More

    ಸರ್ಕಾರಿ ಶಾಲಾ ಕಟ್ಟಡಗಳಿಗೆ ಹೊಸ ರೂಪ? ಸಿಎಸ್‌ಆರ್ ನಿಧಿ ಸಭೆಯಲ್ಲಿ ಚರ್ಚೆಯಾಗಿದ್ಧೇನು ಗೊತ್ತಾ?

    ಬೆಂಗಳೂರು; ಗ್ರಾಮೀಣ ಭಾಗದಿಂದ ನಗರ ಪ್ರದೇಶಗಳಿಗೆ ಬರುವ ವಲಸೆ ತಪ್ಪಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಸಶಕ್ತೀಕರಣಗೊಳಿಸಲು ಶಿಕ್ಷಣ ಮುಂದಾಗಿದೆ. ರಾಜ್ಯಾದ್ಯಂತ ಒಂದೇ ಮಾದರಿಯಲ್ಲಿ ಶಾಲಾ ಕಟ್ಟಡಗಳನ್ನು ನಿರ್ಮಿಸುವ ಬಗ್ಗೆ ಚರ್ಚಿಸಲಾಗಿದ್ದು, ಈ ಸಂಬಂಧ ಕ್ರಿಯಾ ಯೋಜನೆ ರೂಪಿಸುವಂತೆ ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ.

    ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಬುಧವಾರ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಅನುದಾನ ಸದ್ಬಳಕೆ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹಾಗೂ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಭೆಯಲ್ಲಿ ಚರ್ಚಿಸಲಾಗಿದೆ.

    ಪ್ರತಿ ಪಂಚಾಯಿತಿಗಳಲ್ಲಿ 2ರಿಂದ 3 ಎಕರೆ ಸ್ಥಳವನ್ನು ಹೊಂದಿರುವ ಶಾಲೆಗಳನ್ನು ಗುರುತಿಸಿ ಖಾಸಗಿ ಸಹಭಾಗಿತ್ವದಲ್ಲಿ ಒಂದೇ ಮಾದರಿಯಲ್ಲಿ ಕಟ್ಟಡಗಳನ್ನು ನಿರ್ಮಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಶಾಲೆಗಳಲ್ಲಿ ಕಂಪ್ಯೂಟರ್ ಪ್ರಯೋಗಾಲಯ, ಟಿಂಕರಿಂಗ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಹೆಚ್ಚುವರಿ ಕೊಠಡಿ, ಅಂಗನವಾಡಿ ಕೇಂದ್ರ ಸ್ಥಾಪನೆ, ಶಿಕ್ಷಕರು, ವೃತ್ತಿಪರ ಶಿಕ್ಷಣ ಇತ್ಯಾದಿಗಳನ್ನು ಸಿಎಸ್‌ಆರ್ ನಿಧಿಯಿಂದ ಒದಗಿಸಲು ಸಲಹೆ ಕೇಳಿ ಬಂದಿದೆ.
    ವಿವಿಧ ಇಲಾಖೆಗಳ ಸಮಿತಿ ರಚನೆ:

    ಈ ಯೋಜನೆಯನ್ನು ಯಶಸ್ವಿಗೊಳಿಸಲು ಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಐಟಿ-ಬಿಟಿ, ಕಯಗಾರಿಕೆ ಮತ್ತು ವಾಣಿಜ್ಯೋದ್ಯಮ, ಕೌಶಲಾಭಿವೃದ್ಧಿ ಸೇರಿ ಇತರೆ ಇಲಾಖೆಯನ್ನು ಒಳಗೊಂಡ ಸಮಿತಿ ರಚನೆ ಮಾಡಲು ನಿರ್ದೇಶಿಸಲಾಗಿದೆ ಎಂದು ತಿಳಿದು ಬಂದಿದೆ.

    ಸಭೆಯಲ್ಲಿ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ಕುಮಾರ್ ಸಿಂಗ್, ಆಯುಕ್ತೆ ಬಿ.ಬಿ. ಕಾವೇರಿ, ಪಿಯು ಇಲಾಖೆ ನಿರ್ದೇಶಕಿ ಸಿಂಧು ಬಿ. ರೂಪೇಶ್ ಸೇರಿ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts