More

    ಪಡಿತರ ಸಾಗಣೆಗೆ ನ್ಯಾಯಬೆಲೆ ಅಂಗಡಿಗಳಿಂದ ಲಂಚ ಸ್ವೀಕಾರ!

    | ಆರ್​.ತುಳಸಿಕುಮಾರ್​ ಬೆಂಗಳೂರು
    ರಾಜ್ಯದಲ್ಲಿ ಪಡಿತರ ಪೂರೈಸಲು ಸರ್ಕಾರ ಪ್ರತ್ಯೇಕವಾಗಿ ಸಾಗಣೆ ವೆಚ್ಚವನ್ನು ಭರಿಸುತ್ತಿದ್ದರೂ, ಧಾನ್ಯ ಸಾಗಣೆ ಗುತ್ತಿಗೆದಾರರು ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಬಲವಂತವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಇತ್ತೀಚಿಗೆ ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಆಹಾರ ಅಧಿಕಾರಿಗಳು ಹ್ತಾ ವಸೂಲಿ ಮಾಡುತ್ತಿರುವ ಕುರಿತು ಇಲಾಖಾ ಮುಖ್ಯಸ್ಥರ ಕಚೇರಿಯಲ್ಲಿ ದೂರು ದಾಖಲಾಗಿತ್ತು. ಇದರ ತನಿಖೆ ಪ್ರಕ್ರಿಯೆ ಪ್ರಗತಿಯಲ್ಲಿರುವಾಗಲೇ ಧಾನ್ಯ ಸಾಗಣೆ ಗುತ್ತಿಗೆದಾರರು ಕೂಡ ವಾಮ ಮಾರ್ಗದಲ್ಲಿ ಹಣ ವಸೂಲಿ ದಂಧೆಯಲ್ಲಿ ನಿರತರಾಗಿದ್ದು, ಇಲಾಖೆಯಲ್ಲಿನ ಹುಳುಕುಗಳು ಒಂದೊಂದಾಗಿ ಹೊರಬರಲಾರಂಭಿಸಿವೆ.
    ಸಾರ್ವಜನಿಕರಿಗೆ ಪಡಿತರ ವಿತರಿಸಲು ಆಹಾರ ಧಾನ್ಯ ಸಾಗಣೆ ವೆಚ್ಚವನ್ನು ಸರ್ಕಾರ ಭರಿಸುತ್ತಿದೆ. ಇದರಿಂದ ಕಾರ್ಡ್​ದಾರರಿಗೆ ಸಕಾಲದಲ್ಲಿ ಪಡಿತರ ತಲುಪಿಸಲು ಸಾಧ್ಯವಾಗುತ್ತಿದೆ. ಜತೆಗೆ ನ್ಯಾಯಬೆಲೆ ಅಂಗಡಿಗಳು ಕೂಡ ಸಾರ್ವಜನಿಕರಿಗೆ ಬೇಗ ಪಡಿತರ ಹಂಚಿಕೆ ಮಾಡಲು ಸಹಕಾರಿಯಾಗಿದೆ. ಇಂತಹ ಉತ್ತಮ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ದುರುದ್ದೇಶದಿಂದಾಗಿ ಧಾನ್ಯ ಸಾಗಣೆ ಗುತ್ತಿಗೆದಾರರು ಅಕ್ರಮವಾಗಿ ಹಣ ವಸೂಲಿಗೆ ಇಳಿದಿದ್ದಾರೆ. ಈ ಅನ್ಯಾಯದ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ಆಹಾರ ಇಲಾಖೆಯ ಕೆಲ ಅಧಿಕಾರಿಗಳೇ ದಂಧೆಯಲ್ಲಿ ಶಾಮೀಲಾಗಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.

    ಕ್ವಿಂಟಾಲ್​ ಲೆಕ್ಕದಲ್ಲಿ ಹಣ ವಸೂಲಿ: ರಾಜ್ಯದಲ್ಲಿ 20 ಸಾವಿರಕ್ಕಿಂತಲೂ ಹೆಚ್ಚು ನ್ಯಾಯಬೆಲೆ ಅಂಗಡಿಗಳಿವೆ. ಇವುಗಳಲ್ಲಿ ಅರ್ಧದಷ್ಟು ನಗರ, ಅರೆ ನಗರ ಹಾಗೂ ಪಟ್ಟಣ ಪ್ರದೇಶದಲ್ಲಿವೆ. ಇಂತಹ ಕಡೆಗಳಲ್ಲಿ ಸರಾಸರಿ 600&700 ಕಾರ್ಡ್​ದಾರರು ಇದ್ದಾರೆ. ಸದ್ಯ ರಾಜ್ಯ ಸರ್ಕಾರದ ಜತೆಗೆ ಕೇಂದ್ರವೂ ಉಚಿತ ಧಾನ್ಯ ನೀಡುತ್ತಿದ್ದು, ಪಡಿತರ ಪ್ರಮಾಣ ಹೆಚ್ಚಳಗೊಂಡಿದೆ. ಈ ಅವಕಾಶವನ್ನೇ ತಮ್ಮ ವಸೂಲಿ ದಂಧೆಗೆ ಕಳ್ಳದಾರಿ ಕಂಡುಕೊಂಡಿರುವ ಸಾಗಣೆ ಗುತ್ತಿಗೆದಾರರು, ಪ್ರತಿ ಕ್ವಿಂಟಾಲ್​ ಧಾನ್ಯ ಸಾಗಿಸಲು 5&6 ರೂ. ಫಿಕ್ಸ್​ ಮಾಡಿಕೊಂಡಿದ್ದಾರೆ. ಇದರಿಂದ ಒಂದು ನ್ಯಾಯಬೆಲೆ ಅಂಗಡಿಯಿಂದ 1,200&1,400 ರೂ. ವಸೂಲಿ ಮಾಡಲಾಗುತ್ತಿದ್ದು, ಮಾಸಿಕ ಲಾಂತರ ರೂ. ದಂಧೆಕೋರರ ಜೇಬು ಸೇರುತ್ತಿದೆ ಎಂದು ಆರೋಪಿಸಲಾಗಿದೆ.

    ವಿಳಂಬ ತಪ್ಪಿಸಲು ಉಚಿತ ಸಾಗಣೆ ವ್ಯವಸ್ಥೆ
    ಕಳೆದ ವರ್ಷದವರೆಗೆ ಆಹಾರ ನಿಗಮದ ಗೋದಾಮುಗಳಿಂದ ಆಯಾ ನ್ಯಾಯಬೆಲೆ ಅಂಗಡಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಮಾಸಿಕ ಪಡಿತರ ಕೋಟಾ ಸಾಗಿಸಬೇಕಿತ್ತು. ಇದರ ವೆಚ್ಚನ್ನು ಪ್ರತ್ಯೇಕವಾಗಿ ನೀಡುತ್ತಿದ್ದ ಕಾರಣ ನ್ಯಾಯಬೆಲೆ ಅಂಗಡಿಗಳು ಸಕಾಲದಲ್ಲಿ ಎತ್ತುವಳಿ ಮಾಡಿ ಪಡಿತರ ವಿತರಿಸಲು ಸಾಧ್ಯವಾಗುತ್ತಿರಲಿಲ್ಲ. ಈ ವಿಳಂಬ ತಪ್ಪಿಸಲು ಸರ್ಕಾರ ಪ್ರಸಕ್ತ ವರ್ಷದಿಂದ ಸಾಗಣೆ ವೆಚ್ಚವನ್ನು ತಾನೇ ಭರಿಸುವ ನಿರ್ಧಾರ ಕೈಗೊಂಡಿದೆ. ಧಾನ್ಯ ಸಾಗಣೆಗಾಗಿ ಟೆಂಡರ್​ ಮೂಲಕ ಗುತ್ತಿಗೆದಾರರಿಗೆ ಹೊಣೆ ನೀಡಿದ್ದು, ಆ ಹಣವನ್ನೂ ಪ್ರತ್ಯೇಕವಾಗಿ ನೀಡಲಾಗುತ್ತಿದೆ.

    ಕ್ರಮಕ್ಕೆ ಹಿಂದೇಟು
    ಆಹಾರ ನಿರೀಕ್ಷಕರು ಸೇರಿ ಕೆಲ ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗಳಿಂದ ಹ್ತಾ ವಸೂಲಿ ಮಾಡುತ್ತಿರುವ ಬಗ್ಗೆ ಇಲಾಖೆಗೆ ದೂರೊಂದು ಸಲ್ಲಿಕೆಯಾಗಿದೆ. ಇದರ ತನಿಖೆಗೆ ಆಹಾರ ಆಯುಕ್ತರು ಸೂಚಿಸಿದ್ದರೂ, ಈವರೆಗೂ ಬಹುತೇಕ ಜಿಲ್ಲೆಗಳಿಂದ ವರದಿಯೇ ಬಂದಿಲ್ಲ. ಈ ಹಿಂದೆ ಆರೋಪ ಹೊತ್ತವರ ವಿರುದ್ಧವೂ ಕ್ರಮ ಕೈಗೊಳ್ಳಲು ಇಲಾಖೆ ಹಿಂದೇಟು ಹಾಕಿದೆ.

    ಸಾರಥಿ ಇಲ್ಲದೆ ಬಡವಾದ ಇಲಾಖೆ
    ಆಹಾರ ಇಲಾಖೆಗೆ ಪ್ರತ್ಯೇಕ ಸಚಿವರಿಲ್ಲ. ಎರಡು ತಿಂಗಳ ಹಿಂದೆ ಸಚಿವರಾಗಿದ್ದ ಉಮೇಶ್​ ಕತ್ತಿ ನಿಧನರಾದ ಬಳಿಕ ಆ ಖಾತೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಹೆಚ್ಚು ಖಾತೆಗಳನ್ನು ಹೊಂದಿರುವ ಕಾರಣ ಸಿಎಂ ಆಯಾ ಇಲಾಖೆಗಳಿಗೆ ಸಂಬಂಧಿಸಿದಂತೆ ನಿಯಮಿತವಾಗಿ ಸಭೆಗಳನ್ನು ನಡೆಸಿ ಅಧಿಕಾರಿ ವರ್ಗಕ್ಕೆ ಸಲಹೆ&ಸೂಚನೆ ನೀಡಲು ಸಮಯದ ಅಭಾವ ಎದುರಿಸುತ್ತಿದ್ದಾರೆ. ಇದರಿಂದ ಆಹಾರ ಇಲಾಖೆ ಸೊರಗಿದ್ದು, ಅಧಿಕಾರಿಗಳಲ್ಲಿ ಉದಾಸೀನತೆ ಮನೆ ಮಾಡಿದಂತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts