More

    ಪುತ್ರನ ನೆನಪಿಗೆ ರಂಗಮಂದಿರ ಕಟ್ಟಿಸಿದ ಶಿಕ್ಷಕ

    ಹೊಳೆಹೊನ್ನೂರು: ಪುತ್ರನ ಸವಿ ನೆನಪಿಗೆ ಸರ್ಕಾರಿ ಶಾಲಾ ಆವರಣದಲ್ಲಿ 3 ಲಕ್ಷ ರೂ. ಖರ್ಚಿನಲ್ಲಿ ರಂಗಮಂದಿರ ನಿರ್ಮಾಣ ಮಾಡಿದ ಸರ್ಕಾರಿ ಶಾಲೆಯ ಶಿಕ್ಷಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
    ಭದ್ರಾವತಿ ತಾಲೂಕಿನ ಚಂದನಕೆರೆ ಸರ್ಕಾರಿ ಶಾಲೆ ಶಿಕ್ಷಕ ಬಿ.ಜಿ.ಮಹೇಶ್ವರಪ್ಪ ಅವರ ಮಗನ ಅಕಾಲಿಕವಾಗಿ ಮೃತನಾಗಿದ್ದು ಮಗ ಎಂ.ಮುರಳಿ ಸ್ಮರಣಾರ್ಥ ಅವರು ಕರ್ತವ್ಯ ನಿರ್ವಹಿಸುತ್ತಿರುವ ಚಂದನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಂತ ಖರ್ಚಿನಲ್ಲಿ ರಂಗಮಂದಿರ ನಿರ್ಮಾಣ ಮಾಡಿದ್ದಾರೆ.
    ಮಂಗಳವಾರ ರಂಗಮಂದಿರವನ್ನು ಉದ್ಘಾಟಿಸಿ ಮಾತನಾಡಿದ ಬಿ.ಜಿ.ಮಹೇಶ್ವರಪ್ಪ, 2012ರಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತ ಬಂದಿದ್ದೇನೆ. ಮಗ ಹೃದಯಾಘಾತದಿಂದ ನಿಧನನಾಗಿದ್ದು ನನಗೆ ತೀವ್ರ ನೋವುಂಟು ಮಾಡಿತ್ತು. ಅವನ ಹೆಸರಲ್ಲಿ ಸಾರ್ವಜನಿಕವಾಗಿ ಕೆಲಸ ಮಾಡಲು ನಿರ್ಧರಿಸಿ ಈ ರಂಗಮಂದಿರ ಸ್ಥಾಪನೆ ಮಾಡಲಾಗಿದೆ. ಇದರ ಅಂದಾಜು ಖರ್ಚು 3 ಲಕ್ಷ ರೂಪಾಯಿ. ಶಿಕ್ಷಕನಿಗೆ ಒಳ್ಳೆಯ ಭಾವನೆ ಮತ್ತು ಮನಸ್ಸು ಇದ್ದರೆ ಸಮುದಾಯಕ್ಕೆ ಶಾಲೆಯ ಮೇಲೆ ಒಲವು ಮೂಡುತ್ತದೆ. ನಾವು ಮಾಡುವ ಕಾರ್ಯ ಮುಂದಿನ ಯುವ ಪೀಳಿಗೆಗೆ ಅನುಕೂಲವಾಗಲಿದೆ. ಇದರಿಂದ ಒಳ್ಳೆಯ ಕಲಾವಿದರು ಮೂಡಿಬರಲಿ ಎಂದು ಹಾರೈಸಿದರು.
    ಶಿಕ್ಷಕರ ಸಂಘದ ಅಧ್ಯಕ್ಷ ಪ್ಲಥ್ವಿರಾಜ್ ಮಾತನಾಡಿ, ಕೊಡುವ ಗುಣ ಬೆಳೆಸಿಕೊಳ್ಳಬೇಕು. ಯಾವುದೇ ಗ್ರಾಮದ ಅಭಿವೃದ್ಧಿಯನ್ನು ಅಲ್ಲಿನ ಶಾಲೆಯನ್ನು ನೋಡಿ ಅಳೆಯಬೇಕು. ಯಾವ ಊರಲ್ಲಿ ಒಂದು ಉತ್ತಮ ಶಾಲೆ ಇರುವುದೋ ಅಲ್ಲಿ ಸುಭಿಕ್ಷೆ ಇರುವುದು. ಯಾವುದನ್ನಾರೂ ಇನ್ನೊಬ್ಬರಿಗೆ ಕೊಟ್ಟಾಗ ಅದರ ಬೆಲೆ ಹೆಚ್ಚಾಗುವುದು ಎಂದು ಹೇಳಿದರು.
    ಗ್ರಾಪಂ ಉಪಾಧ್ಯಕ್ಷ ಬಸವರಾಜಪ್ಪ, ಇಂಜಿನಿಯರ್ ನಂದಗೋಪಾಲ ಗೌಡ, ಅಕ್ಷರ ದಾಸೋಹ ನಿರ್ವಾಹಣಾಧಿಕಾರಿ ಪ್ರಭಾಕರ್, ಚೈತ್ರಾ, ಸೆಲ್ವರಾಜ್, ಹನುಮಂತಪ್ಪ, ಎಸ್.ಓಂಕಾರಪ್ಪ, ರಂಗನಾಥ, ರೇಖಾ, ಭಾಗ್ಯಮ್ಮ, ಪವಿತ್ರಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts