More

    8 ಕಿಮೀ ರೋಡ್ ಷೋಗೆ ವ್ಯವಸ್ಥೆ

    ಬೆಳಗಾವಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆ.27ರಂದು ರೈಲ್ವೆ, ಜೆಜೆಎಂ, ಕೃಷಿ ಸೇರಿದಂತೆ ಒಟ್ಟು 2,250 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 190 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡಿರುವ ರೈಲ್ವೆ ನಿಲ್ದಾಣ, 932 ಕೋಟಿ ರೂ. ವೆಚ್ಚದ ಬೆಳಗಾವಿ-ಲೋಂಡಾ ಡಬಲ್ ರೈಲ್ವೆ ಟ್ರಾೃಕ್, ಸುಮಾರು 2 ಸಾವಿರ ಕೋಟಿ ರೂ. ಜೆಜೆಎಂ ಯೋಜನೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಅಲ್ಲದೆ, ದೇಶದ 8 ಕೋಟಿ ರೈತರಿಗೆ 16 ಸಾವಿರ ಕೋಟಿ ರೂ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆಯ 13ನೇ ಕಂತಿನ ನಿಧಿಯನ್ನು ಬಿಡುಗಡೆ ಮಾಡಲಿದ್ದಾರೆ. 1,132 ಕೋಟಿ ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ವಿವರಿಸಿದರು.

    ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರ ರೋಡ ಷೋ, ಅಭಿವೃದ್ಧಿ ಕಾರ್ಯಕ್ರಮಗಳ ಪಟ್ಟಿಯನ್ನು ಪ್ರಧಾನಿ ಕಾರ್ಯಾಲಯ ಪರಿಶೀಲನೆ ನಡೆಸಿ ಅಂತಿಮಗೊಳಿಸಿದೆ. ನಗರದ ಸಿಪಿಇಡಿ ಮೈದಾನದಿಂದ ಚನ್ನಮ್ಮ ವೃತ್ತ, ಕಾಲೇಜು ರಸ್ತೆ, ರೈಲ್ವೆ ನಿಲ್ದಾಣ, ಬಸವೇಶ್ವರ ವೃತ್ತ ಮಾರ್ಗವಾಗಿ 8 ಕಿಮೀ ಉದ್ದ ರೋಡ ಷೋ ನಡೆಸುವ ಕುರಿತು ಕಾರ್ಯಕ್ರಮ ರೂಪಿಸಲಾಗಿದೆ. ಆದರೆ, ಯಾವ ಮಾರ್ಗದಲ್ಲಿ ರೋಡ ಷೋ ನಡೆಸಬೇಕು ಎಂಬುದನ್ನು ಭದ್ರತಾ ಪಡೆಗಳು ಅಂತಿಮಗೊಳಿಸಲಿವೆ ಎಂದು ಹೇಳಿದರು.

    ಫೆ.27ರಂದು ಶಿವಮೊಗ್ಗದಿಂದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 1 ಗಂಟೆಗೆ ಪ್ರಧಾನಿ ಅವರು ಆಗಮಿಸಲಿದ್ದಾರೆ. ರೈಲ್ವೆ ನಿಲ್ದಾಣದಲ್ಲಿಯೇ ಎಲ್ಲ ಕಾಮಗಾರಿಗಳ ಉದ್ಘಾಟನೆ ನೆರವೇರಿಸಲಿದ್ದಾರೆ. ಬಳಿಕ ಸಾರ್ವಜನಿಕರ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. 18 ವಿಧಾನಸಭಾ ಕ್ಷೇತ್ರದ ಹಾಲಿ, ಮಾಜಿ ಶಾಸಕರು ಭಾಗವಹಿಸಲಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಂದ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ ಎಂದರು.
    ಸಂಸದೆ ಮಂಗಲ ಅಂಗಡಿ, ಶಾಸಕ ಅನಿಲ ಬೆನಕೆ, ಜಿಪಂ ಸಿಇಒ ಹರ್ಷಲ್ ಭೋಯರ್, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಎಂ.ಬಿ.ಝಿರಲಿ, ಪಾಲಿಕೆಯ ಸದಸ್ಯರು ಇತರರಿದ್ದರು.

    ಮಹದಾಯಿ ಪ್ರಾಧಿಕಾರ ರಚನೆ

    ಕೇಂದ್ರ ಸರ್ಕಾರವು ಮಹದಾಯಿ ನೀರು ನಿರ್ವಹಣೆ ಪ್ರಾಧಿಕಾರ ರಚನೆಗೆ ಅನುಮೋದನೆ ನೀಡಿದೆ. ಚುನಾವಣೆ ಘೋಷಣೆ ಮುನ್ನವೇ ಮಹದಾಯಿ ಯೋಜನೆ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ನಮ್ಮ ಪಾಲಿನ 3.9 ಟಿಎಂಸಿ ಕುಡಿಯುವ ನೀರು ಬಳಕೆ ಮಾಡಿಕೊಳ್ಳಲು ಯಾರಪ್ಪನ ಒಪ್ಪಿಗೆ ಬೇಕಾಗಿಲ್ಲ. ನಮ್ಮ ಪಾಲಿನ ನೀರನ್ನು ಸದ್ಬಳಕೆ ಮಾಡಿಕೊಳ್ಳುತ್ತೇವೆ. ಬಹುಗ್ರಾಮ ಕುಡಿಯುವ ನೀರಿನ ಹೊಸ ಯೋಜನೆಗೆ ಹಾಗೂ ವಿವಿಧ ಕಾರಣಗಳಿಂದ ಸ್ಥಗಿತಗೊಂಡಿರುವ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

    ಮಾ. 2ರಂದು ಶಿವಾಜಿ ಪ್ರತಿಮೆ ಲೋಕಾರ್ಪಣೆ

    ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ರಾಜಹಂಸಗಡದಲ್ಲಿ ಸರ್ಕಾರದ ಅನುದಾನದಲ್ಲಿ ನಿರ್ಮಿಸಿರುವ ಶಿವಾಜಿ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ ಮಾರ್ಚ್ 2ರಂದು ಜರುಗಲಿದೆ. ರಕ್ಷಣಾ ಸಚಿವ ರಾಜನಾಥ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಂಪುಟದ ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ಖಾನಾಪುರ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ಸಿಗಲಿದೆ ಎಂದು ಸಚಿವ ಗೋವಿಂದ ಕಾರಜೋಳ ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts