More

    70 ವಿಧಾನಸಭಾ ಕ್ಷೇತ್ರಗಳಲ್ಲಿ 85 ಕೋಟಿ ರೂ. ಕಾಮಗಾರಿ

    ಹಾವೇರಿ: ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಅಂತರ್ಜಲ ಹೆಚ್ಚಳ, ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುವುದು. ಜಿಲ್ಲೆಯ 3 ಕ್ಷೇತ್ರಗಳು ಒಳಗೊಂಡಂತೆ ರಾಜ್ಯದ 70 ವಿಧಾನಸಭಾ ಕ್ಷೇತ್ರಗಳಲ್ಲಿ 85.22 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎನ್.ಇ. ಜೀವನಮೂರ್ತಿ ತಿಳಿಸಿದರು.

    ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020-21ನೇ ಸಾಲಿನ ಮುಂದುವರಿದ ವಿಶೇಷ ಯೋಜನೆಯ ಕಾಮಗಾರಿಗೆ 79.82 ಕೋಟಿ ರೂ. ಮುಂದುವರಿದ ಕಾಮಗಾರಿಗೆ 5.40 ಕೋಟಿ ರೂ. ಸೇರಿ 85.22 ಕೋಟಿ ರೂ. ಅನುದಾನ ಅಗತ್ಯವಿದೆ. ಮಂಡಳಿಯ ಬಳಿ 17.55 ಕೋಟಿ ರೂ. ಲಭ್ಯವಿದ್ದು, 1,774 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 196 ಕಾಮಗಾರಿ ಪೂರ್ಣಗೊಳಿಸಲಾಗಿದೆ. ಬಾಕಿ ಕಾಮಗಾರಿ ಪೂರ್ಣಗೊಳಿಸಲು 67.67 ಕೋಟಿ ರೂ. ಅನುದಾನ ಕೊರತೆಯಾಗಿದ್ದು, ಈ ಆರ್ಥಿಕ ವರ್ಷದಲ್ಲೇ ಪೂರ್ಣಗೊಳಿಸಲು ಮುಖ್ಯಮಂತ್ರಿಗೆ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾಗಿದೆ ಎಂದರು.

    ಜಿಲ್ಲೆಯ ರಾಣೆಬೆನ್ನೂರ, ಬ್ಯಾಡಗಿ ಹಾಗೂ ಹಾವೇರಿ ತಾಲೂಕುಗಳು ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಗೆ ಸೇರ್ಪಡೆಗೊಂಡಿವೆ. ಈ 3 ತಾಲೂಕುಗಳಲ್ಲಿ ಜಿಪಂ ಇಂಜಿನಿಯರಿಂಗ್ ವಿಭಾಗದಿಂದ 1.97 ಕೋಟಿ ರೂ. ವೆಚ್ಚದ 42 ಕಾಮಗಾರಿಗಳು ಹಾಗೂ ಕೆಆರ್​ಐಡಿಎಲ್ ವತಿಯಿಂದ 2 ಕೋಟಿ ರೂ. ವೆಚ್ಚದ 16 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

    1995ರಲ್ಲಿ ರಚನೆಯಾದ ಬಯಲು ಸೀಮೆ ಅಭಿವೃದ್ಧಿ ಮಂಡಳಿ ಆರಂಭದಲ್ಲಿ 8 ಜಿಲ್ಲಾ ವ್ಯಾಪ್ತಿ ಒಳಗೊಂಡಿತ್ತು. ಜಿಲ್ಲೆಗಳ ಪುನರ್ ರಚನೆ ತರುವಾಯ ಹೆಚ್ಚುವರಿಯಾಗಿ ಆರು ಜಿಲ್ಲೆ ಸೇರ್ಪಡೆಗೊಂಡು 14 ಜಿಲ್ಲೆಗಳ 58 ತಾಲೂಕುಗಳ 70 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿರುತ್ತದೆ. ಈ ಜಿಲ್ಲೆಗಳ ಸಂಸದರು, ಶಾಸಕರು, ವಿಪ ಸದಸ್ಯರು, ಜಿಪಂ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು ಸೇರಿ 147 ಸದಸ್ಯರನ್ನು ಒಳಗೊಂಡಿದೆ. ಹಾವೇರಿ, ಬಾಗಲಕೋಟೆ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಹಾಸನ, ಕೋಲಾರ, ರಾಮನಗರ, ತುಮಕೂರ ಹಾಗೂ ವಿಜಯಪುರದ ಆಯ್ದ ತಾಲೂಕುಗಳಲ್ಲಿ ಮಂಡಳಿ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ ಎಂದರು.

    ಬಯಲು ಸೀಮೆ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರ್ಯ ಯೋಜನೆ ಹಾಕಿಕೊಳ್ಳಲಾಗಿದೆ. ಮಂಡಳಿಗೆ ಬಿಡುಗಡೆಯಾದ ಅನುದಾನದ ಪೈಕಿ ಶೇ. 60ರಷ್ಟನ್ನು ಅಂತರ್ಜಲ ಸಂರಕ್ಷಣೆ, ಕೃಷಿ ಸಂಬಂಧಿತ ಚುಟವಟಿಕೆಗಾಗಿ ಬಳಸಲಾಗುವುದು. ಉಳಿದಂತೆ ಶೇ. 40ರಷ್ಟು ಅನುದಾನವನ್ನು ರಸ್ತೆ ಇತರ ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ಬಳಸಲಾಗುವುದು. ಶಾಸಕರ ಮೂಲಕ ಪ್ರಸ್ತಾವಿಸಲ್ಪಟ್ಟ ಕಾಮಗಾರಿಗಳಿಗೆ ಮಂಡಳಿ ವತಿಯಿಂದ ಪರಿಶೀಲಿಸಿ ಆಡಳಿತಾತ್ಮಕ ಅನುಮೋದನೆ ನೀಡಿ, ಕಾಮಗಾರಿಯ ಒಟ್ಟು ವೆಚ್ಚದ ಶೇ. 40ರಷ್ಟು ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದರು.

    ಸುದ್ದಿಗೋಷ್ಠಿಯಲ್ಲಿ ಜಿಪಂ ಅಧ್ಯಕ್ಷ ಏಕನಾಥ ಭಾನುವಳ್ಳಿ, ಮಂಡಳಿಯ ಕಾರ್ಯದರ್ಶಿ ಎಸ್.ವೈ. ಬಸವರಾಜಪ್ಪ, ಉಪಕಾರ್ಯದರ್ಶಿ ಕೃಷ್ಣಾ ನಾಯಕ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts