More

    7 ದಿನ ಹೋಮ್ ಐಸೊಲೇಷನ್ ಕಡ್ಡಾಯ

    ಬೆಂಗಳೂರು: ಕೋವಿಡ್ ಜೆಎನ್1 ತಳಿ ಅಪಾಯಕಾರಿಯಲ್ಲವಾದರೂ ವ್ಯಾಪಕವಾಗಿ ಹರಡುತ್ತದೆ, ಆತಂಕ ಬೇಡ ಎಂದು ನಾಡಿನ ಜನರಿಗೆ ಸಂದೇಶ ನೀಡುತ್ತಲೇ ಸರ್ಕಾರ ಅದನ್ನೆದುರಿಸಲು ಅಗತ್ಯ ತಯಾರಿ ಆರಂಭಿಸಿದೆ. ಪ್ರಮುಖವಾಗಿ ಕೋವಿಡ್ ಸೋಂಕಿತರಾದವರನ್ನು ಟ್ರ್ಯಾಕ್ ಮಾಡುವುದು ಹಾಗೂ ಅವರನ್ನು ಏಳು ದಿನ ಹೋಮ್ ಐಸೋಲೇಷನ್‌ಗೊಳಪಡಿಸಲು ನಿರ್ಧರಿಸಿದೆ.
    ಕೋವಿಡ್ ವಿಚಾರವಾಗಿಯೇ ರಚನೆಗೊಂಡ ಆರೋಗ್ಯ ಸಚಿವರ ನೇತೃತ್ವದ ಸಂಪುಟ ಉಪ ಸಮಿತಿ ಮಂಗಳವಾರ ಸಭೆ ನಡೆಸಿ, ಪ್ರಸ್ತುತ ಸಂದರ್ಭದಲ್ಲಿ ಸಾಂಕ್ರಾಮಿಕ ಹರಡುವಿಕೆ, ಆಗಬೇಕಾದ ತಯಾರಿ, ಜನರಿಗೆ ನೀಡಬೇಕಾದ ಸಂದೇಶಗಳ ಕುರಿತು ಚರ್ಚೆ ಮಾಡಿ ನಿರ್ಣಯ ಕೈಗೊಂಡಿತು.
    ಸಭೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವ ದಿನೇಶ್ ಗುಂಡೂರಾವ್, ಕೋವಿಡ್ ಪಾಸಿಟಿವ್ ಆದವರು ಕಡ್ಡಾಯವಾಗಿ ಏಳು ದಿನ ಹೋಮ್ ಐಸೊಲೇಷನ್‌ನಲ್ಲಿ ಇರಬೇಕು. ಹೋಮ್ ಐಸೊಲೇಷನ್‌ನಲ್ಲಿ ಇರುವ ಸರ್ಕಾರಿ ಅಥವಾ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಏಳು ದಿನಗಳ ರಜೆ ಕೊಡಬೇಕು. ಐಸಿಯು ಅಥವಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಬಾಧಿತರಿಗೆ ಸಂಪೂರ್ಣ ಗುಣಮುಖರಾಗುವರೆಗೆ ರಜೆ ಕೊಡಿಸುವ ಕುರಿತು ಸರ್ಕಾರದಿಂದ ಮಾರ್ಗಸೂಚಿ ಹೊರಡಿಸಲಾಗುತ್ತದೆ ಎಂದರು.
    ರಾಜ್ಯದಲ್ಲಿ ಕೋವಿಡ್ 436 ಸಕ್ರಿಯ ಪ್ರಕರಣಗಳಿವೆ. ಹೋಮ್ ಐಸೊಲೇಷನ್‌ನಲ್ಲಿರುವ 400 ಕೋವಿಡ್ ಸೋಂಕಿತರ ಮನೆಗಳಿಗೆ ವೈದ್ಯರು ಭೇಟಿ ನೀಡಿ ನಿಗಾ ವಹಿಸಲು ಸೂಚನೆ ನೀಡಲಾಗಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕಿತರಲ್ಲಿ ಕೋವಿಡ್ ರೋಗಲಕ್ಷಣಗಳಿದ್ದರೆ ಕಡ್ಡಾಯವಾಗಿ ಟೆಸ್ಟಿಂಗ್ ನಡೆಸಬೇಕು. ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ ಎಂದು ಹೇಳಿದರು.
    ಇಂದಿನಿಂದ ಪ್ರತಿ ನಿತ್ಯ 5 ಸಾವಿರ ಕೋವಿಡ್ ಟೆಸ್ಟಿಂಗ್ ಮಾಡಲಾಗುತ್ತದೆ. ಟೆಸ್ಟಿಂಗ್ ಹೆಚ್ಚು ಮಾಡಿದಷ್ಟು ಯಾವ ಪ್ರದೇಶದಲ್ಲಿ ಯಾವ ಪ್ರಮಾಣದಲ್ಲಿ ಹರಡುತ್ತಿದೆ ಎಂಬುದು ಗೊತ್ತಾಗುತ್ತದೆ. ಒಂದು ಸಮಗ್ರ ಡೇಟಾ ಸಿಗಲಿದೆ. ಇದನ್ನಾದರಿಸಿ ಕ್ರಮಕೈಗೊಳ್ಳಲು ಅನುಕೂಲವಾಗಲಿದೆ. ಹೀಗಾಗಿ ಟೆಸ್ಟಿಂಗ್‌ಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದರು.
    ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಉನ್ನತ ಶಿಕ್ಷಣ ಸಚಿವ ಸುಧಾಕರ್ ಸೇರಿ, ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ತಜ್ಞರ ಸಮಿತಿ ಅಧ್ಯಕ್ಷ ಡಾ. ರವಿ ಹಾಗೂ ಹಿರಿಯ ಆರೋಗ್ಯ ಅಧಿಕಾರಿಗಳು ಪಾಲ್ಗೊಂಡಿದ್ದರು.

    ಕೋವಿಡ್ ವಾರ್ಡ್ ಸ್ಥಾಪನೆ

    ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರತ್ಯೇಕ ಕೋವಿಡ್ ವಾಡ್‌ರ್ ರಚನೆಗೆ ನಿರ್ಧರಿಸಲಾಗಿದೆ. ಆಕ್ಸಿಜನ್ ವ್ಯವಸ್ಥೆ ಸೇರಿ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ 22 ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ 10 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲೂ ಕೋವಿಡ್ ವಾರ್ಡ್ ಆರಂಭಿಸಲು ವೈದ್ಯಕೀಯ ಶಿಕ್ಷಣ ಇಲಾಖೆ ತಿಳಿಸಲಾಗಿದೆ.

    ವ್ಯಾಕ್ಸಿನ್‌ಗೆ ಒತ್ತು

    ವಿವಿಧ ಕಾಯಿಲೆ ಹೊಂದಿದವರು ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಕ್ಸಿನ್ ತೆಗೆದುಕೊಳ್ಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸದ್ಯಕ್ಕೆ 30 ಸಾವಿರ ವ್ಯಾಕ್ಸಿನ್‌ಗಳನ್ನು ಕೇಂದ್ರ ಸರ್ಕಾರದಿಂದ ಪಡೆದುಕೊಳ್ಳಲು ನಿರ್ಧರಿಸಿದ್ದು, ಕೇಂದ್ರ ಕೂಡ ಒಪ್ಪಿಗೆ ನೀಡಿದೆ. ಹಾಗೆಯೇ, ಒಂದೂವರೆ ಲಕ್ಷದಷ್ಟು ಆರೋಗ್ಯ ಸಿಬ್ಬಂದಿಗೆ ಸುರಕ್ಷತೆಯ ದೃಷ್ಟಿಯಿಂದ ಕಡ್ಡಾಯವಾಗಿ ಫ್ಲೂ ವ್ಯಾಕ್ಸಿನ್ ನೀಡಲು ನಿರ್ಧರಿಸಲಾಗಿದೆ.

    ಸದ್ಯಕ್ಕೆ ಜಾಗೃತಿ

    ಹೊಸ ವರ್ಷಾಚರಣೆಗೆ ಸೇರಿದಂತೆ ಯಾವುದೇ ಕಾರ್ಯಕ್ರಮ ಅಥವಾ ಜನರ ಓಡಾಟಕ್ಕೆ ಸದ್ಯ ಯಾವುದೇ ನಿರ್ಬಂಧ ಹೇರುವುದಿಲ್ಲ. ವಿದೇಶಿ ಪ್ರಯಾಣಿಕರಿಗೂ ಯಾವುದೇ ರೀತಿ ನಿಯಂತ್ರಣ, ನಿಬಂಧನೆ ಹೇರಲ್ಲ. ಆದರೆ ಜನನಿಬಿಡ ಪ್ರದೇಶದಲ್ಲಿ ಮಾಸ್ಕ್ ಧರಿಸಿ ಕೋವಿಡ್ ನಿಯಮಾವಳಿ ಪಾಲನೆ ಮಾಡಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

    ಮುಖ್ಯ ಸಂಗತಿ

    ಮಕ್ಕಳಲ್ಲಿ ವೇಗವಾಗಿ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಜ್ವರ, ನೆಗಡಿ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಇರುವ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಬಾರದು.

    ವೆಂಟಿಲೇಟರ್, ಆಕ್ಸಿಜನ್ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸೂಚನೆ. ನಾಲ್ಕು ಮೊಬೈಲ್ ಆಕ್ಸಿಜನ್ ಕಂಟೈನರ್‌ಗಳ ಖರೀದಿಗೆ ತೀರ್ಮಾನ. ಆಕ್ಸಿಜನ್ ಅಗತ್ಯ ಇರುವೆಡೆಗೆ ಘಟಕ ರವಾನೆ.

    ಸದ್ಯಕ್ಕೆ ನಿರ್ಬಂಧ ಹೇರುವುದು ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ. ಆದರೆ, ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.

    ಕೋವಿಡ್ ಶಂಕೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡುವ ಎಲ್ಲರನ್ನು ಸಿಟಿ ಸ್ಕ್ಯಾನಿಂಗ್‌ಗೆ ಒಳಪಡಿಸುವುದು ನಿಷೇಧ. ಪಾಸಿಟಿವ್ ಬಂದವರನ್ನ ಮಾತ್ರ ಒಳಪಡಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts