More

    ದೇಹಕ್ಕೆ ಸುಸ್ತಾದರೆ ವಿಶ್ರಾಂತಿ ಬೇಕು, ಮನಸ್ಸಿಗೆ ಆಯಾಸವಾದರೆ…?

    ಜಿಮ್​ಗೆ ಹೋಗ್ತೀರಿ, ಅಲ್ಲಿ ವ್ಯಾಯಾಮ ಮಾಡ್ತೀರಿ, ಮೈಕೈ ಎಲ್ಲ ನೋವಾಗುತ್ತೆ … ಒಂದು ರಾತ್ರಿ ರೆಸ್ಟ್ ಮಾಡಿದರೆ ಮತ್ತೆ ಫ್ರೆಶ್ ಆಗತ್ತೆ. ದೇಹಕ್ಕೆ ಸುಸ್ತಾದಾಗ ರೆಸ್ಟ್ ಸಾಕು. ಆದರೆ, ಮನಸ್ಸಿಗೆ ಸುಸ್ತಾದಾಗ? ಸಣ್ಣ ವಿಷಯಗಳಿಂದ ದೊಡ್ಡ ವಿಷಯಗಳ ತನಕ ಮಕ್ಕಳು ನಮ್ಮ ಮಾತು ಕೇಳುತ್ತಿಲ್ಲ ಅಂತಾನೋ, ಕ್ರಿಕೆಟ್ ಟೀಮ್ೆ ನನ್ನನ್ನ ಸೇರಿಸಿಕೊಳ್ಳಲಿಲ್ಲ ಅಂತಲೋ, ಎಕ್ಸಾಮ್ಲ್ಲಿ ಸರಿಯಾಗಿ ಉತ್ತರ ಕೊಡಲಿಲ್ಲ, ಯಾರೂ ನನ್ನ ಜೋಕ್​ಗೆ ನಗಲಿಲ್ಲ, ನಾನು ಒಳ್ಳೆಯ ಕಂಪನಿ ಅಲ್ಲ ಒಂಟಿಯಾಗಿ ಇರೋದೇ ಸರಿ, ಯಾರೋ ಹಲವು ವರ್ಷಗಳ ಹಿಂದೆ ನಮಗೆ ಅವಮಾನ ಮಾಡಿರುತ್ತಾರೆ ಅಂತಲೋ … ಒಟ್ಟಾರೆ ಏನೋ ಒಂದು ವಿಷಯ ನಮ್ಮ ಮನಸ್ಸನ್ನು ಆಕ್ರಮಿಸಿಕೊಂಡು ಸುಸ್ತು ಮಾಡಿರುತ್ತದೆ. ಇದು ಬಹಳ ಅಪಾಯಕರ.

    ದೇಹಕ್ಕೆ ಸುಸ್ತಾದರೆ ವಿಶ್ರಾಂತಿ ಬೇಕು, ಮನಸ್ಸಿಗೆ ಆಯಾಸವಾದರೆ...?ಈ ತರಹ ಆಗೊಮ್ಮೆ ಈಗೊಮ್ಮೆ ನಮ್ಮ ಮನಸ್ಸಿಗೆ ಬೇಸರ ಮಾಡುವಂತಹ ವಿಷಯಗಳ ಮಧ್ಯೆ, ಪ್ರತಿನಿತ್ಯ ನಮ್ಮ ಮನಸ್ಸಿಗೆ ಟೆನ್ಶನ್ ಕೊಡುವಂತಹ ವಿಷಯ ಎಂದರೆ ಅದು ನಮ್ಮ ಕೆಲಸ. ಎಷ್ಟೋ ಕಾಪೋರೇಟ್ ಹುಡುಗರನ್ನು ನೋಡಿದ್ದೀನಿ. ಮನೆಯಿಂದ ಆಫೀಸ್​ಗೆ ಎರಡು ಗಂಟೆ ಜರ್ನಿ ಮಾಡುತ್ತಾರೆ. ಅಲ್ಲಿ ಎಂಟು ಗಂಟೆ ಕೆಲಸ ಮಾಡಿ ಮತ್ತೆ ಎರಡು ಗಂಟೆ ಪ್ರಯಾಣ. ಮನೆಗೆ ವಾಪಸ್ಸು ಬರುವ ಹೊತ್ತಿಗೆ, ಕೂಲಿ ಕೆಲಸ ಮಾಡುವವರಿಗಿಂತ ಸುಸ್ತಾಗಿ ಕಾಣುತ್ತಾರೆ. ಇದು ದೈಹಿಕ ಸುಸ್ತಲ್ಲ. ಮಾನಸಿಕ ಸುಸ್ತು ಅಷ್ಟೇ. ಎಲ್ಲೋ ಒಂದು ಕಡೆ ಮಾಡುತ್ತಿರುವ ಕೆಲಸದಲ್ಲಿ ಅವರಿಗೆ ಸಿಗಬೇಕಾದ ಮನ್ನಣೆ ಸಿಕ್ಕಿರುವುದಿಲ್ಲ ಅಥವಾ ಸಿಗಬೇಕಾದ ಸಂಬಳ ಸಿಗದಿರಬಹುದು ಅಥವಾ ಬಾಸ್ ಅವರ ಕೆಲಸವನ್ನು ಮೆಚ್ಚುತ್ತಿಲ್ಲ ಅಂತಿರಬಹುದು … ಒಟ್ಟಿನಲ್ಲಿ ಈ ನಿರೀಕ್ಷೆಗಳು ಮತ್ತು ವಾಸ್ತವತೆಯ ಗ್ಯಾಪ್ ಇದೆಯಲ್ಲ, ಅದು ಅವರನ್ನು ಸುಸ್ತು ಮಾಡುತ್ತಿರುತ್ತದೆ.

    ನಮ್ಮ ನಿರೀಕ್ಷೆಗಳು ಮತ್ತು ಆಸೆಗಳು ಯಾವಾಗಲೂ ಆಕಾಶದೆತ್ತರಕ್ಕೆ ಇರುತ್ತವೆ. ಹಾಗಾಗಿ ಅದನ್ನು handle ಮಾಡೋದು ಸ್ವಲ್ಪ ಕಷ್ಟವೇ. ನಮ್ಮ ಮನಸ್ಸಿನಲ್ಲಿ ಇರುವ ನಿರೀಕ್ಷೆಗಳು, ಆಸೆಗಳು ನಮ್ಮ ಬಾಸ್​ಗೆ, ನಮ್ಮ ಸಂಗಾತಿಗೆ, ನಮ್ಮ ಸಂಬಂಧಿಕರಿಗೆ ಅರ್ಥ ಆಗುವುದಿಲ್ಲ. ಅವರಿಗೆ ಅರ್ಥ ಆಗುತ್ತೆ, ಆ ಆಸೆಗಳನ್ನು ಪೂರೈಸುತ್ತಾರೆ ಅಂತ ಕಾಯುತ್ತಲೇ ಇರುತ್ತೇವೆ. ಆದರೆ, ಅದು ಆಗೋದೇ ಇಲ್ಲ. ಅದನ್ನು ಪದಗಳ ಮೂಲಕ ವ್ಯಕ್ತಪಡಿಸುವ ಜಾಣ್ಮೆಯಾಗಲಿ, ಧೈರ್ಯವಾಗಲಿ ನಮಗಿರುವುದಿಲ್ಲ. ಅದು ನಮ್ಮ ಸಮಸ್ಯೆ ಕೂಡಾ. ಹಾಗಾಗಿ, ನಮ್ಮ ತಲೆಯಲ್ಲಿರುವ ಆ ಕಾಲ್ಪನಿಕ ಜೀವನಕ್ಕೂ, ನಮ್ಮ ವಾಸ್ತವ ಜೀವನಕ್ಕೂ ಅಜಗಜಾಂತರ ವ್ಯತ್ಯಾಸ ಇರುತ್ತದೆ. ಆ ವ್ಯತ್ಯಾಸವೇ ನಮ್ಮ ಈ ಮಾನಸಿಕ ಸುಸ್ತಿಗೆ ಕಾರಣವಾಗುತ್ತದೆ.

    ಅದಕ್ಕೆ ಕಾರಣ ನಮ್ಮ ತಲೆಯಲ್ಲಿರುವ ಲಿಸ್ಟು. ಆ ಕೆಲಸ ಮಾಡಬೇಕು, ಹೆಂಡತಿ ಹೀಗಿರಬೇಕು, ಬ್ಯಾಂಕ್ ಬ್ಯಾಲೆನ್ಸ್ ಅಷ್ಟಿರಬೇಕು, ಪ್ರಶಸ್ತಿ-ಪುರಸ್ಕಾರಗಳು ಸಿಗುತ್ತಿರಬೇಕು… ಎಂಬ ಏನೇನೋ ಆಸೆಗಳು ಇರುತ್ತವೆ. ಆದರೆ, ವಾಸ್ತವದಲ್ಲಿ ಅದ್ಯಾವುದೂ ಇರುವುದಿಲ್ಲ. ಆ ಲಿಸ್ಟ್​ನಲ್ಲಿರುವ ಒಂದಂಶಕ್ಕೂ, ನಿಜಜೀವನದಲ್ಲಿ ಅದೇ ಅಂಶಕ್ಕೂ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ನಿಮ್ಮ ತಲೆಯಲ್ಲಿರುವ ಆ ಪಟ್ಟಿಯನ್ನು ಕಿತ್ತು ಬಿಸಾಕಿ ಎಂದು ನಾನು ಹೇಳುವುದಿಲ್ಲ. ಅದು ಸಾಧ್ಯವೂ ಅಲ್ಲ. ಬುದ್ಧನಂತಹ ಜ್ಞಾನೋದಯ ಹೊಂದಿದವರಿಗೆ ಮಾತ್ರ ಅದು ಸಾಧ್ಯವಾಗಬಹುದು. ನನ್ನ ನಿಮ್ಮಂಥ ಸಾಧಾರಣ ವ್ಯಕ್ತಿಗಳು, ನಮ್ಮ ತಲೆಯಲ್ಲಿರುವ ಲಿಸ್ಟ್ ಪೂರ್ಣಗೊಳ್ಳುತ್ತೆ ಎಂಬ ಆಸೆಯಿಂದ ಬದುಕುತ್ತಿರುತ್ತೇವೆ. ಅದನ್ನು ತಲೆಯಿಂದ ಕಿತ್ತು ಬಿಸಾಕುವ ಬದಲು, ಸ್ವಲ್ಪ ಸೂಕ್ಷವಾಗಿ ಅದರ ಬಗ್ಗೆ ಅವಲೋಕಿಸಿ, ಅತಿರೇಕ ಅಂಶಗಳನ್ನು, impractical ವಿಷಯಗಳನ್ನು ತೆಗೆದುಹಾಕಿದರೆ ಸ್ವಲ್ಪ ನೆಮ್ಮದಿ ಕಾಣಬಹುದು.

    ಎರಡನೆಯ ವಿಷಯ, ನಾವು ಹಾಗೆ ಫಿಲ್ಟರ್ ಮಾಡಿ, ತಯಾರಿ ಮಾಡಿರುವ ಹೊಸ ಪಟ್ಟಿಗೆ ಬೇಕಾದ ಅರ್ಹತೆಗಳನ್ನು ಬೆಳೆಸಿಕೊಳ್ಳುವುದು. ಅಂದರೆ ಸಲ್ಮಾನ್ ಖಾನ್ ತರಹ ಸಿಕ್ಸ್ ಪ್ಯಾಕ್ ಬಾಡಿ ಬೇಕು ಎಂದರೆ, ಪ್ರತಿದಿನ ಬೇಗ ಎದ್ದು ಜಿಮ್ೆ ಹೋಗಿ ಕಸರತ್ತು ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಅಥವಾ ಆ ಸಿಕ್ಸ್ ಪ್ಯಾಕ್​ನ ನಮ್ಮ ಲಿಸ್ಟ್​ನಿಂದ ಕಿತ್ತು ಹಾಕಬೇಕು. ಆ ವಿಷಯವು ತಲೆಯಲ್ಲಿರುವ ಲಿಸ್ಟ್​ನಲ್ಲಿ ಮಾತ್ರ ಇದ್ದು, ನಿತ್ಯದ ದಿನಚರಿಯಲ್ಲಿ ಇಲ್ಲವಾದರೆ, ಇದ್ದು ಅದರ ಕಡೆಗೆ ಒಂದು ಸಣ್ಣ ಹೆಜ್ಜೆಯನ್ನೂ ನಾವು ಇಡದಿದ್ದರೆ, ಅದು ಪಟ್ಟಿಯಲ್ಲಿ ಇರುತ್ತದೆಯೇ ಹೊರತು ವಾಸ್ತವದಲ್ಲಿ ನಿಜ ಆಗುವುದೇ ಇಲ್ಲ. ಅದೇ ತಲೆಯಲ್ಲಿರುವ ಪಟ್ಟಿಯತ್ತ ಪ್ರತಿದಿನ ಒಂದು ಸಣ್ಣ ಮಗುವಿನ ಹೆಜ್ಜೆ ಇಟ್ಟರೂ, ಒಂದು ದಿನ ನಾವು ಆ ವಿಷಯವನ್ನು ಟಿಕ್ ಮಾಡುವ ಸಾಧ್ಯತೆ ಇರುತ್ತದೆ.

    ಹಾಗಾಗಿ ನಮ್ಮ ಮಾನಸಿಕ ಸುಸ್ತಿಗೆ ಹೊರಗಿನವರು ಎಷ್ಟು ಕಾರಣರೋ, ನಾವು ಸಹ ಅಷ್ಟೇ ಕಾರಣರು. ಒಳ್ಳೆಯ ಕೆಲಸ ಮಾಡಿದಾಗ ಬಾಸ್ ಮೆಚ್ಚಲಿಲ್ಲ ಅಂದರೆ, ಅದು ಅವರ ತಪ್ಪಾಗುತ್ತದೆ. ಆದರೆ, ಕೊಟ್ಟ ಕೆಲಸವನ್ನು ಸರಿಯಾಗಿ ಮಾಡಲಿಲ್ಲ ಎಂದರೆ ಅದು ನಮ್ಮ ತಪ್ಪಲ್ಲವಾ? ಹಾಗಾಗಿ ಮಾನಸಿಕ ಸುಸ್ತಿಗೆ ನಮ್ಮ ಕಡೆಯಿಂದ ಏನು ಮಾಡಬಹುದು? ನಿಮಗೆ ಬಹಳ ಇಷ್ಟವಿರುವ ಕೆಲಸಗಳನ್ನು ಆಯ್ಕೆ ಮಾಡಿಕೊಂಡು, ಅದರಲ್ಲಿ ತೊಡಗಿಸಿಕೊಳ್ಳಿ. ನಾನು ಚಿತ್ರರಂಗಕ್ಕೆ ಬಂದು 30 ವರ್ಷಗಳಾದರೂ, ಈಗಲೂ ಬೆಳಿಗ್ಗೆ ಎಂಟಕ್ಕೆ ಕಾರ್ ಬರುತ್ತದೆ ಎಂದರೆ, 7.45ಕ್ಕೆ ರೆಡಿಯಾಗಿರುತ್ತೇನೆ. ಏಕೆಂದರೆ, ನನಗೆ ಆ ಕೆಲಸ ಬಹಳ ಇಷ್ಟ. ನಮ್ಮ ಇಷ್ಟದ ಕೆಲಸವನ್ನು ಆಯ್ಕೆ ಮಾಡಿಕೊಂಡಾಗ, ಪ್ರತಿನಿತ್ಯ ಆ ಕೆಲಸಕ್ಕೆ ಹೋಗುವುದಕ್ಕೆ ಕಾಯುತ್ತಿರುತ್ತೀವಿ.

    ಎಲ್ಲರಿಗೂ ತಮಗೆ ಇಷ್ಟವಾಗುವಂತಹ ಕೆಲಸವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರುವುದಿಲ್ಲ. ಯಾವುದೋ ಅನಿವಾರ್ಯತೆಗೆ, ಒತ್ತಡಗಳಿಗೆ ಮಣಿದು ನಾವು ಕೆಲವು ಕೆಲಸಗಳನ್ನು ಆಯ್ಕೆ ಮಾಡಿಕೊಂಡಿರುತ್ತೇವೆ. ಈ ತರಹ ಆದಾಗ, ಆ ಕೆಲಸವನ್ನು ದಯವಿಟ್ಟು ಮನಸ್ಪೂರ್ತಿಯಾಗಿ ಮಾಡಿ. ಅರ್ಧಮನಸ್ಸಿನಿಂದ ಏನೇ ಕೆಲಸ ಮಾಡಿದರೂ ವಿಪರೀತ ಸುಸ್ತಾಗುತ್ತದೆ. ಬೋರ್ ಆಗುತ್ತದೆ. ಅದಕ್ಕಿಂತ ಹೆಚ್ಚಾಗಿ ಜೀವನೋತ್ಸಾಹ ಕಡಿಮೆಯಾಗುತ್ತದೆ. ಅದೇ ಒಂದು ಕೆಲಸವನ್ನು ಪ್ರೀತಿಯಿಂದ ಮಾಡಿದಾಗ, involved ಆಗಿ ಮಾಡಿದಾಗ, 12 ಗಂಟೆ ಕೆಲಸ ಮಾಡಿದರೂ, ದೈಹಿಕವಾಗಿ ಅದೆಷ್ಟೇ ಸುಸ್ತಾದರೂ ಮಾನಸಿಕವಾಗಿ ಸುಸ್ತಾಗುವುದಿಲ್ಲ. ಸೋ, ಮುಂದೆಂದಾದರೂ ನಿಮಗೆ ಮಾನಸಿಕವಾಗಿ ಸುಸ್ತಾದರೆ ಏನು ಮಾಡಬೇಕು ಗೊತ್ತಲ್ಲ?

    (ಲೇಖಕರು ನಟ, ನಿರ್ದೇಶಕ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts