More

    ಪೆಟ್ರೋಲ್ ಬಂಕ್ ಲೈಸೆನ್ಸ್ ಕೊಡುವುದಾಗಿ 78 ಲಕ್ಷ ರೂ. ಗುಳುಂ

    ಬಾಗಲಕೋಟೆ: ದಿನೇ ದಿನೆ ಆನ್‌ಲೈನ್ ವಂಚಕರ ಜಾಲ ವಿಸ್ತರಣೆ ಆಗುತ್ತಲೇ ಇದೆ. ವಂಚಕರು ಬೀಸುವ ಬಲೆಗೆ ಒಂದು ಕಡೆಗೆ ಅಮಾಯಕರು ಬೀಳುತ್ತಿದ್ದರೆ ಮತ್ತೊಂದೆಡೆ ಸುಶಿಕ್ಷಿತರು ಸಹ ಮೋಸಕ್ಕೆ ಬಲಿಯಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ.

    ಪೆಟ್ರೋಲ್ ಬಂಕ್, ಗ್ಯಾಸ್ ಏಜೆನ್ಸಿ, ಕ್ಯಾಷ್ ಲೋನ್ ಆ್ಯಪ್, ಫೇಕ್ ಲಿಂಕ್‌ಗಳನ್ನು ಕಳುಹಿಸಿ ಜನರನ್ನು ಮೋಸಗೊಳಿಸಲಾಗುತ್ತಿದೆ. ಆನ್‌ಲೈನ್ ವಂಚಕರ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ವಂಚನೆಗೆ ಒಳಗಾಗುವವರ ಸಂಖ್ಯೆಯೂ ಹೆಚ್ಚುತ್ತಲೇ ಇದೆ.

    ಇದೀಗ ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ಎರಡು ಮೂರು ತಿಂಗಳಲ್ಲಿ ಹೀಗೆ ವಿವಿಧ ರೀತಿಯಲ್ಲಿ ಜಾಲ ಬೀಸಿ ವಂಚಕರು ಹತ್ತಿರ ಹತ್ತಿರ ಒಂದು ಕೋಟಿ ರೂ. ದೋಚಿರುವುದು ಬೆಳಕಿಗೆ ಬಂದಿದೆ. ಇನ್ನು ಮೋಸಕ್ಕೆ ಒಳಗಾಗಿದ್ದರೂ ಅದನ್ನು ಯಾರಿಗೂ ಹೇಳದೆ ದೂರು ದಾಖಲಿಸಲು ಮುಂದಾಗದೆ ಅನೇಕರು ಕೈಸುಟ್ಟುಕೊಂಡಿರುವುದು ಇದೆ.

    ಇದೀಗ ಪೆಟ್ರೋಲ್ ಬಂಕ್ ಡೀಲರ್‌ಶಿಪ್ ಹೆಸರಿನಲ್ಲಿ ಬಾಗಲಕೋಟೆಯಲ್ಲಿ ವ್ಯಕ್ತಿಯೊಬ್ಬರಿಂದ ಆನ್‌ಲೈನ್ ವಂಚಕರು ಬರೊಬ್ಬರಿ 78,22, 500 ರೂ. ದೋಚಿದ್ದು, ಇದೀಗ ಹಣ ಕಳೆದುಕೊಂಡಿರುವ ವ್ಯಕ್ತಿ ಸಿಇಎನ್ ಪೊಲೀಸ್ ಠಾಣೆಗೆ ಮೊರೆ ಹೋಗಿದ್ದಾರೆ.

    ನಗರದ ಉದ್ಯಮಿಯೊಬ್ಬರು ಹಿಂದುಸ್ತಾನ ಪೆಟ್ರೋಲಿಯಂ ಲಿ. ಡೀಲರ್‌ಶಿಪ್ ಪರವಾನಗಿ ಪಡೆಯಲು ಮೇಲ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡ ಆನ್‌ಲೈನ್ ವಂಚಕರು ಹಿಂದುಸ್ತಾನ ಪೆಟ್ರೋಲಿಯಂ ಲಿ. ಹೆಸರಿನಲ್ಲಿ ನಕಲಿ ದಾಖಲೆ ತಯಾರಿಸಿ ಅವುಗಳನ್ನು ತಮ್ಮ ಇ-ಮೇಲ್ ಮುಖಾಂತರ ಬಾಗಲಕೋಟೆ ವ್ಯಕ್ತಿ ಮೇಲ್‌ಗೆ ಕಳುಹಿಸಿದ್ದಾರೆ.

    ಬಳಿಕ ಡೀಲರ್‌ಶಿಪ್ ಪಡೆಯಲು ಏರಿಯಾ ಬ್ಲಾಂಕಿಂಗ್ ಫೀ, ಪರವಾನಗಿ ಶುಲ್ಕ, ಎನ್‌ಒಸಿ ಫೀ ಹೀಗೆ ವಿವಿಧ ಶುಲ್ಕ ಎಂದು 2023 ಅಕ್ಟೋಬರ್ 17 ರಿಂದ 2024 ಜನವರಿ 5 ರವರೆಗೆ ದೂರುದಾರನ ಖಾತೆಯಿಂದ ವಂಚಕರು ತಮ್ಮ ವಿವಿಧ ಖಾತೆಗಳಿಗೆ ಹಣ ಹಾಕಿಸಿಕೊಂಡು ಪಂಗನಾಮ ಹಾಕಿದ್ದಾರೆ. ಈ ಬಗ್ಗೆ ಜನವರಿ 7 ರಂದು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಈ ಮೊದಲು ಆರೇಳು ತಿಂಗಳು ಹಿಂದೆ ನಗರದಲ್ಲಿ ಮತ್ತೊಬ್ಬ ವ್ಯಕ್ತಿ ಸಹ ಹೀಗೆ ಪೆಟ್ರೋಲ್ ಬಂಕ್ ಡೀಲರ್‌ಶಿಪ್ ಪಡೆಯಲು ಆನ್‌ಲೈನ್ ವಂಚಕರು ಬೀಸಿದ ಬಲೆಗೆ ಬಿದ್ದು 35 ಲಕ್ಷ ರೂ. ಕಳೆದುಕೊಂಡಿದ್ದು, ಈಗ ಆನ್‌ಲೈನ್ ವಂಚಕರ ಮೋಸದಾಟಕ್ಕೆ ಮತ್ತೊಬ್ಬ ವ್ಯಕ್ತಿ 78 ಲಕ್ಷ ರೂ. ಕಳೆದುಕೊಂಡಿದ್ದಾರೆ.

    ಬ್ಯಾಂಕ್ ನೌಕರನಿಗೂ ಮೋಸ

    ಇನ್ನು ನವೆಂಬರ್ ತಿಂಗಳಲ್ಲಿ ಬ್ಯಾಂಕ್ ನೌಕರ ಒಬ್ಬರಿಗೆ ಫೇಕ್‌ಲಿಂಕ್‌ನ್ನು ಎಸ್‌ಎಂಎಸ್ ಮಾಡಿದ ವಂಚಕರು 13,65,792 ರೂ. ದೋಚಿದ್ದಾರೆ. ಎಸ್‌ಎಂಎಸ್ ನೋಡಿ ಲಿಂಕ್ ಓಪನ್ ಮಾಡಿದಾಗ ಅವರ ಹೆಸರು, ಎಟಿಎಂ ಕಾರ್ಡ್ ನಂಬರ್ ಎಲ್ಲ ಮಾಹಿತಿಯನ್ನು ಗ್ರಿಡ್ ನಂಬರ್ ಮೂಲಕ ಲೋನ್ ಮಾಡಿ ಹಣವನ್ನು ದೋಚಿದ್ದಾರೆ. ಬ್ಯಾಂಕ್ ನೌಕರ ಆಗಿದ್ದರಿಂದ ತಕ್ಷಣವೇ ಗೋಲ್ಡನ್ ಅವಧಿಯಲ್ಲಿ ದೂರು ನೀಡಿದ್ದರಿಂದ ಪ್ರೀಜ್ ಮಾಡಲಾಗಿದೆ. ಈ ಪ್ರಕರಣ ಸಹ ಬಾಗಲಕೋಟೆ ಸಿಇಎನ್ ಠಾಣೆಯಲ್ಲಿ ನವೆಂಬರ್ ತಿಂಗಳಲ್ಲಿ ದಾಖಲಾಗಿದೆ.

    ಮಹಿಳೆಯನ್ನು ಬೆದರಿಸಿ ಹಣ ಲಪಟಾಯಿಸಿರುವ ವಂಚಕರು

    ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ಮಹಿಳಾ ಸರ್ಕಾರಿ ನೌಕರರೊಬ್ಬರು ಸಹ ಆನ್‌ಲೈನ್ ಮೋಸಕ್ಕೆ ಒಳಗಾಗಿ 2.19 ಲಕ್ಷ ಕಳೆದುಕೊಂಡಿದ್ದಾರೆ. ಕ್ಯಾಷ್‌ಲೋನ್ ಆ್ಯಪ್ ಡೌನ್‌ಲೋಡ್ ಮಾಡಿದಾಗ ಅವರಿಗೆ ಲೋನ್ ಮಾಡಿ ಖಾತೆಗೆ ಹಣ ಜಮಾ ಮಾಡುವುದಾಗಿ ವಂಚಕರು ನಂಬಿಸಿದ್ದಾರೆ. ಅವರಿಂದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಎಲ್ಲವನ್ನು ಪಡೆದು ಅವರಿಗೆ ಬೆದರಿಕೆ ಹಾಕಿ ಖಾತೆಯನ್ನು ಹ್ಯಾಕ್ ಮಾಡಿ ಹಣ ಲಪಟಾಯಿಸಿದ್ದಾರೆ. ಇದು ಸಹ ನವೆಂಬರ್ ತಿಂಗಳಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

    ಇಷ್ಟೇ ಅಲ್ಲದೆ, ಜಿಲ್ಲೆಯಲ್ಲಿ ಐದು, ಹತ್ತು, ಇಪ್ಪತ್ತು ಸಾವಿರ ರೂ. ಆನ್‌ಲೈನ್ ವಂಚಕರಿಂದ ಕಳೆದುಕೊಂಡವರ ಸಂಖ್ಯೆಯೂ ಕಡಿಮೆಯೇನಿಲ್ಲ. ಯಾವುದೇ ಬ್ಯಾಂಕ್‌ನವರು ಗ್ರಾಹಕರಿಗೆ ಫೋನ್ ಮಾಡಿ ಒಟಿಪಿ ನಂಬರ್ ಕೇಳಲ್ಲ, ಯಾರೂ ಕೊಡಬಾರದು ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಇವತ್ತಿಗೂ ಅನೇಕರು ಆನ್‌ಲೈನ್ ವಂಚಕರ ಜಾಲಕ್ಕೆ ಬೀಳುತ್ತಲೇ ಇದ್ದಾರೆ.

    1930ಗೆ ಫೋನ್ ಮಾಡಿ

    ಆನ್‌ಲೈನ್ ವಂಚಕರ ಜಾಲಕ್ಕೆ ಬಿದ್ದು ಮೋಸಕ್ಕೆ ಸಿಲುಕಿದರೆ ತಕ್ಷಣಕ್ಕೆ ಹಣ ಕಳೆದುಕೊಂಡವರು 1930 ನಂಬರ್‌ಗೆ ಕರೆ ಮಾಡಿದರೆ ಅದು ಸೈಬರ್ ಕ್ರೈಂ ಇನ್ಫಿಡೆಂಟ್‌ನಲ್ಲಿ ದೂರು ದಾಖಲಾಗಿ ಅಲ್ಲಿಂದ ಸಮೀಪದ ಠಾಣೆಗೆ ಮಾಹಿತಿ ದೊರೆತು ಹಣ ಹೋಗದಂತೆ ಫ್ರೀಜ್ ಮಾಡಿಸಬಹುದು. ಇದು ಹಣ ವರ್ಗಾವಣೆ ಆದ ಎರಡು ಗಂಟೆ ಒಳಗಾಗಿ ಆಗಬೇಕು ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.
    
    ಎಚ್‌ಪಿ ಪೆಟ್ರೋಲ್ ಬಂಕ್ ಪರವಾನಗಿ ಕೊಡುತ್ತೇವೆ ಎಂದ ತಕ್ಷಣವೇ ಆನ್‌ಲೈನ್ ಮೂಲಕ ದುಡ್ಡು ಹಾಕಿ 78 ಲಕ್ಷ ರೂ. ಕಳೆದುಕೊಂಡಿದ್ದಾರೆ. ಇದು 6 ತಿಂಗಳು ಅವಧಿಯಲ್ಲಿ ಆಗಿದೆ. ಈ ಬಗ್ಗೆ ಯಾರಿಗೂ ಹೇಳಿಲ್ಲ. ಈಗ ವಂಚಕರ ವಿಳಾಸ ಹಿಮಾಚಲ ಪ್ರದೇಶ ಎಂದು ತೋರಿಸುತ್ತದೆ. ಅಲ್ಲಿಗೆ ಹೋದ ಬಳಿಕ ನಮಗೆ ತಿಳಿದು ಬರುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಪೊಲೀಸರು, ಮಾಧ್ಯಮಗಳು ಸಹ ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ ಜನರು ಮೋಸಕ್ಕೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು.
    -ಅಮರನಾಥ ರೆಡ್ಡಿ, ಎಸ್ಪಿ ಬಾಗಲಕೋಟೆ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts