More

    ಕಾದು ಓದು: ಸಮಕಾಲೀನ ಜಗತ್ತಿನ ಪಲ್ಲಟಗಳ ಕಥನ

    ಹೊಸ ಕಥಾ ಸಂಕಲನವೊಂದು ಓದುಗರ ದೃಷ್ಟಿಯಿಂದ ಪ್ರಸ್ತುತವಾಗಬೇಕಾದರೆ, ಹೊಸ ಕತೆ ಮತ್ತು ಸನ್ನಿವೇಶಗಳನ್ನು ಮಂಡಿಸುವುದರ ಜತೆಗೆ ಕನ್ನಡ ಕಥಾಸಂದರ್ಭಕ್ಕೂ ಮುಖ್ಯವಾಗುವ ಕೆಲವು ಆಯಾಮಗಳ ಕಡೆಗಾದರೂ ಗಮನಹರಿಸಿ ಪ್ರಶ್ನೆಗಳನ್ನು ಎತ್ತಬೇಕಾಗುತ್ತದೆ. ರಾಜಶೇಖರ ಜೋಗಿನ್ಮನೆಯವರ ‘ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ’ ಕಥಾಸಂಕಲನ ಇಂಥ ಪ್ರಶ್ನೆಗಳ ಕಡೆ ಗಮನ ಸೆಳೆಯುವುದರಿಂದ ಸದ್ಯದ ಕನ್ನಡ ಕಥನ ಸಂದರ್ಭದಲ್ಲಿ ಮುಖ್ಯವಾಗುತ್ತದೆ.

    ಕಾದು ಓದು: ಸಮಕಾಲೀನ ಜಗತ್ತಿನ ಪಲ್ಲಟಗಳ ಕಥನಸಮಕಾಲೀನ ಜಗತ್ತಿನಲ್ಲಾಗುತ್ತಿರುವ ಪಲ್ಲಟಗಳನ್ನು ವ್ಯಾಖ್ಯಾನಿಸುವಲ್ಲಿ ರಾಜಶೇಖರರ ದೃಷ್ಟಿಕೋನ ಸದ್ಯದ ಬಹುಪಾಲು ಕತೆಗಾರರಿಗಿಂತ ಭಿನ್ನವಾಗಿದೆ. ಬದಲಾವಣೆಯ ಬಗ್ಗೆ ಇನ್ನಿಲ್ಲದ ಉತ್ಸಾಹ ಅಥವಾ ಬದಲಾವಣೆಯಿಂದ ಹಳೆಯ ಜಗತ್ತಿನಲ್ಲಿ ಮೌಲಿಕವಾದುದೆಲ್ಲ ಕಳೆದುಹೋಗುತ್ತಿದೆ ಎಂಬ ವ್ಯಾಕುಲತೆ, ಹಳಹಳಿಕೆ – ಈ ಎರಡೂ ತುದಿ ನಿಲುವುಗಳಲ್ಲೇ ಕತೆಗಾರರು ಬರೆಯುತ್ತಾರೆ. ಇದರ ಬದಲಿಗೆ ಬದಲಾವಣೆ ಮತ್ತು ಪಲ್ಲಟವೆಂದರೆ ಕಳೆದುಕೊಳ್ಳುವುದು ಮತ್ತು ಪಡೆಯುವುದು ಎರಡೂ ಒಟ್ಟಿಗೇ ಜರುಗುತ್ತಿರುತ್ತದೆ ಎಂಬುದು ರಾಜಶೇಖರರ ದೃಷ್ಟಿಕೋನ. ‘ಒಂದೆಲಗದ ತಂಬುಳಿ’ ಕತೆಯ ಕರುಣಾಕರ ತನ್ನ ತಂದೆ ಬದುಕುತ್ತಿದ್ದ ಗ್ರಾಮ, ಪರಿಸರ, ಜೀವನಕ್ರಮದಿಂದ ಬಹುದೂರ ಬಂದಿದ್ದಾನೆ. ಯಶಸ್ಸನ್ನೂ ಪಡೆದಿದ್ದಾನೆ. ತಂದೆಯ ಮರಣದ ನಂತರ ಊರಿನ ಆಸ್ತಿ, ಭೂಮಿಯನ್ನೆಲ್ಲ ಹೇಗೆ ಉಳಿಸಿಕೊಳ್ಳಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಪುರೋಹಿತರು ಈ ಸವಾಲಿಗೆ ನೀಡುವ ಉತ್ತರದಲ್ಲಿ ರಾಜಶೇಖರರ ದೃಷ್ಟಿಕೋನ ವ್ಯಕ್ತವಾಗುತ್ತದೆ. ‘‘ಕಳೆದುಕೊಳ್ಳುವುದು, ಅದನ್ನು ಹುಡುಕುವುದು ಈ ನೆಲದ ಪರಂಪರೆ. ರಾಮ ಸೀತೆಯನ್ನು ಕಳಕೊಂಡ, ಮತ್ತೆ ಹುಡುಕಿದ. ಪಾಂಡವರು ರಾಜ್ಯ ಕಳಕೊಂಡರು, ಪಡಕೊಂಡರು. ನಾವೂ ಹಾಗೇ. ಕಳಕೊಳ್ಳುತ್ತೇವೆ, ಹುಡುಕುತ್ತೇವೆ. ಈಗ ನೀನೂ ಹಾಗೆ. ಕಳಕೊಂಡದ್ದನ್ನು ಗಳಿಸಿದ್ದೀಯ. ತಂದೆ ತಾಯಿಯನ್ನು ಕಳಕೊಂಡಿದ್ದೀಯ. ಅದೇನೋ ಭಯ ಅಂದೆಯಲ್ಲ ‘ಕಳಕೊಂಡರೆ’ ಎಂದು. ಹಾಗೇನಾದರೂ ಆದರೆ ಮಗ ಹುಡುಕಿಕೊಳ್ಳುತ್ತಾನೆ ಬಿಡು’’ (ಪುಟ-21). ಇದು ಭಿನ್ನ ದೃಷ್ಟಿಕೋನ ಮಾತ್ರವಲ್ಲ, ನಿರೂಪಣೆಗೆ ವಸ್ತುನಿಷ್ಠತೆಯನ್ನೂ ತಂದುಕೊಡುತ್ತದೆ ಎಂಬುದು ಮುಖ್ಯ. ಪಲ್ಲಟ, ಬದಲಾವಣೆಗಳನ್ನು ರಾಜಶೇಖರ್ ಹೊರಗಿನಿಂದಲೂ, ಒಳಗಿನಿಂದಲೂ ನೋಡುತ್ತಾರೆ. ಪಲ್ಲಟ, ಬದಲಾವಣೆ ನಾವೆಲ್ಲ ಮೇಲುಮೇಲೆ ಗ್ರಹಿಸುವಂತೆ, ನೇರವಾಗಿ ಚಲಿಸುವುದಿಲ್ಲ. ‘ಲಾಟೀನು’ ಕತೆ ಈ ವಿನ್ಯಾಸವನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಹಳ್ಳಿಗಳಿಂದ ನಗರಗಳಿಗೆ, ಮಹಾನಗರಕ್ಕೆ ಬಂದು ಬದುಕುವ ದಾರಿ ಹುಡುಕಿಕೊಳ್ಳುವವರದು ನೇರ ಹಾದಿಯಲ್ಲ. ಏಳುಬೀಳುಗಳಿಂದ ತುಂಬಿದ ಅಡ್ಡಾದಿಡ್ಡಿ್ಡ ಮಾರ್ಗ. ಈ ಮಾರ್ಗದಲ್ಲಿ ಸಿಗುವ ಎಲ್ಲ ಉತ್ತರಗಳು, ಅವಕಾಶಗಳು ನೈತಿಕವಾಗಿ ಸರಿಯಿಲ್ಲದೆಯೂ ಇರಬಹುದು. ಆದರೆ ಬದುಕುವ ದೃಷ್ಟಿಯಿಂದ ಈ ಸ್ತರಗಳನ್ನೆಲ್ಲ ಹಾದು ಹೋಗುವುದು ಅನಿವಾರ್ಯ. ಈ ವಿನ್ಯಾಸದಲ್ಲಿ ರಾಜಶೇಖರ್, ಬದುಕಿನ ಕೊರಕಲಿನಲ್ಲಿ ಸಿಕ್ಕಿಹಾಕಿಕೊಂಡವರ ಬಗ್ಗೆ ಯಾವ ರೀತಿಯ ನೈತಿಕ ತೀರ್ವನಗಳನ್ನೂ ಕೊಡದೇ ಕತೆ ಕಟ್ಟುತ್ತಾ ಹೋಗುತ್ತಾರೆ.

    ಕಾದು ಓದು: ಸಮಕಾಲೀನ ಜಗತ್ತಿನ ಪಲ್ಲಟಗಳ ಕಥನರಾಜಶೇಖರ್ ಕತೆಗಳಲ್ಲಿ ಹುಡುಕಾಟ, ಶೋಧನೆ ಸ್ಥಾಯಿಯಾಗಿದೆ. ಬೇರೆ ಬೇರೆ ರೂಪಗಳಲ್ಲಿ ಪ್ರಕಟವಾಗುತ್ತಲೇ ಹೋಗುತ್ತದೆ. ಸಂಕಲನದ ಶೀರ್ಷಿಕೆಯ ಕತೆ, ಬಾವಾಜಿ ಕೊಲೆ, ಮುತ್ತಜ್ಜನ ಊರುಗೋಲು – ಈ ಮೂರೂ ಕತೆಗಳನ್ನು ಒಟ್ಟಿಗೇ ಗಮನಿಸಬಹುದು. ನಿಜವಾಗಿ ಈ ಮೂರೂ ಕತೆಗಳ ಆಂತರ್ಯದಲ್ಲಿ ಇರುವುದು ಒಂದೇ ಕತೆ, ಒಂದೇ ಭಾವ. ಒಂದು ಕತೆಯಲ್ಲಿ ಬಿಡುಗಡೆ ಬಯಸುತ್ತಿರುವ ಪ್ರೇತವು ನಿಧಿಯ ಹುಡುಕಾಟದ ಆತ್ಮಕತೆಯನ್ನು ಹೇಳುತ್ತದೆ. ‘ಮುತ್ತಜ್ಜನ ಊರುಗೋಲು’ ಕತೆಯಲ್ಲಿ ಮನೆಯ ಅಟ್ಟದ ಮೇಲೆ ಸಿಗುವುದು ಮುತ್ತಜ್ಜ ಬಾರಿಸುತ್ತಿದ್ದ ತಬಲಾ. ‘ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ’ ಕತೆಯಲ್ಲಿ, ದೇವಿಯ ಮೂರ್ತಿಯ ಬದಲು ಸಿಗುವುದು ಜಲ. ಹೀಗೆ ಸಿಗುವ ನೀರು ಕಾಡುಪ್ರಾಣಿಗಳಿಗೆ ವರವಾಗುತ್ತದೆ. ಇಗ್ಗಪ್ಪಣ್ಣ ಕೂಡ ಜಲವನ್ನು ಪೂಜಿಸಲು ನಿರ್ಧರಿಸುತ್ತಾನೆ. ಹೀಗೆ ಬದುಕಿನ ಬೇರೆ ಬೇರೆ ಸ್ತರಗಳಲ್ಲಿ ಬೆರೆತುಹೋಗಿರುವ ಹಾಗೂ ಜೀವಂತಿಕೆಯ ಬದುಕಿಗೆ ಅಗತ್ಯವಾದ ಹುಡುಕಾಟದ ನಾನಾ ರೀತಿಯನ್ನು ಈ ಕತೆಗಳು ಸೂಚಿಸುತ್ತವೆ. ‘ನಾಟಕದ ಮಾರನೇ ದಿನ’ ಕತೆ ಕೂಡ ಸಮುದಾಯದಲ್ಲಾಗುತ್ತಿರುವ ಬದಲಾವಣೆಗಳನ್ನು ಗಮನಿಸುತ್ತದೆ. ನಾಟಕ ಆಡುವುದು, ನೋಡುವುದು ಎಲ್ಲವೂ ಸಮುದಾಯಜೀವನದ ಭಾಗವಾಗಿದ್ದ ಜೀವನವಿಧಾನ. ಈಗ ಹಳೆ ಸಮಾಚಾರ. ಆದರೆ ಕಲಾವಿದನಾಗಿ ಬೆಳೆಯಬೇಕಾದರೆ ಹುಟ್ಟಿದ ಪರಿಸರವನ್ನು ಬಿಟ್ಟು ದೂರ ಹೋಗಬೇಕಾದದ್ದು ಅನಿವಾರ್ಯ. ಕತೆಯ ನಾಯಕ ಮಹೇಶ, ಇದೇ ರೀತಿ ಗ್ರಾಮದಿಂದ ದೂರ ಹೋಗಿ ಕಲಾವಿದನಾಗಿ ಬೆಳೆಯುತ್ತಾನೆ. ಅಷ್ಟೆಲ್ಲ ಬೆಳೆದರೂ ಹುಟ್ಟಿದ ಗ್ರಾಮದಲ್ಲಿ ರಂಗಮಂದಿರ ಸ್ಥಾಪಿಸುವ ಆಸೆ ಅವನಿಗೆ. ಆದರೆ ಅವನಲ್ಲಿ ಕಲೆಯ ಆಸೆ ಮೂಡಿಸಿದ ಗ್ರಾಮ ಕೂಡ ಹಿಂದೆ ಇದ್ದಂತಿಲ್ಲ. ‘ನಾಟಕವಿರಲಿ, ಕತೆ ಹೇಳಲೂ ಜನವಿರದ ದಿನಗಳು ಹತ್ತಿರವಾಗುತ್ತಿವೆ’’ (ಪು. 72) ಎಂಬ ಸ್ಪಷ್ಟ ತಿಳಿವಳಿಕೆ ಕೂಡ ನಿರೂಪಕನಿಗಿದೆ.

    ಕಾದು ಓದು: ಸಮಕಾಲೀನ ಜಗತ್ತಿನ ಪಲ್ಲಟಗಳ ಕಥನಸಂಕಲನ ಇನ್ನೊಂದು ದೃಷ್ಟಿಯಿಂದಲೂ ಗಮನ ಸೆಳೆಯುತ್ತದೆ. ಉತ್ತರ ಕನ್ನಡದ ಹಿನ್ನೆಲೆಯಿಂದ ಬಂದ ಬಹುತೇಕ ಬರಹಗಾರರು ಬಳಸುವ ಪ್ರಾದೇಶಿಕ, ಜನಾಂಗೀಯ ಉಪಭಾಷೆಯನ್ನು ಅವರು ನಿರೂಪಣೆಯಲ್ಲಿ ಬಳಸುವುದಿಲ್ಲ. ಬದಲಿಗೆ ‘‘ಪ್ರಮಾಣ ಭಾಷೆ’’ ಬಳಸುತ್ತಾರೆ. ಪತ್ರಿಕೋದ್ಯಮದ ವೃತ್ತಿಯಲ್ಲಿ ಇರುವುದರಿಂದಲೂ ಹೀಗಾಗಿರಬಹುದು. ಕನ್ನಡದ ಬಹುಪಾಲು ಮುಖ್ಯ ಲೇಖಕರು ಉಪಭಾಷೆಗಳಲ್ಲಿರುವ ಶಬ್ದಸಂಪತ್ತನ್ನು ನಿರೂಪಣೆಯ ಸಂಪನ್ಮೂಲವಾಗಿ ಬಳಸುತ್ತಾರೆ. ಆದರೆ ಒಟ್ಟು ನಿರೂಪಣೆ ಪ್ರಮಾಣ ಭಾಷೆಯಲ್ಲೇ ಇರುತ್ತದೆ. ಇದಕ್ಕೆ ವಿರುದ್ಧವಾಗಿ ಕೆಲವು ಲೇಖಕರು ಅಭಿವ್ಯಕ್ತಿ, ಅಸ್ಮಿತೆಯ ಕಡೆಗೇ ಗಮನ ಕೊಟ್ಟು ನಿರೂಪಣೆಯುದ್ದಕ್ಕೂ ತಮ್ಮ ಹಿನ್ನೆಲೆಗೇ ವಿಶಿಷ್ಟವಾದ ಉಪಭಾಷೆಯನ್ನು ಬಳಸುತ್ತಾರೆ. ರಾಜಶೇಖರ್ ನಿರೂಪಣಾ ಶೈಲಿ ಈ ವಿದ್ಯಮಾನವನ್ನು ಕುರಿತು ಮತ್ತೊಮ್ಮೆ ಯೋಚಿಸುವಂತೆ ಪ್ರೇರೇಪಿಸುತ್ತದೆ.

    ಇಪ್ಪತ್ತು ವರ್ಷಗಳ ನಂತರ ಎರಡನೆಯ ಸಂಕಲನ ಪ್ರಕಟಿಸುತ್ತಿರುವ ರಾಜಶೇಖರ್, ಜೀವನವನ್ನು ಭಿನ್ನವಾಗಿ ನೋಡುವ ದೃಷ್ಟಿಕೋನವನ್ನು ರೂಢಿಸಿಕೊಂಡಿರುವುದರಿಂದ ಹೆಚ್ಚು ಹೆಚ್ಚು ಸಣ್ಣ ಕತೆಗಳನ್ನು ಬರೆಯಬೇಕು. ಸಂಕಲನಕ್ಕೆ ಹಿರಿಯ ವಿದ್ವಾಂಸ ಪ್ರೊ. ಮಲ್ಲೇಪುರಂ ವೆಂಕಟೇಶ್ ಅವರ ಮುನ್ನುಡಿ ಮತ್ತು ಹಿರಿಯ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಹಿನ್ನುಡಿಯಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts