More

    ನೇಕಾರನ ಬದುಕು ಅತಂತ್ರ, ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತ, ಕೆಲಸ ನಿಲ್ಲಿಸಿದ ಮಗ್ಗಗಳು

    ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
    ನೇಕಾರಿಕೆ ಚೇತರಿಕೆ ಕಾಣುವ ಲಕ್ಷಣ ಕಂಡುಬರುತ್ತಿಲ್ಲ. ನೇಯ್ದ ಸೀರೆಗಳು ಧೂಳು ಹಿಡಿಯುತ್ತಿವೆ. ಅವಲಂಬಿತರಿಗೆ ಖರ್ಚಿನ ಹೊರೆ ಬೀಳುತ್ತಿದೆ. ನೇಕಾರಿಕೆ ಆರಂಭವಾಗಬೇಕಾದರೆ ಇರುವ ದಾಸ್ತಾನಿಗೆ ಮಾರುಕಟ್ಟೆ ಸಿಗಬೇಕು. ಮೊದಲಿನಂತೆ ಶುಭಕಾರ್ಯಗಳಿಗೆ ಜೀವಬರಬೇಕು. ಸೂರತ್ ನೂಲು ಸಾಗಾಟ ಮೊದಲಿನಂತಾಗಬೇಕು. ಇಲ್ಲವಾದರೆ ಚೇತರಿಕೆ ಕಷ್ಟ ಸಾಧ್ಯವಾಗಲಿದೆ ಎಂದು ನೇಕಾರರು ಅಲವತ್ತುಗೊಂಡಿದ್ದಾರೆ.

    35 ಸಾವಿರಕ್ಕೂ ಹೆಚ್ಚು ವಿದ್ಯುತ್ ಚಾಲಿತ ಮಗ್ಗಗಳಿಂದ ಸದ್ದು ಮಾಡುವ ಮಗ್ಗದೂರು ದೊಡ್ಡಬಳ್ಳಾಪುರ ಕರೊನಾ ಹೊಡೆತದಿಂದಾಗಿ ನಿಶ್ಯಬ್ದವಾಗಿದೆ. ಚೇತರಿಸಿಕೊಳ್ಳುವ ಭರವಸೆ ಇಲ್ಲದೆ ಜೀವನದ ಬಂಡಿ ಸಾಗಿಸುವುದಾದರೂ ಹೇಗೆ ಎಂಬ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ.

    ನೇಕಾರರ ಕಡೆಗಣನೆ?: ಸರ್ಕಾರ ಕೈಮಗ್ಗ ನೇಕಾರರಿಗೆ 10.5 ಕೋಟಿ ರೂ.ಅನುದಾನ ಮೀಸಲಿರಿಸಿದೆ. ಜತೆಗೆ ವಿದ್ಯುತ್ ಮಗ್ಗಗಳನ್ನು ನಂಬಿ ಜೀವನ ಸಾಗಿಸುತ್ತಿರುವ 1.25 ಲಕ್ಷ ನೇಕಾರರನ್ನು ಪರಿಹಾರ ಧನಕ್ಕೆ ಪರಿಗಣಿಸಿದೆ. ಆದರೆ ಸರ್ಕಾರ ನೀಡುತ್ತಿರುವ 2 ಸಾವಿರ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಪರಿಹಾರದ ಬದಲಿಗೆ ನೇಯ್ದ ಸೀರೆಗಳಿಗೆ ಮಾರುಕಟ್ಟೆ ಒದಗಿಸಬೇಕು ಎಂಬುದು ಮನವಿಯಾಗಿದೆ.

    ಕಾರ್ಮಿಕ ಶ್ರಮ: ಚೆಂದದ ಗರಿಗರಿ ರೇಷ್ಮೆ ಸೀರೆ ಕೊಳ್ಳುವವರ ಕೈ ಸೇರುವ ವೇಳೆಗೆ ಸೀರೆ ಹಿಂದೆ 14 ಹಂತದ ಕಾರ್ಮಿಕರು ಕೆಲಸ ಮಾಡುತ್ತಾರೆ. ಉರಿ ಮಷಿನ್, ವೈಡಿಂಗ್, ವಾರ್ಪ್, ರಿಲೀಂಗ್, ಕಲರ್ ಮಾಡುವವರು, ಅಚ್ಚುಕೆಚ್ಚುವವರು, ಡಿಸೈನರ್ ಸೇರಿ ಹಲವರು ಮಗ್ಗದ ಕೆಲಸವನ್ನೇ ನಂಬಿ ಜೀವನ ಮಾಡುತ್ತಿದ್ದು ಅವರ ಬದುಕು ತೂಗುಯ್ಯಲೆಯಲ್ಲಿ ನಿಂತಿದೆ.

    ನೇಕಾರರು ನೇಯ್ದ ಸೀರೆಗಳಿಗೆ ಮಾರುಕಟ್ಟೆಯಿಲ್ಲದೆ ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ತಾಲೂಕಿನ ನೇಕಾರರ ಸಂಕಷ್ಟಕ್ಕೆ ಕೂಡಲೇ ಸ್ಪಂದಿಸಬೇಕು. ಜೀವನ ಬಂಡಿ ಸಾಗಿಸಲು ನೆರವಿನ ಹಸ್ತ ಚಾಚಬೇಕು.
    ವೆಂಕಟೇಶ್ ದೊಡ್ಡಬಳ್ಳಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts