More

    ನದಿಯಲ್ಲಿ ಕೊಚ್ಚಿಹೋದ ವ್ಯಕ್ತಿ

    ಕೈಲಾಂಚ: ಹೋಬಳಿಯ ಹುಲಿಕೆರೆ ಗ್ರಾಮದ ಬಳಿ ಮಂಗಳವಾರ ಬೆಳಗ್ಗೆ ಅರ್ಕಾವತಿ ನದಿ ದಾಟುತ್ತಿದ್ದ ಸಬ್ಬಕೆರೆ ಗ್ರಾಮದ ಅಬ್ದುಲ್ ವಾಜಿದ್ (43) ಕೊಚ್ಚಿಹೋಗಿದ್ದಾರೆ.

    ಹುಲಿಕೆರೆ ಗ್ರಾಮದ ಮಸ್ರೂರ್ ಅಲಿಖಾನ್ ಎಂಬುವವರ ಮನೆಗೆ ಕೂಲಿ ಕೆಲಸಕ್ಕೆ ಹೋಗಲು ವಾಜಿದ್ ಸೈಕಲ್​ನಲ್ಲಿ ತೆರಳಿದ್ದಾರೆ. ಕೋಟಹಳ್ಳಿ ಮೂಲಕ ಹೋಗುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಅಕ್ಕಪಕ್ಕದಲ್ಲಿದ್ದವರು ವಾಜಿದ್ ರಕ್ಷಣೆಗೆ ಧಾವಿಸಿದರಾದರೂ ರಕ್ಷಿಸಲಾಗಲಿಲ್ಲ. ಅಗ್ನಿಶಾಮಕ ದಳ ಸಿಬ್ಬಂದಿ ಗಂಟೆಗೂ ಹೆಚ್ಚು ಕಾಲ ಶೋಧ ಕಾರ್ಯನಡೆಸಿ ಮೃತದೇಹವನ್ನು ಹೊರತಂದರು.

    ಕೋಟಹಳ್ಳಿ-ಹುಲಿಕೆರೆ ಮಧ್ಯೆ ಅರ್ಕಾವತಿ ನದಿಗೆ ಸೇತುವೆ ನಿರ್ವಿುಸಿಕೊಡಬೇಕು, ಮೃತ ವ್ಯಕ್ತಿ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಅಕ್ಕಪಕ್ಕದ ಗ್ರಾಮಗಳ ನೂರಾರು ಮಂದಿ ಕನಕಪುರ-ರಾಮನಗರ ರಸ್ತೆಯಲ್ಲಿ ಶವ ಇಟ್ಟು ಪ್ರತಿಭಟನೆ ನಡೆಸಿದರು.

    ತಹಸೀಲ್ದಾರ್ ನರಸಿಂಹಮೂರ್ತಿ, ಉಪತಹಸೀಲ್ದಾರ್ ವಿಲಿಯಂ, ರಾಜಸ್ವ ನಿರೀಕ್ಷಕ ಸ್ವಾಮಿ, ಸರ್ಕಲ್ ಇನ್​ಸ್ಪೆಕ್ಟರ್ ಸುರೇಶ್, ಗ್ರಾ.ಠಾಣೆ ಸಬ್​ಇನ್​ಸ್ಪೆಕ್ಟರ್ ಗಂಗಾಧರ್, ಲೋಕೋಪಯೋಗಿ ಇಲಾಖೆ ಇಇ ವಿಜಯಗೋಪಾಲ್ ಮತ್ತಿತರರು ಇದ್ದರು.

    ಗ್ರಾಮಸ್ಥರಾದ ವೆಂಕಟೇಶ್, ಶಂಕರ್, ಶ್ರೀನಿವಾಸಮೂರ್ತಿ, ನಾಗರಾಜು, ನಾಗೇಶ್, ವೆಂಕಟೇಶ್​ವುೂರ್ತಿ, ಹೊನ್ನದಾಸೇಗೌಡ, ಕಿರಣ್, ದೇವರಾಜು, ರಾಮಚಂದ್ರು, ರುದ್ರಣ್ಣ, ನರಸಿಂಹಮೂರ್ತಿ, ಚಿಕ್ಕಮರಿಯಪ್ಪ, ವೆಂಕಟಾಚಲಪ್ಪ, ಲಿಂಗರಾಜು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

    19ನೇ ಬಲಿ

    ಸ್ಥಳೀಯರು ಮಾಹಿತಿ ನೀಡುವಂತೆ ಹುಲಿಕೆರೆ ಬಳಿ ವಾಜಿದ್ ಸಾವು 19ನೆಯದು. ಕಳೆದ ವರ್ಷ ಹುಲಿಕೆರೆ ಗ್ರಾಮದ ವೃದ್ಧರೊಬ್ಬರು ಸೇರಿ ಮೂವರು, 2 ವರ್ಷಗಳ ಹಿಂದೆ ಮೂವರು ನದಿ ಪಾಲಾಗಿದ್ದಾರೆ.

    ಜಿಲ್ಲಾಧಿಕಾರಿ ಭೇಟಿ

    ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿದ ನಂತರ ರಸ್ತೆಗೆ ಅಡ್ಡವಾಗಿ ನಿಲ್ಲಿಸಿದ್ದ ವಾಹನಗಳು, ಮರದ ದಿಮ್ಮಿಗಳನ್ನು ಪೊಲೀಸರು ತೆರವುಗೊಳಿಸಿ, ಮೃತದೇಹವನ್ನು ರಾಮನಗರ ಜಿಲ್ಲಾಸ್ಪತ್ರೆಗೆ ಸಾಗಿಸಿದರು.

    ನಾಳೆಯೇ ಸೇತುವೆ ಕಾಮಗಾರಿ ಆರಂಭಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೃತ ವ್ಯಕ್ತಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು.

    | ಎಂ.ಎಸ್. ಅರ್ಚನಾ ಜಿಲ್ಲಾಧಿಕಾರಿ, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts