More

    ಭಕ್ತರ ಪೋಷಕ ಚುಂಚನಕಟ್ಟೆಯ ಕೋದಂಡರಾಮ

    ಕಾವೇರಿ ನದಿಯ ದಡದಲ್ಲಿರುವ ಪ್ರಸಿದ್ಧ ಧಾರ್ವಿುಕ ಕ್ಷೇತ್ರಗಳಲ್ಲೊಂದು ಚುಂಚನಕಟ್ಟೆಯಲ್ಲಿನ ಕೋದಂಡರಾಮ ಕ್ಷೇತ್ರ. ಇಂದಿಗೂ ಅಸಂಖ್ಯಾತ ಜನರನ್ನು ಆಕರ್ಷಿಸುತ್ತಿರುವ ಈ ಕ್ಷೇತ್ರವು ಮೈಸೂರು ಜಿಲ್ಲೆ ಕೃಷ್ಣರಾಜನಗರ ತಾಲೂಕಿನಲ್ಲಿದೆ.

    ಶ್ರೀರಾಮನ ಪರಮಭಕ್ತರಾಗಿದ್ದ ಚುಂಚ ಎಂಬ ಮಹರ್ಷಿಗಳೊಬ್ಬರು ಇಲ್ಲಿ ನೆಲೆಸಿ ಶ್ರೀರಾಮನ ನಿರೀಕ್ಷೆಯಲ್ಲಿದ್ದರಂತೆ. ಶ್ರೀರಾಮ ಅರಣ್ಯವಾಸದಲ್ಲಿದ್ದಾಗ ಸೀತಾ, ಲಕ್ಷ್ಮಣಸಮೇತನಾಗಿ ಇಲ್ಲಿಗೆ ಆಗಮಿಸಿ ಚುಂಚ ಮಹರ್ಷಿಗಳಿಗೆ ದರ್ಶನ ನೀಡಿದ. ಹೀಗಾಗಿ ಈ ಕ್ಷೇತ್ರಕ್ಕೆ ಚುಂಚನಕಟ್ಟೆ ಎಂದು ಹೆಸರಾಯಿತು ಎನ್ನುತ್ತದೆ ಸ್ಥಳಪುರಾಣ. ಇನ್ನೊಂದು ಕತೆ ಹೀಗಿದೆ: ಇಲ್ಲಿ ವಾಸವಾಗಿದ್ದ ಚುಂಚ ಮತ್ತು ಚುಂಚಿ ಎಂಬ ರಾಕ್ಷಸರಿಬ್ಬರೂ ಮೇರೆ ಮೀರಿ ಮನುಜರಿಗೆ ತೊಂದರೆ ಕೊಡುತ್ತಿದ್ದರು. ವನವಾಸದಲ್ಲಿದ್ದ ಶ್ರೀರಾಮ ಇಲ್ಲಿಗೆ ಬಂದು ಚುಂಚ-ಚುಂಚಿಯರನ್ನು ಸಂಹರಿಸಿ ಜನರ ಕಷ್ಟಗಳನ್ನು ನಿವಾರಿಸಿದ. ಅದರ ನೆನಪಿಗೆ

    ಈ ಪ್ರದೇಶ ಚುಂಚನಕಟ್ಟೆ ಎಂದಾಯಿತಂತೆ. ಚುಂಚ-ಚುಂಚಿಯರ ಸಂಹಾರದ ನಂತರ ಮನಃಶಾಂತಿಗಾಗಿ ಸ್ನಾನ ಮಾಡುವಂತೆ ಸೀತಾಮಾತೆ ಶ್ರೀರಾಮನನ್ನು ಕೋರುತ್ತಾಳೆ. ಆಗ ಶ್ರೀರಾಮನ ಅನುಜ್ಞೆಯಂತೆ ಲಕ್ಷಣ ಪುಷ್ಕರಿಣಿಯನ್ನು ನಿರ್ವಿುಸುತ್ತಾನೆ. ಅದು ಇಂದಿಗೂ ಸುವ್ಯವಸ್ಥಿತವಾಗಿದೆ. ಶ್ರೀರಾಮ, ಸೀತೆ, ಲಕ್ಷ್ಮಣರು ಇಲ್ಲಿಗೆ ಬಂದ ಜ್ಞಾಪಕಾರ್ಥ ಕೋದಂಡರಾಮ ದೇವಾಲಯವನ್ನು ನಿರ್ವಿುಸಲಾಗಿದೆ. ಸಾಮಾನ್ಯವಾಗಿ ಶ್ರೀರಾಮ ದೇವಾಲಯಗಳಲ್ಲಿ ಹನುಮಂತನೂ ಜೊತೆಗೆ ಇರುತ್ತಾನೆ. ಆದರೆ ಈ ಸ್ಥಳಕ್ಕೆ ಬರುವ ಮುನ್ನ ರಾಮಸೀತೆಯರಿಗೆ ಆಂಜನೇಯನ ಪರಿಚಯವಿರಲಿಲ್ಲ. ಹೀಗಾಗಿ ಇಲ್ಲಿ ಆಂಜನೇಯ ಇಲ್ಲ. ಆ ದೃಷ್ಟಿಯಿಂದ ನೋಡಿದಾಗ ಇದೊಂದು ಅಪರೂಪದ ದೇವಾಲಯ ಎನಿಸುತ್ತದೆ. ಇಲ್ಲಿನ ದೇವಸ್ಥಾನವನ್ನು ಚಾಲುಕ್ಯ ದೊರೆಗಳ ಕಾಲದಲ್ಲಿ ನಿರ್ವಿುಸಲಾಗಿದೆ ಎಂಬ ಮಾತಿದ್ದರೂ ಲಿಖಿತ ದಾಖಲೆಗಳಿಲ್ಲ. ಒಟ್ಟಾರೆ ದೇವಸ್ಥಾನ ಮಾತ್ರ ದ್ರಾವಿಡ ಶೈಲಿಯನ್ನು ಪ್ರತಿಬಿಂಬಿಸುತ್ತದೆ.

    ದೇವಾಲಯಕ್ಕೆ ಹೋಗಲು ಮೂವತ್ತು ಮೆಟ್ಟಿಲುಗಳನ್ನು ಏರಿದರೆ, ವಿಜಯನಗರ ಶೈಲಿಯ ರಾಜಗೋಪುರ ಸ್ವಾಗತಿಸುತ್ತದೆ. ಮೂರು ಅಂತಸ್ತಿನ ಗೋಪುರದಲ್ಲಿ ಜಯ-ವಿಜಯರ ಹಾಗೂ ದೇವತೆಗಳ ಗಾರೆ ಶಿಲ್ಪಗಳಿವೆ. ಪ್ರವೇಶದ್ವಾರದ ಒಳಕ್ಕೆ ಪ್ರವೇಶಿಸಿದರೆ ದೊಡ್ಡ ಪ್ರಾಕಾರವಿದೆ. ದೇವಾಲಯದ ಸುತ್ತ ಹಲವು ಪುಟ್ಟ ಮಂಟಪಗಳಿವೆ. ಪ್ರತಿ ವರ್ಷ ಜನವರಿ ತಿಂಗಳಲ್ಲಿ ಚುಂಚನಕಟ್ಟೆಯಲ್ಲಿ ರಾಮದೇವರ ರಥೋತ್ಸವದ ಸಂದರ್ಭದಲ್ಲಿ ಜಾನುವಾರು ಜಾತ್ರೆ ನಡೆಯುತ್ತದೆ. ಈ ಜಾತ್ರೆಯು ಮೈಸೂರು ಭಾಗದಲ್ಲಿ ನಡೆಯುವ ಜಾತ್ರೆಗಳಲ್ಲಿಯೇ ಪ್ರಮುಖವಾಗಿದೆ.

    ರಥೋತ್ಸವಕ್ಕೆ ಬರುವ ಭಕ್ತರು ಕಾವೇರಿನದಿಯಲ್ಲಿ ಪುಣ್ಯಸ್ನಾನ ಮಾಡಿ ನಂತರ ದೇವಾಲಯದ

    ವಿಶೇಷ ಪೂಜಾಕೈಂಕರ್ಯ ಪಾಲ್ಗೊಂಡು ಶ್ರೀರಾಮನ ದರ್ಶನ ಪಡೆಯಬಹುದು. ಇಂದು ಚುಂಚನಕಟ್ಟೆಯಲ್ಲಿ ರಾಮದೇವರ ರಥೋತ್ಸವ ನೆರವೇರಲಿದೆ.

    ಸಿದ್ಧೇಶ್ ಸಣ್ಣಗಿರಿ ಕೊಟ್ಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts