ಕೆ ಸ್ವಲ್ಪ ರೆಸ್ಟ್ ಕೊಡುವುದರ ಜತೆಗೆ, ಶಾಂತವಾಗಿರಬೇಕು. ಧ್ಯಾನಕ್ಕಾಗಿ ಒಂದಿಷ್ಟು ಸಮಯ ಮೀಸಲಿಡಬೇಕು. ಸದಾ ಮುಗುಳ್ನಗುತ್ತಿರಬೇಕು. ಆಗ ನಮ್ಮ ಯೋಚನೆಗಳು ಸುಧಾರಿಸುತ್ತವೆ. ಒಳ್ಳೆಯ ಯೋಚನೆಗಳಿದ್ದಾಗ ಏನು ಬೇಕಾದರೂ ಸಾಧನೆ ಮಾಡಬಹುದು.

    ಒಬ್ಬ ಹೀರೋ ಆಗಬೇಕು ಎಂದುಕೊಂಡು ಮೆಜೆಸ್ಟಿಕ್​ನಲ್ಲಿ ಬಸ್ ಇಳಿದು, ಗಾಂಧಿನಗರದ ಕಡೆಗೆ ಹೊರಟಿದ್ದಾನೆ. ಒಂದಿಷ್ಟು ದೂರ ನಡೆದ ಮೇಲೆ, ರಸ್ತೆಯಲ್ಲಿ ಒಬ್ಬ ಸಿಗುತ್ತಾನೆ. ‘ನಾನೂ ನಿನ್ನ ಜತೆಗೆ ಬರುತ್ತೇನೆ’ ಎನ್ನುತ್ತಾನೆ. ‘ನೀನ್ಯಾರು’ ಎಂದು ಕೇಳಿದಾಗ, ‘ಅವಕಾಶ’ ಎಂಬ ಉತ್ತರ ಅವನಿಂದ ಬರುತ್ತದೆ. ‘ಅವಕಾಶವಿಲ್ಲದಿದ್ದರೆ ಈ ಜಗತ್ತಿನಲ್ಲಿ ಏನೂ ಆಗುವುದಿಲ್ಲ, ನನ್ನನ್ನು ಜತೆಗೆ ಸೇರಿಸಿಕೋ ಒಳ್ಳೆಯದಾಗುತ್ತದೆ’ ಎಂದು ಹೇಳುತ್ತಾನೆ. ಅದಕ್ಕೆ ಮೊದಲನೆಯವನು ಒಪ್ಪಿ, ಅವನನ್ನು ಜತೆಗೆ ಸೇರಿಸಿಕೊಳ್ಳುತ್ತಾನೆ. ಇಬ್ಬರೂ ಒಂದಿಷ್ಟು ದೂರ ನಡೆಯುತ್ತಾರೆ. ಇನ್ನೊಂದು ರಸ್ತೆಯಲ್ಲಿ ಇನ್ನೊಬ್ಬ ಸಿಗುತ್ತಾನೆ. ಅವನು ಸಹ ಜತೆಗೆ ಬರುತ್ತೇನೆ ಎನ್ನುತ್ತಾನೆ. ‘ನಾನು ಅದೃಷ್ಟ. ಬರೀ ಅವಕಾಶವೊಂದಿದ್ದರೆ ಏನೂ ಆಗದು. ಅದೃಷ್ಟ ಸಹ ಬಹಳ ಮುಖ್ಯ. ನನ್ನನ್ನೂ ಸೇರಿಸಿಕೋ’ ಎಂದು ಅರ್ಥ ಮಾಡಿಸುತ್ತಾನೆ. ಅದಕ್ಕೆ ಮೊದಲನೆಯವನು ಒಪು್ಪತ್ತಾನೆ. ಮೂವರೂ ಒಟ್ಟಿಗೆ ಪ್ರಯಾಣ ಮುಂದುವರಿಸುತ್ತಾರೆ. ಇನ್ನಷ್ಟು ದೂರ ಹೋದ ಮೇಲೆ, ಇನ್ನೂ ಒಬ್ಬ ಸಿಗುತ್ತಾನೆ. ಅವನು ಸಹ ಜತೆಗೆ ಬರುವುದಾಗಿ ಹೇಳುತ್ತಾನೆ. ಆದರೆ, ಇದಕ್ಕೆ ಮೊದಲನೆಯವನು ಒಪು್ಪವುದಿಲ್ಲ. ‘ಅವಕಾಶ ಮತ್ತು ಅದೃಷ್ಟಗಳಿದ್ದರೆ ಏನು ಬೇಕಾದರೂ ಮಾಡಬಹುದು, ಇನ್ನೊಬ್ಬನ ಅವಶ್ಯಕತೆ ಇಲ್ಲ’ ಎಂದು ಹೇಳಿ, ಆತ ಯಾರು, ಏನು ಎಂದು ವಿಚಾರಿಸದೇ ಕಳುಹಿಸಿಬಿಡುತ್ತಾನೆ.

    ಅದಾದ ಮೇಲೆ ಅವನು ಸಿನಿಮಾದಲ್ಲಿ ದೊಡ್ಡ ಹೀರೋ ಆಗುತ್ತಾನೆ. ಒಂದಿಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಚೆನ್ನಾಗಿ ಮೆರೆಯುತ್ತಾನೆ. ಕ್ರಮೇಣ ಅವನಿಗೆ ಅವಕಾಶ, ಅದೃಷ್ಟ ಎರಡೂ ಕಡಿಮೆಯಾಗುತ್ತದೆ. ಕೊನೆಗೊಂದು ದಿನ ಕೆಲಸವೂ ಇಲ್ಲದೆ, ಮುಂದೇನು ಎಂದು ಗೊತ್ತಾಗದೆ, ಊರಿಗೆ ವಾಪಸ್ ಹೋಗುವುದಕ್ಕೆ ತೀರ್ವನಿಸುತ್ತಾನೆ. ಗಾಂಧಿನಗರದಿಂದ ವಾಪಸ್ಸು ಹೋಗುವಾಗ, ಕೆಲವು ವರ್ಷಗಳ ಹಿಂದೆ ಅವನಿಂದ ತಿರಸ್ಕರಿಸಲ್ಪಟ್ಟ ಅದೇ ಮನುಷ್ಯ ಸಿಗುತ್ತಾನೆ. ‘ಅಂದು ನೀನು ನನ್ನನ್ನು ಜತೆಗೆ ಕರೆದುಕೊಂಡು ಹೋಗಿದ್ದರೆ, ನೀನು ಇಂದು ಕೆಲಸವಿಲ್ಲದೆ ಊರಿಗೆ ವಾಪಸ್ಸು ಹೋಗುವ ಪ್ರಮೇಯ ಇರುತ್ತಿರಲಿಲ್ಲ’ ಎನ್ನುತ್ತಾನೆ. ಆಗ ಮೊದಲನೆಯವನಿಗೆ ಅವನ್ಯಾರೆಂದು ಕುತೂಹಲವಾಗುತ್ತದೆ. ಯಾರೆಂದು ವಿಚಾರಿಸಿದಾಗ, ‘ನಾನು ಪ್ರತಿಭೆ…’ ಎಂದು ಉತ್ತರಿಸುತ್ತಾನೆ.

    ನನಗೆ ಈಗ 55 ವರ್ಷ. ತಿರುಗಿ ನೋಡಿದರೆ ಆಶ್ಚರ್ಯವಾಗುತ್ತದೆ. ನಾನು ಚಿಕ್ಕಂದಿನಿಂದ ಒಬ್ಬನೇ ಮಾತಾಡಿಕೊಳ್ಳುತ್ತಿದ್ದೆ. ನಾನು ದೊಡ್ಡ ನಟನಾದರೆ, ಪ್ರಶಸ್ತಿ ಪಡೆದರೆ ಏನು ಮಾತನಾಡಬೇಕು ಎಂದು ಅಭ್ಯಾಸ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ, ಮುಂದೊಂದು ದಿನ ನಾನು ನಟನಾಗಬಹುದು ಎಂಬ ಕಲ್ಪನೆ ಸಹ ಇರಲಿಲ್ಲ. ಆದರೆ, ನಟನಾಗಬೇಕು ಎಂಬ ಆಸೆಯಂತೂ ಖಂಡಿತ ಇತ್ತು. ಆ ನಂತರ ಡಬ್ಬಿಂಗ್ ಕಲಾವಿದನಾದೆ. ಒಂದು ಹಂತದಲ್ಲಿ ಬಹಳ ಬೇಡಿಕೆಯ ಡಬ್ಬಿಂಗ್ ಕಲಾವಿದನಾದೆ. ಎಲ್ಲ ವಿಲನ್​ಗಳಿಗೂ ಡಬ್ಬಿಂಗ್ ಮಾಡಿದೆ. ಸುಮಾರು ನಾಲ್ಕು ಸಾವಿರ ಚಿತ್ರಗಳಿಗೆ ಧ್ವನಿ ಕೊಟ್ಟೆ. ವಿಲನ್ ಪಾತ್ರಕ್ಕೆ ನನ್ನದೇ ಧ್ವನಿ ಇರಬೇಕು ಎನ್ನುವಷ್ಟು ಅನಿವಾರ್ಯವಾದೆ. ಒಂದೊಂದು ಚಿತ್ರಕ್ಕೆ ನಾಲ್ವರಿಗೆ ಡಬ್ಬಿಂಗ್ ಮಾಡಿದ್ದೂ ಇದೆ. ಯಾವುದೇ ಪಾತ್ರಕ್ಕಾದರೂ ಧ್ವನಿ ಬಹಳ ಮುಖ್ಯ. ಪಾತ್ರವನ್ನು ಇನ್ನಷ್ಟು ಚೆನ್ನಾಗಿ ರೂಪಿಸುವುದು ಧ್ವನಿ. ನನ್ನ ಧ್ವನಿಯಿಂದ ಹಲವು ಪಾತ್ರಗಳಿಗೆ ಜೀವ ಕೊಟ್ಟೆ. ಇವತ್ತಿಗೂ ‘ಅರುಂಧತಿ’ ಚಿತ್ರದ ಪ್ರಸ್ತಾಪವಾದರೆ, ನನ್ನ ಹೆಸರು ಬಂದೇ ಬರುತ್ತದೆ. ನನ್ನ ಪ್ರತಿಭೆ ಮತ್ತು ಶಕ್ತಿ ಏನೆಂದು ಗೊತ್ತಿದ್ದರೂ, ಅದ್ಯಾಕೋ ಯಾರೂ ನನಗೆ ನಟಿಸುವ ಅವಕಾಶ ಕೊಡಲಿಲ್ಲ. ಒಂದು ಸಾವಿರಕ್ಕೂ ಹೆಚ್ಚು ನಿರ್ದೇಶಕರ ಜತೆಗೆ ಕೆಲಸ ಮಾಡಿದ್ದೇನೆ. ಯಾರೊಬ್ಬರೂ ನನ್ನಿಂದ ಪಾತ್ರ ಮಾಡಿಸಲಿಲ್ಲ. ಹಾಗಂತ ನಾನು ಸುಮ್ಮನಿರಲಿಲ್ಲ. ಅಭ್ಯಾಸ ಮಾಡುತ್ತಲೇ ಇದ್ದೆ. ಡಬ್ಬಿಂಗ್ ಮಾಡುವಾಗ ಮೈಕ್ ಮುಂದೆ ಅಭಿನಯಿಸುತ್ತಿದ್ದೆ. ಒಂದು ಪಾತ್ರವನ್ನು ಯಾರು ಹೇಗೆ ಮಾಡಿದ್ದರೂ, ನಾನಾಗಿದ್ದರೆ ಹೇಗೆ ಮಾಡುತ್ತಿದ್ದೆ ಎಂದು ಅಭ್ಯಾಸ ಮಾಡುತ್ತಿದ್ದೆ. ಅಷ್ಟಾದರೂ ನನಗೆ ಅಷ್ಟು ಸುಲಭಕ್ಕೆ ಬ್ರೇಕ್ ಸಿಗಲಿಲ್ಲ. 25 ವರ್ಷಗಳ ಕಾಲ ಡಬ್ಬಿಂಗ್ ಮಾಡಿದ ಮೇಲೆ, ನನ್ನ 44ನೇ ವಯಸ್ಸಿನಲ್ಲಿ ಕೊನೆಗೂ ಶ್ರಮಕ್ಕೆ ಫಲ ಸಿಕ್ಕಿತು. ನನ್ನಲ್ಲಿ ಸುದೀಪ್ ಅದೇನು ನೋಡಿದರೋ ಗೊತ್ತಿಲ್ಲ. ‘ಕೆಂಪೇಗೌಡ’ ಚಿತ್ರದಲ್ಲಿ ಆಮುಗಂ ಎಂಬ ಪಾತ್ರ ಕೊಟ್ಟರು. ಆ ನಂತರ ಏನೆಲ್ಲ ಆಯಿತು ಅಂತ ಗೊತ್ತೇ ಇದೆ.

    ಪ್ರತಿಯೊಬ್ಬರಿಗೂ ಒಂದಲ್ಲ ಒಂದು ದಿನ ಅವಕಾಶ ಸಿಕ್ಕೇ ಸಿಗುತ್ತದೆ; ಅದು ಸಿಕ್ಕಾಗ ನಾವು ಓಪನ್ ಆಗಿರಬೇಕು ಅಷ್ಟೇ. ನನಗೂ ಒಳ್ಳೆಯ ದಿನ ಬಂದೇ ಬರುತ್ತದೆ ಎಂಬ ನಂಬಿಕೆಯ ಜತೆಗೆ, ಆ ದಿನಕ್ಕಾಗಿ ನಾನು ತಯಾರಾಗಿದ್ದೆ. ಸತತವಾಗಿ ಅಪ್​ಡೇಟ್ ಆಗುತ್ತಲೇ ಇದ್ದೆ. ಬಂದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡೆ ಅನಿಸುತ್ತದೆ. ಇಲ್ಲಿ ಯಾರನ್ನೂ ಅಷ್ಟು ಸುಲಭವಾಗಿ ಒಪು್ಪವುದಿಲ್ಲ. ನಾನು ಬೇರೆ ಊರಿನವನಾದರೂ, ಬೇರೆ ಭಾಷೆಯಾದರೂ ಕನ್ನಡಿಗರು ನನ್ನನ್ನು ಪ್ರೀತಿಯಿಂದ ಬೆಳೆಸಿದರು.

    ಮನುಷ್ಯ ಯಶಸ್ವಿಯಾಗುವುದಕ್ಕೆ ಎರಡು ಅಂಶ ಬಹಳ ಮುಖ್ಯವಾಗಿ ಬೇಕು. ಒಂದು ಪ್ರತಿಭೆ. ಇನ್ನೊಂದು ಪಾಸಿಟಿವ್ ಯೋಚನೆಗಳು. ಒಂದರ ಜತೆಗೆ ಇನ್ನೊಂದು ಹೆಜ್ಜೆ ಹಾಕಬೇಕು. ಪ್ರತಿಭೆ ಇದ್ದರಷ್ಟೇ ಸಾಲದು, ಜೀವನದಲ್ಲಿ ನಾವೇನಾದರೂ ಸಾಧಿಸಬೇಕೆಂದರೆ ಒಳ್ಳೆಯ ಯೋಚನೆಗಳು ಕೂಡ ಬೇಕು. 25 ವರ್ಷಗಳಾದರೂ ನನಗೆ ನಟಿಸಲು ಅವಕಾಶ ಸಿಗಲಿಲ್ಲ ಎಂದು ಹತಾಶನಾಗಿದ್ದರೆ, ನಾನು ಇವತ್ತು ಜನರ ಪ್ರೀತಿ ಗಳಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ಕೆಟ್ಟ ಯೋಚನೆಗಳಿಂದ ದೂರವಿರಿ. ಇಲ್ಲವಾದರೆ, ಅವು ನಿಮ್ಮನ್ನು ತಿಂದು ಹಾಕಿಬಿಡುತ್ತವೆ. ಒಳ್ಳೆಯ ಯೋಚನೆಗಳನ್ನು ಮಾಡಿದರೆ, ಮನಸ್ಸು ಸದಾ ಫ್ರೆಶ್ ಆಗಿರುತ್ತದೆ. ಆರೋಗ್ಯವೂ ಚೆನ್ನಾಗಿರುತ್ತದೆ.

    ಪ್ರತಿದಿನ ನಮಗೆ ಸಿಗುವವರು ಊಟ ಆಯ್ತಾ ಎಂದು ವಿಚಾರಿಸುತ್ತಾರೆ. ಗುಡ್ ಮಾರ್ನಿಂಗ್ ಎನ್ನುತ್ತಾರೆ. ಗುಡ್ ನೈಟ್ ಹೇಳುತ್ತಾರೆ. ಆರೋಗ್ಯ ಚೆನ್ನಾಗಿ ನೋಡಿಕೊಳ್ಳುತ್ತಿದ್ದೀಯ ಅಥವಾ ವ್ಯಾಯಾಮ ಮಾಡುತ್ತಿದ್ದೀಯ ಎಂದು ಕೇಳುವವರು ಕಡಿಮೆಯೇ. ಅದನ್ನು ನಾವೇ ನೋಡಿಕೊಳ್ಳಬೇಕು. ದೈಹಿಕ ಆರೋಗ್ಯದ ಜತೆ ಮಾನಸಿಕ ಆರೋಗ್ಯ ಸಹ ಬಹಳ ಮುಖ್ಯ. ಆರೋಗ್ಯ ಅಂದರೆ ಜಿಮ್ೇ ಹೋಗಬೇಕು ಅಂತೇನಿಲ್ಲ. ದೇಹಕ್ಕೆ ಸ್ವಲ್ಪ ರೆಸ್ಟ್ ಕೊಡುವುದರ ಜತೆಗೆ, ಶಾಂತವಾಗಿರಬೇಕು. ಧ್ಯಾನಕ್ಕಾಗಿ ಒಂದಿಷ್ಟು ಸಮಯ ಮೀಸಲಿಡಬೇಕು. ಸದಾ ಮುಗುಳ್ನಗುತ್ತಿರಬೇಕು. ಆಗ ನಮ್ಮ ಯೋಚನೆಗಳು ಸುಧಾರಿಸುತ್ತವೆ. ಒಳ್ಳೆಯ ಯೋಚನೆಗಳಿದ್ದಾಗ ಏನು ಬೇಕಾದರೂ ಸಾಧನೆ ಮಾಡಬಹುದು.

    ನಮ್ಮ ತಾಯಿ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು- ‘ನಾವು ಹುಟ್ಟುವಾಗ ಯಾರಿಗೂ ಗೊತ್ತಾಗದಿರಬಹುದು. ಆದರೆ, ಸತ್ತ ವಿಚಾರ ಪತ್ರಿಕೆಗಳಲ್ಲಿ ಹೆಡ್​ಲೈನ್​ನಲ್ಲಿ ಬರಬೇಕು. ಆ ರೇಂಜ್​ನಲ್ಲಿ ಬದುಕಬೇಕು’ ಅಂತ. ಬರುವಾಗ ಯಾವುದೂ ನಮ್ಮ ಕೈಯಲ್ಲಿ ಇಲ್ಲದಿದ್ದರೂ, ಹೇಗೆ ಬದುಕುತ್ತೇವೆ ಎಂಬುದು ನಮ್ಮ ಕೈಯಲ್ಲೇ ಇರುತ್ತದೆ. ಹಾಗಾಗಿ, ಸಿಕ್ಕ ಜೀವನವನ್ನು ಚೆನ್ನಾಗಿ ಬಳಸಿಕೊಳ್ಳೋಣ. ಒಳ್ಳೆಯ ಯೋಚನೆಗಳಿಂದ ಮುನ್ನಡೆಯೋಣ.

    (ಲೇಖಕರು ನಟ-ನಿರ್ದೇಶಕ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts