More

    ಬ್ರೈಲ್ ಲಿಪಿಯಲ್ಲಿ ಮ್ಯಾಗಜಿನ್: ಅಂಧರ ಅಕ್ಷರ ಜ್ಞಾನಕ್ಕೆ ಹುಬ್ಬಳ್ಳಿ ಯುವತಿಯರ ವಿನೂತನ ಕೊಡುಗೆ

    ಹುಬ್ಬಳ್ಳಿ: ಕರೊನಾ ಲಾಕ್​ಡೌನ್ ಅವಧಿಯನ್ನು ಹಲವರು ಹಲವು ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡಿದ್ದಾರೆ. ಇದೇ ಅವಧಿಯನ್ನು ಹುಬ್ಬಳ್ಳಿಯ ಇಬ್ಬರು ಯುವತಿಯರು ಅಂಧರಿಗೆ ನೆರವಾಗುವ ಉದ್ದೇಶಕ್ಕಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಂಧರಿಗಾಗಿಯೇ ಬ್ರೈಲ್ ಲಿಪಿಯಲ್ಲಿ ಮ್ಯಾಗಜಿನ್ ಹೊರತರುವ ಮೂಲಕ ಗಮನ ಸೆಳೆದಿದ್ದಾರೆ.

    ಡಿಜಿಟಲ್ ಮಾರ್ಕೆಟಿಂಗ್ ಅಭ್ಯಸಿಸಿರುವ ರುಶಾಲಿ ದೋಷಿ ಹಾಗೂ ಫ್ಯಾಷನ್ ಡಿಸೈನರ್ ಆಗಿರುವ ಯಶ್ವಿ ಭಂಡಾರಿ ಪ್ರಯತ್ನದಿಂದ ಸಿದ್ಧವಾಗಿರುವ ಬ್ರೈಲ್ ಲಿಪಿಯಲ್ಲಿರುವ ಮ್ಯಾಗಜಿನ್ ಆಗಸ್ಟ್ ಎರಡನೇ ವಾರ ಲೋಕಾರ್ಪಣೆಗೊಳ್ಳಲಿದೆ. ಈ ಮ್ಯಾಗಜಿನ್​ಗೆ ‘ಮ್ಯಾಜಿಕಲ್ ಡಾಟ್ಸ್’ ಎಂದು ಹೆಸರಿಸಲಾಗಿದೆ. ಇದಕ್ಕೆ ವಿಆರ್​ಎಲ್ ಸಮೂಹ ಸಂಸ್ಥೆ ಪ್ರಾಯೋಜಕತ್ವ ವಹಿಸಿದೆ.

    ‘ಸೆನ್ಸ್ ಎಸೆನ್ಸ್’ ಎಂಬ ತಂಡವನ್ನು ರಚಿಸಿಕೊಂಡಿರುವ ರುಶಾಲಿ ಹಾಗೂ ಯಶ್ವಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಇನ್​ಸ್ಟಾಗ್ರಾಮ್ ಹಾಗೂ ಫೇಸ್​ಬುಕ್​ನಲ್ಲಿ ಪೇಜ್ ಹೊಂದಿದ್ದಾರೆ. ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್ ಲಿಪಿಯಲ್ಲಿರುವ ಮ್ಯಾಗಜಿನ್ ಉಚಿತವಾಗಿ ಒದಗಿಸಲು ಮುಂದಾಗಿದ್ದಾರೆ. ಅಂಧರ ಶಿಕ್ಷಣಕ್ಕಾಗಿ ಬ್ರೈಲ್ ಲಿಪಿಯಲ್ಲಿ ಪುಸ್ತಕಗಳಿವೆ. ಮ್ಯಾಗಜಿನ್ ಎಂಬುದು ಇಲ್ಲ. ಅಂಧರು ಸಾಂಪ್ರದಾಯಿಕ ಶಿಕ್ಷಣದ ಜತೆಗೆ ಇನ್ನಿತರ ವಿಷಯಗಳನ್ನು ಅರಿತುಕೊಳ್ಳಲಿ ಎಂಬುದು ಇವರಿಬ್ಬರ ಆಶಯವಾಗಿದೆ. ರುಶಾಲಿ ಹಾಗೂ ಯಶ್ವಿ ಅವರು ಸೆನ್ಸ್ ಎಸೆನ್ಸ್​ನ ಸಂಸ್ಥಾಪಕರೂ ಹೌದು. ವೈಭವ ಜೈನ್ ಅವರು ಪ್ರಾಜೆಕ್ಟ್ ಕೋ- ಆರ್ಡಿನೇಟರ್ ಆಗಿದ್ದಾರೆ. ಸಹಾಯಂ ಫೌಂಡೇಷನ್ ಸಹಯೋಗ ನೀಡಿದೆ.

    ‘ಕಳೆದ ವರ್ಷ ಹಾಗೂ ಈ ವರ್ಷ ಕರೊನಾ ನಿಯಂತ್ರಣಕ್ಕೆ ಜಾರಿಗೊಳಿಸಲಾದ ಲಾಕ್​ಡೌನ್​ನಿಂದ ಎಲ್ಲ ಚಟುವಟಿಕೆ ಸ್ಥಗಿತಗೊಂಡಿದ್ದವು. ಈ ಅವಧಿಯಲ್ಲಿ ಏನಾದರೂ ವಿನೂತನವಾದದ್ದನ್ನು ಮಾಡಬೇಕೆಂದು ಯೋಚಿಸಿದ್ದೇವು. ಸಾಕಷ್ಟು ಯೋಚಿಸಿದ ಬಳಿಕ ಬ್ರೈಲ್ ಲಿಪಿಯಲ್ಲಿ ಮ್ಯಾಗಜಿನ್ ಹೊರ ತರುವ ನಿರ್ಧಾರಕ್ಕೆ ಬಂದೆವು. ಅಂಧರಿಗಾಗಿ ಮ್ಯಾಗಜಿನ್ ಹೊರ ತರುವ ಪ್ರಯತ್ನಗಳು ಇಲ್ಲಿಯವರೆಗೆ ಯಾರಿಂದಲೂ ನಡೆದಿಲ್ಲ. ನಾವ್ಯಾಕೆ ಪ್ರಕಟ ಮಾಡಬಾರದು ಎಂದು ಯೋಚಿಸಿ ಕಾರ್ಯರೂಪಕ್ಕೆ ಇಳಿದೆವು’ ಎಂದು ರುಶಾಲಿ ಹಾಗೂ ಯಶ್ವಿ ಹೇಳುತ್ತಾರೆ.

    ‘ಮ್ಯಾಜಿಕಲ್ ಡಾಟ್ಸ್ ಎಂಬುದು ನಮ್ಮ ತಂಡದ (ಸೆನ್ಸ್ ಎಸೆನ್ಸ್) ಮೊದಲ ಪ್ರಾಜೆಕ್ಟ್ ಆಗಿದೆ. ಇದು ಕರ್ನಾಟಕದ ಪ್ರಥಮ ಬ್ರೈಲ್ ಲಿಪಿ ಮ್ಯಾಗಜಿನ್ ಆಗಿದೆ. ಇದನ್ನು ಅಂಧರ ಶಾಲೆಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಹಾಗೂ ವಸತಿ ಶಾಲೆಗಳಿಗೆ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ ಧಾರವಾಡ, ಬೆಳಗಾವಿ, ವಿಜಯಪುರ, ಕಲಬುರಗಿ, ಮೈಸೂರು, ಬಾಗಲಕೋಟೆ, ಬೆಂಗಳೂರು, ಗದಗ, ಇನ್ನಿತರ ಕಡೆಯ 20 ಶಾಲೆಗಳಿಗೆ 500 ಪ್ರತಿಗಳನ್ನು ವಿತರಿಸುವ ಗುರಿ ಇಟ್ಟುಕೊಂಡಿದ್ದೇವೆ’ ಎಂದು ತಿಳಿಸಿದ್ದಾರೆ.

    35 ಪುಟಗಳ ಈ ಮ್ಯಾಗಜಿನ್​ನಲ್ಲಿ ಹಾಸ್ಯ, ಆರೋಗ್ಯ ಮಾಹಿತಿ, ಪ್ರಚಲಿತ ವಿದ್ಯಮಾನ, ಲಾಕ್​ಡೌನ್ ಡೈರಿ, ಸ್ಪೂರ್ತಿದಾಯಕ ಕಥೆಗಳಿವೆ. ರಾಷ್ಟ್ರೀಯ ಅಂಧರ ಸಂಸ್ಥೆಯಿಂದ (ನ್ಯಾಷನಲ್ ಅಸೋಸಿಯೇಶನ್ ಫಾರ್ ದಿ ಬ್ಲೈಂಡ್-ದೆಹಲಿ) ಅನುಮೋದನೆ ಪಡೆಯಲಾಗಿದೆ.

    ಬೆಳ್ಳಂಬೆಳಗ್ಗೆ ಉಳ್ಳಾಲ ಮಾಜಿ ಶಾಸಕರ ಪುತ್ರನ ಮನೆಗೆ ಎನ್​ಐಎ ಅಧಿಕಾರಿಗಳ ದಾಳಿ! ಉಗ್ರರೊಂದಿಗೆ ಲಿಂಕ್​?

    2022ರ ಮಾರ್ಚ್​ನಲ್ಲಿ ಕರ್ನಾಟಕದ ಸಿಎಂ ಆಗ್ತಾರೆ ಗಡ್ಡಧಾರಿ ವ್ಯಕ್ತಿ! ಭಾರೀ ಕುತೂಹಲ ಮೂಡಿಸಿದೆ ಈ ಭವಿಷ್ಯವಾಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts