More

    ಹುಣಸೂರಲ್ಲಿ ಗಮನ ಸೆಳೆದ ಮಕ್ಕಳ ಕನ್ನಡ ಗೀತೆ

    ಹುಣಸೂರು: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವವನ್ನು ಬುಧವಾರ ಸಡಗರದಿಂದ ಆಚರಿಸಲಾಯಿತು.

    ಕರುನಾಡಿಗೆ ಕರ್ನಾಟಕ ಎಂದು ನಾಮಾಂಕಿತಗೊಂಡು 50 ವರ್ಷ ಸಂದ ಸಂಭ್ರಮಾಚರಣೆಯನ್ನೂ ಒಳಗೊಂಡಂತೆ ಅದ್ದೂರಿಯಾಗಿ ರಾಜ್ಯೋತ್ಸವ ನಡೆಯಿತು.

    ಧ್ವಜಾರೋಹಣದೊಂದಿಗೆ ಆರಂಭ: ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಶಾಸಕ ಜಿ.ಡಿ.ಹರೀಶ್‌ಗೌಡ ಕನ್ನಡ ಧ್ವಜವನ್ನು ಮತ್ತು ಉಪವಿಭಾಗಾಧಿಕಾರಿ ರುಚಿ ಬಿಂದಾಲ್ ರಾಷ್ಟ್ರಧ್ವಜಾರೋಹಣ ನೆರವೇರಿಸುವ ಮೂಲಕ ರಾಜ್ಯೋತ್ಸವಕ್ಕೆ ಚಾಲನೆ ನೀಡಿದರು. ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ಮಕ್ಕಳು ರಾಷ್ಟ್ರಗೀತೆ ಹಾಡಿದರು. ನಗರದ ಟ್ಯಾಲೆಂಟ್ ವಿದ್ಯಾಸಂಸ್ಥೆ ಮಕ್ಕಳು ಸರ್ಕಾರದ ಆದೇಶದನ್ವಯ 5 ಕನ್ನಡ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.

    ಭವ್ಯ ಮೆರವಣಿಗೆ: ನಗರದ ಕಲ್ಕುಣಿಕೆ ರಂಗನಾಥ ಬಡಾವಣೆಯಲ್ಲಿ ತಾಯಿ ಭುವನೇಶ್ವರಿಯನ್ನು ಹೊತ್ತ ರಥದ ಮುಂದೆ ಸ್ಥಾಪಿಸಿದ್ದ ನಂದಿಧ್ವಜಕ್ಕೆ ಶಾಸಕ ಜಿ.ಡಿ.ಹರೀಶ್‌ಗೌಡ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಕನ್ನಡಾಂಬೆಯ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.

    ಬಳಿಕ ಮಾತನಾಡಿ, 1905ರಲ್ಲಿ ಹಿರಿಯ ಕನ್ನಡ ಹೋರಾಟಗಾರ ಆಲೂರು ವೆಂಕಟರಾಯರ ನೇತೃತ್ವದಲ್ಲಿ ಸ್ಥಾಪಿಸಿದ ಕನ್ನಡ ಏಕೀಕರಣ ಹೋರಾಟ ಸಮಿತಿ ಕರುನಾಡ ಸ್ಥಾಪನೆಗೆ ನಾಂದಿ ಹಾಡಿತು. ಅಂದಿನಿಂದ ಇಂದಿನವರೆಗೂ ಕನ್ನಡ ಉಳಿಸಿ ಬೆಳೆಸುವ ಕಾರ್ ನಡೆದಿದೆ. ಆಂಗ್ಲಭಾಷೆಯ ವ್ಯಾಮೋಹವನ್ನು ಕನ್ನಡಿಗರು ತೊರೆದು ಮಾತೃಭಾಷೆಯನ್ನು ಬೆಳೆಸುವ ಅಗತ್ಯವನ್ನು ಮನಗಾಣಬೇಕಿದೆ ಎಂದರು.

    ಉಪವಿಭಾಗಾಧಿಕಾರಿ ರುಚಿ ಬಿಂದಾಲ್ ಮಾತನಾಡಿ, ನನ್ನ ಜನ್ಮ ಭೂಮಿ ರಾಜಸ್ಥಾನವಾದರೂ ಕರ್ಮಭೂಮಿ ಈ ಕರುನಾಡು ಆಗಿದೆ. ಕನ್ನಡ ಭಾಷೆಯನ್ನು ಓದುತ್ತಿದ್ದೇನೆ. ಕನ್ನಡದ ಏಕೀಕರಣದ ಹೋರಾಟ ನಮ್ಮೆಲ್ಲರಿಗೂ ಸ್ಫೂರ್ತಿ ಎಂದರು.

    ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ಬಿ.ಕೆ.ಮನು, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ವಿವಿಧ ಇಲಾಖೆಗಳ ಮುಖ್ಯಸ್ಥರು, ರೋಟರಿ, ಟ್ಯಾಲೆಂಟ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಸ್ಯರು ಹಾಜರಿದ್ದರು.

    ಸ್ತಬ್ಧಚಿತ್ರಗಳು, ಜಾನಪದ ಕಲಾತಂಡಗಳು.. ಕನ್ನಡಾಂಬೆಯ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳು ಮೇಳೈಸಿ ಮೆರವಣಿಗೆಯನ್ನು ಅಂದಗಾಣಿಸಿದವು. ಕಲ್ಕುಣಿಕೆ ಬಡಾವಣೆಯ ಕೋಲಾಟ ತಂಡ, ಗಾವಡಗೆರೆಯ ವೀರಗಾಸೆ ಕುಣಿತ ತಂಡ, ಡೋಲು ಕುಣಿತ, ತಮಟೆ ಮುಂತಾದ ಜಾನಪದ ಕಲಾತಂಡಗಳು ನೋಡುಗರ ಗಮನ ಸೆಳೆದವು. ನಗರದ ಚಿಕ್ಕಹುಣಸೂರು ಸರ್ಕಾರಿ ಪ್ರೌಢಶಾಲೆಯ ಹೊಯ್ಸಳ ವೈಭವ ಸ್ತಬ್ಧ ಚಿತ್ರ, ಸಂತ ಜೋಸೆಫರ ಸೆಂಟ್ರಲ್ ಸ್ಕೂಲ್ ವತಿಯಿಂದ ರೂಪಿಸಿದ್ದ ಅನುಭವ ಮಂಟಪ, ಆದರ್ಶ ವಿದ್ಯಾಸಂಸ್ಥೆಯ ಕನ್ನಡ ನಾಡು ನುಡಿ ಪರಂಪರೆ, ಕೃಷಿ ಮತ್ತು ತಾ.ಪಂ.ವತಿಯಿಂದ ನಿರ್ಮಾಣಗೊಂಡ ಸ್ತಬ್ಧಚಿತ್ರಗಳು ಮೆರವಣಿಗೆಗೆ ಕಳೆ ನೀಡಿದವು. ಪುಟಾಣಿ ವಿದ್ಯಾರ್ಥಿಗಳು ಶಿಸ್ತಿನಿಂದ ಹೆಜ್ಜೆ ಹಾಕುವ ಮೂಲಕ ಮೆರವಣಿಗೆಯಲ್ಲಿ ಉತ್ಶಾಹದಿಂದ ಪಾಲ್ಗೊಂಡಿದ್ದರು.

    ಸಿಂಗಾರಗೊಂಡ ಹುಣಸೂರು ನಗರ: ಮಂಗಳವಾರದಿಂದಲೇ ಆಟೋ ಚಾಲಕರು, ಟ್ಯಾಕ್ಸಿ ಮತ್ತು ಲಾರಿ ಚಾಲಕರ ಸಂಘಗಳ ಸದಸ್ಯರು ನಗರದ ಪ್ರಮುಖ ವೃತ್ತಗಳನ್ನು ಅಲಂಕರಿಸುವ ಕಾರ್ಯವನ್ನು ಆರಂಭಿಸಿದ್ದರು. ಬುಧವಾರ ನಗರದ ಹಳೇ ಬಸ್ ನಿಲ್ದಾಣದ ಟ್ಯಾಕ್ಸಿ ಸ್ಟ್ಯಾಂಡ್ ಬಳಿ, ತಾ.ಪಂ.ಮುಂಭಾಗ, ಹೊಸ ಬಸ್ ನಿಲ್ದಾಣದ ಆಟೋ ನಿಲ್ದಾಣ, ಧ್ರುವ ಪೆಟ್ರೋಲ್ ಬಂಕ್ ವೃತ್ತ, ವಿಶ್ವೇಶ್ವರಯ್ಯ ವೃತ್ತ, ಎಚ್.ಡಿ.ಕೋಟೆ ವೃತ್ತ ಮತ್ತು ಸೇತುವೆಯಲ್ಲಿ ಕನ್ನಡ ನಾಡು ನುಡಿಯ ಕುರಿತಾಗಿ ಸಂದೇಶಗಳನ್ನು ನೀಡುವಂತೆ ಅಲಂಕರಿಸಲಾಗಿತ್ತು. ಎಚ್.ಡಿ.ಕೋಟೆ ವೃತ್ತ, ವಿಶ್ವೇಶ್ವರಯ್ಯ ವೃತ್ತ ಮತ್ತು ಧ್ರುವ ಪೆಟ್ರೋಲ್ ಬಂಕ್ ವೃತ್ತದಲ್ಲಿ ತಾಯಿ ಭುವನೇಶ್ವರಿಯ ದೇವಾಲಯ ನಿರ್ಮಿಸಿ ಸಂಭ್ರಮಿಸಿದರು. ನಗರಾದ್ಯಂತ ಪ್ರಮುಖ ಸ್ತೆಗಳಲ್ಲಿ ನಗರಸಭೆ ವತಿಯಿಂದ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts