More

    ನಿಷೇಧಾಜ್ಞೆ ಸಡಿಲಿಕೆ, ವ್ಯಾಪಾರ ವಹಿವಾಟು ಸುಗಮ

    ಶಿವಮೊಗ್ಗ: ಜಿಲ್ಲಾಡಳಿತ ಗುರುವಾರ ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ನಗರದಲ್ಲಿ ನಿಷೇಧಾಜ್ಞೆ ಸಡಿಲಿಕೆ ಮಾಡಿದ ಕಾರಣ ವ್ಯಾಪಾರ ವಹಿವಾಟು ಸುಗಮವಾಗಿ ನಡೆಯಿತು. ಒಂದು ವಾರದ ಬಳಿಕ ಗಾಂಧಿ ಬಜಾರ್, ನೆಹರೂ ರಸ್ತೆ, ಬಿಎಚ್ ರಸ್ತೆ ಮುಂತಾದ ವಾಣಿಜ್ಯ ಪ್ರದೇಶಗಳಲ್ಲಿ ಚಟುವಟಿಕೆ ಗರಿಗೆದರಿತ್ತು.

    ಕಳೆದೊಂದು ವಾರದಿಂದ ಎಲ್ಲೆಂದರಲ್ಲಿ ಅಡ್ಡಗಟ್ಟಿ ನಾಗರಿಕರ ವಿರುದ್ಧ ಕಿಡಿಕಾರುತ್ತಿದ್ದ ಕೆಲ ಪೊಲೀಸ್ ಸಿಬ್ಬಂದಿ ಕಾಟ ಇಲ್ಲದೇ ಇದ್ದುದರಿಂದ ನಾಗರಿಕರು 12 ತಾಸು ಮುಕ್ತವಾಗಿ ಸಂಚರಿಸಿದರು. ವರ್ತಕರು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳ ಒತ್ತಡಕ್ಕೆ ಮಣಿದು ಜಿಲ್ಲಾಡಳಿತ 12 ತಾಸು ವಹಿವಾಟಿಗೆ ಅವಕಾಶ ನೀಡಿದ್ದರಿಂದ ವ್ಯಾಪಾರಿಗಳು ನಿರಾಳರಾದರು.

    ಎಎ ವೃತ್ತ ಹಾಗೂ ಶಿವಪ್ಪ ನಾಯಕ ವೃತ್ತದಿಂದ ಗಾಂಧಿ ಬಜಾರ್, ಎಂಕೆಕೆ ರಸ್ತೆ, ಕೆಆರ್ ಪುರಂ ರಸ್ತೆ, ಹಳೇ ತೀರ್ಥಹಳ್ಳಿ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿರಿಸಿದ್ದ ಬ್ಯಾರಿಕೇಡ್​ಗಳನ್ನು ಬುಧವಾರ ತೆರವುಗೊಳಿಸಲಾಗಿತ್ತು. ಇದರಿಂದ ವಾಹನ ಸವಾರರಿಗೆ ನಗರ ಪ್ರದಕ್ಷಿಣೆ ತಪ್ಪಿದಂತಾಯಿತು.

    ಇತರೆ ಭಾಗದಲ್ಲೂ ತಪ್ಪಿದ ಕಿರಿಕಿರಿ: ಡಿ.3ರಂದು ನಗರದಲ್ಲಿ ನಡೆದ ಘಟನಾವಳಿಗಳ ಬಳಿಕ ಹಳೇ ಶಿವಮೊಗ್ಗ ವ್ಯಾಪ್ತಿಯಲ್ಲಿರುವ ದೊಡ್ಡಪೇಟೆ, ಕೋಟೆ ಹಾಗೂ ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿತ್ತು. ಮೊದಲಿಗೆ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಎಂದಿದ್ದ ಜಿಲ್ಲಾಡಳಿತ ಬಳಿಕ ಅದನ್ನು ಮೂರು ಠಾಣೆ ವ್ಯಾಪ್ತಿಗೆ ಸೀಮಿತಗೊಳಿಸಿತ್ತು.

    ಆದರೂ ವಿನೋಬನಗರ, ಸವಳಂಗ ರಸ್ತೆ, ಶರಾವತಿ ನಗರ, ಹೊಸಮನೆ ಮುಂತಾದ ಪ್ರದೇಶಗಳಲ್ಲೂ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಪೊಲೀಸರು ಅವಕಾಶ ನೀಡಿರಲಿಲ್ಲ. ಪದೇಪದೆ ಬಾಗಿಲು ಮುಚ್ಚಿಸಲಾಗುತ್ತಿತ್ತು. ಇದರಿಂದ ವ್ಯಾಪರಸ್ಥರು ರೋಸಿ ಹೋಗಿದ್ದರು. ಆದರೆ ಗುರುವಾರ ವ್ಯಾಪಾರ ವಹಿವಾಟುಗಳಿಗೆ ಯಾವುದೇ ಕಿರಿಕಿರಿ ಇರಲಿಲ್ಲ.

    ಖಾಸಗಿ ಹಾಗೂ ಕೆಎಸ್​ಆರ್​ಟಿಸಿ ನಗರ ಸಾರಿಗೆ, ಆಟೋ ಸಂಚಾರ ಗುರುವಾರ ಹಳಿಗೆ ಬಂದಿತ್ತು. ವಿವಿಧ ತಾಲೂಕುಗಳಿಂದ ಜಿಲ್ಲಾ ಕೇಂದ್ರಕ್ಕೆ ಬರುವ ಬಸ್​ಗಳ ಸಂಖ್ಯೆಯಲ್ಲೂ ಏರಿಕೆಯಾಗಿತ್ತು. ಸರ್ಕಾರಿ ಕಚೇರಿ, ಅಂಚೆ ಕಚೇರಿ ಹಾಗೂ ಬ್ಯಾಂಕ್​ಗಳಿಗೆ ಸಾರ್ವಜನಿಕರ ಭೇಟಿ ಹೆಚ್ಚಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts