More

    ಫೆಡ್, ಜೋಕೋ, ಸೆರೇನಾಗೆ ಸುಲಭ ಜಯ: ಆಸ್ಟ್ರೇಲಿಯನ್ ಓಪನ್ ಟೆನಿಸ್, ಮೊದಲ ದಿನದ ಬಹುತೇಕ ಪಂದ್ಯಗಳಿಗೆ ಮಳೆ ಅಡ್ಡಿ

    ಮೆಲ್ಬೋರ್ನ್: ಹೊಸ ದಶಕದ ಮೊದಲ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಆಸ್ಟ್ರೇಲಿಯನ್ ಓಪನ್​ನ ಮೊದಲ ದಿನದ ಬಹುತೇಕ ಪಂದ್ಯಗಳು ಮಳೆಯಿಂದಾಗಿ ಮುಂದೂಡಿಕೆಯಾದರೆ, ಕೆಲ ಅಗ್ರ ಆಟಗಾರರು ಸುಲಭ ಜಯದೊಂದಿಗೆ 2ನೇ ಸುತ್ತಿಗೆ ಮುನ್ನಡೆದರು. 24ನೇ ಗ್ರಾಂಡ್ ಸ್ಲಾಂ ನಿರೀಕ್ಷೆಯಲ್ಲಿರುವ ಸೆರೇನಾ ವಿಲಿಯಮ್್ಸ, ವಿಶ್ವ ನಂ.1 ಆಶ್ಲೆಗ್ ಬಾರ್ಟಿ, ನವೋಮಿ ಒಸಾಕ, ಪೆಟ್ರಾ ಕ್ವಿಟೋವಾ, ದಿಗ್ಗಜ ಆಟಗಾರ ರೋಜರ್ ಫೆಡರರ್, ಹಾಲಿ ಚಾಂಪಿಯನ್ ಸೆರ್ಬಿಯಾದ ನೊವಾಕ್ ಜೋಕೊವಿಕ್, ಗ್ರೀಸ್​ನ ಸ್ಟೆಫಾನೋಸ್ ಸಿಸಿಪಾಸ್ ಮೊದಲ ದಿನದ ಆಟದಲ್ಲಿ ಗೆಲುವು ಪಡೆದ ಪ್ರಮುಖರು.

    ಮೆಲ್ಬೋರ್ನ್ ಪಾರ್ಕ್ ಮೈದಾನದಲ್ಲಿ ಸೋಮವಾರ ಆರಂಭಗೊಂಡ ಟೂರ್ನಿಯಲ್ಲಿ ಕೆಲ ಅಚ್ಚರಿಯ ಫಲಿತಾಂಶಗಳು ದಾಖಲಾದವು. 39 ವರ್ಷದ ಅಮೆರಿಕ ಆಟಗಾರ್ತಿ ವೀನಸ್ ವಿಲಿಯಮ್್ಸ , ವಯಸ್ಸಿನಲ್ಲಿ ತಮಗಿಂತ 24 ವರ್ಷ ಕಿರಿಯರಾದ ದೇಶಬಾಂಧವೆ ಕೊಕೊ ಗೌಫ್​ಗೆ ಶರಣಾದರು. 2017ರ ಯುಎಸ್ ಓಪನ್ ಚಾಂಪಿಯನ್ ಅಮೆರಿಕದ ಸ್ಲೋವನ್ ಸ್ಟೀಫನ್ಸ್ ಕೂಡ ಮೊದಲ ಸುತ್ತಿನಲ್ಲಿಯೇ ಆಘಾತಕಾರಿ ಸೋಲುಂಡರು.

    ದಾಖಲೆಯ 8ನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಹಾಲಿ ಚಾಂಪಿಯನ್ ಜೋಕೊವಿಕ್ ನಾಲ್ಕು ಸೆಟ್​ಗಳ ಹೋರಾಟದಲ್ಲಿ 7-6 (7), 6-2, 2-6, 6-1 ರಿಂದ ಜರ್ಮನಿಯ ಜಾನ್ ಲೀನಾರ್ಡ್ ಸ್ಟ್ರಫ್​ರನ್ನು ಸೋಲಿಸಿದರು. ಜರ್ಮನಿಯ ಆಟಗಾರನನ್ನು ಮಣಿಸಲು ಜೋಕೊವಿಕ್ ತಮ್ಮೆಲ್ಲ ಶಕ್ತಿಗಳನ್ನು ಪ್ರಯೋಗಿಸಬೇಕಾಯಿತು. 16 ಬಾರಿಯ ಗ್ರಾಂಡ್ ಸ್ಲಾಂ ಚಾಂಪಿಯನ್ ಜೋಕೊವಿಕ್​ಗೆ ಇದು ವೃತ್ತಿಜೀವನದ 900ನೇ ಗೆಲುವಾಗಿದೆ.

    ಆಸ್ಟ್ರೇಲಿಯನ್ ಓಪನ್ ಆರಂಭಕ್ಕೂ ಮುನ್ನ ಹೆಚ್ಚಿನ ಅಭ್ಯಾಸ ನಡೆಸದ ಸ್ವಿಸ್ ದಿಗ್ಗಜ ರೋಜರ್ ಫೆಡರರ್ 6-3, 6-2, 6-2 ರಿಂದ ಅಮೆರಿಕದ ಸ್ಟೀವ್ ಜಾನ್ಸನ್​ರನ್ನು ಸೋಲಿಸಿದರು. 2019ರ ಎಟಿಪಿ ಫೈನಲ್ಸ್​ನಲ್ಲಿ ಸಿಸಿಪಾಸ್ ವಿರುದ್ಧ ಸೋಲು ಕಂಡ ಬಳಿಕ ಆಡಿದ ಮೊದಲ ವೃತ್ತಿಪರ ಪಂದ್ಯದಲ್ಲಿ 38 ವರ್ಷದ ಫೆಡರರ್ ಯಾವ ಹಿನ್ನಡೆಗಳನ್ನೂ ತೋರಿಸಿಕೊಳ್ಳಲಿಲ್ಲ. ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್​ನ ಸೆಮಿಫೈನಲ್ ಹಾದಿಯಲ್ಲಿ ದಿಗ್ಗಜ ಫೆಡರರ್​ರನ್ನು ಸೋಲಿಸುವ ಮೂಲಕ ಪ್ರಖ್ಯಾತಿ ಪಡೆದಿದ್ದ ಗ್ರೀಸ್​ನ ಸ್ಟೆಫಾನೋಸ್ ಸಿಸಿಪಾಸ್ 6-0, 6-2, 6-3 ರಿಂದ ಸಾಲ್ವಟೋರೆ ಕ್ರುಸೋರನ್ನು ಮಣಿಸಿದರು.

    ಸೆರೇನಾಗೆ ಸವಾಲಾಗದ ಪೊಟಪೋವಾ

    ಮಾರ್ಗರೇಟ್ ಕೋರ್ಟ್​ರ ಗರಿಷ್ಠ 24 ಗ್ರಾಂಡ್ ಸ್ಲಾಂ ಗೆಲುವಿನ ದಾಖಲೆ ಸರಿಗಟ್ಟುವ ಗುರಿಯಲ್ಲಿರುವ ಸೆರೇನಾ ಮೊದಲ ಸುತ್ತಿನಲ್ಲಿ ಕೇವಲ 58 ನಿಮಿಷದಲ್ಲಿ ಗೆಲುವು ಪಡೆದುಕೊಂಡರು. ರಷ್ಯಾದ ಅನಸ್ತಾಸಿಯಾ ಪೊಟಪೋವಾರನ್ನು 6-0, 6-3ರಿಂದ ಸೋಲಿಸಿದರು. ಜಪಾನ್​ನ ನವೋಮಿ ಒಸಾಕ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನವನ್ನು ಜೆಕ್ ಆಟಗಾರ್ತಿ ಮೇರಿ ಬುಜ್ಕೋವಾರನ್ನು 6-2, 6-4 ರಿಂದ ಸೋಲಿಸುವ ಮೂಲಕ ಆರಂಭಿಸಿದರು. ವಿಶ್ವ ನಂ.1 ಹಾಗೂ ಸ್ಥಳೀಯರ ಫೇವರಿಟ್ ಆಶ್ಲೆಗ್ ಬಾರ್ಟಿ ಮೊದಲ ಸುತ್ತಿನಲ್ಲಿ ಗಲಿಬಿಲಿಯ ಆಟವಾಡಿದರೂ, ಉಕ್ರೇನ್​ನ ಲೇಸಿಯಾ ಸುರೆಂಕೋರನ್ನು 5-7, 6-1, 6-1 ರಿಂದ ಮಣಿಸಿ ಮುನ್ನಡೆದರು.

    ವೋಜ್ನಿಯಾಕಿಗೆ ಸುಲಭ ಜಯ

    ವೃತ್ತಿಜೀವನದ ಕೊನೆಯ ಗ್ರಾಂಡ್ ಸ್ಲಾಂ ಆಡುತ್ತಿರುವ 2018ರ ಆವೃತ್ತಿಯ ಚಾಂಪಿಯನ್ ಡೆನ್ಮಾರ್ಕ್​ನ ಕ್ಯಾರೋಲಿನ್ ವೋಜ್ನಿಯಾಕಿ 6-1, 6-3 ರಿಂದ ಕ್ರಿಸ್ಟಿ ಆಹ್ನ್ ರನ್ನು ಸೋಲಿಸಿದರು. 7ನೇ ಶ್ರೇಯಾಂಕದ ಜೆಕ್ ಆಟಗಾರ್ತಿ ಪೆಟ್ರಾ ಕ್ವಿಟೋವಾ 6-1, 6-0ಯಿಂದ ಕ್ಯಾಥರೀನಾ ಸಿನಿಯಕೋವಾರನ್ನು ಸೋಲಿಸಿದರು.

    ಸ್ಟೀಫನ್ಸ್​ಗೆ ಆಘಾತ ನೀಡಿದ ಜಾಂಗ್

    ಚೀನಾದ ಶೈಯ್ ಜಾಂಗ್ ಮೊದಲ ಸೆಟ್​ನಲ್ಲಿ ಸೋಲು ಕಂಡರೂ, 2 ಗಂಟೆ 2 ನಿಮಿಷದ ಹೋರಾಟದಲ್ಲಿ 2-6, 7-5, 6-2 ರಿಂದ ಸ್ಲೋವನ್ ಸ್ಟೀಫನ್ಸ್ ರನ್ನು ಸೋಲಿಸಿದರು. ಅದರಲ್ಲೂ ಅಂತಿಮ ಸೆಟ್​ನಲ್ಲಿ 4-5ರ ಹಿನ್ನಡೆಯಿಂದ ಮೇಲೆದ್ದು ಗೆಲುವು ಕಂಡಿದ್ದು ವಿಶೇಷವಾಗಿತ್ತು. 15 ವರ್ಷದ ಕೊಕೊ ಗೌಫ್ 7-6 (7), 6-3 ರಿಂದ ವೀನಸ್ ವಿಲಿಯಮ್ಸ್​ರ ವಿರುದ್ಧ ಜಯ ಸಾಧಿಸಿದರು. ಆ ಮೂಲಕ ಗ್ರಾಂಡ್ ಸ್ಲಾಂನಲ್ಲಿ ಸತತ 2ನೇ ಬಾರಿಗೆ ವೀನಸ್ ವಿಲಿಯಮ್ಸ್​ರನ್ನು ಮೊದಲ ಸುತ್ತಿನಲ್ಲಿಯೇ ಮಣಿಸಿದ ಸಾಧನೆಯನ್ನು ಗೌಫ್ ಒಲಿಸಿಕೊಂಡರು. ಪುರುಷರ ವಿಭಾಗದಲ್ಲಿ 13ನೇ ಶ್ರೇಯಾಂಕದ ಆಟಗಾರ ಕೆನಡದ ಡೆನಿಸ್ ಶಫವಲೋವ್ 6-3, 6-7 (7), 6-1, 7-6 ರಿಂದ ಹಂಗೆರಿಯದ ಮಾರ್ಟನ್ ಫೊಕೋವಿಕ್ಸ್​ಗೆ ಶರಣಾಗಿ ಹೊರನಡೆದರು/.

    ಆಸ್ಟ್ರೇಲಿಯನ್ ಓಪನ್ ಆರಂಭಕ್ಕೂ ಮುನ್ನ ಕಾಡ್ಗಿಚ್ಚು ಹೊಗೆಯ ಭೀತಿ ಇತ್ತು. ಟೂರ್ನಿಗೆ ಮೊದಲ ದಿನವೇ ಮಳೆ ಅಡ್ಡಿಯಾಗಿದ್ದು, ಸೋಮವಾರ ನಡೆಯಬೇಕಿದ್ದ 64 ಪಂದ್ಯಗಳ ಪೈಕಿ 17 ಪಂದ್ಯಗಳು ಮಂಗಳವಾರಕ್ಕೆ ಮುಂದೂಡಿಕೆಯಾದವು.

    ಪ್ರಜ್ಞೇಶ್ ಪಂದ್ಯ ಮುಂದೂಡಿಕೆ

    ಮಳೆಯಿಂದಾಗಿ ಸೋಮವಾರ ನಡೆಯಬೇಕಿದ್ದ ಭಾರತದ ಪ್ರಜ್ಞೇಶ್ ಗುಣೇಶ್ವರನ್​ರ ಮೊದಲ ಸುತ್ತಿನ ಪಂದ್ಯ ಮಂಗಳವಾರಕ್ಕೆ ಮುಂದೂಡಿಕೆಯಾಗಿದೆ. ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಜ್ಞೇಶ್ ಜಪಾನ್​ನ ತತ್ಸುಮಾ ಇಟೋರನ್ನು ಎದುರಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts