More

    70 ಸಾವಿರ ಮನೆ ಬಾಗಿಲಿಗೆ ನೋಟಿಸ್, ಮೂರೇ ತಿಂಗಳಲ್ಲಿ 5 ಕೋಟಿ ರೂ. ದಂಡ !

    ನವೀನ್ ಬಿಲ್ಗುಣಿ ಶಿವಮೊಗ್ಗ
    ಜಿಲ್ಲಾ ಪೊಲೀಸ್ ಇಲಾಖೆಯು ಸ್ಮಾರ್ಟ್‌ಸಿಟಿ ಸಹಯೋಗದಲ್ಲಿ ಶಿವಮೊಗ್ಗ ನಗರದಲ್ಲಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿದ ಮೂರೇ ತಿಂಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಬರೋಬ್ಬರಿ 4.84 ಕೋಟಿ ರೂ. ವಿಧಿಸಿದ್ದು, 70 ಸಾವಿರ ಸವಾರರ ಮನೆ ಬಾಗಿಲಿಗೆ ವಿವಿಧ ಬಗೆಯ ಸಂಚಾರ ನಿಯಮ ಉಲ್ಲಂಘನೆಯ ನೋಟಿಸ್‌ಗಳು ರವಾನೆಯಾಗಿವೆ.

    ಶಿವಮೊಗ್ಗದಲ್ಲಿ ಸ್ಮಾರ್ಟ್‌ಸಿಟಿಯ ಐಟಿಎಂಎಸ್(ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ) ಮೂಲಕ ಆ.28ರಿಂದ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಹೆಲ್ಮಟ್ ಧರಿಸದೇ ಓಡಿಸುವುದು, ಮದ್ಯ ಸೇವಿಸಿ ವಾಹನ ಚಲಾವಣೆ, ಅಜಾಗಕರೂಕತೆ ಮತ್ತು ಅತಿವೇಗ ತಡೆ ಸೇರಿದಂತೆ ಸವಾರರ ಸುರಕ್ಷತೆಗೆ ಒತ್ತು ನೀಡಲಾಗಿದೆ. ಬಿಗಿ ಕ್ರಮಗಳಿಂದ ಶಿವಮೊಗ್ಗದಲ್ಲಿ ಸಂಚಾರ ನಿಯಮ ಉಲ್ಲಂಘನೆ ಕೊಂಚ ಪ್ರಮಾಣದಲ್ಲಿ ಕಡಿವಾಣ ಬಿದ್ದಿದೆ.
    ಉತ್ತರ ಮತ್ತು ಮಧ್ಯ ಕರ್ನಾಟಕದ ಭಾಗಗಳಿಗೆ ಸಂಪರ್ಕ ಕೊಂಡಿಯಾಗಿರುವ ಶಿವಮೊಗ್ಗದಲ್ಲಿ ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಸ್ತೆ ಅಪಘಾತ ಸೇರಿದಂತೆ ಸಂಚಾರ ನಿಯಮಗಳ ಪಾಲನೆ ಮಾಡದೇ ಪ್ರತಿವರ್ಷ ನೂರಾರು ಜನರು ಬಲಿಯಾಗುತ್ತಿದ್ದು, ಸಾವಿರಾರು ಮಂದಿ ಗಾಯಗೊಳ್ಳುತ್ತಿದ್ದಾರೆ. ಇದನ್ನು ಅರಿತ ಶಿವಮೊಗ್ಗ ಪೊಲೀಸರು ಸ್ಮಾರ್ಟ್‌ಸಿಟಿ ಜತೆಗೂಡಿ ಆ.28ರಿಂದ ಸಂಚಾರದಲ್ಲಿ ಕೆಲ ಮಾರ್ಪಾಡು ಮಾಡಿ ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಇದರಿಂದ ಬಹುತೇಕ ಕಡೆ ವಾಹನಗಳ ಸಂಚಾರವು ಸುಗಮ ಆಗುತ್ತಿದೆ.

    ಮೊಬೈಲ್‌ಗೆ ಮೇಸೆಜ್!
    ಶಿವಮೊಗ್ಗದಲ್ಲಿ ಪೊಲೀಸರೇ ರಸ್ತೆ ಬದಿ ಅಥವಾ ಪ್ರಮುಖ ವೃತ್ತಗಳಲ್ಲಿ ವಾಹನಗಳ ತಪಾಸಣೆ ಮಾಡಿ ದಂಡ ವಿಧಿಸುತ್ತಿದ್ದರು. ಇದೀಗ ನಗರಾದ್ಯಂತ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಸಿಸಿ ಕ್ಯಾಮೆರಾಗಳ ಕಣ್ಗಾವಲಿರಿಸಿದ್ದು ಸಂಚಾರ ನಿಯಮ ಪಾಲಿಸದಿದ್ದಕ್ಕೆ ನವೆಂಬರ್ ಅಂತ್ಯಕ್ಕೆ 70,361 ಕೇಸ್‌ಗಳು ಬಿದ್ದಿವೆ. ಸಂಚಾರ ನಿಯಮ ಉಲ್ಲಂಘಿಸಿದ ಎರಡ್ಮೂರು ದಿನದಲ್ಲೇ ದಂಡದ ನೋಟಿಸ್ ವಾಹನ ಸವಾರರ ಮನೆ ಬಾಗಿಲಿಗೆ ಅಥವಾ ಮೊಬೈಲ್‌ಗಳಿಗೆ ರವಾನೆ ಆಗುತ್ತಿದ್ದು, 90 ದಿನದಲ್ಲಿ 3,621 ಮಂದಿ 30.80 ಲಕ್ಷ ರೂ. ದಂಡ ಪಾವತಿಸಿದ್ದಾರೆ.

    ದಂಡ ಪಾವತಿಗೆ ಕಳ್ಳಾಟ
    ಪೊಲೀಸ್ ಇಲಾಖೆಯು ಮೂರೇ ತಿಂಗಳಲ್ಲಿ 70 ಸಾವಿರಕ್ಕೂ ಅಧಿಕ ವಾಹನಗಳ ಸವಾರರಿಗೆ ಈಗಾಗಲೇ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ನೋಟಿಸ್ ನೀಡಿದೆ. ಹಲವರಿಗೆ ಮೊಬೈಲ್‌ಗೆ ಸಂದೇಶವನ್ನೂ ರವಾನಿಸಿದೆ. ಆದರೆ ಅದರಲ್ಲಿ 3,621 ಮಂದಿ ಮಾತ್ರ ನೋಟಿಸ್‌ಗೆ ಹೆದರಿ 30.80 ಲಕ್ಷ ರೂ. ದಂಡ ಕಟ್ಟಿದ್ದಾರೆ. ಇನ್ನೂ 4,53,64,300 ರೂ. ದಂಡ ಸಂಗ್ರಹ ಆಗಬೇಕಿದೆ. ಬಹಳಷ್ಟು ಸವಾರರು ನೋಟಿಸ್ ಮತ್ತು ಮೆಸೇಜ್‌ಗೂ ಹೆದರದೇ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಸಂಚಾರ ನಿಯಮ ಉಲ್ಲಂಘನೆಯಲ್ಲಿ ಸಿಗ್ನಲ್ ಜಂಪ್ ಮಾಡುತ್ತಿರುವ ಪ್ರಕರಣಗಳೇ ಹೆಚ್ಚಿನ ಪ್ರಮಾಣದಲ್ಲಿವೆ ಎಂಬುದು ವಿಶೇಷವಾಗಿದೆ. ಈ ಹಿಂದೆ ಹಳೆಯ ಟ್ರಾಫಿಕ್ ಆಟೋಮೇಷನ್ ತಂತ್ರಾಂಶದ ಮೂಲಕ ನೋಟಿಸ್ ಸೃಜನೆ ಮಾಡಿ ಅದನ್ನು ಮಾಲೀಕರಿಗೆ ಕಳುಹಿಸಲಾಗುತ್ತಿತ್ತು. ಇದೀಗ ಸ್ಮಾರ್ಟ್‌ಸಿಟಿ ಯೋಜನೆಯಡಿ ರೂಪಿಸಿದ ಐಟಿಎಂಎಸ್ ತಂತ್ರಾಂಶದಲ್ಲಿ ನೋಟಿಸ್ ಸೃಜನೆ ಮಾಡಲಾಗುತ್ತಿದ್ದು ಫೋಟೋ ಸಹಿತ ನೋಟಿಸ್ ಮನೆಗೆ ರವಾನೆ ಆಗುತ್ತಿದೆ. ಮೊಬೈಲ್‌ಗಳಿಗೆ ಸಂದೇಶ ಮಾತ್ರ ರವಾನೆ ಆಗುತ್ತಿದೆ.

    ಯಾವುದಕ್ಕೆ ಎಷ್ಟು ದಂಡ?
    ಪ್ರಮುಖ ನಿಯಮ ಉಲ್ಲಂಘನೆ ಪ್ರಕರಣ ವಿಧಿಸಿದ ದಂಡ
    ಟ್ರಾಫಿಕ್ ಸಿಗ್ನಲ್ ಜಂಪ್ 61,831 4.33 ಕೋಟಿ ರೂ.
    ಸೀಟ್‌ಬೆಲ್ಟ್ ಧರಿಸದ 461 12.65 ಲಕ್ಷ ರೂ.
    ವಾಹನಗಳ ಅತಿವೇಗ ಚಾಲನೆ 3,269 35.02 ಲಕ್ಷ ರೂ.
    ಹೆಲ್ಮೇಟ್ ಧರಿಸದೇ ಚಾಲನೆ 3,991 21.76 ಲಕ್ಷ ರೂ.
    ಟ್ರಿಪಲ್ ರೈಡಿಂಗ್ 195 1.78 ಲಕ್ಷ ರೂ.

    ಸ್ಮಾರ್ಟ್‌ಸಿಟಿಯ ಐಟಿಎಂಎಸ್ ಯೋಜನೆಯಿಂದ ಶಿವಮೊಗ್ಗದಲ್ಲಿ ಸಂಚಾರ ನಿಯಮವು ಸಾಕಷ್ಟು ಸುಧಾರಣೆ ಕಾಣುತ್ತಿದೆ. ಕಳೆದ ಮೂರು ತಿಂಗಳಲ್ಲೇ ಸಂಚಾರ ನಿಯಮ ಉಲ್ಲಂಘಿಸಿದ 70 ಸಾವಿರಕ್ಕೂ ಅಧಿಕ ವಾಹನಗಳ ಸವಾರರಿಗೆ ದಂಡ ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ಆದರೆ ದಂಡ ಪಾವತಿಸಲು ವಾಹನಗಳ ಸವಾರರು ಹಿಂದೇಟು ಹಾಕುತ್ತಿದ್ದು ಇನ್ಮುಂದೆ ಅದಕ್ಕೂ ವಿಶೇಷ ಯೋಜನೆ ರೂಪಿಸಲಾಗುವುದು.
    ಜಿ.ಕೆ.ಮಿಥುನ್‌ಕುಮಾರ್, ಎಸ್ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts