More

    ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಸಂಘಟನೆಗೆ ಒತ್ತು

    ಶಿವಮೊಗ್ಗ: ಜಿಲ್ಲೆಯಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ಸಂಘಟಿಸಲಾಗುವುದು. ಮುಂದಿನ ದಿನಗಳಲ್ಲಿ ನಡೆಯುವ ಎಲ್ಲ ಸ್ಥಳೀಯ ಸಂಸ್ಥೆಗಳು, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ರವಿಕುಮಾರ್ ತಿಳಿಸಿದರು.

    ದೆಹಲಿಯಲ್ಲಿ ನಮ್ಮ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಪಕ್ಷವನ್ನು ಬೆಳೆಸಲು ವರಿಷ್ಠ ಅರವಿಂದ ಕೇಜ್ರಿವಾಲ್ ನಿರ್ಧರಿಸಿದ್ದಾರೆ. ಹೀಗಾಗಿ ಪಕ್ಷದ ನಾಯಕಿ ರೋಮಿ ಬಾಟಿ ನೇತೃತ್ವದ ತಂಡವನ್ನು ರಾಜ್ಯಕ್ಕೆ ಕಳುಹಿಸಲಿದ್ದಾರೆ. ಈ ತಂಡ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಮಾಡಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಭದ್ರಾವತಿ ನಗರಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಎಲ್ಲ ವಾರ್ಡ್​ಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಇದಕ್ಕಾಗಿ ಈಗಾಗಲೇ ಕಾರ್ಯತಂತ್ರ ರೂಪಿಸಲಾಗಿದೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ವರ್ತನೆಯಿಂದ ಬೇಸತ್ತಿರುವ ಜನರು ಆಪ್​ನತ್ತ ಒಲವು ತೋರುತ್ತಿದ್ದಾರೆ ಎಂದರು.

    ಆಪ್ ಸಿದ್ಧಾಂತದ ಬಗ್ಗೆ ಒಲವಿರುವ ಯಾರು ಬೇಕಾದರೂ ಮೊ. ಸಂಖ್ಯೆ(76694 00410)ಗೆ ಮಿಸ್ಡ್ ಕಾಲ್ ಕೊಡುವ ಮೂಲಕ ಬೆಂಬಲ ವ್ಯಕ್ತಪಡಿಸಬಹುದು. ನಾವು ಯಾವುದೇ ಆಮಿಷವೊಡ್ಡಿ ಜನರನ್ನು ಪಕ್ಷದತ್ತ ಸೆಳೆಯುವುದಿಲ್ಲ. ಅದರಿಂದ ಮತ್ತಷ್ಟು ಭ್ರಷ್ಟಾಚಾರಕ್ಕೆ ಅವಕಾಶ ನೀಡಿದಂತಾಗುತ್ತದೆ ಎಂದು ಹೇಳಿದರು.

    ಸುನೀತಾ ಸಿಂಗ್ ಸೇರ್ಪಡೆ: ಸಾಮಾಜಿಕ ಕಾರ್ಯಕರ್ತೆ, ಆಟೋ ಕ್ರಾಸ್ ಖ್ಯಾತಿ ಮೂಲಕ ಕ್ರೀಡಾ ಕ್ಷೇತ್ರದಲ್ಲೂ ಸದ್ದು ಮಾಡಿದ್ದ ಸುನೀತಾ ಸಿಂಗ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಆಪ್ ಜಿಲ್ಲಾಧ್ಯಕ್ಷ ರವಿಕುಮಾರ್, ಸುನೀತಾ ಸೇರ್ಪಡೆಯಿಂದ ಮತ್ತಷ್ಟು ಮಹಿಳೆಯರು ಪಕ್ಷಕ್ಕೆ ಬರಲು ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಆಪ್ ಮುಖಂಡರಾದ ಚಂದ್ರಕಾಂತ್ ಎಸ್.ರೇವಣ್​ಕರ್, ಪ್ರಕಾಶ್ ಕೋನಾಪುರ್, ರೇಷ್ಮಾಬಾನು, ಮುಳ್ಳಕೆರೆ ಲೋಕೇಶ್, ಚಂದ್ರಪ್ಪ, ಎನ್.ಪಿ.ಜೋಸೆಫ್, ಟಿ.ವಿ.ಜೋಸೆಫ್, ಸುರೇಶ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts