More

    ಎಲಿವಾಳದಲ್ಲಿ ನಾಯಿ ಹೊತ್ತೊಯ್ದ ಚಿರತೆ

    ರಟ್ಟಿಹಳ್ಳಿ: ಕಳೆದ ಐದಾರು ದಿವಸಗಳಿಂದ ಪಟ್ಟಣದ ಹೊರವಲಯದಲ್ಲಿರುವ ದುರ್ಗಾದೇವಿ ದೇವಸ್ಥಾನ ಬಳಿಯ ಕುಮದ್ವತಿ ನದಿ ದಂಡೆ, ರೈತರ ಜಮೀನುಗಳಲ್ಲಿ ಮತ್ತು ಎಲಿವಾಳ-ಮಳಗಿ ಗ್ರಾಮಗಳ ಸರಹದ್ದಿನಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿದೆ. ಇದು ಜನರಲ್ಲಿ ಆತಂಕ ಮೂಡಿಸಿದೆ.

    ಕಳೆದ ವಾರ ಶಿರಗಂಬಿ ಗ್ರಾಮದ ಬಳಿ ಜಮೀನಿನಲ್ಲಿ ಚಿರತೆಯೊಂದು ತನ್ನ ಮರಿಯೊಂದಿಗೆ ಕಾಣಿಸಿಕೊಂಡಿತ್ತು. ಕಳೆದ ನಾಲ್ಕು ದಿನಗಳಿಂದ ದುರ್ಗಾದೇವಿ ದೇವಸ್ಥಾನದ ಬಳಿ ಇರುವ ಹರವಿಶೆಟ್ಟರ್ ಜಮೀನುಗಳಲ್ಲಿ ಚಿರತೆ ತನ್ನ ಮರಿಯೊಂದಿಗೆ ಓಡಾಡುತ್ತಿದೆ. ಇದನ್ನು ರೈತರು ನೋಡಿದ್ದಾರೆ.

    ದೇವಸ್ಥಾನದ ಬಳಿಯ ತಮ್ಮ ಜಮೀನಿಗೆ ನೀರು ಹಾಯಿಸಲು ಮಂಗಳವಾರ ರಾತ್ರಿ ತೆರಳುತ್ತಿದ್ದಾಗ ಬೈಕ್ ಬೆಳಕಿನಲ್ಲಿ ಚಂದ್ರಪ್ಪ ಹುರಕಡ್ಲಿ ಮತ್ತು ವಿನಾಯಕ ಹುರಕಡ್ಲಿ ಅವರಿಗೆ ಚಿರತೆ ಕಂಡಿದೆ. ಇದರಿಂದಾಗಿ ಅವರು ವಾಪಸ್ ಮನೆಗೆ ಬಂದಿದ್ದಾರೆ. ಎಲಿವಾಳ ಗ್ರಾಮದ ಸರಹದ್ದಿನಲ್ಲಿ ಮನೋಹರ ಎಲಿವಾಳ ಅವರ ಜಮೀನಿನಲ್ಲಿರುವ ಕುರಿ ಸಾಕಾಣಿಕೆ ಫಾರ್ಮ್‌ಹೌಸ್ ಬಳಿ ನಾಯಿಯನ್ನು ಸೋಮವಾರ ರಾತ್ರಿ ಚಿರತೆ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಪಟ್ಟಣದ ಈ ಐತಿಹಾಸಿಕ ದೇವಸ್ಥಾನಕ್ಕೆ ದಿನನಿತ್ಯ ಬೆಳಗಿನ ಜಾವ ಮತ್ತು ಸಂಜೆ ಭಕ್ತರು ದೇವರ ದರ್ಶನಕ್ಕೆ ತೆರಳುತ್ತಾರೆ. ಈ ಭಾಗದಲ್ಲಿ ಪದೇಪದೆ ಚಿರತೆ ಕಾಣಸಿಕೊಳ್ಳುತ್ತಿರುವುದು ಭಕ್ತರಲ್ಲಿ ಭಯ ಮೂಡಿದೆ.

    ರಾತ್ರಿ ವೇಳೆ ಹೆಸ್ಕಾಂ ವಿದ್ಯುತ್ ಪೂರೈಸುವುದನ್ನು ತಪ್ಪಿಸಿ ಹಗಲಿನಲ್ಲಿ ಹೆಚ್ಚು ವಿದ್ಯುತ್ ಸೌಲಭ್ಯ ಒದಗಿಸಿದರೆ ರೈತರು ಜಮೀನುಗಳಿಗೆ ನೀರು ಹಾಯಿಸಿಕೊಳ್ಳಲು ಅನುಕೂಲವಾಗುತ್ತದೆ. ಅರಣ್ಯ ಇಲಾಖೆಯವರು ಶೀಘ್ರವೇ ಚಿರತೆಯ ಸೆರೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇದರಿಂದ ಭಕ್ತರಲ್ಲಿನ ಆತಂಕ ದೂರವಾಗುತ್ತದೆ ಎಂದು ದೇವಸ್ಥಾನದ ಟ್ರಸ್ಟ್ ಕಾರ್ಯದರ್ಶಿ ರವಿ ಹರವಿಶೆಟ್ಟರ್ ಹೇಳಿದರು.

    ಜಮೀನುಗಳಲ್ಲಿನ ಜೋಳ, ಸೂರ್ಯಕಾಂತಿ, ಅಡಕೆ ಬೆಳೆಗಳಿಗೆ ನೀರು ಹಾಯಿಸಲು ರಾತ್ರಿ ವೇಳೆ ರೈತರು ಹೆಚ್ಚು ಓಡಾಡುತ್ತಾರೆ. ಚಿರತೆ ಮತ್ತು ಮರಿಗಳು ಪದೇಪದೆ ಪ್ರತ್ಯಕ್ಷವಾಗುತ್ತಿರುವುದು ಆತಂಕ ತಂದಿದೆ. ಚಿರತೆ ನಾಯಿಗಳ ಮೇಲೆ ದಾಳಿ ಮಾಡಿರುವುದರಿಂದ ಕೆಲವೆಡೆ ನಾಯಿಗಳ ಕಳೆಬರ ಬಿದ್ದಿವೆ. ಅರಣ್ಯ ಇಲಾಖೆ ಶೀಘ್ರವೇ ಚಿರತೆ ಸೆರೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು.
    ಕುಮಾರ ಹರವಿಶೆಟ್ಟರ್, ರೈತ ರಟ್ಟಿಹಳ್ಳಿ

    ಪದೇಪದೆ ದೇವಸ್ಥಾನದ ಸುತ್ತಮುತ್ತ ಚಿರತೆ ಪ್ರತ್ಯಕ್ಷವಾಗುತ್ತಿರುವುದು ಮತ್ತು ನಾಯಿ ಮೇಲೆ ಚಿರತೆ ದಾಳಿ ಮಾಡಿರುವುದನ್ನು ಗಮನಿಸಲಾಗಿದೆ. ಮೇಲಧಿಕಾರಿಗಳ ನಿರ್ದೇಶನದಂತೆ ಎಲಿವಾಳದ ಸರಹದ್ದಿನಲ್ಲಿ ಮನೋಹರ ಎಲಿವಾಳ ಅವರ ಜಮೀನಿನ ಕುಮದ್ವತಿ ನದಿ ದಂಡೆಯ ಬಳಿ ಬುಧವಾರ ಬೋನಿನ ವ್ಯವಸ್ಥೆ ಮಾಡಲಾಗಿದೆ. ಸಿಬ್ಬಂದಿ ಹೆಚ್ಚಿನ ನಿಗಾ ವಹಿಸಿದ್ದಾರೆ.
    ಸಂತೋಷ ಆವಕ್ಕನವರ, ಉಪವಲಯ ಅರಣ್ಯಾಧಿಕಾರಿ ರಟ್ಟಿಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts