More

    900 ಜನರ ನೇತ್ರ ಶಸ್ತ್ರಚಿಕಿತ್ಸೆ ಗುರಿ

    ಸವದತ್ತಿ: ಜನ್ಮದಿನದ ಪ್ರಯುಕ್ತ ಉಚಿತ ನೇತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಂಡಿದ್ದು ತುಂಬ ಸಂತೋಷ ತಂದಿದೆ. ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

    ಇಲ್ಲಿನ ತಾಲೂಕಾಸ್ಪತ್ರೆಯಲ್ಲಿ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸುಮಾರು 900 ಜನರಿಗೆ ಶಸ್ತ್ರಚಿಕಿತ್ಸೆ ಗುರಿ ಹೊಂದಿದ್ದೇವೆ. ಬಡವರಿಗೆ, ದೀನ-ದಲಿತರಿಗೆ ಶಿಬಿರದಿಂದ ನೆರವಾಗಲಿದೆ. ತಾಲೂಕಿನ ಎಲ್ಲ ಅಧಿಕಾರಿಗಳು ಜವಾಬ್ದಾರಿ ತೆಗೆದುಕೊಂಡು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನುರಿತ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ. ತಾಲೂಕಾಸ್ಪತ್ರೆಯಲ್ಲಿಯೂ ಉತ್ತಮ ವೈದ್ಯರಿದ್ದು, ಜಿಲ್ಲೆಯಲ್ಲಿಯೇ ನಮ್ಮ ತಾಲೂಕಿನಲ್ಲಿ ನೇತ್ರ ಶಸ್ತ್ರಚಿಕಿತ್ಸೆ ಪರಿಣಾಮಕಾರಿಯಾಗಿರುವುದು ಹೆಮ್ಮೆಯ ಸಂಗತಿ ಎಂದರು.

    ಈಗಿರುವ 100 ಕೊಠಡಿಗಳ ತಾಲೂಕಾಸ್ಪತ್ರೆಯನ್ನು 250 ಕೊಠಡಿಗೆ ಮೇಲ್ದರ್ಜೆಗೇರಿಸುವ ಮೂಲಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 180 ಕೋಟಿ ರೂ.ಅನುದಾನ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುನವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸುವಲ್ಲಿ ಯಶಸ್ವಿಯಾಗಿದ್ದೇವೆ. ಯರಗಟ್ಟಿ ಆರೋಗ್ಯ ಕೇಂದ್ರವನ್ನು ತಾಲೂಕಾಸ್ಪತ್ರೆಗೆ ಉನ್ನತೀಕರಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉತ್ತಮ ಚಿಕಿತ್ಸೆ, ಔಷಧ ನೀಡಲು ಕ್ರಮ ಕೈಗೊಳ್ಳಲಾಗಿದೆ. ಕ್ಷೇತ್ರದ ಜನ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿದ್ದು, ಜನರ ಕನಸು ನನಸು ಮಾಡಿಯೇ ಮತ್ತೆ ಜನರ ಮುಂದೆ ಹೋಗುತ್ತೇನೆ ಎಂದರು.

    ಜನಹಿತ ಐ ಕೇರ್ ಸೆಂಟರ್‌ಸಂಚಾಲಕ ಬಸವರಾಜ ಪಟ್ಟೇದ ಮಾತನಾಡಿ, ಬೆಳಗಾವಿಯಿಂದ ಪ್ರಾರಂಭವಾದ ಜನಹಿತ ಐ ಕೇರ್ ರಾಜ್ಯದ ಮೂಲೆ ಮೂಲೆಯಲ್ಲಿ ಸೇವೆ ಸಲ್ಲಿಸಿದೆ. ಜಿಲ್ಲೆಗೆ ಕೇವಲ 2,000 ನೇತ್ರಶಸ್ತ್ರ ಚಿಕಿತ್ಸೆಗೆ ಅನುಮತಿ ನೀಡಲಾಗಿದ್ದು, ಸರ್ಕಾರದ ಮಟ್ಟದಲ್ಲಿ ಸಮಾಲೋಚಿಸಿ ಹೆಚ್ಚಿನ ಸೇವೆಗೆ ಅವಕಾಶ ಕಲ್ಪಿಸಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು.

    ವೈದ್ಯಾಧಿಕಾರಿ ಎಂ.ಎಂ. ಮಲ್ಲನಗೌಡರ ಮಾತನಾಡಿ, ಶಾಸಕರು ಆಡಂಬರದ ಗೋಜಿಗೆ ಹೋಗದೆ ದಷ್ಟಿ ಭಾಗ್ಯ ನೀಡುವ ಮೂಲಕ ಹುಟ್ಟುಹಬ್ಬ ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ವಯಸ್ಸಿಗೆ ತಕ್ಕಂತೆ ಕಣ್ಣಿನಲ್ಲಿ ಪೊರೆ ಬರುವುದು ಸಹಜವಾಗಿದ್ದು, ಆರ್ಥಿಕವಾಗಿ ಕಣ್ಣಿನ ಪರೀಕ್ಷೆಗೆ ಹಿಂದೇಟು ಹಾಕುವ ಬಡ ಜನರಿಗೆ ಇಂತಹ ಶಿಬಿರಗಳಿಂದ ಅನುಕೂಲವಾಗುತ್ತದೆ. ನುರಿತ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

    ನೂರಾರು ಜನ ಬೆಳಗ್ಗೆಯಿಂದಲೇ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾಲುಗಟ್ಟಿ ನಿಂತು ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರು. ಆಸ್ಪತ್ರೆಯ ವೈದ್ಯರ ತಂಡ ತಪಾಸಣೆ ನಡೆಸಿ ಔಷಧೋಪಚಾರ ನೀಡಿದರು. ಉಚಿತ ಕಣ್ಣಿನ ಪೊರೆ ತಪಾಸಣೆ ನಡೆಸಿ, ಕೆಲವರ ಶಸ್ತ್ರಚಿಕಿತ್ಸೆ ಮಾಡಲಾಯಿತು. ಕುಂದರಗಿಯ ಅಡವಿ ಸಿದ್ದೇಶ್ವರ ಶ್ರೀಗಳು, ಚಿದಂಬರೇಶ್ವರ ಮಠದ ದಂಡಪಾಣಿ ದೀಕ್ಷಿತರು, ಪ್ರಸನ್ನ ದೀಕ್ಷಿತರು, ತಹಸೀಲ್ದಾರ್ ಮಲ್ಲಿಕಾರ್ಜುನ್ ಹೆಗ್ಗನ್ನವರ, ಜಿಲ್ಲಾ ಆರೋಗ್ಯ ಅಧಿಕಾರಿ ಮಹೇಶ ಕೋಣೆ, ತಾಪಂ ಇಒ ಯಶವಂತಕುಮಾರ, ಪಿಐ ಕರುಣೇಶಗೌಡ ಜೆ., ಮಹಾಂತೇಶ ರಾಮಣ್ಣವರ, ಆರೋಗ್ಯಾಧಿಕಾರಿ ಶ್ರೀಪಾದ ಸಬನೀಸ್, ಪ್ರಭು ಪ್ರಭುನವರ, ದೀಪಕ ಜಾನ್ವೆಕರ, ಶಿವಾನಂದ ಪಟ್ಟಣಶೆಟ್ಟಿ, ಮನೋಹರ ಶೆಟ್ಟರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts