ಟೆಹರಾನ್: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದ ಭೀತಿಯ ಸಂದರ್ಭದಲ್ಲಿ ವಿಮಾನ ಹಾರಾಟ ನಡೆಸದಂತೆ ನಾನು ಮೊದಲೇ ಹೇಳಿದ್ದೆ ಎಂದು ಉಕ್ರೇನಿಯನ್ ವಿಮಾನ ಪತನದಲ್ಲಿ ಸಾವಿಗೀಡಾದ ಪೈಲಟ್ ಪತ್ನಿ ತಿಳಿಸಿದ್ದಾರೆ.
ನಾನು ವಿಮಾನ ಹಾರಾಟ ನಡೆಸದಂತೆ ಕೇಳಿಕೊಂಡೆ. ಆದರೆ ಹೋಗಲೇಬೇಕಾಗಿದೆ. ಒಂದು ವೇಳೆ ನಾನೇನಾದರೂ ಇಲ್ಲವಾದರೆ, ಯಾರೂ ಕೂಡ ಇರಲಾರರು. ಚಿಂತಿಸಬೇಡ ವೇಳಾಪಟ್ಟಿಯ ಪ್ರಕಾರ ನಾನು ಹೋಗಲೇಬೇಕಾಗಿದೆ ಎಂದು ಹೇಳಿದರು ಎಂದು ಮೃತ ಪೈಲಟ್ ವೊಲೊಡೈಮೈರ್, ಪತ್ನಿ ಕ್ಯಾತರಿನಾ ಗ್ಯಾಪೊನೆಂಕೊ ಮಾಧ್ಯಮಗಳಿಗೆ ತಿಳಿಸಿದರು.
11 ಸಾವಿರ ಗಂಟೆಗಳ ವಿಮಾನ ಹಾರಾಟ ಅನುಭವ ಹೊಂದಿರುವ ಪೈಲಟ್ ವೊಲೊಡೈಮೈರ್ ಜನವರಿ 7ರಂದು ಉಕ್ರೇನ್ನಿಂದ ಇರಾನ್ಗೆ ಮರಳಿ ಮತ್ತೆ ಜನವರಿ 8 ಉಕ್ರೇನ್ಗೆ ಮರಳುವಾಗ ವಿಮಾನ ದುರಂತ ಸಂಭವಿಸಿದೆ. ಇರಾನ್-ಅಮೆರಿಕ ನಡುವಿನ ವಿಷಮ ಸ್ಥಿತಿಯಲ್ಲೂ ವಿಮಾನ ಹಾರಾಟ ನಡೆಸಲು ಅನುಮತಿ ಏಕೆ ಕೊಟ್ಟರು ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಗ್ಯಾಪೊನೆಂಕೊ ಬೇಸರ ವ್ಯಕ್ತಪಡಿಸಿದ್ದಾರೆ.
ದುಃಖಕರ ಸಂಗತಿಯೆಂದರೆ ಪೈಲಟ್ ವೊಲೊಡೈಮೈರ್ಗೆ ಎರಡು ವರ್ಷದ ಮಗು ಕೂಡ ಇದೆ. ಮಗು ಮತ್ತು ಪತ್ನಿಯನ್ನು ಬಿಟ್ಟು ದುರಂತ ಸಾವಿಗೀಡಾಗಿದ್ದಾರೆ.
ಏನಿದು ಘಟನೆ?
ಬೋಯಿಂಗ್ 737 ಸರಣಿಯ ಉಕ್ರೇನಿಯನ್ ವಿಮಾನ ಬುಧವಾರ ಬೆಳಗ್ಗೆ ಇರಾನ್ನ ತೆಹ್ರಾನ್ ಇಮಾಮ್ ಖೊಮೆನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಿಟ್ಟು ಉಕ್ರೇನ್ನ ಕೈವ್ ಬೋರಿಸ್ಪಿಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. ಆದರೆ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಏರ್ಪೋರ್ಟ್ ಬಳಿ ಪತನಗೊಂಡಿತ್ತು. ಪರಿಣಾಮ ವಿಮಾನದಲ್ಲಿದ್ದ 176 ಮಂದಿ ದಾರುಣಾವಾಗಿ ಸಾವಿಗೀಡಾಗಿದ್ದರು.
ಪ್ರಾರಂಭದಲ್ಲಿ ತಾಂತ್ರಿಕ ದೋಷದಿಂದಾಗಿದೆ ಎಂದು ಉಕ್ರೇನ್ ಮತ್ತು ಇರಾನ್ ಅಧಿಕಾರಿಗಳು ವಾದಿಸಿದ್ದರು. ಆದರೆ, ಪತನದ ಸ್ಥಳದಲ್ಲಿ ದೊರೆತ ಕ್ಷಿಪಣಿ ಅವಶೇಷದ ಬಳಿಕ ಪ್ರಕರಣ ತಿರುವು ಪಡೆದುಕೊಂಡಿತು. ಅಲ್ಲದೆ, ವಿಮಾನ ಟೇಕಾಫ್ ಆಗುವ ಮುನ್ನವೇ ಯುಎಸ್ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ರಾಕೆಟ್ ದಾಳಿ ನಡೆಸಿದ್ದು ಕೂಡ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.
ಇದರೊಂದಿಗೆ ಅನೇಕ ಗುಪ್ತಚರ ವರದಿಗಳು ಕೂಡ ತಾಂತ್ರಿಕ ದೋಷವೆಂಬುದು ಕೇವಲ ವಿವರಣೆಯಷ್ಟೇ, ಪತನಕ್ಕೆ ಕಾರಣ ರಾಕೆಟ್ ದಾಳಿ ಎಂದು ಹೇಳಿದ್ದವು. ಇದರ ಬೆನ್ನಲ್ಲೇ ಉಕ್ರೇನ್ ಕೂಡ ವಿಮಾನದ ಮೇಲೆ ಯಾರೋ ದಾಳಿ ಮಾಡಿದ್ದಾರೆ ಎಂದು ಒಪ್ಪಿಕೊಂಡಿತ್ತು. ಅಲ್ಲದೆ, ತನಿಖೆಗೆ ಆದೇಶಿಸಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇರಾನ್ ಮೇಲೆ ನೇರ ಆರೋಪ ಮಾಡಿ, ತನಿಖೆಗೆ ಕೈಜೋಡಿಸುವುದಾಗಿ ತಿಳಿಸಿತ್ತು. ಆದರೆ, ಆರಂಭದಿಂದ ಇರಾನ್ ಮಾತ್ರ ಯಾವುದನ್ನು ಒಪ್ಪಿಕೊಳ್ಳದೇ ತಿರಸ್ಕರಿಸಿತ್ತಾ ಬಂದಿತ್ತು. ಇದೀಗ ವಿಮಾನ ಪತನಕ್ಕೆ ತನ್ನ ಸೇನಾ ದಾಳಿಯೇ ಕಾರಣ ಎಂದು ಒಪ್ಪಿಕೊಂಡಿದೆ.
ವಿಮಾನದಲ್ಲಿದ್ದ ಒಟ್ಟು 176 ಜನರಲ್ಲಿ ವಿವಿಧ ದೇಶದ 167 ಪ್ರಯಾಣಿಕರು ಹಾಗೂ 9 ಸಿಬ್ಬಂದಿ ಇದ್ದರು. ಎಲ್ಲರೂ ಮೃತರಾಗಿದ್ದು, ವಿಮಾನದಲ್ಲಿ 82 ಇರಾನಿಯನ್ಸ್, 63 ಕೆನಡಿಯನ್ಸ್ ಹಾಗೂ 11 ಉಕ್ರೇನಿಯನ್ಸ್ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. (ಏಜೆನ್ಸೀಸ್)