More

    21 ವರ್ಷದಿಂದ ಪ್ರತ್ಯೇಕ ವಾಸ… ಇಂಥ ಸಂಬಂಧ ಒಗ್ಗೂಡಿಸುವುದರಲ್ಲಿ ಅರ್ಥವಿಲ್ಲ ಎಂದು ವಿಚ್ಛೇದನ ನೀಡಿದ ಹೈಕೋರ್ಟ್​

    ಬೆಂಗಳೂರು: ಮದುವೆಯಾದ ಎರಡೇ ತಿಂಗಳಿಗೆ ಬೇರ್ಪಟ್ಟು 21 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ದಂಪತಿಗೆ ವಿಚ್ಛೇದನ ನೀಡಿರುವ ಹೈಕೋರ್ಟ್​, ಇಂಥ ಸಂಬಂಧವನ್ನು ಒಟ್ಟುಗೂಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಪತ್ನಿಯಿಂದ ವಿಚ್ಛೇದನ ಕೋರಿ ತರೀಕೆರೆಯ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅಜಿರ್ಯನ್ನು ಇತ್ತೀಚೆಗೆ ಮಾನ್ಯ ಮಾಡಿರುವ ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ.ಎಸ್​. ಹೇಮಲೇಖಾ ಅವರಿದ್ದ ಪೀಠ ಈ ಆದೇಶ ಮಾಡಿದೆ.

    ಹೈಕೋರ್ಟ್​ ಹೇಳಿದ್ದೇನು?: ಪತಿ-ಪತ್ನಿ 21 ವರ್ಷಗಳಿಂದಲೂ ಪ್ರತ್ಯೇಕವಾಗಿ ವಾಸವಿದ್ದಾರೆ. ಈ ಅವಧಿಯಲ್ಲಿ ಅವರು ಒಂದಾಗುವ ಮನಸು ಮಾಡಿಲ್ಲ. ಸದ್ಯ ದಂಪತಿಗೆ 56 ವರ್ಷ ವಯಸ್ಸು ಆಗಿದೆ. ವಿಚ್ಛೇದನ ಬೇಡ ಎನ್ನುತ್ತಿರುವ ಪತ್ನಿ ಸಹ ವೈವಾಹಿಕ ಹಕ್ಕುಗಳ ಮರುಸ್ಥಾಪನೆಗೆ ಅರ್ಜಿ ಸಲ್ಲಿಸಿಲ್ಲ. ಬದಲಿಗೆ ಜೀವನಾಂಶಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮಾಸಿಕ ಸಾವಿರ ರೂ. ಇದ್ದ ಜೀವನಾಂಶ ಈಗ 20 ಸಾವಿರ ರೂ.ಗೆ ಏರಿಕೆಯಾಗಿದೆ. ಈ ಮಧ್ಯೆ ಪತಿ ಬೇರೊಂದು ಮದುವೆಯಾಗಿದ್ದು, ಎರಡನೇ ಪತ್ನಿಗೆ ಇಬ್ಬರು ಮಕ್ಕಳು ಜನಿಸಿದ್ದಾರೆ. ಇಂಥ ಸಂದರ್ಭದಲ್ಲಿ ವಿಚ್ಛೇದನ ನೀಡದಿದ್ದರೆ ಅರ್ಜಿದಾರ ಪತಿ ಹಾಗೂ ಪ್ರತಿವಾದಿ ಪತ್ನಿ ಮತ್ತಷ್ಟು ವರ್ಷ ನೆಮ್ಮದಿ ಇಲ್ಲದ ಬದುಕು ನಡೆಸಬೇಕಾದ ಸ್ಥಿತಿ ಎದುರಾಗುತ್ತದೆ. ಸುದೀರ್ಘ ಸಮಯದಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿರುವ ಅವರ ವೈವಾಹಿಕ ಸಂಬಂಧ ಸಂಪೂರ್ಣವಾಗಿ ಮುರಿದು ಬಿದ್ದಿದೆ. ಇಂಥ ಸಂಬಂಧವನ್ನು ಒಗ್ಗೂಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಆದ್ದರಿಂದ, ವಿಚ್ಛೇದನಕ್ಕೆ ಇದು ಅರ್ಹ ಪ್ರಕರಣವಾಗಿದೆ ಎಂಬ ತೀರ್ಮಾನಕ್ಕೆ ಬಂದ ಹೈಕೋರ್ಟ್​, ದಂಪತಿಗೆ ವಿಚ್ಛೇದನ ನೀಡಿದ್ದು, ವಿಚ್ಛೇದಿತ ಪತ್ನಿಗೆ ಜೀವನಾಂಶವಾಗಿ 30 ಲಕ್ಷ ರೂ. ನೀಡುವಂತೆ ಅರ್ಜಿದಾರ ಪತಿಗೆ ನಿರ್ದೇಶಿಸಿದೆ.

    ಪ್ರಕರಣವೇನು?: ಚಿಕ್ಕಮಗಳೂರಿನ ಕಡೂರಿನಲ್ಲಿ 1999ರ ಜೂ.24ರಂದು ದಂಪತಿ ವಿವಾಹವಾಗಿದ್ದರು. ಅದಾದ ಎರಡು ತಿಂಗಳಲ್ಲಿ ಪತ್ನಿ ಗಂಡನ ಮನೆ ಬಿಟ್ಟು ತವರು ಮನೆಗೆ ತೆರಳಿದ್ದರು. ಇಬ್ಬರನ್ನೂ ಒಟ್ಟುಗೂಡಿಸುವ ನಿಟ್ಟಿನಲ್ಲಿ ಪಾಲಕರು ಹಲವು ಬಾರಿ ರಾಜೀ ಸಂಧಾನ ನಡೆಸಿದ್ದರೂ, ಪತ್ನಿ ಮಾತ್ರ ಪತಿಯ ಮನೆಗೆ ಬಂದಿರಲಿಲ್ಲ. ಇದರಿಂದ, ಪ್ರಕರಣ ಮೊದಲು ಕೌಟುಂಬಿಕ ನ್ಯಾಯಾಲಯ ಆನಂತರ ಹೈಕೋರ್ಟ್​ ಮೆಟ್ಟಿಲೇರಿತ್ತು.

    ಅಂತ್ಯಸಂಸ್ಕಾರಕ್ಕೆ ಚಿತೆ ತಯಾರಿ ನಡೆಯುತ್ತಿತ್ತು… ಅಷ್ಟರಲ್ಲಿ ಆತ ಕಣ್ಣುಬಿಟ್ಟು ಉಸಿರಾಡಿದ!

    ನಾನು 4 ತಿಂಗಳ ಗರ್ಭಿಣಿ.. ಪ್ಲೀಸ್​ ನೀವೆಲ್ಲ ನನಗೊಂದು ಸಹಾಯ​ ಮಾಡಿ… ಮಗಳ ಸಾವಿನ ನೋವಲ್ಲೂ ಅಮೃತಾ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts