More

    ಮನ್​ಮುಲ್​ ಹಾಲು ಹಗರಣ: ಎಚ್.ಡಿ.ಕುಮಾರಸ್ವಾಮಿ ಕೈವಾಡ? ಸ್ಫೋಟಕ ತಿರುವು ಕೊಟ್ಟ ಆಡಿಯೋ

    | ಕೆ.ಎನ್.ರಾಘವೇಂದ್ರ ಮಂಡ್ಯ
    ಮಂಡ್ಯ ಜಿಲ್ಲಾ ಹಾಲು ಒಕ್ಕೂಟ(ಮನ್​ಮುಲ್​)ದಲ್ಲಿ ನಡೆದಿದೆ ಎನ್ನಲಾದ ಹಾಲಿಗೆ ನೀರು ಬೆರೆಸಿ ಕೋಟ್ಯಂತರ ರೂ. ವಂಚಿಸಿರುವ ಪ್ರಕರಣ ಹಳ್ಳ ಹಿಡಿದಿದೆ. ಇದರ ಹಿಂದೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೇ ಇದ್ದಾರೆ ಎಂದು ಕೇಳಿಬರುತ್ತಿದ್ದ ಆರೋಪಕ್ಕೆ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಸ್ಥಳೀಯ ಮುಖಂಡ ಜವರೇಗೌಡ ಮಾತನಾಡಿರುವ ಆಡಿಯೋ ಇಂಬು ಕೊಟ್ಟಿದೆ.

    ಬಹುಕೋಟಿ ರೂ.ಗಳ ಹಗರಣವಾಗಿರುವ ಹಿನ್ನೆಲೆಯಲ್ಲಿ ‘ವಿಜಯವಾಣಿ’ ಈ ಕುರಿತು ಸರಣಿ ಹಾಗೂ ವಿಸ್ತೃತ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಜೂ.14ರಂದು ಪ್ರಕರಣವನ್ನು ಸಿಐಡಿ ತನಿಖೆಗೆ ನೀಡುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದರು. ಆದರೆ ಈವರೆಗೂ ಯಾವುದೇ ಬೆಳವಣಿಗೆಯಾಗಿಲ್ಲ. ಇತ್ತ ಇಲಾಖೆಯಿಂದ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಕೂಡ ಈ ಬಗ್ಗೆ ಮಾತನಾಡಿಲ್ಲ. ಆದರೆ, ಪ್ರಕರಣದ ತನಿಖೆಯನ್ನು ಹಳ್ಳ ಹಿಡಿಸುವ ಹಿಂದೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಕ್ರಿಯವಾಗಿದ್ದಾರೆನ್ನುವ ಮಾತು ಹಲವು ದಿನದಿಂದಲೂ ಕೇಳಿಬರುತ್ತಿದೆ. ಕಾರಣ, ಇವರ ಆಪ್ತರೊಬ್ಬರ ಸಂಬಂಧಿಕರು ಹಗರಣದಲ್ಲಿ ಭಾಗಿಯಾಗಿದ್ದಾರೆನ್ನುವ ಆರೋಪವಿದೆ. ಇದಕ್ಕೆ ಪೂರಕವೆಂಬಂತೆ ಶನಿವಾರ ಆಡಿಯೋವೊಂದು ವೈರಲ್ ಆಗಿದೆ. ಹಗರಣದ ತನಿಖೆಗೆ ಎಚ್​ಡಿಕೆ ಅಡ್ಡಿಪಡಿಸುತ್ತಿದ್ದಾರೆ. ಅಂತೆಯೇ, ಇತ್ತ ಜಿಲ್ಲೆಗೆ ಬಂದಾಗ ತನಿಖೆಯಾಗಲಿ ಎನ್ನುವುದು, ಅತ್ತ ತನಿಖೆ ಮಾಡದಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಒತ್ತಡ ಹಾಕುತ್ತಿದ್ದಾರೆ ಎಂಬುದು ಚಲುವರಾಯಸ್ವಾಮಿ ಹಾಗೂ ಜವರೇಗೌಡ ನಡುವಿನ ಆಡಿಯೋ ಸಂಭಾಷಣೆಯಲ್ಲಿ ಸ್ಪಷ್ಟವಾಗಿದೆ.

    ಇದರೊಟ್ಟಿಗೆ, ಪ್ರಮುಖವಾಗಿ ಮನ್​ಮುಲ್​​ನ ಹಾಲಿ ಆಡಳಿತ ಮಂಡಳಿ ಜೆಡಿಎಸ್ ತೆಕ್ಕೆಯಲ್ಲಿರುವುದರಿಂದ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಪ್ರಭಾವ ಬಳಸಿ ಸೂಪರ್​ಸೀಡ್ ಮಾಡಿಸಲು ಯತ್ನಿಸಿದ್ದಾರೆ ಎನ್ನುವ ಸಂಗತಿಯೂ ಆಡಿಯೋದಲ್ಲಿ ಬಹಿರಂಗವಾಗಿದೆ. ಅಲ್ಲದೆ, ಸೂಪರ್​ಸೀಡ್ ಮಾಡುವುದನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರೇ ತಡೆದಿದ್ದಾರೆ ಎನ್ನುವ ಹಲವು ಮಹತ್ವದ ಅಂಶಗಳಿವೆ. ಒಟ್ಟಾರೆ ಪ್ರಕರಣ ರಾಜಕೀಯದಾಟಕ್ಕೆ ಸಾಕ್ಷಿಯಾಗಿದ್ದರೆ, ಇತ್ತ ಶ್ರಮಪಟ್ಟು ಹಾಲು ಉತ್ಪಾದಿಸಿ, ಡೇರಿಗೆ ಹಾಕಿ ಕೊಟ್ಟಷ್ಟು ಹಣ ಪಡೆದುಕೊಳ್ಳುತ್ತಿರುವ ರೈತರು ಮೂಕಪ್ರೇಕ್ಷಕರಾಗಿದ್ದಾರೆ.
    ಸಿಬಿಐಗೆ ವಹಿಸಲು ಒತ್ತಡ

    ಇದು ನೂರಾರೂ ಕೋಟಿ ರೂ.ಗಳ ಹಗರಣವಾಗಿರುವ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಜಿಲ್ಲೆಯ ವಿವಿಧ ಸಂಘಟನೆಗಳು, ಹಾಲು ಉತ್ಪಾದಕರ ಹೋರಾಟ ಸಮಿತಿ, ರೈತ ಸಂಘ ಆಗ್ರಹಿಸುತ್ತಿವೆ. ಆದರೆ ಇದ್ಯಾವುದಕ್ಕೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಕಾಟಾಚಾರಕ್ಕೆ ಒಂದಷ್ಟು ಅಧಿಕಾರಿಗಳನ್ನು ಅಮಾನತು ಮಾಡಿ ಸುಮ್ಮನಾಗಿದೆ. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

    ಸಮರಕ್ಕೆ ವೇದಿಕೆ ಸಜ್ಜು: ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಎಚ್​ಡಿಕೆ ಅಡ್ಡಿಯಾಗಿದ್ದಾರೆ ಎನ್ನುವುದು ಒಂದೆಡೆಯಾದರೆ, ಜೆಡಿಎಸ್ ಆಡಳಿತ ಮಂಡಳಿಯನ್ನು ಸೂಪರ್​ಸೀಡ್ ಮಾಡಲು ಕಾಂಗ್ರೆಸ್ ನಾಯಕರು ತಂತ್ರ ರೂಪಿಸಿರುವುದು ಇನ್ನೊಂದೆಡೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಆಡಿಯೋ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಸಮರಕ್ಕೆ ವೇದಿಕೆಯಾಗಿದೆ. ಆದ್ದರಿಂದ ಸರ್ಕಾರ ಈ ಆರೋಪವನ್ನು ದೂರ ಮಾಡಿಕೊಳ್ಳುವುದರ ಜತೆಗೆ, ಹಾಲು ಉತ್ಪಾದಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ತ್ವರಿತವಾಗಿ ತೆಗೆದುಕೊಳ್ಳಬೇಕಿದೆ.

    ಕೋಟ್ಯಂತರ ರೂ.ಗಳ ಹಗರಣದ ತನಿಖೆ ತಡವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋ ಬಗ್ಗೆ ಸತ್ಯಾಸತ್ಯತೆ ಗೊತ್ತಿಲ್ಲ. ಏನೇ ಆದರೂ ಶೀಘ್ರವಾಗಿ ತನಿಖೆ ಮಾಡಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು.
    | ಮಧುಚಂದನ್
    ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿ ಅಧ್ಯಕ್ಷ

    ಕರೆ ಸ್ವೀಕರಿಸದ ಎಸ್​ಪಿ: ಹಗರಣದ ತನಿಖೆ ಸಿಐಡಿಗೆ ಹಸ್ತಾಂತರವಾಗಿರುವುದರ ಬಗ್ಗೆ ಮಾಹಿತಿ ಖಚಿತಪಡಿಸಿಕೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಆರ್.ಅಶ್ವಿನಿ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.

    ಸಿಗಂದೂರು ಲಾಂಚ್​ನಿಂದ ನದಿಗೆ ಹಾರಿದ ಮಹಿಳೆ! ಸಾಯಲೆಂದೇ ಬಂದವಳ ಜೀವ ಉಳಿದಿದ್ದೇಗೆ?

    ಗಂಡಂದಿರ ಕಿರುಕುಳ: ತಂಗಿ ಸತ್ತ 17 ದಿನಕ್ಕೆ ಅಕ್ಕನೂ ಸಾವು! ಇವರಿಬ್ಬರ ದುರಂತ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts