More

    ನಂಜನಗೂಡಿನಲ್ಲಿ ಫಲಿಸದ ಶಾಂತಿಸಭೆ

    ನಂಜನಗೂಡು: ಶ್ರೀಕಂಠೇಶ್ವರಸ್ವಾಮಿ ದೇವಾಲಯ ವತಿಯಿಂದ ಡಿ. 26ರಂದು ನಡೆದ ಅಂಧಕಾಸುರನ ವಧೆ ಧಾರ್ಮಿಕ ಕಾರ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರ ಜಿಲ್ಲಾಧಿಕಾರಿ ಆರ್.ಲೋಕನಾಥ್ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ಶಾಂತಿಸಭೆ ಫಲಪ್ರದವಾಗಲಿಲ್ಲ.


    ಪಟ್ಟಣದ ಮಿನಿ ವಿಧಾನಸೌಧದಲ್ಲಿ ಶಾಂತಿಸಭೆ ಆಯೋಜಿಸಲಾಗಿತ್ತು. ದಲಿತ ಪರ, ರೈತ ಪರ ಸಂಘಟನೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.


    ಸಭೆಯಲ್ಲಿ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಶ್ರೀನಿವಾಸರೆಡ್ಡಿ, ಅಂಧಕಾಸುರನ ವಧೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ, ಉತ್ಸವಮೂರ್ತಿಗಳಿಗೆ ಅಪಚಾರ ಎಸಗಿದ್ದನ್ನು ವಿರೋಧಿಸಿರುವ ಮತ್ತು ಅಂದಿನ ಘಟನೆ ವಿರುದ್ಧ ಧ್ವನಿ ಎತ್ತಿರುವವರ ಪೈಕಿ ಕೆಲವರಿಗೆ ಮಾತ್ರ ಸಭೆಯ ಮಾಹಿತಿ ನೀಡಿ, ಹಲವರಿಗೆ ಮಾಹಿತಿಯನ್ನೇ ಕೊಟ್ಟಿಲ್ಲ. ನಾನು ಕೆಲಸದ ನಿಮಿತ್ತ ಮಿನಿ ವಿಧಾನಸೌಧಕ್ಕೆ ಬಂದವನು ಸಭೆ ನಡೆಯುವುದನ್ನು ತಿಳಿದು ಒಳಗಡೆ ಬಂದಿದ್ದೇನೆ. ಹಾಗಾಗಿ, ಮತ್ತೊಂದು ದಿನ ಶಾಂತಿಸಭೆ ಆಯೋಜಿಸುವಂತೆ ಹೇಳಿ ಸಭೆಯಿಂದ ಹೊರ ನಡೆದರು.


    ಈ ವೇಳೆ ಅವರನ್ನು ಹಿಂಬಾಲಿಸಿದ ಮುಖಂಡರನ್ನು ಮನವೊಲಿಸಿದ ಎಡಿಸಿ ಲೋಕನಾಥ್, ಎಲ್ಲರ ಅಹವಾಲು ಆಲಿಸಿ ಸಮಸ್ಯೆ ಇತ್ಯರ್ಥಪಡಿಸುವುದೇ ಉದ್ದೇಶವಾಗಿದೆ. ಎಲ್ಲರಿಗೂ ಮಾಹಿತಿ ತಲುಪಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಿದೆ. ಸಭೆಗೆ ಬಂದು ಅರ್ಧಕ್ಕೆ ಎದ್ದು ಹೋಗುವುದು ಸರಿಯಲ್ಲವೆಂದು ಹೇಳಿ ಮುಖಂಡರನ್ನು ಸಭೆಯಲ್ಲಿ ಕೂರುವಂತೆ ಮಾಡಿದರು.


    ಎಎಸ್ಪಿ ಡಾ.ನಂದಿನಿ ಮಾತನಾಡಿ, ಎರಡು ಕಡೆಯಿಂದ ಎಫ್‌ಐಆರ್ ದಾಖಲಾದ ಮೇಲೆ ನಮಗೆ ಕೆಲವು ರೀತಿ ನೀತಿ ಇರುತ್ತವೆ. ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗಿರುವುದರಿಂದ ಅದಕ್ಕೆ ಕಾಲಾವಕಾಶ ಬೇಕಿದೆ. ಸಾಕ್ಷ್ಯ, ದಾಖಲೆಗಳನ್ನು ಕಲೆ ಹಾಕಲಾಗುತ್ತಿದೆ. ಧಾರ್ಮಿಕ ವಿಚಾರ ಆಗಿರುವುದರಿಂದ ಸೂಕ್ಷ್ಮವಾಗಿ ಕಾರ್ಯನಿರ್ವಹಣೆ ಮಾಡಬೇಕಾಗುತ್ತದೆ ಎಂದರು.


    ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಮನಬಂದಂತೆ ಸಂದೇಶಗಳನ್ನು ಹರಿಯ ಬಿಡುತ್ತಿರುವುದು ಗಮನಕ್ಕೆ ಬಂದಿದೆ. ಈ ತಪ್ಪು ಮರುಕಳಿಸಿದರೆ ಕ್ರಮ ಕೈಗೊಳ್ಳಲಾಗುವುದು. ಪ್ರಕರಣ ತನಿಖೆ ಹಂತದಲ್ಲಿ ಇರುವುದರಿಂದ ಎಲ್ಲರೂ ಸಹಕರಿಸಬೇಕು. ನಂಜನಗೂಡು ಬಂದ್ ಕರೆಯನ್ನು ಹಿಂಪಡೆಯಬೇಕೆಂದು ಮನವಿ ಮಾಡಿದರು.


    ಎಡಿಸಿ ಆರ್.ಲೋಕನಾಥ್ ಮಾತನಾಡಿ, ಎರಡು ಗುಂಪಿನ ನಡುವೆ ಭಾವನೆಗಳ ಸಂಘರ್ಷ ಹೊರತುಪಡಿಸಿ, ಪರಸ್ಪರ ಅನ್ಯೋನ್ಯದಿಂದ ಇರುವುದನ್ನು ಸಭೆಯಲ್ಲಿ ಗಮನಿಸಿದ್ದೇನೆ. ಘಟನೆ ಕುರಿತು ತನಿಖೆ ನಡೆಯುತ್ತಿರುವುದರಿಂದ ಸತ್ಯಾಸತ್ಯತೆ ಹೊರಬರಲಿದೆ. ಹಾಗಾಗಿ, ಬಂದ್ ಕರೆ ಹಿಂಪಡೆಯುವಂತೆ ಕೋರಿದರು.


    ಇದಕ್ಕೆ ಪ್ರತಿಕ್ರಿಯಿಸಿದ ನಗರಸಭಾ ಸದಸ್ಯ ಕಪಿಲೇಶ್, ಬಂದ್ ಆಚರಿಸುವ ಕುರಿತು ಹಲವು ಸಂಘಟನೆಗಳು ನಿರ್ಧಾರ ಮಾಡಿರುವುದರಿಂದ ನಾವು ನಾಲ್ಕು ಜನ ನಿರ್ಧಾರ ತಿಳಿಸಲು ಸಾಧ್ಯವಿಲ್ಲ. ಎಲ್ಲರೊಂದಿಗೂ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು.


    ಎಂಜಲು ನೀರು ಎರಚಿರುವುದಾಗಿ ವಿಷಯವನ್ನು ತಿರುಚಲಾಗಿದೆ. ತನಿಖೆ ಮೂಲಕ ಸತ್ಯಾಸತ್ಯತೆಯನ್ನು ಬಯಲಿಗೆಳೆದು, ಯಾರೇ ತಪ್ಪೆಸಗಿದ್ದರೂ ಶಿಕ್ಷೆಗೆ ಗುರಿಪಡಿಸುವಂತೆ ದಸಂಸ ಜಿಲ್ಲಾ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್, ಶಂಕರಪುರ ಸುರೇಶ್ ಒತ್ತಾಯಿಸಿದರು.


    ಮಹಿಷಾಸುರ ರಾಕ್ಷಸನೋ, ರಾಜನೋ ಎಂಬ ಬಗ್ಗೆ ಇನ್ನೂ ವ್ಯಾಖ್ಯಾನ ನಡೆಯುತ್ತಿದೆ. ಇಂತಹ ವ್ಯಕ್ತಿಯ ಭಾವಚಿತ್ರವಿಟ್ಟು ಸಂಹಾರ ಮಾಡುವ ಕಾರ್ಯಕ್ಕೆ ನಾವು ಆಕ್ಷೇಪ ವ್ಯಕ್ತಪಡಿಸಿದೆವು. ಅರ್ಚಕರು ತಾಳ್ಮೆಯಿಂದ ನಡೆದುಕೊಳ್ಳದೆ ಗೊಂದಲ ಸೃಷ್ಟಿಸಿದರು ಎಂದು ಆಪಾದಿಸಿದರು.


    ಮಹಿಷಾಸುರನಿಗೂ, ನಂಜುಂಡೇಶ್ವರನಿಗೂ ಸಂಬಂಧವೇ ಇಲ್ಲ. ಅರ್ಚಕರು ಮಹಿಷಾಸುರ ಚಿತ್ರ ಬಳಸಿ ನಂಜುಂಡೇಶ್ವರನಿಗೆ ಅಪಮಾನ ಮಾಡಿದ್ದಾರೆ. ಹಾಗಾಗಿ, ಅರ್ಚಕರು ಹಾಗೂ ದೇವಾಲಯದ ಕಾರ್ಯನಿರ್ವಹಣಾಧಿಕಾರಿಯನ್ನು ಅಮಾನತುಗೊಳಿಸುವಂತೆ ತಾ.ಪಂ. ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶ್‌ರಾಜ್ ಒತ್ತಾಯಿಸಿದರು.

    ಮುಜರಾಯಿ ಇಲಾಖೆ ಹೊರತಂದಿರುವ ದೇವಾಲಯದ ಕೈಪಿಡಿಯಂತೆಯೇ ಎಲ್ಲ ಧಾರ್ಮಿಕ ಆಚರಣೆಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ದೇವತಾಕಾರ್ಯ ಹೊರತುಪಡಿಸಿ ಬೇರೆ ಕೆಲಸ ಮಾಡಿಲ್ಲ ಎಂದು ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಪ್ರಧಾನ ಆಗಮಿಕ ಜೆ.ನಾಗಚಂದ್ರ ದೀಕ್ಷಿತ್ ಹೇಳಿದರು.


    ಹಿರಿಯ ಅರ್ಚಕ ನೀಲಕಂಠ ದೀಕ್ಷಿತ್ ಮಾತನಾಡಿ, ತಲೆತಲಾಂತರಗಳಿಂದ ಇದೇ ಚಿತ್ರವನ್ನು ಬಳಸಿಕೊಂಡು ಅಂಧಕಾಸುರನ ವಧೆ ಕಾರ್ಯಕ್ರಮ ಮಾಡಿಕೊಂಡು ಬರಲಾಗುತ್ತಿದೆ. ತಮಿಳುನಾಡಿನ ಚಿದಂಬರಂ, ತಲಕಾಡು, ಚಾಮುಂಡಿಬೆಟ್ಟ, ಮೈಸೂರು ಅರಮನೆಯಲ್ಲೂ ಈ ಕಾರ್ಯ ಮಾಡಲಾಗುತ್ತಿದೆ. ಅಂಧಕಾಸುರನ ಸಂಹಾರವೇ ಹೊರತು, ಮಹಿಷಾಸುರ ಸಂಹಾರ ಅಲ್ಲ ಎಂದು ಸ್ಪಷ್ಟಪಡಿಸಿದರು.


    ಬಂದ್‌ಗೆ ಕರೆ ನೀಡಿ, ಗೃಹ ಸಚಿವರಿಗೆ ದೂರು ನೀಡಿದ ಮೇಲೆ ಜಿಲ್ಲಾಡಳಿತಕ್ಕೆ ಶಾಂತಿ ಸಭೆಯ ನೆನಪಾಗಿದೆ. ಘಟನೆಯ ಮರು ದಿನವೇ ಪರಿಸ್ಥಿತಿಯನ್ನು ತಹಬದಿಗೆ ತರಬೇಕಿತ್ತು. ಅಂಧಕಾಸುರನ ವಧೆ ಬಗ್ಗೆ ಆಕ್ಷೇಪ ಇದ್ದರೆ ದೂರು ನೀಡಬಹುದಿತ್ತು. ನೂರಾರು ಭಕ್ತರು ಸೇರುವ ಜಾಗದಲ್ಲಿ ಉತ್ಸವಮೂರ್ತಿಗಳಿಗೆ ನೀರು ಎರಚಿ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಆದರೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದೆ, ಭಕ್ತರ ಮೇಲೆಯೇ ಸುಳ್ಳು ದೂರು ದಾಖಲಿಸಲಾಗಿದೆ. ಶಾಂತಿಸಭೆ ನೆಪದಲ್ಲಿ ತಿಪ್ಪೆ ಸಾರಿಸುವ ಕೆಲಸ ಬೇಡ ಎಂದು ನಗರಸಭಾ ಸದಸ್ಯ ಕಪಿಲೇಶ್ ಹರಿಹಾಯ್ದರು.


    ಉಪ ವಿಭಾಗಾಧಿಕಾರಿ ರಕ್ಷಿತ್, ತಹಸೀಲ್ದಾರ್ ಶಿವಪ್ರಸಾದ್, ಡಿವೈಎಸ್ಪಿ ಗೋವಿಂದರಾಜು, ಪಟ್ಟಣ ಠಾಣೆ ಇನ್ಸ್‌ಪೆಕ್ಟರ್ ಬಸವರಾಜು ಇದ್ದರು.
    ಶ್ರೀಕಂಠೇಶ್ವರಸ್ವಾಮಿ ಭಕ್ತಮಂಡಳಿ ಜ. 4ರಂದು ಕರೆ ನೀಡಿರುವ ನಂಜನಗೂಡು ಬಂದ್ ನಿಶ್ಚಿತವಾಗಿದೆ. ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಅಹವಾಲು ಆಲಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಭಕ್ತಮಂಡಳಿ ಘೋಷಣೆ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts