More

    ಬಾಳೆಹಣ್ಣಿಗಿಲ್ಲ ನಾಲ್ಕಾಣೆ ಕಿಮ್ಮತ್ತು

    ಬೆಳಗಾವಿ: ಮಹಾಮಾರಿ ಕರೊನಾ ಸೋಂಕಿನಿಂದ ಇಡೀ ಜಗತ್ತೇ ತಲ್ಲಣಗೊಂಡಿದ್ದು, ಇದರ ವಕ್ರದೃಷ್ಟಿ ಈಗ ಹಣ್ಣುಗಳ ಮೇಲೂ ನೆಟ್ಟಿದೆ. ವರ್ಷಪೂರ್ತಿ ಸುಲಭವಾಗಿ ಲಭ್ಯವಾಗುತ್ತಿದ್ದ ಹಾಗೂ ಬಹುಬೇಡಿಕೆಯ ಬಾಳೆಹಣ್ಣು ಇದೀಗ ಮೂಲೆಗುಂಪಾಗಿದೆ.

    ಬೆಳಗಾವಿ ಜಿಲ್ಲೆಯಲ್ಲಿ ಬೆಳೆದಿರುವ ಬಾಳೆಗೆ ನಾಲ್ಕಾಣೆ ಕಿಮ್ಮತ್ತೂ ಲಭಿಸದ್ದರಿಂದ ಬೆಳೆಗಾರರು ನೂರಾರು ಟನ್ ಬಾಳೆಗೊನೆಗಳನ್ನು ಹೊಲದಲ್ಲೇ ಸುರಿಯುತ್ತಿದ್ದಾರೆ. ಕೆಲ ಬೆಳೆಗಾರರು ಬಾಳೆಗೊನೆಗಳನ್ನು ಲಾರಿ ಮೂಲಕ ಸಾಗಿಸಿ ಹಳ್ಳ-ಕೊಳ್ಳಕ್ಕೆ ಸುರಿಯುತ್ತಿದ್ದಾರೆ. ಬಾಳು ಬೆಳಗುತ್ತದೆ ಎಂಬ ಭರವಸೆಯಿಂದ ಬಾಳೆ ಬೆಳೆದ ಬೆಳಗಾರರು ಈಗ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ.

    ಕರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾಗಳ ಕಟ್ಟುನಿಟ್ಟಾಗಿ ಲಾಕ್‌ಡೌನ್ ಅನುಸರಿಸುತ್ತಿರುವುದರಿಂದ ಮೂರ್ನಾಲ್ಕು ತಿಂಗಳಿಂದ ಕಷ್ಟಪಟ್ಟು ಬೆಳೆದ ಬಾಳೆಹಣ್ಣುಗಳು ಬೀದಿ ಪಾಲಾಗುತ್ತಿದೆ. ಸತತ ಬರಗಾಲದ ನಡುವೆಯೂ ಬೆಳಗಾವಿ ಜಿಲ್ಲೆಯ ರೈತರು ದೀರ್ಘಾವಧಿ ಬೆಳೆಗಳಾದ ಕಬ್ಬು ಹಾಗೂ ಮೆಕ್ಕೆಜೋಳಕ್ಕೆ ಪರ್ಯಾಯವಾಗಿ ವಿವಿಧ ಬಗೆಯ ಹಣ್ಣು, ತರಕಾರಿ ಹಾಗೂ ದ್ವಿದಳ ಧಾನ್ಯ ಬೆಳೆಯುತ್ತಿದ್ದಾರೆ. ಆದರೆ, ಏಕಾಏಕಿ ಕರೊನಾ ಸೋಂಕು ಭೀತಿಯಿಂದ ಹಣ್ಣು ಮತ್ತು ತರಕಾರಿ ಬೆಳೆಗಳ ಮೇಲೂ ಕಾರ್ಮೋಡ ಕವಿದಿದೆ.

    ಲಾಠಿ ಏಟಿನ ಭೀತಿ: ಹಗಲಿರುಳು ಶ್ರಮವಹಿಸಿ ಬಾಳೆ ಬೆಳೆದಿದ್ದ ರೈತರು ಈಗ ಅಕ್ಷರಶಃ ಹೈರಾಣಾಗಿದ್ದಾರೆ. ಅಳಿದುಳಿದ ಬಾಳೆಹಣ್ಣುಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ತೆರಳಿದರೆ ಪೊಲೀಸರು ಬೆನ್ನತ್ತಿ ಮನಬಂದಂತೆ ಲಾಠಿಯಿಂದ ಥಳಿಸುತ್ತಿದ್ದಾರೆ. ಹೀಗಾಗಿ ಬಾಳೆಗೊನೆ ಸಾಗಣೆ ಮಾಡಲಾಗದೆ, ಇತ್ತ ಸ್ಥಳೀಯವಾಗಿಯೂ ಮಾರಾಟ ಮಾಡಲಾಗದೆ ಬಾಳೆ ಬೆಳಗಾರರು ಅತಂತ್ರರಾಗಿದ್ದಾರೆ.

    ಒಂದು ಎಕರೆ ಪ್ರದೇಶದಲ್ಲಿ ಬಾಳೆ ಬೆಳೆಯುವಾಗ ಸಸಿ ನಾಟಿ ಮಾಡುವುದರಿಂದ ಹಣ್ಣು ಕಟಾವಿನವರೆಗೂ ಕನಿಷ್ಠ 50 ರಿಂದ 60 ಸಾವಿರ ರೂಪಾಯಿ ಖರ್ಚಾಗುತ್ತದೆ. ಇದೀಗ ಹೊಲದಲ್ಲಿ ಬಾಳೆಹಣ್ಣುಗಳು ಸಮೃದ್ಧವಾಗಿ ಬೆಳೆದಿದ್ದರೂ ಕರೊನಾ ಕಾರಣದಿಂದಾಗಿ ಕಟಾವು ಮಾಡಲಾಗದೆ ಬೆಳೆಗಾರ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ.

    ಹೊಲದಲ್ಲೇ ನಾಶ: ವಿಶ್ವಾದ್ಯಂತ ಕರೊನಾ ಭೀತಿ ಆವರಿಸಿದ ಬಳಿಕ ಗ್ರಾಮೀಣ ಭಾಗದಲ್ಲಿ ಹಣ್ಣುಗಳನ್ನು ತಿಂದರೂ ಕರೊನಾ ಸೋಂಕು ತಗುಲುತ್ತದೆ ಎಂಬ ಸುಳ್ಳು ಸುದ್ದಿ ವ್ಯಾಪವಾಕವಾಗಿ ಹರಡಿದೆ. ಹೀಗಾಗಿ ಕೆಜಿ ಬಾಳೆಹಣ್ಣಿಗೆ ಕೇವಲ 2 ರೂ. ಎಂದರೂ ಯಾರೂ ಖರೀದಿಸುತ್ತಿಲ್ಲ. ಹೀಗಾಗಿ ಕಷ್ಟಪಟ್ಟು ಬೆಳೆದ ಬಾಳೆಯನ್ನು ತುಂಡರಿಸಿ ಜಾನುವಾರುಗಳಿಗೆ ನೀಡುತ್ತಿದ್ದಾರೆ. ಕೆಲ ರೈತರು ಬಾಳೆಮರದಿಂದ ಬಾಳೆಗೊನೆ ಬೇರ್ಪಡಿಸಿ ಅವುಗಳನ್ನು ಸಾಗಣೆ ಮಾಡಲಾಗದೆ ಹೊಲದಲ್ಲೇ ನಾಶ ಮಾಡುತ್ತಿದ್ದಾರೆ.

    ದೇವರ ಪೂಜೆಗೂ ಇಲ್ಲ ಹಣ್ಣು: ಈ ಮೊದಲು ಜನರು ಪೂಜೆ, ಪುನಸ್ಕಾರಕ್ಕಾದರೂ ಅಲ್ಪಸ್ವಲ್ಪ ಬಾಳೆಹಣ್ಣು ಖರೀದಿಸುತ್ತಿದ್ದರು. ಆದರೆ, ಲಾಕ್‌ಡೌನ್ ಆದೇಶದಿಂದಾಗಿ ಸ್ಥಳೀಯ ಹಾಗೂ ಜಿಲ್ಲೆಯ ಸುಪ್ರಸಿದ್ಧ ಮಠ-ಮಂದಿರ, ಗುಡಿ-ಗುಂಡಾರಗಳು ಬಾಗಿಲು ಮುಚ್ಚಿವೆ. ಇದರಿಂದ ಬಾಳೆಹಣ್ಣುಗಳನ್ನು ಕೇಳುವವರಿಲ್ಲದೆ ಬಾಳೆಗಿಡದಲ್ಲೇ ಮಾಗಿ ಕೊಳೆಯುತ್ತಿವೆ. ಮಧ್ಯಮ ವರ್ಗದ ರೈತರು 5ರಿಂದ 10 ಎಕರೆಯಷ್ಟು ಬಾಳೆ ಬೆಳೆದಿದ್ದು, ಸೂಕ್ತ ಬೆಲೆ ಸಿಗದಿದ್ದರಿಂದ ಅನಿವಾರ್ಯವಾಗಿ ಹಳ್ಳ-ಕೊಳ್ಳಗಳಲ್ಲಿ ಸುರಿಯುತ್ತಿದ್ದೇವೆ ಎನ್ನುತ್ತಾರೆ ಚಿಕ್ಕೋಡಿ ತಾಲೂಕಿನ ಹಣಬರವಾಡಿ ಗ್ರಾಮದ ರೈತ ಶಿವನಗೌಡ ಪಾಟೀಲ.

    5 ಎಕರೆ ಜಮೀನಿನಲ್ಲಿ ಜಿ-9 ತಳಿಯ ಬಾಳೆ ಬೆಳೆದಿದ್ದೇನೆ. ಆದರೆ, ಕರೊನಾ ವೈರಸ್ ಭೀತಿ ಹಾಗೂ ಸರ್ಕಾರದ ಲಾಕ್‌ಡೌನ್ ಆದೇಶದಿಂದಾಗಿ ಬಾಳೆಹಣ್ಣುಗಳನ್ನು ಕೇಳುವವರೇ ಇಲ್ಲ. ಗಿಡದಲ್ಲೇ ಹಣ್ಣಾಗಿ ಕೊಳೆಯುತ್ತಿದ್ದು, ಬೇರೆ ದಾರಿಯಿಲ್ಲದೆ ಕೈಗೆ ಬಂದಿದ್ದ ಒಂದು ಲಾರಿಯಷ್ಟು ಬಾಳೆ ಕಟಾವು ಮಾಡಿ ತೋಟದ ಹೊರಗೆ ಸುರಿದಿದ್ದೇನೆ. ತುಂಬಾ ನಷ್ಟವಾಗಿದೆ.
    | ಪ್ರಕಾಶ ಬೀಸನಕೊಪ್ಪ, ಬಾಳೆ ಬೆಳೆಗಾರ, ಕುಲಗೋಡ ಗ್ರಾಮ, ಗೋಕಾಕ ತಾಲೂಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts