More

  ಮಾರಿಗೋಲ್ಡ್ ಆದ ದೂದ್​ಪೇಡ

  ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ‘ದೂದ್​ಪೇಡಾ’ ಎಂದೇ ಕರೆಯಲಾಗುತ್ತಿರುವ ನಟ ದಿಗಂತ್ ಈಗ ಮಾರಿಗೋಲ್ಡ್ ಆಗಿದ್ದಾರೆ. ಹಾಗಂತ ಬಿಸ್ಕತ್ ಕಂಪನಿಗೂ ಅವರಿಗೂ ಸಂಬಂಧ ಕಲ್ಪಿಸುವಂತಿಲ್ಲ. ಏಕೆಂದರೆ ಇದು ಅವರ ಅಭಿನಯದ ನೂತನ ಸಿನಿಮಾದ ಟೈಟಲ್.

  ಹೌದು.. ‘ಮಾರಿಗೋಲ್ಡ್’ ಶೀರ್ಷಿಕೆಯ ಚಿತ್ರದಲ್ಲಿ ದಿಗಂತ್ ನಾಯಕರಾಗಿ ಅಭಿನಯಿಸಲಿದ್ದಾರೆ. ‘ಆರ್.ವಿ. ಕ್ರಿಯೇಷನ್ಸ್’ ಬ್ಯಾನರ್​ನಲ್ಲಿ ರಘುವರ್ಧನ್ ಅವರ ನಿರ್ಮಾಣ ಹಾಗೂ ರಾಘವೇಂದ್ರ ಎಂ. ನಾಯ್್ಕ ಅವರ ಚೊಚ್ಚಲ ನಿರ್ದೇಶನದ ಈ ಸಿನಿಮಾ ಮೂಡಿಬರಲಿದೆ. ‘ಮಾರಿಗೋಲ್ಡ್ ಎಂದಾಕ್ಷಣ ಎಲ್ಲರೂ ಬಿಸ್ಕತ್ತನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಮಾರಿ ಎಂದರೆ ಮಾರಾಟ, ಗೋಲ್ಡ್ ಎಂದರೆ ಚಿನ್ನದ ಗಟ್ಟಿ. ಅನಿರೀಕ್ಷಿತವಾಗಿ ನಡೆಯುವ ಅಪರಾಧ ಪ್ರಕರಣದಲ್ಲಿ ಗೋಲ್ಡ್ ಬಿಸ್ಕತ್ ಸಿಕ್ಕ ಬಳಿಕ ಏನೇನಾಗುತ್ತದೆ ಎಂಬುದೇ ಚಿತ್ರಕಥೆ’ ಎನ್ನುತ್ತಾರೆ ನಿರ್ದೇಶಕ ರಾಘವೇಂದ್ರ ನಾಯ್್ಕ.

  ‘ರಘುವರ್ಧನ್ ಅವರು ಈ ಹಿಂದೆ ‘ನೆನಪಿರಲಿ’ ಪ್ರೇಮ್ ಅಭಿನಯದ ‘ಗುಣವಂತ’ ಸಿನಿಮಾ ನಿರ್ದೇಶನ ಮಾಡಿದ್ದರು. ಅವರಲ್ಲಿ ಕಥೆ ಹೇಳಲು ಹೋಗಿದ್ದಾಗ, ನೀವೇ ಈ ಸಿನಿಮಾ ನಿರ್ದೇಶನ ಮಾಡಿ, ನಾನು ನಿರ್ಮಾಣ ಮಾಡುತ್ತೇನೆ ಎಂದರು’ ಎನ್ನುತ್ತ ಸಿನಿಮಾ ಆರಂಭವಾದ ಬಗೆಯನ್ನು ನಿರ್ದೇಶಕರು ವಿವರಿಸಿದರು. ‘ಇದು ಕ್ರೖೆಮ್ ಕಾಮಿಡಿ-ಥ್ರಿಲ್ಲರ್ ಸಿನಿಮಾ. ಹೀಗಾಗಿ ಇಲ್ಲಿ ರೆಗ್ಯುಲರ್ ಲವ್ ಸ್ಟೋರಿ ಇಲ್ಲದಿದ್ದರೂ ಒಂದಷ್ಟು ಪ್ರೀತಿಯ ಸನ್ನಿವೇಶಗಳು ಇರುತ್ತವೆ. ಚಿತ್ರದ ನಾಯಕಿಯ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಫೆಬ್ರವರಿ ಎರಡನೇ ವಾರದಿಂದ ಚಿತ್ರೀಕರಣ ಆರಂಭಿಸುವ ಗುರಿ ಇರಿಸಿಕೊಳ್ಳಲಾಗಿದೆ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ವೀರ ಸಮರ್ಥ್ ಸಂಗೀತ ಈ ಚಿತ್ರಕ್ಕಿದೆ’ ಎನ್ನುತ್ತಾರೆ ನಿರ್ದೇಶಕರು. ಕುಂದಾಪುರ ಮೂಲದ ರಾಘವೇಂದ್ರ ನಾಯ್್ಕ ‘ಮಠ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದು, ಹಲವಾರು ಸಿನಿಮಾಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಇದೀಗ ‘ಮಾರಿಗೋಲ್ಡ್’ ಮೂಲಕ ಪೂರ್ಣಪ್ರಮಾಣದಲ್ಲಿ ನಿರ್ದೇಶಕರಾಗಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts