More

    ಮಾನವೀಯ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸಿ

    ಹಾನಗಲ್ಲ: ಜೂನ್ ಹಾಗೂ ಜುಲೈನಲ್ಲಿ ಆಗಿರುವ ಬೆಳೆ ಮತ್ತು ಮನೆ ಹಾನಿಯ ಸಮಗ್ರ ಪರಿಶೀಲನೆ ನಡೆಸಿ ಕೂಡಲೆ ವರದಿ ಸಲ್ಲಿಸಬೇಕು. ಮಾನವೀಯ ನೆಲೆಗಟ್ಟಿನಲ್ಲಿ ಮತ್ತು ಎನ್​ಡಿಆರ್​ಎಫ್ ಮಾರ್ಗಸೂಚಿಯನ್ವಯ ಕಾರ್ಯನಿರ್ವಹಿಸಬೇಕು ಎಂದು ಸಂಸದ ಶಿವಕುಮಾರ ಉದಾಸಿ ಅಧಿಕಾರಿಗಳಿಗೆ ಸೂಚಿಸಿದರು.

    ಪಟ್ಟಣದ ನಿವಾಸದಲ್ಲಿ ಶನಿವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

    ಎನ್​ಡಿಆರ್​ಎಫ್ ಮಾರ್ಗಸೂಚಿಯನ್ವಯ ನದಿಪಾತ್ರದ ತೋಟಗಳು ಹಾನಿಯಾದಲ್ಲಿ ಹೆಚ್ಚು ಪರಿಹಾರ ಲಭ್ಯವಿದೆ. ಬೆಳೆ ಸಮೀಕ್ಷೆ ನಡೆಸಿ ಸರಿಯಾದ ವರದಿ ನೀಡಬೇಕು. ಆನೆ ಕೆರೆ ದಡದಲ್ಲಿರುವ ರಸ್ತೆ ಕಾಮಗಾರಿಯನ್ನು ಅಮೃತ ಸಿಟಿ ಯೋಜನೆಯ ಅನುದಾನದಲ್ಲಿ ಪುರಸಭೆ ಕೈಗೊಳ್ಳಬೇಕು. ತಾತ್ಕಾಲಿಕವಾಗಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ ಕಾರ್ಯ ಕೈಗೊಳ್ಳಬೇಕು ಎಂದರು.

    ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ವರದಾ ಹಾಗೂ ಧರ್ವ ನದಿತಟದ 23 ಗ್ರಾಮಗಳನ್ನು ಬಾಧಿತವಾಗುವ ಗ್ರಾಮಗಳೆಂದು ಗುರುತಿಸಲಾಗಿದೆ. ಜುಲೈನಲ್ಲಿ 458, ಆಗಸ್ಟ್​ನಲ್ಲಿ 381 ಮನೆಗಳು ಹಾನಿಯಾಗಿರುವ ವರದಿಯಾಗಿದೆ. ಹಳ್ಳದಲ್ಲಿ ಒಂದು ಎತ್ತು ಕೊಚ್ಚಿ ಹೋಗಿದೆ. ಗೊಂದಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಕಾಳಜಿ ಕೇಂದ್ರ ತೆರೆಯಲಾಗಿದೆ. 8 ಕುಟುಂಬಗಳ 27 ಜನರು ಪರಿಹಾರ ಕೇಂದ್ರದಲ್ಲಿದ್ದಾರೆ. 99 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಸರ್ಕಾರಿ ರಸ್ತೆ, ಕಟ್ಟಡಗಳೂ ಹಾನಿಯಾಗಿವೆ. ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ ಎಂದು ವಿವರಿಸಿದರು.

    ಗ್ರಾಮೀಣ ಕುಡಿಯುವ ನೀರು ಯೋಜನೆಯ ಎಇಇ ಮದನಕುಮಾರ ಶಿಂಧೆ ಮಾತನಾಡಿ, ತಾಲೂಕಿನ ಜಲಜೀವನ ಮಿಷನ್ ಅಡಿ ನಿರ್ವಿುಸುತ್ತಿರುವ ಹರ್ ಘರ್ ಕೋ ಪಾನಿಯ ಪೈಪ್​ಲೈನ್​ಗಳನ್ನು ತಾಲೂಕಿನ ಶೃಂಗೇರಿ, ಬಾಳೂರು, ಶಿರಮಾಪುರ, ಮಾಳಾಪುರ, ಹಾವಣಗಿ, ಕಲಗುಡ್ಡಿ ಗ್ರಾಮಗಳಲ್ಲಿ ಗ್ರಾಮಸ್ಥರೇ ಕಿತ್ತುಹಾಕಿ ನಾಶಪಡಿಸಿದ್ದಾರೆ. ವಾಲ್ವ್​ಗಳನ್ನು ಅಳವಡಿಸಿದ್ದರಿಂದ ನೀರು ನಲ್ಲಿಗಳಲ್ಲಿ ನಿಧಾನವಾಗಿ ಬರುತ್ತದೆಂಬ ಕಾರಣದಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐದಾರು ಗ್ರಾಮಗಳಲ್ಲಿ ಈ ರೀತಿಯ ಸಮಸ್ಯೆ ಎದುರಾಗಿದ್ದು, ವಾಲ್ವ್​ಗಳನ್ನು ಸರಿಪಡಿಸಲಾಗುತ್ತಿದೆ ಎಂದರು.

    ತಾಲೂಕಿನಲ್ಲಿ 24 ಸಾವಿರ ಹೆಕ್ಟೇರ್ ಗೋವಿನಜೋಳ ಬೀಜ ಬಿತ್ತನೆ ಮಾಡಲಾಗಿದೆ. 12 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಸೋಯಾ ಅವರೆ, ಶೇಂಗಾ, ಹತ್ತಿ ಬೆಳೆ ಹಾನಿಗೊಂಡಿವೆ. ಇವೆಲ್ಲದರ ಸರ್ವೆ ನಡೆದಿದೆ ಎಂದು ಎಡಿಎ ದೇವೇಂದ್ರಪ್ಪ ಕಡ್ಲೇರ ತಿಳಿಸಿದರು.

    ಜಿಪಂ ಎಇಇ ಡಿ.ಎಲ್. ಕಲ್ಲೋಳಕರ ಮಾತನಾಡಿ, ಅತಿವೃಷ್ಟಿಯಿಂದಾಗಿ ಗ್ರಾಮಗಳಲ್ಲಿ 220 ಕಿ.ಮೀ. ರಸ್ತೆ, 25 ಕೆರೆಗಳು, 3 ಸಿ.ಡಿ.ಗಳು ಹಾನಿಯಾಗಿವೆ. 3.50 ಕೋಟಿ ರೂಪಾಯಿ ಹಾನಿ ಅಂದಾಜಿಸಲಾಗಿದೆ ಎಂದರು.

    ಬಿಇಒ ಆರ್.ಎನ್. ಹುರಳಿ ಮಾತನಾಡಿ, ತಾಲೂಕಿನಲ್ಲಿ 156 ಶಾಲೆಗಳಲ್ಲಿನ 288 ಶಾಲಾ ಕೊಠಡಿಗಳು ಮತ್ತು 39 ಅಡುಗೆ ಕೋಣೆಗಳು ಹಾಗೂ 36 ಶೌಚಗೃಹಗಳು ದುರಸ್ತಿಯಾಗಬೇಕಿದೆ ಎಂದರು.

    ಕೇಂದ್ರ ಸರ್ಕಾರದ ಅಮೃತ ಸರೋವರ ಯೋಜನೆಯಡಿ ಜಿಲ್ಲೆಯಲ್ಲಿ 75 ಕೆರೆ ಅಭಿವೃದ್ಧಿಗೊಳಿಸಲಾಗುತ್ತಿದೆ. ಇದರಲ್ಲಿ ತಾಲೂಕಿನ 15 ಕೆರೆಗಳು ಸೇರಿವೆ. ಆ. 15 ರಂದು ಹಾವಣಗಿ, ಡೊಳ್ಳೇಶ್ವರ, ವೀರಾಪುರ ಗ್ರಾಮಗಳ ಕೆರೆಗಳಲ್ಲಿ ಧ್ವಜಾರೋಹಣ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಿದ್ದೇವೆ ಎಂದು ತಾಪಂ ಇಒ ಬಿ. ಸುನೀಲಕುಮಾರ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts