More

    7ರೊಳಗೆ ಸಭೆ ನಡೆಯುವುದು ಅನುಮಾನ

    ಹುಬ್ಬಳ್ಳಿ: ಇಲ್ಲಿಯ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಮಂಡಳಿ ಅಧ್ಯಕ್ಷರ ವಿರುದ್ಧ 12 ಜನ ಸದಸ್ಯರು ಅವಿಶ್ವಾಸ ವ್ಯಕ್ತಪಡಿಸಿ ಒಂಬತ್ತು ದಿನಗಳು ಕಳೆದಿವೆ. ನಿಯಮಾವಳಿಗಳ ಪ್ರಕಾರ ಜುಲೈ 7ರೊಳಗೆ ವಿಶ್ವಾಸ ಸಾಬೀತುಪಡಿಸಲು ಅಧ್ಯಕ್ಷರು ಸಭೆ ಕರೆಯಬೇಕು. ಆದರೆ, ಈ ನಿಟ್ಟಿನಲ್ಲಿ ಅಗತ್ಯ ಪ್ರಕ್ರಿಯೆ ಜರುಗದಿರುವುದರಿಂದ ಸಭೆ ನಡೆಯುವುದು ಅನುಮಾನಕರವಾಗಿದೆ.
    17 ಸದಸ್ಯ ಬಲ ಇರುವ ಎಪಿಎಂಸಿ ಆಡಳಿತ ಮಂಡಳಿ ಸದಸ್ಯರ ಪೈಕಿ 12 ಜನರು ಜೂನ್ 23ರಂದು ಈಗಿನ ಅಧ್ಯಕ್ಷ ಸಹದೇವಪ್ಪ ಸುಡಕೇನವರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿ ಸೂಚನಾ ಪತ್ರವನ್ನು ಕಾರ್ಯದರ್ಶಿ ಅವರಿಗೆ ರವಾನಿಸಿದ್ದಾರೆ. ನಿಯಮಾವಳಿ ಪ್ರಕಾರ ಅವಿಶ್ವಾಸ ಸೂಚನೆ ಬಂದ 15 ದಿನದೊಳಗೆ ಅಧ್ಯಕ್ಷರು ಸಭೆ ಕರೆಯಬೇಕು. ಅದಕ್ಕೂ ಮುಂಚೆ ಎಲ್ಲ ಸದಸ್ಯರಿಗೆ ಸೂಚನೆ ನೀಡಬೇಕು. ಆದರೆ, 9 ದಿನಗಳು ಕಳೆದರೂ ಇದುವರೆಗೆ ಅಧ್ಯಕ್ಷ ಸುಡಕೇನವರ ಅವರು ಈ ಯಾವುದೇ ಪ್ರಕ್ರಿಯೆ ನಡೆಸಿಲ್ಲ.
    14 ಸದಸ್ಯರು ಮಾತ್ರ: ರೈತರಿಂದ ಆಯ್ಕೆಯಾದ 11 ಜನರು, ಒಬ್ಬರು ವ್ಯಾಪಾರಸ್ಥರ ಪ್ರತಿನಿಧಿ, ಇಬ್ಬರು ಸಹಕಾರ ಸಂಘಗಳ ಪ್ರತಿನಿಧಿ ಹಾಗೂ ಮೂವರು ಸರ್ಕಾರದಿಂದ ನಾಮನಿರ್ದೇಶನಗೊಂಡ ಸದಸ್ಯರು ಸೇರಿ ಒಟ್ಟು 17 ಸದಸ್ಯರನ್ನು ಹುಬ್ಬಳ್ಳಿ ಎಪಿಎಂಸಿ ಹೊಂದಿದೆ. ಆದರೆ, ಸದ್ಯ 14 ಸದಸ್ಯರು ಮಾತ್ರ ಇದ್ದಾರೆ. ಸಹಕಾರ ಸಂಘಗಳಿಂದ ಬಂದಿದ್ದ ಪ್ರತಿನಿಧಿಗಳಿಬ್ಬರ ಸದಸ್ಯತ್ವ ಅವಧಿ ಕೊನೆಗೊಂಡಿದೆ.
    ವೆಂಕಟೇಶ್ವರ ಸಂಸ್ಕರಣ ಹಾಗೂ ಮಾರಾಟ ಸಹಕಾರ ಸಂಘದಿಂದ ನೇಮಕವಾಗಿದ್ದ ಮಂಜುನಾಥ ಮುದರಡ್ಡಿ ಅವರ ಸದಸ್ಯತ್ವ ಕೆಲ ತಿಂಗಳ ಹಿಂದೆಯೇ ಮುಕ್ತಾಯವಾಗಿದೆ. ಕೃಷಿ ಹಾಗೂ ತೋಟಗಾರಿಕೆ ಉತ್ಪಾದನೆಗಳ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದಿಂದ ಎಪಿಎಂಸಿಗೆ ನೇಮಕವಾಗಿ ಬಂದಿದ್ದ ರಘುನಾಥಗೌಡ ಕೆಂಪಲಿಂಗನಗೌಡ್ರ ಅವರ ಸದಸ್ಯತ್ವ ಅವಧಿ 2021ರ ಜೂನ್ 25ಕ್ಕೆ ಕೊನೆಗೊಂಡಿದೆ. ಇನ್ನು ಸರ್ಕಾರದಿಂದ ಒಬ್ಬರು ನಾಮನಿರ್ದೇಶನ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಇದೀಗ 14 ಸದಸ್ಯರು ಮಾತ್ರ ಇದ್ದಾರೆ.
    ಇದೀಗ ಸಭೆ ಕರೆದರೂ 14 ಸದಸ್ಯರು ಮಾತ್ರ ಇರಲಿದ್ದಾರೆ. ಇದರಲ್ಲಿ 12 ಜನರು ಅವಿಶ್ವಾಸ ಪತ್ರಕ್ಕೆ ಸಹಿ ಮಾಡಿ ಕಾರ್ಯದರ್ಶಿಯವರಿಗೆ ನೀಡಿದ್ದಾರೆ. ಇವರೆಲ್ಲರಿಗೆ ಸಭೆಗೆ ಬರಲು ಮುಂಚಿತವಾಗಿ ನೋಟಿಸ್ ನೀಡಬೇಕಾಗುತ್ತದೆ. ಈ ಪ್ರಕ್ರಿಯೆ ಒಂದು ವಾರ ಮೊದಲೇ ನಡೆಯಬೇಕು. ಇದುವರೆಗೂ ಅಧ್ಯಕ್ಷರು ಎಪಿಎಂಸಿ ಅಧಿಕಾರಿಗಳಿಗೆ ಸಭೆ ಕರೆಯುವ ಬಗ್ಗೆ ಮಾಹಿತಿ ನೀಡಿಲ್ಲ. ಹಾಗಾಗಿ ನಿಯಮಾವಳಿ ಪ್ರಕಾರ ಜುಲೈ 7ರ ಒಳಗೆ ಸಭೆ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ.
    ಉಪಾಧ್ಯಕ್ಷರಿಗೆ ಅಧಿಕಾರ: ಒಂದು ವೇಳೆ ಜುಲೈ 7ರೊಳಗೆ ಸಭೆ ನಡೆಯದಿದ್ದರೆ ಎಪಿಎಂಸಿ ಕಾರ್ಯದರ್ಶಿಯವರು ನಿಯಮದ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ಕರೆದು, ಅಲ್ಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಅಂಗೀಕಾರವಾದರೆ, ಉಪಾಧ್ಯಕ್ಷರಿಗೆ ಅಧಿಕಾರ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವಿಶ್ವಾಸ ನಿರ್ಣಯ ಅಂಗೀಕಾರವಾದರೆ ಸದ್ಯ ಉಪಾಧ್ಯಕ್ಷರಾಗಿರುವ ಬಸವರಾಜ ನಾಯ್ಕರ ಅಧ್ಯಕ್ಷರಾಗುವುದು ಖಚಿತವಾಗಿದೆ.

    ರೊನಾ ಹಿನ್ನೆಲೆಯಲ್ಲಿ ಯಾವುದೇ ಸಭೆ, ಸಮಾರಂಭ ಮಾಡುವಂತಿಲ್ಲ ಎಂದು ಸರ್ಕಾರದ ಸೂಚನೆ ಇದೆ. ಅವಿಶ್ವಾಸ ಸೂಚನೆ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ.
    | ಸಹದೇವಪ್ಪ ಸುಡಕೇನವರ ಎಪಿಎಂಸಿ ಅಧ್ಯಕ್ಷ

    ಅಧ್ಯಕ್ಷರ ವಿರುದ್ಧ ಜೂನ್ 23ರಂದು 12 ಸದಸ್ಯರು ಅವಿಶ್ವಾಸ ಪತ್ರ ನೀಡಿದ್ದಾರೆ. ಜುಲೈ 7ರೊಳಗೆ ಅಧ್ಯಕ್ಷರು ಸಭೆ ಕರೆಯಬೇಕು. ಈವರೆಗೆ ಅವರಿಂದ ಯಾವುದೇ ಸೂಚನೆ ಬಂದಿಲ್ಲ.
    | ಎ.ಪಿ. ಪಾಟೀಲ, ಸಹಾಯಕ ಕಾರ್ಯದರ್ಶಿ, ಎಪಿಎಂಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts