More

    ಬಾಗಿಲು ತೆರೆಯದ ಚಿತ್ರಮಂದಿರ

    ಹಾವೇರಿ: ಕೆಲ ಷರತ್ತುಗಳೊಂದಿಗೆ ಚಲನಚಿತ್ರ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿದ್ದರೂ ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಮಾತ್ರ ಚಿತ್ರಮಂದಿರಗಳನ್ನು ತೆರೆಯಲು ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಜಿಲ್ಲೆಯ ರಾಣೆಬೆನ್ನೂರ, ಶಿಗ್ಗಾಂವಿಯಲ್ಲಿ ಚಿತ್ರಮಂದಿರಗಳು ಆರಂಭಗೊಂಡಿವೆ.

    ಹಾವೇರಿಯಲ್ಲಿ ಇನ್ನೂ ಕೆಲ ದಿನಗಳವರೆಗೆ ಚಲನಚಿತ್ರ ಪ್ರದರ್ಶನಗೊಳ್ಳುವುದು ಅನುಮಾನವಾಗಿದೆ. ಕರೊನಾ ಲಾಕ್​ಡೌನ್​ನಿಂದಾಗಿ ಚಿತ್ರಮಂದಿರಗಳ ಮಾಲೀಕರು ನಷ್ಟ ಅನುಭವಿಸಿದ್ದಾರೆ. ಇನ್ನೂ ಅನುಭವಿಸುತ್ತಲೇ ಇದ್ದಾರೆ. ಆದರೆ, ಸರ್ಕಾರ ಅವರಿಗೆ ಯಾವುದೆ ನೆರವಿನ ಹಸ್ತ ಚಾಚಿಲ್ಲ. ಬದಲಾಗಿ ಕರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಮಾರ್ಗಸೂಚಿಗಳ ಷರತ್ತು ವಿಧಿಸಿ ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಿದೆ. ಚಿತ್ರ ವೀಕ್ಷಣೆಗೆ ಆಗಮಿಸುವವರ ದೂರವಾಣಿ ಸಂಖ್ಯೆ ಪಡೆಯಬೇಕು. ಕಡ್ಡಾಯವಾಗಿ ಆರೋಗ್ಯ ತಪಾಸಣೆ, ಸ್ಯಾನಿಟೈಸೇಷನ್ ಮಾಡುವುದು ಹೊರೆಯ ಕೆಲಸವಾಗಿದೆ. ರಾಜ್ಯದಲ್ಲಿ ಇನ್ನೂ ಕರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದ್ದರಿಂದ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದಿಲ್ಲ. ಹೀಗಾಗಿ ಚಿತ್ರಮಂದಿರ ತೆರೆದರೂ ನಷ್ಟ ಅನುಭವಿಸಬೇಕಾಗುತ್ತದೆ ಹೊರತು ಲಾಭವಂತೂ ಇಲ್ಲ ಎನ್ನುವುದು ಮಾಲೀಕರ ಅಭಿಪ್ರಾಯವಾಗಿದೆ.

    ದೊಡ್ಡ ನಟರ ಚಿತ್ರಗಳಿಲ್ಲ: ಶೇ. 100ರಷ್ಟು ಸೀಟು ಭರ್ತಿಯೊಂದಿಗೆ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ದೊರೆತಿದ್ದರೂ ಸದ್ಯ ಸ್ಟಾರ್ ನಟರ ಹಾಗೂ ಬಿಗ್ ಬಜೆಟ್ ಚಿತ್ರಗಳು ಬಿಡುಗಡೆಯಾಗಿಲ್ಲ. ಯಾವುದೋ ಒಂದು ಸಿನಿಮಾ ಪ್ರದರ್ಶನಕ್ಕೆ ಮುಂದಾದರೆ ನಷ್ಟ ಹೆಚ್ಚಾಗುತ್ತದೆ. ಹೀಗಾಗಿ ಇನ್ನೂ ಕೆಲ ದಿನಗಳವರೆಗೆ ಚಿತ್ರಮಂದಿರ ತೆರೆಯುವುದು ಸಾಧ್ಯವಿಲ್ಲ ಎನ್ನುತ್ತಾರೆ ಪ್ರದರ್ಶಕರು.

    ಟಾಕೀಸ್​ಗೆ ಜೀವಕಳೆ, ಸಿನಿ ಪ್ರಿಯರಿಗೆ ಸಂತಸ

    ಪ್ರೇಕ್ಷಕರಿಲ್ಲದೆ ಬಿಕೋ ಎನ್ನುತ್ತಿದ್ದ ಚಿತ್ರಮಂದಿರಗಳಿಗೆ ಈಗ ಜೀವಕಳೆ ಬಂದಿದೆ. ರಾಣೆಬೆನ್ನೂರ ನಗರದ ಶಂಕರ, ಶಿವಶಕ್ತಿ, ಸಂಗಮ್ ವೀಣಾ ಚಿತ್ರ ಮಂದಿರಗಳು ಶುಕ್ರವಾರದಿಂದ ಚಲನಚಿತ್ರ ಪ್ರದರ್ಶನ ಆರಂಭಿಸಿದವು. 10 ತಿಂಗಳ ಬಳಿಕ ಚಿತ್ರಮಂದಿರಗಳು ಆರಂಭಗೊಂಡಿರುವುದು ಸಿನಿ ಪ್ರಿಯರಿಗೆ ಸಂತಸ ಉಂಟು ಮಾಡಿದೆ.

    ಚಿತ್ರಮಂದಿರಗಳನ್ನು ಸ್ವಚ್ಛಗೊಳಿಸಿ ಹೂವುಗಳಿಂದ ಅಲಂಕರಿಸಿ ಪ್ರೇಕ್ಷಕರನ್ನು ಸ್ವಾಗತಿಸಲಾಯಿತು. ಸದ್ಯ ಪ್ರೇಕ್ಷಕರ ಸಂಖ್ಯೆ ನೋಡಿಕೊಂಡು ಪ್ರದರ್ಶನಗಳ ಸಮಯ ನಿಗದಿಪಡಿಸುತ್ತೇವೆ. ಮುಂದಿನ ದಿನದಲ್ಲಿ ದೊಡ್ಡ ಬಜೆಟ್​ನ ಚಿತ್ರಗಳು ಬಿಡುಗಡೆಯಾಗಲಿದ್ದು, ಆಗ ನಿತ್ಯ ನಾಲ್ಕು ಪ್ರದರ್ಶನಕ್ಕೆ ಚಿತ್ರಮಂದಿರಗಳ ಮಾಲೀಕರು ತೀರ್ವನಿಸಿದ್ದಾರೆ.

    ಶುಕ್ರವಾರ ಬೆರಳೆಣಿಕೆಯಷ್ಟು ಪ್ರೇಕ್ಷಕರು ಕಂಡು ಬಂದರು. ಚಿತ್ರಮಂದಿರಗಳ ಮಾಲೀಕರು ಪ್ರೇಕ್ಷಕರಿಗೆ ಉಚಿತವಾಗಿ ಮಾಸ್ಕ್ ನೀಡಿದರು. ಜತೆಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು.

    ‘ಮುಂದಿನ ತಿಂಗಳು ಸ್ಟಾರ್ ನಟರ ಚಿತ್ರಗಳು ತೆರೆ ಕಾಣಲಿದ್ದು, ಪ್ರೇಕ್ಷಕರ ಸಂಖ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇದೆ’ ಎಂದು ಶಂಕರ ಚಿತ್ರಮಂದಿರ ಮಾಲೀಕ ಗಿರೀಶ ಬ್ಯಾಡಗಿ ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts