More

    ಸರ್ಕಾರದ ಬೊಕ್ಕಸದಿಂದ ರೈತರಿಗೆ ನೀಡಲಿ ಪರಿಹಾರ

    ದಾವಣಗೆರೆ : ಬರ ಪರಿಹಾರ ವಿಷಯದಲ್ಲಿ ಕೇಂದ್ರದ ಮೇಲೆ ಗೂಬೆ ಕೂರಿಸುವ ಬದಲು ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದಲೇ ರೈತರಿಗೆ ಏಕೆ ನೆರವು ನೀಡುತ್ತಿಲ್ಲ ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್ ಪ್ರಶ್ನಿಸಿದರು.
     ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಸಾಲದ ಹೊರೆ ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.
     ಕಾಂಗ್ರೆಸ್ ಪಕ್ಷ ಸುಳ್ಳಿನ ಕಂತೆಗಳನ್ನು ಜನರ ಮುಂದಿಟ್ಟು 135 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿದೆ. ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುತ್ತಿಲ್ಲ. ರೈತರಿಗಾಗಿ ಯಾವುದೇ ಗ್ಯಾರಂಟಿ ಅವರ ಬಳಿ ಇಲ್ಲ ಎಂದರು.
     ರಾಜ್ಯ ಸರ್ಕಾರ ಬಡವರಿಗೆ ನೀಡುತ್ತಿರುವ 5 ಕೆಜಿ ಅಕ್ಕಿ ಪ್ರಧಾನಿ ಮೋದಿ ಅವರು ಕೊಟ್ಟಿದ್ದು. ಮದ್ಯ, ಮುದ್ರಾಂಕ ಶುಲ್ಕ ಹೆಚ್ಚಳ ಮಾಡಿ ಮಹಿಳೆಯರಿಗೆ 2 ಸಾವಿರ ರೂ. ನೀಡುತ್ತಿದ್ದಾರೆ ಎಂದು ಆರೋಪಿಸಿದರು.
     ಕಾಂಗ್ರೆಸ್‌ನವರಿಗೆ ರೈತರ ಬಗ್ಗೆ ಅಷ್ಟೊಂದು ಕಾಳಜಿಯಿದ್ದರೆ ಕಿಸಾನ್ ಸಮ್ಮಾನ್ ಯೋಜನೆಯಡಿ 4 ಸಾವಿರ ರೂ. ಏಕೆ ನೀಡುತ್ತಿಲ್ಲ ಎಂದು ಕೇಳಿದರು. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಟೀಕಿಸಿದರು.
     ಹಾಸನ ಪೆನ್‌ಡ್ರೈವ್ ಪ್ರಕರಣದ ತನಿಖೆಯನ್ನು ಸರ್ಕಾರ ಎಸ್‌ಐಟಿಗೆ ವಹಿಸಿದೆ. ನಾವು ಅದನ್ನು ಸ್ವಾಗತಿಸುತ್ತೇವೆ. ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಪ್ರತಿಕ್ರಿಯಿಸಿದರು.
     ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಕೇಂದ್ರದಿಂದ ಬರ ಪರಿಹಾರ ಬಿಡುಗಡೆಯಾದರೂ ಪ್ರತಿಭಟನೆ ಮಾಡುತ್ತಾರೆ. 16 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರಿಗೆ ಈ ಸಾಮಾನ್ಯ ಜ್ಞಾನ ಇರಬೇಕಿತ್ತು ಎಂದರು.
     ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಮತ್ತು ಕಳೆದ 10 ವರ್ಷಗಳಲ್ಲಿ ರಾಜ್ಯಕ್ಕೆ ಎಷ್ಟು ಅನುದಾನ ಬಿಡುಗಡೆಯಾಗಿದೆ ಎಂದು ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.
     ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರ ಖಾಲಿ ಚೊಂಬು ನೀಡಿದೆ. ಬರ ಪರಿಸ್ಥಿತಿ ಇದ್ದರೂ ಕುಡಿಯುವ ನೀರು, ಮೇವು ಒದಗಿಸದ ಬೇಜವಾಬ್ದಾರಿ ಸರ್ಕಾರ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳಿಗೆ ಚಿಪ್ಪು ನೀಡಿದ್ದಾರೆ ಎಂದು ತಿಳಿಸಿದರು.
     ಪಾಲಿಕೆಯ ಪ್ರತಿಪಕ್ಷ ನಾಯಕ ಪ್ರಸನ್ನ ಕುಮಾರ್, ಬಿಜೆಪಿ ಮುಖಂಡರಾದ ಬಿ.ಎಂ. ಸತೀಶ್, ರಾಜನಹಳ್ಳಿ ಶಿವಕುಮಾರ್, ಐರಣಿ ಅಣ್ಣೇಶ್, ಎಚ್.ಎನ್. ಗುರುನಾಥ್, ಅಣಜಿ ಗುಡ್ಡೇಶ್, ರಘುನಂದನ್ ಅಂಬರ್‌ಕರ್, ಜೆಡಿಎಸ್ ಮುಖಂಡರಾದ ಕಲ್ಲೇರುದ್ರೇಶ್, ಬೆಳವನೂರು ನಾಗೇಶ್ವರ ರಾವ್, ಗಣೇಶ ದಾಸಕರಿಯಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts