More

    70 ಕೋಟಿ ರೂ. ವೆಚ್ಚದಲ್ಲಿ ಹಳೇ ಬಸ್ ನಿಲ್ದಾಣ ನವೀಕರಣ

    ಹುಬ್ಬಳ್ಳಿ: ಸುಮಾರು 70 ಕೋಟಿ ರೂ. ವೆಚ್ಚದಲ್ಲಿ ಹಳೇ ಬಸ್ ನಿಲ್ದಾಣ ನವೀಕರಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ತಿಳಿಸಿದರು.

    ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಕರಸಾ ಸಂಸ್ಥೆಯಿಂದ 40 ಕೋಟಿ ರೂ. ಸ್ಮಾರ್ಟ್ ಸಿಟಿ ಯೋಜನೆಯಡಿ 30 ಕೋಟಿ ರೂ. ಹಣ ಬಿಡುಗಡೆಯಾಗಲಿದ್ದು, ಶೀಘ್ರವೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಹಳೇ ಬಸ್ ನಿಲ್ದಾಣದಲ್ಲಿ ನಗರ ಸಾರಿಗೆ ನಿಲ್ದಾಣ ಮತ್ತು ವಾಣಿಜ್ಯ ಬಳಕೆಯ ಕುರಿತು ಚಿಂತನೆ ನಡೆದಿದೆ ಎಂದರು.

    ವಾಕರಸಾ ಸಂಸ್ಥೆಯಲ್ಲಿ ನೌಕರರ ಸಂಬಳಕ್ಕೆ ಸಮಸ್ಯೆಯಿಲ್ಲ. ಪ್ರತಿ ತಿಂಗಳು 4, 5ಕ್ಕೆ ಸಂಬಳವಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 200 ಕೋಟಿ ರೂ. ಆದಾಯ ಹೆಚ್ಚಳವಾಗಿದೆ ಎಂದು ಚೋಳನ್ ತಿಳಿಸಿದರು.

    ಚಿಗರಿ ದರ ಹೆಚ್ಚಳ: ಬಿಆರ್​ಟಿಎಸ್ ಚಿಗರಿ ಬಸ್ ಟಿಕೆಟ್ ದರ ಶೇ.20ರಷ್ಟು ಹೆಚ್ಚಳ ಮಾಡಲಾಗಿದೆ. ಹುಬ್ಬಳ್ಳಿಯಿಂದ ಧಾರವಾಡಕ್ಕೆ 26 ರೂ. ದರ ಇತ್ತು ಈಗ 30 ರೂ.ಗೆ ಹೆಚ್ಚಳವಾಗಿದೆ. ಇದರಿಂದ ಬಿಆರ್​ಟಿಎಸ್​ನಲ್ಲಿ ಪ್ರತಿ ದಿನ 4ರಿಂದ 5 ಲಕ್ಷ ರೂ. ಹೆಚ್ಚು ಆದಾಯ ಸಂದಾಯವಾಗುತ್ತಿದೆ. ಚಿಗರಿ ಬಸ್ ಓಟಕ್ಕೆ ಪ್ರತಿ ಕಿ.ಮೀ.ಗೆ 60 ರೂ. ಖರ್ಚಾಗುತ್ತದೆ. 45ರಿಂದ 48 ರೂ. ಟಿಕೆಟ್​ನಿಂದ ಬರುತ್ತದೆ. ಬಸ್ ಪಾಸ್ ಎಲ್ಲ ಸೇರಿ 50 ರೂ.ವರೆಗೆ ಸಂದಾಯವಾಗುತ್ತದೆ. ಉಳಿದ 10 ರೂ.ಗಳನ್ನು ಕಮರ್ಷಿಯಲ್ ಕಟ್ಟಡ, ಜಾಹೀರಾತು ಹಣದಿಂದ ಭರಿಸಲಾಗುವುದು ಎಂದು ಚೋಳನ್ ತಿಳಿಸಿದರು.

    ಬಸ್ ನಿಲ್ದಾಣಗಳ ವಿಂಗಡಣೆ: ಹಳೇ ಬಸ್ ನಿಲ್ದಾಣದಿಂದ ಬೆಂಗಳೂರು ಕಡೆಯ ಬಸ್​ಗಳು ಲಭ್ಯ ಇರುತ್ತವೆ. ಹೊಸೂರು ಬಸ್ ನಿಲ್ದಾಣದಿಂದ ವಿಜಯಪುರ, ಬಾಗಲಕೋಟೆ, ರಾಯಚೂರು, ಗದಗ ಮಾರ್ಗದ ಬಸ್​ಗಳು ಲಭ್ಯ. ಗೋಕುಲ ರಸ್ತೆಯ ಬಸ್ ನಿಲ್ದಾಣದಿಂದ ಕಾರವಾರ, ಶಿರಸಿ, ಗೋವಾ, ಮಹಾರಾಷ್ಟ್ರ ಬಸ್​ಗಳು ಹೊರಡುತ್ತವೆ. ಹಳೇ ಬಸ್ ನಿಲ್ದಾಣದಿಂದ ಹೊಸೂರು ಬಸ್ ನಿಲ್ದಾಣಕ್ಕೆ 5 ರೂ. ಟಿಕೆಟ್ ದರದಲ್ಲಿ ಫೀಡರ್ ಬಸ್ ಸೌಕರ್ಯ ಒದಗಿಸಲಾಗುತ್ತಿದೆ ಎಂದು ರಾಜೇಂದ್ರ ಚೋಳನ್ ತಿಳಿಸಿದರು.

    ಎಲೆಕ್ಟ್ರಿಕಲ್ ಬಸ್ ?: ಎಲೆಕ್ಟ್ರಾನಿಕ್ ವಾಹನಗಳಿಗಾಗಿ ಸಂಸ್ಥೆಯಲ್ಲಿ 50 ಕೋಟಿ ರೂ. ನಿಧಿ ಇದೆ. ಕೆಎಸ್​ಆರ್​ಟಿಸಿ ಈಗಾಗಲೇ ಟೆಂಡರ್ ಕರೆದಿದ್ದು, ಪ್ರತಿ ಕಿ.ಮೀ.ಗೆ 76 ರೂ. ಕೇಳಿದ್ದಾರೆ. ಅದರಿಂದ ನಷ್ಟ ಉಂಟಾಗುತ್ತದೆ. ಹಾಗಾಗಿ, ಪುನಃ ಟೆಂಡರ್ ಮಾಡಿದ್ದಾರೆ. 60 ರೂ.ಗಿಂತ ಕಡಿಮೆ ಬಂದರೆ, ನಾವು ಬಾಡಿಗೆ ಇಲೆಕ್ಟ್ರಿಕಲ್ ವಾಹನಕ್ಕೆ ಟೆಂಡರ್ ಕರೆಯುತ್ತೇವೆ ಎಂದು ರಾಜೇಂದ್ರ ಚೋಳನ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts