More

    ಮಗುವಿನ ಗಂಟಲಲ್ಲಿ ಸಿಲುಕಿದ 5 ರೂ. ನಾಣ್ಯ! ಮನೆಯಲ್ಲಿ ಆಟವಾಡುತ್ತಿರುವಾಗಲೇ ಅವಘಡ, ಮುಂದೇನಾಯ್ತು?

    ಯಾದಗಿರಿ: ಪುಟ್ಟ ಮಕ್ಕಳಿರುವ ಮನೆಯಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು. ಇಲ್ಲಾಂದ್ರೆ ಮಕ್ಕಳ ಪ್ರಾಣಕ್ಕೇ ಕುತ್ತು ತರುವ ಘಟನೆಗಳ ಸಂಭವ ಹೆಚ್ಚು. ಈ ಸ್ಟೋರಿ ನೋಡಿದ್ರೆ ಈ ಮಾತು ಅಕ್ಷರಶಃ ನಿಜ.

    ಈ ಮಗುವಿನ ಹಣೆಬರಹ ಗಟ್ಟಿ ಇತ್ತು, ದೇವರ ರೂಪದಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಟ್ಟ ವೈದ್ಯರು ಮಗುವಿನ ಗಂಟಲ್ಲಿ ಯಮರೂಪದಲ್ಲಿ ಸಿಕ್ಕಿಹಾಕಿಕೊಂಡಿದ್ದ 5 ರೂಪಾಯಿ ನಾಣ್ಯ ಹೊರ ತೆಗೆದು ಪ್ರಾಣ ಉಳಿಸಿದ್ದಾರೆ. ಇಂತಹ ಘಟನೆ ಗುರುವಾರ ಮಧ್ಯಾಹ್ನ ಕೋಲಿವಾಡ ಬಡಾವಣೆಯಲ್ಲಿ ಸಂಭವಿಸಿದೆ. 3 ವರ್ಷದ ಭರತ್​ ಮನೆಯಲ್ಲಿ ಆಟವಾಡಿಕೊಂಡಿದ್ದ. ಕೈಯಲ್ಲಿ 5 ರೂ. ನಾಣ್ಯ ಹಿಡಿದುಕೊಂಡು ಮಗು ತನ್ನಷ್ಟಕ್ಕೆ ತಾನು ಆಟವಾಡುತ್ತಿತ್ತು. ಆಟವಾಡುತ್ತಾ ಆ ನಾಣ್ಯವನ್ನ ಬಾಯಲ್ಲಿ ಹಾಕಿಕೊಂಡಿದೆ. ಇದನ್ನು ಪಾಲಕರು ಗಮನಿಸಿರಲಿಲ್ಲ. ಕ್ಷಣಾರ್ಧದಲ್ಲೇ ಮಗುವಿನ ಉಸಿರಾಟದಲ್ಲಿ ಏರುಪೇರಾಗಿದೆ. ಏನಾಯ್ತೆಂದು ಪಾಲಕರು ನೋಡಿದಾಗ ಮಗು ನಾಣ್ಯ ನುಂಗಿರುವುದು ಗೊತ್ತಾಗಿದೆ. ತಕ್ಷಣ ಮನೆಯಲ್ಲೇ ಪ್ರಾಥಮಿಕ ಚಿಕಿತ್ಸೆ ಮಾಡಿದರೂ ಪ್ರಯೋಜನವಾಗಿಲ್ಲ.

    ಕೊನೆಗೆ ಡಾ.ನಾಯ್ಕೋಡಿ ಇಎನ್​ಟಿ ಆಸ್ಪತ್ರೆಗೆ ಮಗುವನ್ನ ಕರೆತಂದಿದ್ದಾರೆ. ಗಂಟಲಲ್ಲೇ ನಾಣ್ಯ ಇರುವುದನ್ನು ಎಕ್ಸ್​ರೇ ಮೂಲಕ ಖಚಿತಪಡಿಸಿಕೊಂಡ ಇಎನ್​ಟಿ ತಜ್ಞ ಡಾ.ರಾಹುಲ್​ ನಾಯ್ಕೋಡಿ ಅವರು ಡಾ.ಚೇತನ್​, ಮಕ್ಕಳ ತಜ್ಞ ಡಾ.ವೈಜನಾಥ ದುಗ್ಗಾಣಿಕರ್​ ಜತೆ ಕೆಲಹೊತ್ತು ಚರ್ಚೆ ನಡೆಸಿದ ಬಳಿಕ ರಾತ್ರಿ ನಾಣ್ಯವನ್ನು ಸ್ಕೋಪಿ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಗು ಆರೋಗ್ಯವಾಗಿದ್ದು, ಪಾಲಕರು ನಿಟ್ಟುಸಿರು ಬಿಟ್ಟಿದ್ದಾರೆ.

    ಮಕ್ಕಳ ಕೈಯಲ್ಲಿ ವಸ್ತುಗಳನ್ನು ಕೊಡಬೇಕಾದರೆ ಪಾಲಕರು ಎಚ್ಚರ ವಹಿಸಬೇಕು. ವಿಶೇಷವಾಗಿ ನಾಣ್ಯದಂಥ ಸಣ್ಣ ಮತ್ತು ಸೂಕ್ಷ್ಮ ವಸ್ತುಗಳನ್ನು ಕೊಡಕೂಡದು ಎಂದು ಡಾ.ರಾಹುಲ್​ ನಾಯ್ಕೊಡಿ ‘ವಿಜಯವಾಣಿ’ ಮೂಲಕ ಪಾಲಕರಲ್ಲಿ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts