More

    ಮನೆ ಕಟ್ಟಲು ಲೈಸೆನ್ಸ್ ಕಡ್ಡಾಯ; ಪರವಾನಗಿ ಪಡೆಯದವರಿಗೆ ನೋಟಿಸ್ 

    ಹುಳಿಯಾರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರೌಂಡ್ ಮತ್ತು ಒಂದನೇ ಮಹಡಿ ಕಟ್ಟಲು ಅವಕಾಶವಿದ್ದು, ಮೂರ್ನಾಲ್ಕು ಮಹಡಿ ಕಟ್ಟುತ್ತಿರುವ ಬಗ್ಗೆ ದೂರು ಕೇಳಿ ಬರುತ್ತಿದೆ. ಲೈಸೆನ್ಸ್ ಪಡೆಯದೆ ಮನೆ ಕಟ್ಟುವವರಿಗೆ ನೋಟಿಸ್ ನೀಡಿ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.

    ಹುಳಿಯಾರು ಪಟ್ಟಣ ಪಂಚಾಯಿತಿ ಕೌನ್ಸಿಲ್ ಸಭಾಂಗಣದಲ್ಲಿ ಅಧ್ಯಕ್ಷ ಎಚ್.ಎನ್.ಕಿರಣ್ ಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

    ವಿದ್ಯುತ್ ಸಂಪರ್ಕ ಪಡೆಯಲು ಪಟ್ಟಣ ಪಂಚಾಯಿತಿ ಅನುಮತಿ ಬೇಕಿರುವುದಿಲ್ಲ. ಆದರೆ ಅನುಮತಿ ಪಡೆಯದೆ ನಿರ್ಮಾಣ ಮಾಡುತ್ತಿರುವ ಮನೆಗಳಿಗೆ ನೋಟಿಸ್ ನೀಡಬೇಕು. ಅಂತಹ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಬೇಡಿ ಎಂದರು.

    ಕೆಲ ವಾರ್ಡ್‌ಗಳನ್ನು ಕಡೆಗಾಣಿಸಲಾಗುತ್ತಿದೆ ಎಂದು ಸಭೆಯ ಆರಂಭದಲ್ಲಿಯೇ ಅಬೂಬಕರ್ ಸಿದ್ದೀಕ್, ದಸ್ತಗಿರಿ ಸಾಬ್ ಹಾಗೂ ಮಹಮದ್ ಜುಬೇರ್ ಆರೋಪಿಸಿ ಕಳೆದ ಸಭೆಯ ಕೆಲ ನಿರ್ಣಯವನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದು ತಕರಾರು ತೆಗೆದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ ಕಳೆದ ಸಭೆಯಲ್ಲಿನ ನಿರ್ಣಯವನ್ನು ಪುನಃ ಚರ್ಚಿಸಲು ಅವಕಾಶವಿಲ್ಲ. ಸ್ಥಿರೀಕರಿಸಬೇಕಷ್ಟೇ. ಅನವಶ್ಯಕ ಚರ್ಚೆ, ವಾದ ಬೇಡ ಎಂದರು.

    ನಮ್ಮ ವಾರ್ಡ್‌ಗಳಲ್ಲೂ ಅಭಿವೃದ್ಧಿಗೆ ಒತ್ತು ನೀಡಬೇಕು. ರಸ್ತೆ, ಚರಂಡಿ ಆಗಿಯೇ ಇಲ್ಲ. ಅಭಿವೃದ್ಧಿ ಆಗಿರುವ ವಾರ್ಡ್‌ಗಳಿಗೆ ಒತ್ತು ನೀಡುವುದು ಬೇಡ ಎಂದು ಸದಸ್ಯರು ಪ್ರತಿಕ್ರಿಯಿಸಿದರು.

    ಸದಸ್ಯರಾದ ಬಿಬಿ ಫಾತಿಮಾ, ದಸ್ತಗಿರಿ ಸಾಬ್, ರತ್ನಮ್ಮ, ಗಂಗಾಧರಯ್ಯ, ಸಂಧ್ಯಾ ಕಿರಣ್, ಸೈಯದ್ ಜಹೀರ್, ಪ್ರೀತಿ ರಾಘವೇಂದ್ರ, ಗೀತಾ ಬಾಬು, ದಾಸಪ್ಪ, ಪುಟ್ಟರಾಜು, ಇಂಜಿನಿಯರ್ ಮಂಜುನಾಥ್ ಇದ್ದರು.

    ಲೈಸನ್ಸ್ ನವೀಕರಿಸುತ್ತಿಲ್ಲ: ಪಟ್ಟಣ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳಿಗೆ ವ್ಯಾಪಾರ ವಹಿವಾಟು ಲೈಸೆನ್ಸ್ ನವೀಕರಿಸುತ್ತಿಲ್ಲ, ಇದರಿಂದ ಪಟ್ಟಣ ಪಂಚಾಯಿತಿಗೆ ಸಾಕಷ್ಟು ಆದಾಯ ಸೋರಿಕೆಯಾಗುತ್ತಿದೆ ಎಂದು ಬಡಗಿ ರಾಜು, ಜುಬೇರ್ ಗಮನ ಸೆಳೆದರು. ಲೈಸೆನ್ಸ್ ತೆಗೆದುಕೊಳ್ಳದೆ ಪಟ್ಟಣದಲ್ಲಿ ಮನೆ ನಿರ್ಮಿಸಲಾಗುತ್ತಿದೆ. ಮೂರ‌್ನಾಲ್ಕು ಮಹಡಿಗಳನ್ನೂ ಕಟ್ಟಲಾಗುತ್ತಿದೆ. ಈ ಬಗ್ಗೆ ಇಂಜಿನಿಯರ್ ಆಗಲಿ, ಪಟ್ಟಣ ಪಂಚಾಯಿತಿ ಸಿಬ್ಬಂದಿಯಾಗಲಿ ತಮಗೆ ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದರು. ಸಿಬ್ಬಂದಿ ಕೊರತೆ ಇರುವುದರಿಂದ ಸಮಸ್ಯೆಯಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.

    ಅನಧಿಕೃತವಾಗಿ ಲೈಸೆನ್ಸ್ ಇಲ್ಲದೆ ಮನೆ ಕಟ್ಟುವವರಿಗೆ, ಒಂದಕ್ಕೂ ಹೆಚ್ಚು ಅಂತಸ್ತು ಮನೆ ಕಟ್ಟಿರುವವರಿಗೆ ನೋಟಿಸ್ ನೀಡಿ. ಹಣ ವಸೂಲಾತಿಗೆ ಸಿಬ್ಬಂದಿ ಕೊರತೆ ಎಂದು ಸಬುಬು ಹೇಳುವ ಬದಲು ಔಟ್ ಸೋರ್ಸಿಂಗ್ ಮೂಲಕ ವಸೂಲಾತಿ ಹಾಗೂ ಲೈಸೆನ್ಸ್ ನವೀಕರಣ ಪ್ರಕ್ರಿಯೆ ಶುರು ಮಾಡಲು ಸಚಿವರು ಸೂಚಿಸಿದರು.

    ಹೆಚ್ಚಿನ ಬಾಡಿಗೆ ವಸೂಲಿ: ಪಟ್ಟಣದಲ್ಲಿ ಬಹುತೇಕ ಕಡೆ ಮನೆ ಮುಂದಿನ ನಿವೇಶನದಲ್ಲಿ ಪೆಟ್ಟಿಗೆ ಅಂಗಡಿ ಇಡುತ್ತಿದ್ದು, ಹೆಚ್ಚಿನ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಆದರೆ ಪಂಚಾಯಿತಿ ಖಾತೆಯಲ್ಲಿ ಖಾಲಿನಿವೇಶನ ಎಂದೇ ನಮೂದಾಗಿದ್ದು ಇದರಿಂದ ಪಂಚಾಯಿತಿಗೆ ಲುಕ್ಸಾನಾಗುತ್ತಿದೆ ಎಂದು ಸಿದ್ದಿಕ್ ಒತ್ತಾಯಿಸಿದರು.

    ಡಾ.ರಾಜಕುಮಾರ್ ರಸ್ತೆಯಲ್ಲಿ 30- 40 ಅಡಿಯಸ್ಟು ರಸ್ತೆ ಒತ್ತುವರಿಯಾಗಿದ್ದು, ಇಂದಿಗೂ ಪಹಣಿಯಲ್ಲಿ ಗೋಮಾಳ ಎಂದೇ ನಮೂದಾಗುತ್ತಿದೆ.ಈ ಬಗ್ಗೆ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದರು.

    ಲಿಂಗಪ್ಪನಪಾಳ್ಯಕ್ಕೆ ಹೋಗುವ ದಾರಿಯಲ್ಲಿನ ಮುಕ್ತಿಧಾಮದ ಬಳಿ ತ್ಯಾಜ್ಯ ಸುರಿಯುತ್ತಿದ್ದು, ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡದೆ ಬೆಂಕಿ ಹಾಕುತ್ತಿರುವುದರಿಂದ, ಹೊಗೆ ಹೆಚ್ಚಿದೆ ಎಂದು ಹತ್ತನೇ ವಾರ್ಡಿನ ಸದಸ್ಯೆ ಕಾವ್ಯಾರಾಣಿ ಒತ್ತಾಯಿಸಿದರು.

    ವಳಗೆರೆಹಳ್ಳಿಯ ಚಂದ್ರಶೇಖರ್ ರಾವ್ ಸ್ಥಾಯಿ ಸಮಿತಿ ರಚಿಸುವಂತೆ ಕೋರಿದರು. 7ನೇ ವಾರ್ಡಿನ ಹೇಮಂತ್ ಮಾತನಾಡಿ ಹುಳಿಯಾರು ಪಟ್ಟಣ ವ್ಯಾಪ್ತಿಯಲ್ಲಿ ಸರ್ವೇ ನಂಬರ್ 107ರಲ್ಲಿ 5 ಎಕರೆ ಜಾಗ ಖಾಲಿಯಿದ್ದು, ಸೇಂದಿವನ ಎಂದು ನಮೂದಾಗಿದೆ. ಈ ಜಾಗದಲ್ಲಿ ನಿವೇಶನ ರಹಿತರಿಗೆ ನಿವೇಶನ ಹಾಗೂ ಸ್ಮಶಾನಕ್ಕೆ ಜಾಗ ಕಾಯ್ದಿರಿಸಿ ಎಂದರು.

    ಅನುಮೋದನೆ: ಆಂಜನೇಯ ಸ್ವಾಮಿ ದೇವಸ್ಥಾನದ ಹಿಂಭಾಗದಿಂದ ರಾಮ ಗೋಪಾಲ್ ಸರ್ಕಲ್‌ವರೆಗೆ ಸಿಸಿ ಚರಂಡಿ ನಿರ್ಮಾಣ, ವಾಸವಿ ಶಾಲೆ ಮುಂಭಾಗದಲ್ಲಿ ಕೊರೆದಿರುವ ಬೋರ್ವೆಲ್‌ಗೆ ಹೊಸದಾಗಿ ಪಂಪು, ಮೋಟಾರ್,ಸ್ಟಾರ್ಟರ್, ಕೇಬಲ್ ಅಳವಡಿಸಲು ಒಪ್ಪಿಗೆ ನೀಡಲಾಯಿತು. ಮಾಸಿಕ ಸಭೆಯಲ್ಲಿ 2022ರ ಜೂನ್‌ನಿಂದ 2023ರ ಜನವರಿ 23ರವರೆಗೆ ಜಮಾ ಖರ್ಚುಗಳನ್ನು ಓದಲಾಯಿತು. 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ 113 ಲಕ್ಷಗಳಿಗೆ ತಯಾರಿಸಲಾಗಿದ್ದ ಕ್ರಿಯ ಯೋಜನೆಗೆ 63 ಲಕ್ಷ ರೂಪಾಯಿಗೆ ಅನುಮೋದನೆ ದೊರೆತಿದ್ದು, ಬಾಕಿ ಉಳಿದ 50 ಲಕ್ಷ ರೂಪಾಯಿಗೆ ತುರ್ತಾಗಿ ಕ್ರಿಯಾಯೋಜನೆ ರೂಪಿಸಲು ಚರ್ಚಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts