More

    ತಬ್ಲಿಘಿ ಜಮಾತ್​ ಸಂಘಟನೆಯ ಧಾರ್ಮಿಕ ಸಭೆಯನ್ನು ತಾಲಿಬಾನ್​ ಉಗ್ರಕೃತ್ಯಕ್ಕೆ ಹೋಲಿಸಿದ ಮುಕ್ತಾರ್​ ಅಬ್ಬಾಸ್​ ನಖ್ವಿ; ಕ್ಷಮಿಸಲು ಸಾಧ್ಯವೇ ಇಲ್ಲವೆಂದ ಸಚಿವ

    ನವದೆಹಲಿ: ದೆಹಲಿಯ ನಿಜಾಮುದ್ದೀನ್​ ಜಮಾತ್​ ಮಸೀದಿ ಕರೊನಾ ವೈರಸ್​ನ ಹಾಟ್​ಸ್ಪಾಟ್​ ಎನಿಸಿಕೊಳ್ಳಲು ಕಾರಣವಾದ ತಬ್ಲಿಘಿ ಜಮಾತ್​ ಧಾರ್ಮಿಕ ಸಂಘಟನೆ ವಿರುದ್ಧ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ, ಬಿಜೆಪಿ ಹಿರಿಯ ನಾಯಕ ಮುಕ್ತಾರ್​ ಅಬ್ಬಾಸ್​ ನಖ್ವಿ ತೀವ್ರ ಕಿಡಿಕಾರಿದ್ದಾರೆ.

    ಕರೊನಾ ವೈರಸ್​ ಸೋಂಕು ದೇಶವ್ಯಾಪಿ ಹರಡುತ್ತಿದ್ದರೂ ದೇಶ-ವಿದೇಶಗಳಿಂದ ಅನುಯಾಯಿಗಳನ್ನು, ಸಮುದಾಯದ ಜನರನ್ನು ಆಹ್ವಾನಿಸಿ ಇಲ್ಲಿ ಧಾರ್ಮಿಕ ಸಭೆ ನಡೆಸಿದ ತಬ್ಲಿಘಿ ಜಮಾತ್​ದು ತಾಲಿಬಾನ್​ ಉಗ್ರಕೃತ್ಯಕ್ಕೆ ಸಮಾನವಾದ ಅಪರಾಧ ಎಂದು ಹೇಳಿದ್ದಾರೆ.

    ಮಾರಣಾಂತಿಕ ಕರೊನಾ ಹರಡಲು ಕಾರಣವಾದ ತಬ್ಲಿಘಿ ಜಮಾತ್​ ತಾಲಿಬಾನ್​ ಭಯೋತ್ಪಾದನಾ ಕೃತ್ಯಕ್ಕೆ ಸಮಾನವಾದ ಅಪರಾಧ ಎಸಗಿದೆ. ಇಂತಹ ತಪ್ಪುಗಳಿಗೆ ಕ್ಷಮೆಯೇ ಇಲ್ಲ. ಇವರಿಂದಾಗಿ ಅದೆಷ್ಟೋ ಸಾವಿರ ಜನರ ಜೀವ ಅಪಾಯದಲ್ಲಿ ಇದೆ ಎಂದು ಕಿಡಿಕಾರಿದ್ದಾರೆ.

    ಸರ್ಕಾರದ ಸೂಚನೆಗಳನ್ನು ಧಿಕ್ಕರಿಸಿ ಧರ್ಮದ ಹೆಸರಲ್ಲಿ ಇಂತಹ ಅಪರಾಧ ಮಾಡುವ ಜನರು ಹಾಗೂ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.ಕ್ಷಮಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ.

    ತಬ್ಲಿಘಿ ಜಮಾತ್​ನ ಅಂತಾರಾಷ್ಟ್ರೀಯ ಪ್ರಧಾನ ಕಚೇರಿ ದೆಹಲಿಯ ನಿಜಾಮುದ್ದೀನ್​ ಮರ್ಕಜ ಮಸೀದಿಯಲ್ಲಿದ್ದು, ಅಲ್ಲಿ ಧಾರ್ಮಿಕ ಸಭೆಗಳು, ಬೋಧನೆ, ಪ್ರವಚನಗಳು ನಡೆಯುತ್ತಿರುತ್ತವೆ.

    ಮಾ.1ರಿಂದಲೇ ಪ್ರವಚನ ಪ್ರಾರಂಭವಾಗಿತ್ತು. ಅದೇ ಸಮಯಕ್ಕೆ ಕರೊನಾ ವೈರಸ್​ ಕೂಡ ದೇಶದಲ್ಲಿ ಹರಡುತ್ತಿತ್ತು. ಈ ಹಿನ್ನೆಲೆಯಲ್ಲಿ ಮಾ.13ರಂದು ದೆಹಲಿ ಸರ್ಕಾರ ನಿರ್ಬಂಧ ವಿಧಿಸಿ, 200ಕ್ಕಿಂತ ಹೆಚ್ಚಿನ ಜನರು ಯಾವುದೇ ಕಾರ್ಯಕ್ರಮ, ಸಮಾರಂಭದ ನೆಪದಲ್ಲಿ ಸೇರಬಾರದು. ಈ ಆದೇಶ ಮಾ.31ರವರೆಗೆ ಅನ್ವಯ ಎಂದು ಹೇಳಿತ್ತು.

    ಆದರೆ ತಬ್ಲಿಘಿ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಮಾ.26ರಂದು ಶ್ರೀನಗರದಲ್ಲಿ ಮೌಲ್ವಿಯೋರ್ವ ಕರೊನಾ ವೈರಸ್​ನಿಂದ ಮೃತಪಟ್ಟಿದ್ದ. ಆತ ಈ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವನಾಗಿದ್ದ. ಹಾಗೇ ತೆಲಂಗಾಣಕ್ಕೆ ತೆರಳಿದ್ದ 10 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು.

    ಅದಾದ ಬಳಿಕ ಎಲ್ಲ ಸರ್ಕಾರಗಳೂ ಅಲರ್ಟ್ ಆಗಿವೆ. ದೆಹಲಿ ನಿಜಾಮುದ್ದೀನ್ ಮಸೀದಿಯ ಸಭೆಯಲ್ಲಿ ಪಾಲ್ಗೊಂಡವರನ್ನು, ಅವರ ಸಂಪರ್ಕಕ್ಕೆ ಸಿಕ್ಕವರನ್ನೆಲ್ಲ ಟ್ರ್ಯಾಕ್ ಮಾಡಲು ಯತ್ನಿಸುತ್ತಿವೆ. ಇಷ್ಟಾದರೂ ಕೆಲವರು ಅಡಗುತ್ತಿದ್ದಾರೆ. ಎದುರು ಬಂದು ಹೇಳುತ್ತಿಲ್ಲ. ಹೀಗಾಗಿ ದೊಡ್ಡ ಸವಾಲು ಎದುರಾದಂತಾಗಿದೆ.

    ಆ ಮಸೀದಿಯಿಂದ ಹೊರಟವರು ಯಾರು ಯಾವ ಬಸ್, ರೈಲುಗಳಲ್ಲಿ ಪ್ರಯಾಣಿಸಿದ್ದಾರೋ, ಎಲ್ಲೆಲ್ಲಿಗೆ ಹೋಗಿದ್ದರೋ ಎಂಬಂತಹ ಆತಂಕ ಶುರುವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts