More

    ಪಬ್‌ಜಿ ಸೋಲಿನ ಸೇಡು, ಸ್ನೇಹಿತನಿಂದಲೇ ಕೊಲೆ, ರಾತ್ರಿ ಹೋದ ಬಾಲಕ ಬೆಳಗ್ಗೆ ಶವವಾಗಿ ಪತ್ತೆ

    ಉಳ್ಳಾಲ: ತಲಪಾಡಿ ಸಮೀಪವಿರುವ ಕೆ.ಸಿ.ರೋಡಿನ ಬಾಲಕ ಆನ್‌ಲೈನ್ ಆಟದ ವಿಚಾರಕ್ಕೆ ಸಂಬಂಧಿಸಿ ಫೋನ್‌ನಲ್ಲಿ ಮಾತನಾಡುತ್ತಾ ಮನೆಯಿಂದ ಹೊರಹೋಗಿದ್ದು, ಭಾನುವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.

    ಶನಿವಾರ ರಾತ್ರಿ 8.40ರ ಹೊತ್ತಿಗೆ ಮನೆಯಿಂದ ಹೊರಹೋಗಿದ್ದ ಕೊಳಂಗೆರೆ ನಿವಾಸಿ ಹನೀಫ್ ಎಂಬುವರ ಪುತ್ರ ಎಂಬ ಆಕಿಫ್(12) ನಾಪತ್ತೆಯಾಗಿದ್ದ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಮಾಹಿತಿ ಹಂಚಿಕೊಂಡಿದ್ದ ಸ್ಥಳೀಯರು ಬಾಲಕನ ಪತ್ತೆಗಾಗಿ ಮನವಿ ಮಾಡಿದ್ದರು. ರಾತ್ರಿಯಿಡೀ ಹುಡುಕಾಟ ನಡೆಸಿದರೂ ಬಾಲಕ ಪತ್ತೆಯಾಗಿರಲಿಲ್ಲ. ಭಾನುವಾರ ಬೆಳಗ್ಗೆ ಮನೆಯಿಂದ ಮೂರು ಕಿ.ಮೀ. ದೂರದ ಕೆ.ಸಿ.ರೋಡ್ ಫಲಾಹ್ ಶಾಲೆ ಬಳಿ ನಿರ್ಜನ ಪ್ರದೇಶದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಪೊಲೀಸರು ಆತನ ಸ್ನೇಹಿತ ಉತ್ತರ ಪ್ರದೇಶ ಮೂಲದ, ಪಿಯುಸಿ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದಾರೆ. ಕೊಲೆ ಮಾಡಿರುವುದನ್ನು ಆತ ಪೊಲೀಸರಲ್ಲಿ ಒಪ್ಪಿಕೊಂಡಿದ್ದಾನೆ. ಆತನನ್ನು ರಿಮಾಂಡ್ ಹೋಂ ಸೇರಿಸಲಾಗಿದೆ.

    ಹತಾಶ ಭಾವನೆಯಿಂದ ಕೆಣಕಿದ್ದ ಗೆಳೆಯ: ಆಕಿಫ್ ಮನೆಯವರ ಅರಿವಿಗೆ ಬಾರದಂತೆ ಸ್ನೇಹಿತರ ಜತೆ ಆನ್‌ಲೈನ್‌ನಲ್ಲಿ ಪಬ್‌ಜಿ ಆಡುತ್ತಿದ್ದ ಎನ್ನಲಾಗಿದೆ. ಶನಿವಾರವೂ ಸ್ನೇಹಿತನ ಜತೆ ಆಡಿದ್ದ. ಆಟದಲ್ಲಿ ಸೋತು ಹತಾಶನಾದ ಆರೋಪಿ, ಆಕಿಫ್‌ಗೆ ಕರೆ ಮಾಡಿ ನೀನು ಮೊಬೈಲ್ ಆಟದಲ್ಲಿ ಮೋಸಮಾಡಿ ನನ್ನನ್ನು ಸೋಲಿಸಿರಬಹುದು. ಆದರೆ ನನ್ನೆದುರಲ್ಲೇ ಆಟವಾಡಿ ಗೆದ್ದು ತೋರಿಸು ಎಂದು ಕೆಣಕಿದ ಎನ್ನಲಾಗಿದೆ. ಸ್ನೇಹಿತನ ಮಾತನ್ನು ಸವಾಲಾಗಿ ಸ್ವೀಕರಿಸಿದ ಆತ, ಜ್ಯೂಸ್ ಕುಡಿದು ಬರುತ್ತೇನೆಂದು ಮನೆಯವರಲ್ಲಿ ಹೇಳಿ ಮೊಬೈಲ್‌ನಲ್ಲಿ ಮಾತನಾಡುತ್ತ ಹೊರಹೋದ ಆಕಿಫ್, ಹಿಂದಿರುಗಿರಲಿಲ್ಲ. ಇದರಿಂದ ಗಾಬರಿಗೊಂಡ ಪಾಲಕರು, ಸ್ಥಳೀಯರು, ಸ್ನೇಹಿತರಲ್ಲಿ ವಿಚಾರಿಸಿದರೂ ಮಾಹಿತಿ ಸಿಗಲಿಲ್ಲ. ನಂತರ ಧ್ವನಿ ಸಂದೇಶ, ಮೊಬೈಲ್ ನಂಬರ್ ಜತೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಬಿಡಲಾಯಿತು. ಇದರ ಬಳಿಕ ಮನೆಯವರು, ಸ್ಥಳೀಯರು ರಾತ್ರಿಯಿಡೀ ಹುಡುಕಿದರು. ಬಾಲಕ ಮನೆಯಿಂದ ವೇಗವಾಗಿ ನಡೆದುಕೊಂಡು ಹೋಗುತ್ತಿದ್ದ ದೃಶ್ಯ ಸ್ಥಳೀಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.

    ಕಲ್ಲಿನಿಂದ ಜಜ್ಜಿ ಕೊಲೆ!: ಆಕಿಫ್ ಮುಖ ಮತ್ತು ತಲೆಯಲ್ಲಿ ಗಾಯಗಳಾಗಿದ್ದು, ಆರೋಪಿ ಕಲ್ಲಿನಿಂದ ಹಲವು ಬಾರಿ ಹೊಡೆದು ಕೊಲೆ ಮಾಡಿರುವುದಕ್ಕೆ ಸಾಕ್ಷಿ ಎಂಬಂತಿದೆ. ಸ್ನೇಹಿತ ಎದುರು ಬದುರಾಗಿ ಕುಳಿತು ಆಡಿ ಗೆಲ್ಲುವ ಸವಾಲು ಹಾಕಿದ್ದರಿಂದ ಆಕಿಫ್ ಆತನ ಮುಂದೆ ಬಂದಿದ್ದ. ಈ ಸಂದರ್ಭವೂ ಆರೋಪಿ ಸೋತಿದ್ದು, ಮೊದಲೇ ರೋಷದಿಂದ ಕುದಿಯುತ್ತಿದ್ದ ಆರೋಪಿ ಆಕಿಫ್ ಜತೆ ಜಗಳವಾಡಿದ್ದಾನೆ. ಜಗಳ ವಿಪರೀತಕ್ಕೆ ತೆರಳಿದ್ದು ಆರೋಪಿ ಕಲ್ಲಿನಿಂದ ಆಕಿಫ್‌ನ ಮುಖ ಮತ್ತು ತಲೆಭಾಗಕ್ಕೆ ಹಲವು ಬಾರಿ ಹೊಡೆದು ಕೊಂದು ಸಮೀಪದಲ್ಲೇ ಇದ್ದ ಕಾಂಪೌಂಡ್ ಪಕ್ಕಕ್ಕೆ ಎಳೆದೊಯ್ದು ಬಾಳೆಎಲೆ, ತೆಂಗಿನ ಗರಿಗಳನ್ನು ಮುಚ್ಚಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

    ಯಾರೀತ ದೀಪಕ್?: ಆರೋಪಿ ಉತ್ತರ ಪ್ರದೇಶ ಮೂಲದವನು. ತಂದೆ ಸಂತೋಷ್ ಇಪ್ಪತ್ತು ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದು ಎಂಟು ವರ್ಷಗಳಿಂದ ಕೆ.ಸಿ.ನಗರದ ಲತೀಫ್ ಎಂಬುವರ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಆತ ಆನ್‌ಲೈನ್ ವಿಚಾರದಲ್ಲಿ ಚುರುಕಾಗಿದ್ದು, ಸಿಡುಕಿನ ಸ್ವಭಾವ ಹೊಂದಿದ್ದಾನೆ ಎನ್ನಲಾಗಿದೆ. ಮೂರು ತಿಂಗಳ ಹಿಂದೆ ಮೊಬೈಲ್ ಅಂಗಡಿಯಲ್ಲಿ ಆಕಿಫ್‌ನ ಪರಿಚಯವಾಗಿತ್ತು. ಪರಿಚಯದ ಬಳಿಕ ಪಬ್‌ಜಿ ಆಡಲು ಶುರುಮಾಡಿದ್ದು, ಇದರಲ್ಲಿ ಆಕಿಫ್ ನಿರಂತರ ಗೆಲುವು ಸಾಧಿಸುತ್ತಿದ್ದ. ಆದರೆ ಇವರಿಬ್ಬರ ಪರಿಚಯ, ಆಟ, ಸೋಲು-ಗೆಲುವಿನಿಂದ ಒಬ್ಬ ಸಾವು ಕಂಡರೆ, ಮತ್ತೊಬ್ಬ ರಿಮಾಂಡ್ ಹೋಂ ಸೇರುವಂತೆ ಮಾಡಿದೆ.

    ಪಾಲಕರ ಪ್ರೀತಿಯ ಪುತ್ರ: ಆಕಿಫ್ ಕೆ.ಸಿ.ನಗರ ಫಲಾಹ್ ಶಾಲೆಯ ಆರನೇ ತರಗತಿ ವಿದ್ಯಾರ್ಥಿ. ಹನೀಫ್ ಅವರ ಇಬ್ಬರು ಗಂಡು ಮಕ್ಕಳ ಪೈಕಿ ಈತ ಹಿರಿಯವನು. ಹನೀಫ್ ಅವರಿಗೆ ಮೊದಲ ಮೂವರು ಹೆಣ್ಣು ಮಕ್ಕಳು. ಬಳಿಕ ಹುಟ್ಟಿದ ಮಗ ಆಕಿಫ್. ಈ ಕಾರಣದಿಂದ ಆಕಿಫ್‌ನನ್ನು ಅತಿಯಾದ ಪ್ರೀತಿಯಿಂದ ನೋಡಿಕೊಂಡಿದ್ದರು. ಅಕ್ಕಂದಿರಿಗೂ ಪ್ರೀತಿಯ ತಮ್ಮನಾಗಿದ್ದ. ಆದರೆ ಆತನ ದುರಂತ ಸಾವಿನಿಂದಾಗಿ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

    ಆನ್‌ಲೈನ್ ಆಟದ್ದೇ ಮಾತು: ಬಾಲಕನ ದುರಂತ ಸಾವಿನ ಬಳಿಕ ಆನ್‌ಲೈನ್ ಆಟದ ವಿಚಾರ ಸ್ಥಳೀಯರು ಮತ್ತು ಸಾರ್ವಜನಿಕರ ನಡುವೆ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಆಟದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಅದರಲ್ಲೂ ಇಂಟರ್‌ನೆಟ್ ಪಾಠ ಮಕ್ಕಳಿಗೆ ಆಟದ ಹಿಂದೆ ಬೀಳಲು ಇನ್ನಷ್ಟು ಪ್ರೇರಣೆ ನೀಡಿದೆ. ಹಿಂದೆ ಬ್ಲೂವೇಲ್ ಆನ್‌ಲೈನ್ ಆಟದಿಂದ ಹಲವರು ಹುಚ್ಚರಾಗಿಯೂ, ಆತ್ಮಹತ್ಯೆ ಮಾಡಿಕೊಂಡೂ ಜೀವ ಕಳೆದುಕೊಂಡಿದ್ದಾರೆ. ಇದರಿಂದ ಈ ಆಟ ನಿಷೇಧ ಆಗಿದ್ದು, ಬಳಿಕ ಪಬ್‌ಜಿ ಆಟ ಬಂತು. ಇದೂ ಮಕ್ಕಳ ಜೀವನಕ್ಕೆ ಕೊಳ್ಳಿ ಇಡಲು ಶುರು ಮಾಡಿದಾಗ ಅದನ್ನೂ ನಿಷೇಧಿಸಲಾಯಿತು. ಇವೆರಡು ಚೀನಾ ಆ್ಯಪ್‌ಗಳಾಗಿದ್ದವು. ಈಗ ಬಂದಿರುವ ಪಬ್‌ಜಿ ಆಟ ಭಾರತದ ಆ್ಯಪ್ ಎಂದು ಹೇಳಲಾಗಿದೆ. ಆದರೆ ಈ ಆಟವೂ ಸೇಡಿಗೆ ದಾರಿಯಾಗುತ್ತಿದೆ. ಆದರೆ ಇಂತಹ ಆಟಗಳ ಬಗ್ಗೆ ಮಕ್ಕಳಿಗೆ ಬಿಟ್ಟರೆ ಇತರರಿಗೆ ಮಾಹಿತಿಯೇ ಇಲ್ಲ. ಬಾಲಕನ ಕೊಲೆ ಬಳಿಕ ಈ ಆಟದ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಯುವಂತಾಗಿದೆ.

    ಮೊಬೈಲ್ ಗೇಮ್ ಪಾಲಕರೇ ಎಚ್ಚರ: ಮಂಗಳೂರು: ಮೊಬೈಲ್‌ನಲ್ಲಿ ಪಬ್‌ಜಿಯಂತಹ ಆಟಗಳು ಮಕ್ಕಳ ಪ್ರಾಣಕ್ಕೆ ಕುತ್ತು ತರುತ್ತಿದೆ. ಪಾಲಕರು, ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರು ಮಕ್ಕಳ ಚಟುವಟಿಕೆ ಮೇಲೆ ಗಮನ ಇರಿಸಬೇಕು. ಅನವಶ್ಯಕ ಮೊಬೈಲ್ ಬಳಕೆ ಮಾಡದಂತೆ ಹಾಗೂ ಅದರ ದಾಸರಾಗದಂತೆ ಎಚ್ಚರ ವಹಿಸಬೇಕು. ಸಣ್ಣ ಪುಟ್ಟ ವಿಚಾರಗಳಿಗೆ ಪ್ರಾಣ ತೆಗೆಯುವ ಘಟನೆ ನಡೆಯುತ್ತಿರುವುದು ಬೇಸರ ಉಂಟು ಮಾಡುತ್ತಿದೆ. ಕಳೆದು ಹೋದ ಪ್ರಾಣವನ್ನು ಯಾರಿಂದಲೂ ತರಲು ಸಾಧ್ಯವಿಲ್ಲ. ಮಕ್ಕಳ ಬಗ್ಗೆ ಮುಂಜಾಗ್ರತೆ ವಹಿಸಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಟ್ವಿಟ್ಟರ್ ಹಾಗೂ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ.

    12 ವರ್ಷದ ಮಕ್ಕಳು ಮುಗ್ಧರು. ಅವರು ತಪ್ಪು ಮಾಡಿದರೆ ಗದರಿಸುವುದೂ ತಪ್ಪಾಗುತ್ತದೆ. ಆ ಕಾರಣದಿಂದ ನಾನು ಮನೆಯ ಮಕ್ಕಳನ್ನ್ನು ಹೆದರಿಸುವುದಿಲ್ಲ. ಬಾಲಕನ ಮೃತದೇಹ ನೋಡಲೂ ನನ್ನಿಂದ ಆಗಲಿಲ್ಲ. ಆತನ ತಂದೆ ಅದ್ಹೇಗೆ ನೋಡಿದರೋ ಗೊತ್ತಾಗುತ್ತಿಲ್ಲ. ಮಕ್ಕಳನ್ನು ಕಳೆದುಕೊಂಡ ವೇದನೆ ಗೊತ್ತಿದೆ. ಆ ಕಾರಣದಿಂದ ಕೊಲೆಯಾದ ಹುಡುಗ ಯಾರೇ ಆಗಿರಲಿ, ನಮ್ಮನೆಯ ಮಗನೆಂದು ಭಾವಿಸಿ, ಈ ಪ್ರಕರಣದ ಇಂಚಿಂಚೂ ಮಾಹಿತಿ ಪಡೆಯುತ್ತೇನೆ. ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿಸಿ ಬಾಲಕನ ಕುಟುಂಬಕ್ಕೆ ನ್ಯಾಯ ಒದಗಿಸಲು ಪ್ರಯತ್ನ ಮಾಡುತ್ತೇನೆ.

    ಎನ್.ಶಶಿಕುಮಾರ್,
    ಸಿಟಿ ಪೊಲೀಸ್ ಕಮಿಷನರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts