More

    75 ವಸಂತ ತುಂಬಿದ ಹಿರಿಯ ಪತ್ರಕರ್ತ ನರಸಿಂಹ ಮೂರ್ತಿ ದೊನ್ನಿ ಅವರಿಗೆ ಕೆಯುಡಬ್ಲ್ಯೂಜೆ ಗೌರವ

    ಬೆಂಗಳೂರು: ಸುದ್ದಿ ಮನೆಯಲ್ಲಿ ಕೆಲಸ ಮಾಡುವ ಪತ್ರಕರ್ತರು ಭಾಷಾ ಶುದ್ಧಿಯ ಬಗ್ಗೆ ಸದಾ ಗಮನ ನೀಡಬೇಕು ಎಂದು ಎಂದು ಎನ್.ಕೆ. ನರಸಿಂಹಮೂರ್ತಿ ದೊನ್ನಿ ಹೇಳಿದರು.

    ಗದಗದಲ್ಲಿ ನಾಗರಿಕ ಪತ್ರಿಕೆ ಜೊತೆಗೆ ಒಡನಾಟ ಬೆಳೆಯಿತು. ಅದು ಬೆಂಗಳೂರು ತನಕ ಕರೆದುಕೊಂಡು ಬಂದಿತು. ನನಗೆ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಉದ್ಯೋಗ ನೀಡಿ ಪತ್ರಿಕಾ ವ್ಯವಸಾಯಕ್ಕೆ ಅಣಿಗೊಳಿಸಿದವರು ಹಿರಿಯರಾದ ಶ್ಯಾಮರಾವ್, ನಾಗೇಶ್ ರಾವ್, ನಾಗರಾಜ ರಾವ್, ಖಾದ್ರಿ ಶಾಮಣ್ಣ, ಮತ್ತು ಜಯಶೀಲ ರಾವ್ ಎನ್ನುವುದನ್ನು ಮರೆಯಲಾಗದು.
    ಇಂತಹವರ‍ ಗರಡಿಯಲ್ಲಿ ಪಳಗಿದ ನಾನು ಬರವಣಿಗೆಯಲ್ಲಿ ಸದಾ ಜಾಗೃತಿ ವಹಿಸಿದ್ದರಿಂದ ಭಾಷಾ ಶುದ್ಧಿಯಲ್ಲಿ, ವ್ಯಾಕರಣದಲ್ಲಿ ಪಳಗಲು ಸಾಧ್ಯವಾಯಿತು ಎಂದು ವೃತ್ತಿ ಜೀವನ ನೆನಪು ಮಾಡಿಕೊಂಡರು.

    ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಹಿರಿಯ ಪತ್ರಕರ್ತರನ್ನು ಗೌರವಿಸುವ ಮನೆಯಂಗಳದಲ್ಲಿ ಮನ ತುಂಬಿ ನಮನ ಸರಣಿ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

    ಕಾಲು ನೋವಿನ ತೊಂದರೆಯಿಂದಾಗಿ ಸರಿಯಾಗಿ ನಡೆಯಲಾಗದೆ ಕೆಲವು ತಿಂಗಳಿನಿಂದ ಮನೆಯಲ್ಲೇ ಇರುವ ನನಗೆ ರಾಜ್ಯ ಪತ್ರಕರ್ತರ ಸಂಘವು ಮನೆಬಾಗಿಲಿಗೆ ಬಂದು ಯೋಗಕ್ಷೇಮ ವಿಚಾರಿಸಿ, ಗೌರವಿಸಿರುವುದು ಬಹಳ ಸಂತಸ ತಂದಿದೆ ಎಂದರು.
    ಆರೋಗ್ಯ ಸುಧಾರಿಸಿದ ಬಳಿಕ ಮತ್ತೆ ಸುದ್ದಿಮನೆಯ ಕಾಯಕ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದರು.

    ಪತ್ರಕರ್ತರು ವ್ಯಾಕರಣವನ್ನು ಕರಗತ ಮಾಡಿಕೊಂಡು ವರದಿಗಾರಿಕೆಯಲ್ಲಿ ಭಾಷಾ ಶುದ್ದಿಗೆ ಮಹತ್ವ ನೀಡಬೇಕು.
    ಸುದ್ದಿ ಬರೆಯುವಾಗ ಯಾರು? ಏನು? ಎಲ್ಲಿ ? ಯಾಕೆ? ಮತ್ತು ಯಾವಾಗ? ಎನ್ನುವ ಅಂಶಗಳನ್ನು ನೆನಪಿಟ್ಟುಕೊಳ್ಳಬೇಕು. ಹಾಗೆಯೇ ಸಂಕ್ಷಿಪ್ತ ವರದಿ ಪತ್ರಿಕೆಯಲ್ಲಿ ಮೂಡಿಸುವಾತ ನುರಿತ ಪತ್ರಕರ್ತನಾಗಲು ಸಾಧ್ಯ. ಇಂದಿನ ಯುವ ಪತ್ರಕರ್ತರು ಹೆಚ್ಚು ಭಾಷಾ ಜ್ಞಾನದ ಬಗ್ಗೆ ಅರಿತುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, 60 ರ ದಶಕದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ವೃತ್ತಿ ಆರಂಭಿಸಿದ ನರಸಿಂಹ ಮೂರ್ತಿ ದೊನ್ನಿ ಅವರು ಅದೇ ಪತ್ರಿಕೆಯಲ್ಲಿ 43 ವರ್ಷಗಳ ಸುದೀರ್ಘ ಅವಧಿಯ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರೂಫ್ ರೀಡರ್ ಆಗಿ ಸೇರಿದ ಅವರು ನಾನಾ ಹಂತಗಳಲ್ಲಿ ಕೆಲಸ ಮಾಡಿ ಸುದ್ದಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಲ್ಲದೆ, ಸುದ್ದಿ ಮನೆಯಲ್ಲಿ ಹಲವಾರು ಗುಣಮಟ್ಟದ ಶಿಷ್ಯಂದಿರನ್ನು ಬೆಳೆಸಿರುವುದು ವಿಶೇಷ ಎಂದರು.

    ಸರಳ ಸಜ್ಜನಿಕೆ ಹೆಸರಾದ ದೊನ್ನಿ ಅವರು, ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಸಮಸ್ತ ಪತ್ರಕರ್ತರ ಪರವಾಗಿ ಕೆಯುಡಬ್ಲ್ಯೂಜೆ ಅಭಿನಂದಿಸುತ್ತಿದೆ ಎಂದರು.

    ಹಿರಿಯ ಪತ್ರಕರ್ತ ಕಂ.ಕ.ಮೂರ್ತಿ ಮಾತನಾಡಿ, ಕೆಯುಡಬ್ಲ್ಯುಜೆಗೂ ಪತ್ರಕರ್ತರಿಗೂ ಇರುವ ಅವಿನಾ‍ಭಾವ ಸಂಬಂಧ, ಪತ್ರಕರ್ತರ ಸಂಕಷ್ಟಕ್ಕೆ ಸ್ಪಂದಿಸುವ ಮಾತೃ ಹೃದಯ, ಹಿರಿಯರನ್ನು ಗೌರವಿಸುವ ಸಂಸ್ಕೃತಿ ಇವೆಲ್ಲಾ ಶಿವಾನಂದ ತಗಡೂರು ಅವರು ಅಧ್ಯಕ್ಷರಾದ ಮೇಲೆ ಸಂಘದಲ್ಲಿ ಕಂಡುಕೊಳ್ಳುವ ಗುಣಾತ್ಮಕ ಬದಲಾವಣೆ. ಇಂದು ಭಾಷಾ ಶುದ್ದಿಗೆ ಮಹತ್ವ ನೀಡುವ ಹಿರಿಯ ಪತ್ರಕರ್ತ ನರಸಿಂಹಮೂರ್ತಿ ದೊನ್ನೆ ಅವರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ರಾಜ್ಯ ಪತ್ರಕರ್ತರ ಸಂಘಕ್ಕೆ ಹೆಚ್ಚಿನ ಗೌರವ ತಂದುಕೊಟ್ಟಿದೆ ಎಂದರು .

    ಕೆಯುಡಬ್ಲ್ಯೂಜೆ ಮಾಜಿ ಅಧ್ಯಕ್ಷ ಎಚ್.ಎಸ್.ಸುಧೀಂದ್ರ ಕುಮಾರ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಮೃತ ಪತ್ರಕರ್ತರಿಗೆ ಸರ್ಕಾರದಿಂದ ಆರ್ಥಿಕ ಪರಿಹಾರದ ನೆರವು ಸಿಗಲು ಶಿವಾನಂದ ತಗಡೂರು ಅವರ ಅವಿರತವಾದ ಹೋರಾಟವೇ ಕಾರಣ. ಪತ್ರಕರ್ತರ ‍ಮೇಲೆ ಅವರಿಗೆ ಇರುವ ಕಾಳಜಿ ಮತ್ತು ಅವರು ತಮ್ಮದೇ ಪ್ರಭಾವದಿಂದ ನಡೆಸಿದ ಪ್ರಾಮಾಣಿಕ ಪ್ರಯತ್ನದಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಪತ್ರಕರ್ತರ ಸಮುದಾಯಕ್ಕೆ ನೆರವು ಸಿಗಲು ಸಾಧ್ಯವಾಯಿತು ಎಂದು ಸ್ಮರಿಸಿದರು.

    ನರಸಿಂಹ ಮೂರ್ತಿ ದೊನ್ನಿ ಅವರ ಸೇವಾ ನಿಷ್ಠೆ ಸಂಯುಕ್ತ ಕರ್ನಾಟಕ ಪತ್ರಿಕೆಗೆ ಮಾತ್ರ ಸೀಮಿತವಲ್ಲ. ಇತರ ವೃತ್ತಿ ಬಾಂಧವವರಿಗೂ ಇವರ ಮಾರ್ಗ ದರ್ಶನ ಲಭ್ಯವಾಗುತಿತ್ತು. ಇಂತಹವರನ್ನು ಗುರುತಿಸಿ ಸನ್ಮಾನಿಸುವುದು ಹೆಮ್ಮೆಯ ವಿಷಯ ಎಂದರು.

    ಕಾರ್ಯಕ್ರಮದಲ್ಲಿ ಕೆಯುಡಬ್ಲ್ಯುಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ ಸ್ವಾಗತಿಸಿದರು. ನಿಯೋಜಿತ ಖಜಾಂಚಿ ಎಂ.ವಾಸುದೇವ ಹೊಳ್ಳ ವಂದಿಸಿದರು. ರಾಜ್ಯ ಸಮಿತಿ ‍ಸದಸ್ಯ ದೇವರಾಜ್, ನಗರ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್ ಪತ್ರಿಕಾ ಛಾಯಾಗ್ರಾಹಕ ಶರಣ ಬಸಪ್ಪ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts