More

    ಹೊಲಕ್ಕೆ ತೆರಳುವ ರಸ್ತೆಗೆ ಬೇಲಿ ಹಾಕಿದ ರೈತ

    ಹಾನಗಲ್ಲ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ವಿುಸಲಾದ ಹೊಲಕ್ಕೆ ತೆರಳುವ ರಸ್ತೆಗೆ ರೈತನೊಬ್ಬ ಬೇಲಿ ಹಾಕಿದ ಕಾರಣ, ಒಂದು ತಿಂಗಳಿನಿಂದ ಅಂದಾಜು 22 ಎಕರೆ ಪ್ರದೇಶದಲ್ಲಿ ಕೊಯ್ಲಿಗೆ ಬಂದ ಫಸಲು ಹಾಗೇ ಉಳಿದುಕೊಂಡಿದೆ.

    ತಾಲೂಕಿನ ಶಿವಪುರ ಗ್ರಾಮದ ಧರ್ವ ಕಾಲುವೆ ಕೆಳಭಾಗದ 9 ಜನ ರೈತರ ಜಮೀನುಗಳಿಗೆ ತೆರಳಲು 2016ರಲ್ಲಿ ಭೂಮಿ ನೀಡಿದ್ದ ರೈತ ಅಶೋಕಗೌಡ ಪಾಟೀಲ, ಎರಡು ದಿನಗಳ ಹಿಂದೆ ರಸ್ತೆಗೆ ಬೇಲಿ ಹಾಕಿಕೊಂಡು ಜನ-ಜಾನುವಾರು ಸೇರಿ ಯಾವುದೇ ವಾಹನಗಳು ಓಡಾಡದಂತೆ ನಿರ್ಬಂಧಿಸಿದ್ದಾನೆ.

    50 ವರ್ಷಗಳಿಂದ ಇದೇ ರಸ್ತೆ ಮೂಲಕ ರೈತರು ತಮ್ಮ ಹೊಲಗಳಿಗೆ ತೆರಳುತ್ತಿದ್ದರು. ಆದರೆ, ಅಶೋಕಗೌಡ 2016ರಲ್ಲಿ ಓಡಾಟಕ್ಕೆ ತಕರಾರು ಎತ್ತಿದ್ದರಿಂದ ಗ್ರಾಮಸ್ಥರೆಲ್ಲ ಅವರ ಮನವೊಲಿಸಿ, ಈ ರಸ್ತೆ ಅವಲಂಬಿಸಿರುವ 9 ರೈತರಿಂದ 2 ಲಕ್ಷ ರೂ. ಸಂಗ್ರಹಿಸಿ ಅವರಿಗೆ ಕೊಡಿಸಿದ್ದರು.

    ಬಸವರಾಜ ಉತ್ತಂಗಿ ಎಂಬವರೊಂದಿಗೆ ಕೊಳವೆ ಬಾವಿ ಕೊರೆಸುವ ವಿಷಯಕ್ಕೆ ಉಂಟಾದ ಮನಸ್ಥಾಪವೇ ಅಶೋಕಗೌಡ ಪಾಟೀಲ ರಸ್ತೆ ಬಂದ್ ಮಾಡಲು ಕಾರಣ ಎನ್ನಲಾಗಿದೆ.

    ಸಮಸ್ಯೆ ಬಗೆಹರಿಸುವಂತೆ ಭಾರತೀಯ ಕೃಷಿ ಕಾರ್ವಿುಕ ರೈತ ಸಂಘಟನೆಯಿಂದ ತಹಸೀಲ್ದಾರರಿಗೆ ಹಾಗೂ ತಾ.ಪಂ. ಇಒ ಅವರಿಗೆ ಮನವಿ ಸಲ್ಲಿಸಲಾಗಿದೆ. ಕಂದಾಯ ಇಲಾಖೆ ಹಾಗೂ ಗ್ರಾ.ಪಂ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವವರೆಗೆ ರಸ್ತೆಯ ಜಾಗವನ್ನು ಉಳುಮೆ ಮಾಡದಂತೆ, ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಪಿಡಿಒ ನೋಟಿಸ್ ನೀಡಿದ್ದರು. ಆದರೆ, ಇದನ್ನು ಲೆಕ್ಕಿಸದೇ ಅಶೋಕಗೌಡ ಪಾಟೀಲ ರಸ್ತೆಯನ್ನು ಸಾಗುವಳಿ ಮಾಡಿ, ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.

    ಗೊಂದಲದ ಗೂಡು: ‘ಈ ವಿವಾದಿತ ರಸ್ತೆ ನಿರ್ಮಾಣ ಕಾರ್ಯಕ್ಕೆ ನಾವೇ 160 ಟ್ರ್ಯಾಕ್ಟರ್ ಲೋಡ್ ಕಲ್ಲು-ಮಣ್ಣು ಹಾಕಿದ್ದು, ಸ್ವಂತ ಖರ್ಚಿನಲ್ಲಿ ನಿರ್ಮಾಣ ಮಾಡಿದ್ದೆವು. ಆದರೆ, ಈ ಕಾಮಗಾರಿಗಳ ಫೋಟೋಗಳನ್ನು ಸೆರೆ ಹಿಡಿದಿದ್ದ ಗ್ರಾ.ಪಂ. ಅಧಿಕಾರಿಗಳು ಉದ್ಯೋಗ ಖಾತ್ರಿ ಕಾಮಗಾರಿ ಎಂದು ಬಿಂಬಿಸಿ 3 ಲಕ್ಷ ರೂ. ಹಣ ಲಪಟಾಯಿಸಿದ್ದಾರೆ. ಕೆಲಸ ಮಾಡಿದ್ದು ನಾವು, ಹಣ ಹೊಡೆದಿದ್ದು ಅಧಿಕಾರಿಗಳು’ ಎಂದು ಈ ರಸ್ತೆ ಅವಲಂಬಿಸಿರುವ ಬಸವರಾಜ ಉತ್ತಂಗಿ, ಯಲ್ಲಪ್ಪ ಹೆಗಡೆ, ರವಿ ಉತ್ತಂಗಿ, ರಾಯಪ್ಪ ಕವಣೆ, ಭರಮಪ್ಪ ಉತ್ತಂಗಿ, ಅಪ್ಪಣ್ಣ ಕವಣೆ, ಸುಭಾಸ ಉತ್ತಂಗಿ, ಶಿವಮೂರ್ತಿ ಉತ್ತಂಗಿ, ಮಾಲತೇಶ ಉತ್ತಂಗಿ, ಭರಮಪ್ಪ ಗಾವಡೆ ಅವರು ಆರೋಪಿಸಿದ್ದಾರೆ. ಇಷ್ಟೆಲ್ಲ ಖರ್ಚು ಮಾಡಿ ನಿರ್ವಿುಸಿದ ರಸ್ತೆಯನ್ನು ಏಕಾಏಕಿ ಬಂದ್ ಮಾಡಿದರೆ ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿವಾದ ಮತ್ತೊಂದು ಸ್ವರೂಪ ಪಡೆದುಕೊಳ್ಳುವ ಹಂತ ತಲುಪಿದ್ದು, ಗೊಂದಲದ ಗೂಡಾಗಿದೆ.

    ರೈತ ಬಸವರಾಜ್ ಉತ್ತಂಗಿ ನನ್ನ ಹೊಲದ ಬದುವಿನಲ್ಲಿ ಕೊಳವೆ ಬಾವಿ ಕೊರೆಸುವಾಗ ತಕರಾರು ಮಾಡಿದ್ದರೂ ರಾತ್ರಿ ವೇಳೆ ಕೊಳವೆ ಬಾವಿ ತೋಡಿಸಿದ್ದಾರೆ. ಇದರಿಂದ ನನ್ನ ಕೊಳವೆ ಬಾವಿಗೆ ಹಾನಿಯಾಗುತ್ತದೆ. ಈ ಕಾರಣಕ್ಕೆ ನಾನೇ ನೀಡಿದ್ದ ಜಾಗವನ್ನು ಮರಳಿ ಪಡೆದಿದ್ದೇನೆ. ಗ್ರಾಮಸ್ಥರ ಒತ್ತಾಯದ ಮೇರೆಗೆ 6 ಅಡಿ ರಸ್ತೆಗೆ ಭೂಮಿ ನೀಡಿದ್ದೆ. ಬೇಕಿದ್ದರೆ ರೈತರು ನೀಡಿದ್ದ ಹಣ ಮರಳಿಸಲು ಸಿದ್ಧನಿದ್ದೇನೆ.

    | ಅಶೋಕಗೌಡ ಪಾಟೀಲ, ರಸ್ತೆ ಬಂದ್ ಮಾಡಿದ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts