ಗಜೇಂದ್ರಗಡ: 2 ದಶಕಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಗೋಗೇರಿ ಗ್ರಾಮದ ಯುವಕನೊಬ್ಬ ಬುಧವಾರ ಮರಳಿ ಮನೆಗೆ ಬಂದಿದ್ದು ಕುಟುಂಬದಲ್ಲಿ ಸಂತಸ ಅರಳಿದೆ. ಗ್ರಾಮದ ಮಲಿಕ್ಸಾಬ್ ಮತ್ತು ಬಡೀಮಾ ಬಾಗವಾನ ದಂಪತಿಯ ಮೂರನೇ ಮಗ ಆದಮ್ (40) ಸುಮಾರು 23 ವರ್ಷಗಳ ನಂತರ ಮತ್ತೆ ಹೆತ್ತವರನ್ನು ಸೇರಿದ್ದಾನೆ. ಮಾನಸಿಕ ಅಸ್ವಸ್ಥನಾಗಿ ಮನೆ ಬಿಟ್ಟು ಹೋಗಿದ್ದ ಆದಮ್ನ್ನು ಮತ್ತೆ ಕಂಡು ಮನೆ ಮಂದಿಗೆ ಖುಷಿಯಾಗಿದೆ. ಮಲಿಕ್ಸಾಬ್ ಬಾಗವಾನ ಅವರಿಗೆ ನಾಲ್ವರು ಪುತ್ರರು, ಐವರು ಪುತ್ರಿಯರಿದ್ದಾರೆ. ಮನೋವ್ಯಾಧಿಯಿಂದ ಬಳಲುತ್ತಿದ್ದ ಆದಮ್ ತನ್ನ 17ನೇ ವಯಸ್ಸಿನಲ್ಲಿ ಮನೆ ಬಿಟ್ಟು ಮುಂಬೈಗೆ ಹೋಗಿದ್ದರು. ಅಲ್ಲಿ 7 ವರ್ಷವಿದ್ದು, ನಂತರ ಕೊಲ್ಲಾಪುರದಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದರು.
‘ಮನೆಬಿಟ್ಟು ಹೋಗಿದ್ದ ಮಗನಿಗಾಗಿ ತುಂಬಾ ಹುಡುಕಾಡಿದ್ದೆವು. ಕಂಡ ಕಂಡ ದೇವರಲ್ಲಿ ಹರಕೆ ಹೊತ್ತಿದ್ದೆವು. ಮಗ ಇದೀಗ ಮರಳಿ ಮನೆಗೆ ಬಂದಿದ್ದರಿಂದ ನಮ್ಮ ಕುಟುಂಬ ಪರಿಪೂರ್ಣವಾಗಿದೆ’ ಎನ್ನುತ್ತಾರೆ ತಂದೆ ಮಲಿಕ್ಸಾಬ್ ಬಾಗವಾನ.