More

    ನಕಲಿ ಚಿನ್ನಕ್ಕೆ ಅಸಲಿ ಎಂದು ದೃಢೀಕರಿಸಿದ ಪರಿವೀಕ್ಷಕ;2 ಬ್ಯಾಂಕ್‌ಗಳಲ್ಲಿ 900 ಗ್ರಾಂ ನಕಲಿ ಚಿನ್ನ ಪತ್ತೆ

    ಬೆಂಗಳೂರು: ನಕಲಿ ಚಿನ್ನವನ್ನು ಅಸಲಿ ಎಂದು ದೃಢೀಕರಿಸಿ ಗ್ರಾಹಕರಿಗೆ ಬ್ಯಾಂಕ್‌ನಲ್ಲಿ ಸಾಲ ಪಡೆಯಲು ಅನುಕೂಲ ಮಾಡುತ್ತಿದ್ದ ಚಿನ್ನ ಶುದ್ಧತೆಯ ಪರಿವೀಕ್ಷಕನ ಬಣ್ಣ ಬಯಲಾಗಿದೆ. 2 ಬ್ಯಾಂಕ್‌ಗಳಿಗೆ ಅಂದಾಜು 900 ಗ್ರಾಂ ಚಿನ್ನ ಮೋಸ ಮಾಡಿದ್ದು,ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

    ಬ್ರಿಗೇಡ್ ರಸ್ತೆಯಲ್ಲಿನ ಸಿಎಸ್‌ಬಿ ಬ್ಯಾಂಕ್‌ನಲ್ಲಿ ವಂಚನೆ ನಡೆದಿದ್ದು, ಈ ಕುರಿತು ಮ್ಯಾನೇಜರ್ ಟಿ.ಪಿ. ಪೊರತ್ತೂರು, ದೂರು ನೀಡಿದ್ದಾರೆ. ಜುಲೈ 18ರಂದು ಗೋಲ್ಡ್ ಆಡಿಟ್ ಮಾಡಿದಾಗ ರಾಜಯ್ಯ, ರೇಷ್ಮಾ, ಸಿದ್ದಗಂಗಪ್ಪ ಎಂಬುವರು ಅಡವಿಟ್ಟ ಚಿನ್ನ ನಕಲಿ ಎಂಬುದು ಗೊತ್ತಾಗಿದೆ.

    ಇವರು ಅಡವಿಟ್ಟಿದ್ದ ಚಿನ್ನದಲ್ಲಿ 35.29 ಲಕ್ಷ ರೂ. ಮೌಲ್ಯದ 798 ಗ್ರಾಂ ನಕಲಿ ಚಿನ್ನ ಪತ್ತೆಯಾಗಿದೆ. ಚಿನ್ನದ ಸಾಲ ನೀಡುವಾಗ ಚಿನ್ನ ಪರಿವೀಕ್ಷಣೆಗೆ ಸೆಂಟ್ರಲ್ ಅಪ್ರೈಸರ್ ಏಜೆನ್ಸಿಗೆ ಗುತ್ತಿಗೆ ನೀಡಲಾಗಿತ್ತು. ಏಜೆನ್ಸಿಯ ಕೃಷ್ಣಾನಂದಾ ಎಂಬಾತ, ಬ್ಯಾಂಕ್‌ನಲ್ಲಿ ಚಿನ್ನದ ಸಾಲ ಪಡೆಯಲು ಬರುವ ಗ್ರಾಹಕರಿಂದ ಪಡೆದ ಚಿನ್ನವನ್ನು ಪ್ರಮಾಣೀಕರಿಸುತ್ತಿದ್ದ.

    ರಾಜಯ್ಯ, ರೇಷ್ಮಾ ಮತ್ತು ಸಿದ್ದಗಂಗಪ್ಪ ಅವರಿಂದ ನಕಲಿ ಚಿನ್ನ ಪಡೆದು ಅಸಲಿ ಎಂದು ಪ್ರಮಾಣೀಕರಿಸಿ ಸಾಲ ಮಂಜೂರಿಗೆ ಸಹಕರಿಸಿದ್ದಾನೆ. ಈ ಮೂಲಕ ಬ್ಯಾಂಕಿಗೆ ಆರೋಪಿತರು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದರ ಮೇರೆಗೆ ಆರೋಪಿಗಳಾದ ಕೃಷ್ಣಾನಂದ, ಸಿದ್ದಗಂಗಪ್ಪ, ರಾಜಯ್ಯ ಮತ್ತು ರೇಷ್ಮಾ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇದೇ ರೀತಿ ಸೆಂಟ್ರಲ್ ಅಪ್ರೈಸರ್ ಏಜೆನ್ಸಿಯ ಕೃಷ್ಣಾನಂದಾ, ಬ್ರಿಗೇಡ್ ರಸ್ತೆಯಲ್ಲಿನ ಬ್ಯಾಂಕ್ ಆ್ ಮಹಾರಾಷ್ಟ್ರದಲ್ಲೂ ಚಿನ್ನ ದೃಢೀಕರಿಸುವ ಕೆಲಸ ಮಾಡುತ್ತಿದ್ದ. ಈ ಬ್ಯಾಂಕಿನಲ್ಲಿ ಸಹ ಅಡವಿಟ್ಟಿದ್ದ ಚಿನ್ನ ಆಡಿಟ್ ಮಾಡಿದಾಗ 69.96 ಗ್ರಾಂ ನಕಲಿ ಚಿನ್ನ ಪತ್ತೆಯಾಗಿದೆ. ಈ ಕುರಿತು ಬ್ಯಾಂಕ್ ವ್ಯವಸ್ಥಾಪಕ ಡಿ. ಮಧುಮತಿ, ದೂರು ನೀಡಿದ್ದಾರೆ.

    ಕೆ.ಎಂ.ಕೃಷ್ಣ ಹೆಗಡೆ, ಬುಷ್ರಾ ಫಿರ್ದೋಸ್, ವಿ.ಎಂ.ರಾಜಯ್ಯ, ವಿಜಯಕುಮಾರ್, ಸಿದ್ದಗಂಗಪ್ಪ ಎಂಬುವರು ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದಿದ್ದಾರೆ. ಇವರ ಚಿನ್ನವನ್ನು ಕೃಷ್ಣಾನಂದ, ನಕಲಿ ಚಿನ್ನವನ್ನು ಅಸಲಿ ಎಂದು ದೃಢೀಕರಿಸಿ ಬ್ಯಾಂಕಿಗೆ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts