More

    ಚೆನ್ನೈನಲ್ಲಿ ಹರಡಿದ ಕನ್ನಡದ ಜಾನಪದ ಕಂಪು

    ಅರಕಲಗೂಡು: ತಮಿಳುನಾಡಿನ ಚೆನ್ನೈನಲ್ಲಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳು ಸಂಸ್ಥೆ ಇತ್ತೀಚೆಗೆ ಆಯೋಜಿಸಿದ್ದ ಭಾರತೀಯ ಭಾಷಾ ಉತ್ಸವದಲ್ಲಿ ಇಲ್ಲಿನ ಏಕತಾರಿ ಸಾಂಸ್ಕೃತಿಕ ಸಂಘಟನೆಯ ಸದಸ್ಯರು ಕನ್ನಡ ಜಾನಪದದ ಕಂಪು ಹರಡಿದರು.


    ಕಾರ್ಯಕ್ರಮದಲ್ಲಿ ನೆರೆಯ ಭಾಷೆಯನ್ನು ಅರಿಯೋಣ ವಿಭಾಗದಲ್ಲಿ ಕನ್ನಡ, ತೆಲುಗು, ಮಲಯಾಳ, ತುಳು, ಕೊಡವ ಭಾಷಾ ಸಂಸ್ಕೃತಿ ಕುರಿತು ವಿಚಾರಗೋಷ್ಠಿಗಳು ನಡೆದವು. ಕನ್ನಡ ಭಾಷಾ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ದೇವಾನಂದ ವರಪ್ರಸಾದ್ ಮತ್ತು ತಂಡದವರು ಕಂಸಾಳೆ ಕುರಿತು ಪ್ರಾತ್ಯಕ್ಷಿತೆ ನೀಡಿ ಮಲೆ ಮಹದೇಶ್ವರನ ಕಂಸಾಳೆ ಹಾಡುಗಳು, ಮಂಟೇಸ್ವಾಮಿ ಕಾವ್ಯ, ಚಾಮುಂಡಿ, ನಂಜುಂಡೇಶ್ವರನ ಕಾವ್ಯದ ಗಾಯನ ನೃತ್ಯ ನಡೆಸಿದರು.


    ತಮಿಳು ಭಾಷಾ ವಿದ್ಯಾರ್ಥಿನಿ ಶಾಲಿನಿ ಪ್ರತಿಕ್ರಿಯಿಸಿ , ಕನ್ನಡದ ಅರಿವಿಲ್ಲದವರಿಗೆ ಕಂಸಾಳೆ ಹಾಡುಗಳ ಮೂಲಕ ಕನ್ನಡ ಕಲಿಸಿ ಸಾಹಿತ್ಯ ಮತ್ತು ಸಂಸ್ಕೃತಿಯ ಅರಿವು ಮೂಡಿಸಿದ್ದೀರಿ ಎಂದು ಶ್ಲಾಘಿಸಿದ್ದು ತಂಡಕ್ಕೆ ಸಾರ್ಥಕ್ಯ ಭಾವ ಮೂಡಿಸಿತು ಎಂದು ದೇವಾನಂದ ವರಪ್ರಸಾದ್ ಹೇಳಿದರು.


    ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳು ಸಂಸ್ಥೆ ನಿರ್ದೇಶಕ ಪ್ರೊ.ಆರ್.ಚಂದ್ರಶೇಖರ್, ನೆರೆಯ ಭಾಷೆಗಳೊಂದಿಗೆ ಬಾಂಧವ್ಯ ಬೆಳೆಸಲು ಇಂತಹ ಕಾರ್ಯಕ್ರಮಗಳು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು. ಮದ್ರಾಸ್ ವಿಶ್ವವಿದ್ಯಾಲಯದ ಕುಲ ಸಚಿವೆ ಡಾ.ಭುವನೇಶ್ವರಿ, ಭಾರತ ಹಲವು ಭಾಷೆಗಳನ್ನು ಹೊಂದಿದ್ದರೂ ಭಾವ ಒಂದೇ ಆಗಿರುತ್ತದೆ ಎಂದರು. ಡಾ.ಎಂ.ರಂಗಸ್ವಾಮಿ ಕನ್ನಡ ಮತ್ತು ತಮಿಳು ಭಾಷಾ ಸಂಬಂಧ ಕುರಿತು ವಿಚಾರ ಮಂಡಿಸಿದರು. ಏಕತಾರಿ ಸಾಂಸ್ಕೃತಿಕ ಸಂಘಟನೆಯ ಪ್ರದೀಪ್, ಪ್ರವೀಣ್, ದಿಲೀಪ್, ಕೀರ್ತಿರಾಜ್, ಶಿವು, ಜಲೇಂದ್ರ ನಾಯಕ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts