More

    ಕಲಾತ್ಮಕ ಆಟಕ್ಕೆ ಒಲಿದ ಗೆಲುವು


    ಸುನಿಲ್ ಪೊನ್ನೇಟಿ/ವಿನೋದ್ ಮೂಡಗದ್ದೆ ಪೊನ್ನಂಪೇಟೆ
    ಹದಿನೇಳು ವರ್ಷ ವಯೋಮಿತಿಯ ಬಾಲಕಿಯರ ರಾಷ್ಟ್ರೀಯ ಹಾಕಿ ಪಂದ್ಯಾವಳಿಯ ಅಂತಿಮ ಹಣಾಹಣಿಯಲ್ಲಿ ಚಂಡೀಗಢ ತಂಡವನ್ನು ಮಣಿಸಿ ಜಾರ್ಖಂಡ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.


    ಸರಸರನೇ ಓಟ, ಚುರುಕಿನ ಆಟ, ಕಲಾತ್ಮಕ ಹಾಗೂ ರಕ್ಷಣಾತ್ಮಕ ತಂತ್ರಗಳಿಂದ ಜಾರ್ಖಂಡ್ 7-1 ಗೋಲುಗಳ ಅಂತರದಿಂದ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಚಂಡೀಗಢ ತಂಡ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿತು.


    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಸೋಮವಾರ ಪೊನ್ನಂಪೇಟೆಯ ಹಾಕಿ ಟರ್ಫ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪ್ರಾರಂಭದಿಂದಲೇ ಜಾರ್ಖಂಡ್ ತಂಡ ಹತೋಟಿ ಸಾಧಿಸಿತು.


    ಮೊದಲ ಕ್ವಾರ್ಟರ್‌ನಲ್ಲಿ 4-0 ಗೋಲುಗಳಿಂದ ಮುನ್ನಡೆ ಸಾಧಿಸಿದ ತಂಡ ಎರಡನೇ ಕ್ವಾರ್ಟರ್‌ನಲ್ಲಿ 6-0 ಯಿಂದ ಮುನ್ನಡೆ ಸಾಧಿಸಿತು. ಮೂರನೇ ಕ್ವಾರ್ಟರ್‌ನಲ್ಲಿ ಮತ್ತೊಂದು ಗೋಲು ದಾಖಲಿಸಿ ಅಂತರವನ್ನು 7-0 ಗೆ ಏರಿಸಿಕೊಂಡಿತು. ಕೊನೆಯ ಅವಧಿಯ ಆಟದಲ್ಲಿ ತಿರುಗೇಟು ನೀಡಿದ ಚಂಡೀಗಢ ತಂಡದ ಬಾಲಕಿಯರು ಬಿರುಸಿನ ಆಟಕ್ಕೆ ಒತ್ತು ನೀಡಿ ತಂಡದ ಪರ ಏಕೈಕ ಗೋಲು ದಾಖಲಿಸಿದರು.


    ಜಾರ್ಖಂಡ್ ತಂಡದ ಪರವಾಗಿ ರೀನಾ ಕುಳ್ಳು ಮತ್ತು ಜಮುನಾ ಕುಮಾರಿ ತಲಾ 2 ಗೋಲು ದಾಖಲಿಸಿದರು. ಲಿಯೋನಿ ಹನ್ಸಮ್, ಸುಶ್ಮಿತಾ ಲಾಕರೆ, ಅನುಪ್ರಿಯಾ ತಲಾ ಒಂದು ಗೋಲು ದಾಖಲಿಸಿದರು. ಚಂಡೀಗಢ ತಂಡದ ಪರವಾಗಿ ಅಪ್ರಮ್ ಏಕೈಕ ಗೋಲು ದಾಖಲಿಸಿದರು.


    ಮೂರನೇ ಸ್ಥಾನದ ಪೈಪೋಟಿಯಲ್ಲಿ ಮಧ್ಯಪ್ರದೇಶ ತಂಡ ಮಣಿಪುರ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿತು. ಮಧ್ಯಪ್ರದೇಶ ತಂಡದ ಸುಜಾತಾ ಗೆಲುವಿನ ಗೋಲು ಬಾರಿಸಿದರು.


    ಗ್ಯಾಲರಿ ಭರ್ತಿ: ಫೈನಲ್ ಪಂದ್ಯಕ್ಕೆ ಗ್ಯಾಲರಿ ಭರ್ತಿ ಆಗಿತ್ತು. ಜಿಲ್ಲೆಯ ಕ್ರೀಡಾ ಶಿಕ್ಷಕರು ಮತ್ತು ಹಿರಿಯ ಆಟಗಾರರೇ ಬಹುತೇಕ ತುಂಬಿದ್ದರು. ಜಾರ್ಖಂಡ್ ಆಟಗಾರರ ಆಟಕ್ಕೆ ಮನಸೋತು ಹುರಿದುಂಬಿಸಿದರು. ಸೋಮವಾರಪೇಟೆಯಲ್ಲಿ ನಡೆದಿದ್ದ ಕ್ವಾರ್ಟರ್ ಪೈನಲ್‌ನಲ್ಲಿ ಕರ್ನಾಟಕವನ್ನು ಸೋಲಿಸಿದ್ದ ಚಂಡೀಗಢ ತಂಡದ ಬಗ್ಗೆ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆಗಳು ಇದ್ದವಾದರೂ ಅದನ್ನು ಉಳಿಸಿಕೊಳ್ಳಲು ಆ ತಂಡದ ಆಟಗಾರರು ಆರಂಭದಲ್ಲೇ ವಿಫಲರಾದರು.


    ಆರಂಭದಲ್ಲೇ ಉತ್ತಮ : ಪಂದ್ಯ ಶುರುವಾದ ಮೊದಲನೇ ನಿಮಿಷದಲ್ಲೇ ಜಾರ್ಖಂಡ್ ಪರ ಸುಶ್ಮಿತಾ ಲಕ್ರಾ ಮೊದಲ ಗೋಲ್ ದಾಖಲಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ದೊರಕಿಸಿಕೊಟ್ಟರು. ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸಲು ಸಿಕ್ಕಿದ ಅವಕಾಶಗಳನ್ನೆಲ್ಲಾ ಜಾರ್ಖಂಡ್ ಯಶಸ್ವಿಯಾಗಿ ಬಳಸಿಕೊಂಡಿತು. ಆದರೆ, ಕರ್ನಾಟಕದ ಎದುರು ಪ್ರದರ್ಶಿಸಿದ್ದ ಆಟ ಚಂಡೀಗಢ ತಂಡದಿಂದ ಫೈನಲ್‌ನಲ್ಲಿ ಕಂಡುಬರಲಿಲ್ಲ.


    ಜಾರ್ಖಂಡ್ ಪರ ಆಡಿದ ಜಮುನಾಕುಮಾರಿ ಪ್ರೇಕ್ಷಕರ ಕಣ್ಮಣಿ ಆಗಿದ್ದರು. ಮೈದಾನ ಒಂದು ತುದಿಯಿಂದ ಇನ್ನೊಂದು ತುದಿಗೆ ಚುರುಕಿನಿಂದ ಓಡುತ್ತಾ ಗಮನ ಸೆಳೆದರು. ಗೋಲ್ ಗಳಿಸಲು ತನಗೆ ಸಿಕ್ಕಿದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಂಡದ ಗೆಲುವಿಗೆ ದೊಡ್ಡ ಕಾಣಿಕೆ ನೀಡಿದರು.

    ಪರಸ್ಪರ ಹೊಂದಾಣಿಕೆ : ತಂಡದೊಳಗಿನ ಪರಸ್ಪರ ಹೊಂದಾಣಿಕೆ ಆಟ, ಎದುರಾಳಿ ತಂಡಕ್ಕೆ ಬಾಲ್ ಸಿಗದಂತೆ ಮುನ್ನೆಡೆಸಿಕೊಂಡು ಹೋಗುವಲ್ಲಿ ಪ್ರದರ್ಶಿಸಿದ ಚಾಕಚಕ್ಯತೆ, ಆಟವನ್ನು ತಾಂತ್ರಿಕವಾಗಿ ಎದುರಿಸಿದ ರೀತಿ ಜಾರ್ಖಂಡ್ ಗೆಲುವಿಗೆ ಪ್ರಮುಖ ಪಾತ್ರ ವಹಿಸಿತು. ಆದರೆ ಚಂಡೀಗಢ ತಂಡದ ಆಟಗಾರರಲ್ಲಿ ಚುರುಕುತನ ಕಂಡು ಬಂದರೂ ಸಮನ್ವಯತೆಯ ಕೊರತೆ ಇತ್ತು. ಪೆನಾಲ್ಟಿ ಕಾರ್ನರ್ ಅವಕಾಶಗಳು ಸಿಕ್ಕಿದರೂ ಗೋಲ್ ಆಗಿ ಪರಿವರ್ತಿಸುವಲ್ಲಿ ವಿಫಲವಾಗಿದ್ದು ಕೂಡ ದೊಡ್ಡ ಬೆಲೆ ತೆರುವಂತೆ ಮಾಡಿತು. ಜಾರ್ಖಂಡ್ ಪರ ನಾಲ್ಕು ಗೋಲುಗಳು ದಾಖಲಾಗುತ್ತಿದ್ದಂತೆಯೇ ಹೆಚ್ಚಿನವರು ಗ್ಯಾಲರಿಯಿಂದ ತೆರಳಲಾರಂಭಿಸಿದರು. ಕೊನೆಗೆ ಜಾರ್ಖಂಡ್ ತಂಡ 7-1 ಗೋಲ್‌ಗಳ ಅಂತರದಿಂದ ಚಾಂಪಿಯನ್ ಪಟ್ಟ ಗಳಿಸಿ ಕಪ್ ಎತ್ತಿ ಹಿಡಿಯಿತು.


    ಕೊಡಗಿನಲ್ಲಿ ಪ್ರಥಮ ಬಾರಿಗೆ ನಡೆದ ರಾಷ್ಟ್ರೀಯ ಕ್ರೀಡಾಕೂಟವೊಂದು ಅತ್ಯಂತ ಯಶಸ್ವಿಯಾಗಿ ಮುಗಿದಿದೆ. ಜಿಲ್ಲೆಯ ಇಬ್ಬರು ಶಾಸಕರು, ಜಿಲ್ಲಾಡಳಿತ ಸೇರಿದಂತೆ ಸಂಪೂರ್ಣ ಕೊಡಗಿನ ಜನತೆಗೆ ಈ ಯಶಸ್ಸು ಸಲ್ಲಬೇಕು. ಅಂತಿಮ ಪಂದ್ಯ ಅತ್ಯಂತ ಆಕರ್ಷಣೀಯವಾಗಿತ್ತು. ಜಾರ್ಖಂಡ್ ತಂಡದ ಸಂಘಟಿತ ಆಟ ಅವರಿಗೆ ಚಾಂಪಿಯನ್ ಪಟ್ಟ ತಂದು ಕೊಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts