More

    ಸಹಕಾರಕ್ಕೆ ಪ್ರೋತ್ಸಾಹ ದೇಶದ ಆರ್ಥಿಕತೆಗೆ ಸಹಕಾರ

    ಸಹಕಾರಕ್ಕೆ ಪ್ರೋತ್ಸಾಹ ದೇಶದ ಆರ್ಥಿಕತೆಗೆ ಸಹಕಾರಕೇಂದ್ರದಲ್ಲಿ ಸಹಕಾರ ಇಲಾಖೆಗೆ ಪ್ರತ್ಯೇಕ ಸಚಿವಾಲಯ ರೂಪುಗೊಂಡ ನಂತರ ದೇಶದ ಸಮಗ್ರ ಸಹಕಾರ ಕ್ಷೇತ್ರದಲ್ಲಿ ಆರ್ಥಿಕ ಶಿಸ್ತು, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಏಕರೂಪತೆ ತರುವ ನಿಟ್ಟಿನಲ್ಲಿ ರಾಷ್ಟ್ರೀಯ ಸಹಕಾರ ನೀತಿಯನ್ನು ತರಲು ಅನೇಕ ತ್ವರಿತ ಕ್ರಮಗಳನ್ನು ಕೇಂದ್ರದ ಸಹಕಾರ ಸಚಿವ ಅಮಿತ್ ಷಾ ನೇತೃತ್ವದಲ್ಲಿ ಕೈಗೊಳ್ಳಲಾಗುತ್ತಿದೆ.

    ಜಗತ್ತಿನಾದ್ಯಂತ ಸುಮಾರು 100ಕ್ಕೂ ಹೆಚ್ಚು ದೇಶಗಳಲ್ಲಿ ಮೂರು ದಶಲಕ್ಷಕ್ಕೂ ಹೆಚ್ಚಿನ ಸಹಕಾರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಇಲ್ಲಿ ಸುಮಾರು 1.2 ಬಿಲಿಯನ್ ಸದಸ್ಯರಿದ್ದು; 280 ಮಿಲಿಯನ್ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲೂ ಯೂರೋಪಿಯನ್ ದೇಶಗಳಲ್ಲಿ ಸಹಕಾರ ಕ್ಷೇತ್ರ ಬಲಿಷ್ಠವಾಗಿ ರೂಪುಗೊಂಡಿದ್ದು ಇಲ್ಲಿನ ಬಹುತೇಕ ವಹಿವಾಟು ಈ ಸಹಕಾರ ವಲಯದ ಬ್ಯಾಂಕುಗಳಲ್ಲೇ ನಡೆಸುತ್ತಾರೆ.

    ಭಾರತದ ಸಹಕಾರಿ ಕ್ಷೇತ್ರವು ದೇಶದ ಶೇ.91ರಷ್ಟು ಗ್ರಾಮೀಣ ಭಾಗಕ್ಕೆ ವಿಸ್ತಾರಗೊಂಡಿದ್ದು; ದೇಶಾದ್ಯಂತ 9 ಲಕ್ಷ ಸಹಕಾರಿ ಸಂಸ್ಥೆಗಳನ್ನು ಹೊಂದಿದ್ದು ಜಗತ್ತಿನ ಅತಿದೊಡ್ಡ ಸಹಕಾರಿ ಕ್ಷೇತ್ರವಾಗಿದೆ. ದೇಶದ ಒಟ್ಟು ಸುಮಾರು 7.5 ಲಕ್ಷ ಹಳ್ಳಿಗಳ ಪೈಕಿ ಸುಮಾರು 6,44,458 ಹಳ್ಳಿಗಳನ್ನು ಪ್ರಾಥಮಿಕ ಸಹಕಾರ ಸಂಘಗಳು ವ್ಯಾಪಿಸಿವೆ. ಕೇಂದ್ರದ ಸಹಕಾರಿ ಸಚಿವರೇ ಹೇಳುವಂತೆ ಸಹಕಾರಿ ಕ್ಷೇತ್ರವು ದೇಶದ ಆರ್ಥಿಕತೆಯನ್ನು 5 ಟ್ರಿಲಿಯನ್​ಗೆ ಕೊಂಡೊಯ್ಯುವಲ್ಲಿ ಮತ್ತು ಆತ್ಮನಿರ್ಭರ ಭಾರತ ನಿರ್ವಣದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಸಹಕಾರಿ ಕ್ಷೇತ್ರವು ಒಟ್ಟಾರೆಯಾಗಿ ದೇಶದ ಸಾಮಾಜಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಹಾಗೂ ಬಡತನ ನಿಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

    ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯ ಇಡೀ ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕತೆ, ಆರ್ಥಿಕ ಶಿಸ್ತನ್ನು ತರುವಂತ ಅನೇಕ ಉಪಕ್ರಮಗಳನ್ನು ಒಳಗೊಂಡಂತ ರಾಷ್ಟ್ರೀಯ ಸಹಕಾರ ನೀತಿ ಜಾರಿಗೊಳಿಸಲು ಮುಂದಾಗಿದ್ದು, ಈ ಸಂಬಂಧ ಕೇಂದ್ರದ ಮಾಜಿ ಸಚಿವ, ಹಿರಿಯ ಸಹಕಾರಿ ಸುರೇಶ್ ಪ್ರಭು ನೇತೃತ್ವದಲ್ಲಿ ಸಮಿತಿ ರಚಿಸಿದೆ. ಸಹಕಾರ ಕ್ಷೇತ್ರದ ಒಂದು ಭಾಗವಾಗಿ ದೇಶದ ಪಟ್ಟಣ ಸಹಕಾರ ಬ್ಯಾಂಕುಗಳು (UCB) ಗಣನೀಯ ಕೊಡುಗೆ ನೀಡುತ್ತಿವೆ. ಪ್ರಸ್ತುತ ರಾಷ್ಟ್ರೀಯ ಸಹಕಾರ ನೀತಿಯಲ್ಲಿ ಕೆಲವೊಂದು ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದಲ್ಲಿ ಹಾಗೂ ಮತ್ತೊಂದಷ್ಟು ಅಂಶಗಳನ್ನು ಅನುಷ್ಠಾನಗೊಳಿಸಿದಲ್ಲಿ ಸಹಕಾರ ಬ್ಯಾಂಕುಗಳು ಮತ್ತಷ್ಟು ಪರಿಣಾಮಕಾರಿಯಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ.

    ಯುಸಿಬಿಗಳಿಗೆ ಪ್ರಾಮುಖ್ಯತೆ: ರೆಪೋ ಮತ್ತು ರಿವರ್ಸ್ ರೆಪೋ ದರದ ಸವಲತ್ತುಗಳನ್ನು ಪಟ್ಟಣ ಸಹಕಾರ ಬ್ಯಾಂಕುಗಳಿಗೂ ವಿಸ್ತರಿಸಿದರೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ನೀಡಲು ಅನುಕೂಲವಾಗುತ್ತದೆ. ಪ್ರಸ್ತುತ ದೇಶದಲ್ಲಿ 1539 ಪಟ್ಟಣ ಸಹಕಾರಿ ಬ್ಯಾಂಕುಗಳಿವೆ. ಈ ಬ್ಯಾಂಕುಗಳು ಭೌಗೋಳಿಕವಾಗಿ, ಜಾತಿ ಆಧಾರಿತ, ಸ್ಥಳೀಯ ಅಸ್ಮಿತೆ, ಪರಂಪರೆ ಮುಂತಾದವುಗಳ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂಥ ಬ್ಯಾಂಕುಗಳನ್ನು ರಾಷ್ಟ್ರೀಕೃತ ಬ್ಯಾಂಕುಗಳಂತೆ ವಿಲೀನಗೊಳಿಸುವ ಪ್ರಕ್ರಿಯೆಗೆ ಆರ್​ಬಿಐ ಮಾಜಿ ಡೆಪ್ಯುಟಿ ಗೌರ್ನರ್ ಎನ್.ಎಸ್ ವಿಶ್ವನಾಥನ್ ಸಮಿತಿಯ ವರದಿ ಆಧರಿಸಿ ಚಾಲನೆ ನೀಡುತ್ತದೆಂಬ ಸುದ್ದಿ ಹರಿದಾಡುತ್ತಿದೆ. ಅದರ ಬದಲಿಗೆ ಪಟ್ಟಣ ಸಹಕಾರಿ ಬ್ಯಾಂಕುಗಳನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಗಂಭೀರವಾಗಿ ಆಲೋಚಿಸಬೇಕಿದೆ. ಪ್ರಸಕ್ತ ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಸಹಕಾರ ಕ್ಷೇತ್ರ ಪ್ರಬಲವಾಗಿ ವಿಸ್ತರಿಸಿದೆ. ಉಳಿದ ರಾಜ್ಯಗಳಲ್ಲಿ ತೀರಾ ನಗಣ್ಯವಾಗಿದೆ. ದೇಶದ ಪ್ರತಿ ಸಣ್ಣ ಪಟ್ಟಣ ಪ್ರದೇಶ, ನಗರ ಪ್ರದೇಶಗಳಲ್ಲೂ ಸಹಕಾರ ಬ್ಯಾಂಕುಗಳನ್ನು ಸ್ಥಾಪಿಸುವಂತಹ ಉಪಕ್ರಮಗಳನ್ನು ಕೈಗೊಳ್ಳಬೇಕು.

    ಮಾನದಂಡಗಳ ಪರಿಷ್ಕರಣೆ: ಈಗಾಗಲೇ Banking Regulation Act Amendment 2020 ಮುಖೇನ ಆರ್​ಬಿಐ ಕಣ್ಗಾವಲಿನಲ್ಲಿ ಪಟ್ಟಣ ಸಹಕಾರಿ ಬ್ಯಾಂಕುಗಳ ಆಡಳಿತದಲ್ಲಿ ಆರ್ಥಿಕ ಶಿಸ್ತು, ಪಾರದರ್ಶಕತೆ ತರುವಲ್ಲಿ ಯಶಸ್ವಿಯಾಗಿದೆ. ಹಾಗಾಗಿ ಯಾವುದೇ ರಾಷ್ಟ್ರೀಕೃತ ಅಥವಾ ವಾಣಿಜ್ಯ ಬ್ಯಾಂಕುಗಳು ಸಂಕಷ್ಟಕ್ಕೆ ಸಿಲುಕಿದಾಗ ಕೂಡಲೇ ಕೇಂದ್ರ ಸರ್ಕಾರ ಅಥವಾ ಆರ್​ಬಿಐ ಸ್ಪಂದಿಸುವಂತೆ ಪಟ್ಟಣ ಸಹಕಾರಿ ಬ್ಯಾಂಕುಗಳಿಗೂ ವಿಸ್ತರಿಸಿದರೆ ಅನುಕೂಲವಾಗುತ್ತದೆ.

    ಭಾರತೀಯ ರಿಸರ್ವ್ ಬ್ಯಾಂಕು ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತಾತ್ಮಕ ಮತ್ತು ವಹಿವಾಟಿನ ಮೇಲೆ ನಿಗಾವಹಿಸುತ್ತಿರುವುದರಿಂದ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿರುವ ಸಹಕಾರ ಇಲಾಖೆ ಸಹಕಾರ ಬ್ಯಾಂಕುಗಳ ದಿನನಿತ್ಯದ ಆಡಳಿತಾತ್ಮಕ ವಿಷಯಗಳಲ್ಲಿ ಅನಗತ್ಯ ಹಸ್ತಕ್ಷೇಪಕ್ಕೆ ಆಸ್ಪದ ನೀಡದಂತೆ ನೋಂದಣಿ, ಉಪನಿಯಮಗಳ ತಿದ್ದುಪಡಿ, ಚುನಾವಣೆಗಳಿಗೆ ಸೀಮಿತಗೊಂಡ ಅಧಿಕಾರ ವ್ಯಾಪ್ತಿಯಲ್ಲಿ ಮಾತ್ರ ತನ್ನ ಕೆಲಸ ನಿರ್ವಹಿಸುವ ವ್ಯವಸ್ಥೆ ಜಾರಿಗೊಳ್ಳಬೇಕೆಂಬುದೇ ಬಹುತೇಕ ಸಹಕಾರಿ ಬ್ಯಾಂಕುಗಳ ಅಪೇಕ್ಷೆ. ದ್ವಿ-ನಿಯಂತ್ರಣಕ್ಕೆ ಬದಲಾಗಿ ಆರ್​ಬಿಐ ನಿಯಂತ್ರಣ ಮಾತ್ರ ಸೂಕ್ತ. ಸಹಕಾರ ಬ್ಯಾಂಕುಗಳಲ್ಲಿ ಕಾಲಕಾಲಕ್ಕೆ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲು ಆಡಳಿತ ಮಂಡಳಿಗೆ ಅಧಿಕಾರ ನೀಡುವಂತಾಗಬೇಕು.

    ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗಳ ಮಾದರಿಯಲ್ಲೇ ಪಟ್ಟಣ ಸಹಕಾರ ಬ್ಯಾಂಕುಗಳೂ ಸದಸ್ಯರ ಷೇರು ಹಣದಿಂದಲೇ ಮತ್ತು ಸಾಲ ಸೌಲಭ್ಯಗಳಂತಹ ಚಟುವಟಿಕೆಗಳನ್ನು ನಡೆಸುವುದರಿಂದ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80-ಪಿ ಅನ್ನು ಸಹಕಾರ ಬ್ಯಾಂಕುಗಳಿಗೂ ವಿಸ್ತರಿಸಿದಲ್ಲಿ ತೆರಿಗೆ ಆದಾಯದ ಉಳಿತಾಯದಿಂದ ಬರುವ ಹಣವನ್ನು ಮೀಸಲು ನಿಧಿಗೆ ವರ್ಗಾಯಿಸಲು ಅವಕಾಶವಾಗಿ ಬ್ಯಾಂಕುಗಳು ಸದೃಢಗೊಳ್ಳಲು ಸಹಕಾರಿಯಾಗುತ್ತದೆ. ಅದರಲ್ಲೂ ಡಿವಿಡೆಂಡ್​ಗೆ ಸಂಬಂಧಿಸಿದಂತೆ ಬ್ಯಾಂಕ್ ಹಾಗೂ ಸದಸ್ಯರಿಂದಲೂ ಆದಾಯ ತೆರಿಗೆ ವಸೂಲಿ ತಡೆಗಟ್ಟಿ ಸದಸ್ಯರಿಗೆ ಹೊರೆ ಇಳಿಸಬಹುದು.

    ಸಹಕಾರ ಬ್ಯಾಂಕುಗಳಲ್ಲಿ ಹೆಚ್ಚಿನ ವಹಿವಾಟನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆರ್​ಬಿಐ ಠೇವಣಿ ವಿಮಾ ಯೋಜನೆ ರೀತಿಯಲ್ಲೇ ಕ್ರೆಡಿಟ್ ಗ್ಯಾರಂಟಿ ಯೋಜನೆಗಳನ್ನು ಎಂಎಸ್​ಎಂಇ ವಲಯಕ್ಕೆ ಮತ್ತು ಆಧಾರರಹಿತ ಸಾಲಗಳಿಗೆ ಒದಗಿಸಿದಲ್ಲಿ ಸಹಕಾರಿಯಾಗುತ್ತದೆ. ಅದೇ ರೀತಿ Non Fund based Transactions ಅಂದರೆ, ಪಟ್ಟಣ ಸಹಕಾರ ಬ್ಯಾಂಕುಗಳು ವಿತರಿಸುವ ಬ್ಯಾಂಕ್ ಗ್ಯಾರಂಟಿಯನ್ನು ಸರ್ಕಾರಿ, ಅರೆಸರ್ಕಾರಿ ಹಾಗೂ ಸರ್ಕಾರದ ಅಂಗಸಂಸ್ಥೆಗಳೂ ಪುರಸ್ಕರಿಸುವಂತಹ ನಿಯಮ ತರಬೇಕು. ಬಹಳಷ್ಟು ಸರ್ಕಾರಿ ಕಚೇರಿಗಳು, ಸ್ವಾಯತ್ತ ಸಂಸ್ಥೆಗಳು ಪಟ್ಟಣ ಸಹಕಾರ ಬ್ಯಾಂಕುಗಳ ಚೆಕ್ ಅಥವಾ ಪೇ ಆರ್ಡರ್​ಗಳನ್ನು ಸ್ವೀಕರಿಸಲು ಹಿಂದೇಟು ಹಾಕುವುದನ್ನು ತಡೆಗಟ್ಟಬೇಕು.

    ಸಹಕಾರ ಬ್ಯಾಂಕುಗಳು ಆದ್ಯತಾವಲಯದ ಉದ್ದೇಶಗಳಿಗೆ ನೀಡುವ ಸಾಲದ ನಿಯಮಾವಳಿಗಳಲ್ಲಿ ಹಾಲಿಯಿರುವ ಶೇ.60ರ ಕನಿಷ್ಟ ಮಿತಿಯನ್ನು ಶೇ.50ಕ್ಕೆ ಇಳಿಸುವುದು ಸೂಕ್ತ. ಕಾರಣ, ಪಟ್ಟಣ ಸಹಕಾರ ಬ್ಯಾಂಕುಗಳು ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್​ಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದು, ಶೇ.60ರ ಗುರಿ ಸಾಧನೆ ಕಷ್ಟಸಾಧ್ಯ. ಉದಾ: ಪಟ್ಟಣ ಸಹಕಾರ ಬ್ಯಾಂಕುಗಳ ಕಾರ್ಯವ್ಯಾಪ್ತಿ ಬಹುತೇಕ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದು, ನಗರ ಪ್ರದೇಶಗಳಲ್ಲಿ ಬೇಡಿಕೆಯಿರುವ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಆದ್ಯತಾವಲಯದ ಚೌಕಟ್ಟಿನಲ್ಲಿ ಸೇರಿಸುವುದು ಉತ್ತಮ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಚಿನ್ನಾಭರಣ ಒತ್ತೆಯಿಟ್ಟು ಕೃಷಿ ಸಾಲ ಪಡೆದಾಗ ಆರ್​ಟಿಸಿ ಪ್ರತಿ ನೀಡಿದರೆ ಶೇ.4 ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರೆಯುತ್ತದೆ. ಚಿನ್ನಾಭರಣಗಳ ಮೇಲಿನ ಸಾಲಗಳ ಮಿತಿ ಮತ್ತು ನಿಬಂಧನೆಗಳನ್ನು ಪಟ್ಟಣ ಸಹಕಾರ ಬ್ಯಾಂಕುಗಳಿಗೂ ವಿಸ್ತರಿಸುವುದು ಸೂಕ್ತ. ಗೃಹ ಸಾಲಗಳಿಗೆ ಪಟ್ಟಣ ಸಹಕಾರ ಬ್ಯಾಂಕುಗಳ ಒಟ್ಟು ಆಸ್ತಿಯ ಮೇಲೆ ನಿಗದಿಪಡಿಸಿರುವ ಶೇ.15ರ ಮಿತಿ ಹೆಚ್ಚಿಸಿದಲ್ಲಿ ಹಾಗೂ ಆದ್ಯತಾ ವಲಯದ ಗೃಹ ಸಾಲಗಳಿಗೆ ಪ್ರಸ್ತುತ 35 ಲಕ್ಷ ರೂ. ನೀಡುತ್ತಿದ್ದು ಇದನ್ನು 70 ಲಕ್ಷಕ್ಕೆ ಹೆಚ್ಚಿಸಿದಲ್ಲಿ ಉತ್ತಮ. ಸಹಕಾರಿ ತತ್ವದಲ್ಲಿ ಕಾರ್ಯನಿರ್ವಹಿಸುವ ಹಣಕಾಸು ಸಂಸ್ಥೆಗಳು ಭಾರತದ ಆರ್ಥಿಕತೆಯ ಭದ್ರ ಬೇರುಗಳು. ಇವುಗಳನ್ನು ಪಾಲನೆ, ಪೋಷಣೆ ಮಾಡಿದರೆ ದೇಶದ ಅತಿ ದೊಡ್ಡ ವರ್ಗವನ್ನು ಹಣಕಾಸು ವ್ಯವಸ್ಥೆಯೊಳಗೆ (Financial Inclusion) ತರಲು ಸಹಕಾರಿಯಾಗುತ್ತದೆ.

    (ಲೇಖಕರು ಅಧ್ಯಕ್ಷರು, ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್)

    ಶಿವಮೊಗ್ಗದಲ್ಲಿ ಮತ್ತೆ ಕೋಮುಸಂಘರ್ಷ; 2 ಗುಂಪುಗಳ ಮಧ್ಯೆ ಗಲಾಟೆ, ಕಲ್ಲು ತೂರಾಟ, ಚಾಕು ಇರಿತ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts