More

  ತಹಸೀಲ್ದಾರ್ ಕಚೇರಿ ಎದುರು ಕರವೇ ಪ್ರತಿಭಟನೆ

  ಶಿಗ್ಗಾಂವಿ: ಸರ್ಕಾರಿ ಸೌಲಭ್ಯಗಳಿಂದ ವಂಚಿತ ತಾಲೂಕಿನ ದುಂಡಸಿ ಹೋಬಳಿ ವ್ಯಾಪ್ತಿಯ ಸಾರ್ವಜನಿಕರಿಗೆ ನಾಡಕಚೇರಿ ಸೇರಿದಂತೆ ಸರ್ಕಾರದ ಎಲ್ಲ ಇಲಾಖೆಗಳು ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬಂತಾಗಿದೆ ಎಂದು ಆರೋಪಿಸಿ ತಾಲೂಕು ಕರವೇ ಕಾರ್ಯಕರ್ತರು ಮಂಗಳವಾರ ದುಂಡಸಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

  ತಾಲೂಕು ಕರವೇ ಅಧ್ಯಕ್ಷ ಸಂತೋಷಗೌಡ ಪಾಟೀಲ ನೇತೃತ್ವದಲ್ಲಿ ನಾಡಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ತಾಲೂಕು ಮಟ್ಟದ ಅಧಿಕಾರಿ ವರ್ಗದ ಬೇಜವಾಬ್ದಾರಿ ಆಡಳಿತ ಮತ್ತು ನಿರ್ಲಕ್ಷ್ಯದಿಂದಾಗಿ ಜನರಿಗೆ ಮೂಲ ಸೌಲಭ್ಯಗಳೂ ದೊರಕುತ್ತಿಲ್ಲ. ಆಧಾರ ಕಾರ್ಡ್ ತಿದ್ದುಪಡಿ ಹಾಗೂ ಹೊಸ ಆಧಾರ ಕಾರ್ಡ್ ಪಡೆಯಲು ಪರದಾಡುವಂತಾಗಿದೆ ಎಂದು ಆರೋಪಿಸಿದರು.

  ರೈತರು ನಿತ್ಯದ ಕಾಯಕ ಬಿಟ್ಟು ಪಹಣಿ ಪತ್ರಕ್ಕಾಗಿ ಕಚೇರಿ ಮುಂದೆ ದಿನವಿಡಿ ಕಾಯುವಂತಾಗಿದೆ. ಆದರೆ, ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ನಾಡಕಚೇರಿ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಇಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಒಂದಿಲ್ಲೊಂದು ನೆಪವೊಡ್ಡಿ ಸಮಸ್ಯೆ ಹೊತ್ತು ಬಂದ ಜನರನ್ನು ಸಾಗ ಹಾಕುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆಗೆ ತಾಲೂಕು ಆಡಳಿತವೇ ಹೊಣೆಯಾಗಿದೆ ಎಂದು ದೂರಿದರು.

  ಮನೆ ಬಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಲ್ಲಿನ ಸಿಬ್ಬಂದಿಗೆ ಯಾವುದೇ ರೀತಿಯ ಭರವಸೆ, ಪರಿಹಾರ ನೀಡುವ ಸೌಜನ್ಯವೂ ಇಲ್ಲ. ಒಟ್ಟಾರೆ ಸರ್ಕಾರಿ ಕಚೇರಿಗಳ ಆಡಳಿತ ಜನರಿಗೆ ಗಗನ ಕುಸುಮವಾಗಿದೆ. ತ್ವರಿತವಾಗಿ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತ ಕ್ರಮಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ಮಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

  ಮನವಿ ಸ್ವೀಕರಿಸಿದ ಉಪ ತಹಸೀಲ್ದಾರ್ ಬಸವರಾಜ ಹೊಂಕಣದ, ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಕರವೇ ಪದಾಧಿಕಾರಿಗಳಾದ ಈರಣ್ಣ ಸಮಗೊಂಡ, ವಿಜಯಲಕ್ಷ್ಮೀ ಗುಡಮಿ, ಶೋಭಾ ವನಹಳ್ಳಿ, ಗದಿಗೆಮ್ಮ ಹಿರೇಮಠ, ಶಂಕರ ಬಡಿಗೇರ, ಖಾಜಾಮೋದಿನ ಬಂಕಾಪುರ, ಮಾಬೂಬಸಾಬ ಪೀರಾಮನಿ ಇತರರು ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts