ಮೆಣಸಿನಕಾಯಿ ಡಬ್ಬಿ ತಳಿ ಕ್ವಿಂಟಾಲ್​ಗೆ 63,121 ರೂ. ದರ

2
Chilli in byadagi market

ಬ್ಯಾಡಗಿ: ಇಲ್ಲಿನ ಮೆಣಸಿನಕಾಯಿ ಮಾರುಕಟ್ಟೆಗೆ ತಿಂಗಳ ಹಿಂದೆ ಲಕ್ಷಲಕ್ಷ ಚೀಲಗಳು ಆವಕವಾಗುತ್ತಿತ್ತು. ಆದರೆ, ಕಳೆದ ಎರಡು ವಾರಗಳಿಂದ ಟೆಂಡರ್​ನಲ್ಲಿ ಮೆಣಸಿನಕಾಯಿ ಆವಕ ಇಳಿಮುಖವಾಗಿದೆ. ವಹಿವಾಟಿನಲ್ಲೂ ಕುಸಿತ ಕಂಡುಬಂದಿದೆ.

ಸೋಮವಾರ 32,831 ಚೀಲಗಳು ಆವಕಗೊಂಡಿವೆ. ಹಿಂದಿನ ತಿಂಗಳಂತೆ ಈಗ ಆವಕ ಕೊರತೆಯಿಂದ ವ್ಯಾಪಾರ ಕುಸಿತಗೊಂಡಿದ್ದು, ಮೆಣಸಿನಕಾಯಿ ದರ ಮಾತ್ರ ಸ್ಥಿರತೆ ಕಾಯ್ದುಕೊಂಡಿದೆ.

ಬ್ಯಾಡಗಿ ಮಾರುಕಟ್ಟೆಯ ಸುತ್ತಮುತ್ತ ಸುಮಾರು 30 ಮೆಣಸಿನಕಾಯಿ ಕೋಲ್ಡ್ ಸ್ಟೋರೇಜ್ ನಿರ್ವಿುಸಲಾಗಿದೆ. ಒಂದೊಂದು ಸ್ಟೋರೇಜ್​ನಲ್ಲಿ ಕನಿಷ್ಠ 1 ಲಕ್ಷ ಚೀಲ ಸಂಗ್ರಹಿಸಿಡಬಹುದಾಗಿದೆ.

ಹೀಗಾಗಿ ಇಲ್ಲಿನ ಮಾರುಕಟ್ಟೆಗೆ ದೂರದಿಂದ ಮಾರಾಟಕ್ಕೆ ಬಂದ ರೈತರು ಬೆಲೆ ಕುಸಿತ ಕಂಡುಬಂದಲ್ಲಿ ಮೆಣಸಿನಕಾಯಿ ಚೀಲಗಳನ್ನು ಕೋಲ್ಟ್ ಸ್ಟೋರೇಜ್​ನಲ್ಲಿ ಇಡುತ್ತಾರೆ. ಇದರಿಂದ ರೈತರು ಬೆಲೆ ಏರಿಕೆ ಕಂಡುಬಂದಾಗ ಪುನಃ ಟೆಂಡರ್​ಗೆ ಹಾಕುವ ಮೂಲಕ ಲಾಭ ಪಡೆಯುತ್ತಾರೆ.

ಸಣ್ಣಪುಟ್ಟ ವ್ಯಾಪಾರಸ್ಥರು, ಮಾಲೀಕರು ಮೆಣಸಿನಕಾಯಿ ಹಂಗಾಮಿನಲ್ಲಿ ಸಾವಿರಾರು ಚೀಲ ಖರೀದಿಸಿ ವರ್ಷಪೂರ್ತಿ ವ್ಯಾಪಾರ ನಡೆಸುತ್ತಿದ್ದಾರೆ. ಬೇರೆ ಮಸಾಲೆ ಕಂಪನಿ ಇತ್ಯಾದಿಗಳಿಗೆ ನಿರಂತರವಾಗಿ ರವಾನೆಯಾಗಲಿದೆ. ಹೀಗಾಗಿ ಬ್ಯಾಡಗಿಯ ಮಾರುಕಟ್ಟೆ ವರ್ಷವಿಡಿ ವ್ಯಾಪಾರದಲ್ಲಿ ತೊಡಗಿರುತ್ತದೆ.

ಬಂಪರ್ ಬೆಲೆ

ಹಿಂದೆಂದೂ ಕಂಡರಿಯದಷ್ಟು ಬೆಲೆ ಮೆಣಸಿನಕಾಯಿಗೆ ಈ ಬಾರಿ ಲಭಿಸುವ ಮೂಲಕ ದಾಖಲೆಯತ್ತ ಸಾಗಿದೆ. ಈ ಹಿಂದೆ ಕ್ವಿಂಟಾಲ್​ಗೆ 70 ಸಾ.ರೂ. ದಾಟಿರಲಿಲ್ಲ, ಆದರೆ, ಪ್ರಸಕ್ತ ವರ್ಷ 72 ಸಾ.ರೂ. ದಾಟುವ ಮೂಲಕ ಅತಿಹೆಚ್ಚು ದಾರಣೆ ಕಂಡಿದೆ.

ಹಿಂದಿನ ಬಾರಿ ಕಡ್ಡಿ 25ರಿಂದ 50 ಸಾ.ರೂ. ಸರಾಸರಿ, ಡಬ್ಬಿ 28ರಿಂದ 55 ಸಾ.ರೂ. ಸರಾಸರಿ ಬೆಲೆಯಲ್ಲಿ ಮಾರಾಟವಾಗಿತ್ತು. ಈ ಬಾರಿ ಸರಾಸರಿ ದರವೂ ಹಿಂದಿಗಿಂತ 5-6 ಸಾ.ರೂ. ಹೆಚ್ಚಿದ್ದು, ರೈತ ವಲಯಕ್ಕೆ ಹೆಚ್ಚು ಖುಷಿ ತಂದಿದೆ.

ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ಮುಂದುವರಿದಿದ್ದು, ರೈತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಇಂದಿನ ಅತಿಹೆಚ್ಚು ದರ ಕಡ್ಡಿ ಮೆಣಸಿನಕಾಯಿಗೆ 46121, ಡಬ್ಬಿ 63121, ಗುಂಟೂರು 18299 ಲಭಿಸಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.